ಇಂದಿನ ಐಕಾನ್ – ಕಳಚಿಹೋಯಿತು ಯಶೋಗಾಥೆಯ ಒಂದು “ಸುವರ್ಣ” ಕೊಂಡಿ

    ಅವರ ಬಗ್ಗೆ ಇಂದಿನ ಐಕಾನ್ ಬರೆಯಲು ತುಂಬಾ ಭಾವುಕನಾಗಿ ಕುಳಿತಿದ್ದೇನೆ.  ಅವರ ಬಗ್ಗೆ ಸಾಕಷ್ಟು ಹಿಂದೆಯೇ  ಬರೆಯಬೇಕು ಎಂದು ಮಾಹಿತಿ ಸಂಗ್ರಹ ಮಾಡಿದ್ದೆ. ಅವರ ಹುಟ್ಟುಹಬ್ಬಕ್ಕೆ ಸಮರ್ಪಣೆ ಮಾಡಲು ಆಸೆ ಪಟ್ಟಿದ್ದೆ.  ಹಲವಾರು ಬಾರಿ ಅವರನ್ನು ವೇದಿಕೆಯಲ್ಲಿ ನೋಡಿದ್ದೆ. ನೂರಾರು ಬಾರಿ ಅವರನ್ನು ಭೇಟಿ ಮಾಡಿದ್ದೆ. ಅವರು ಅತಿಥಿ ಆಗಿದ್ದ  ಕಾರ್ಯಕ್ರಮಗಳ ನಿರೂಪಣೆ ಮಾಡಿದ್ದೆ. ಅವರ ಕೈಯಿಂದ  ಸನ್ಮಾನ ಪಡೆದಿದ್ದೆ. ನನ್ನ ಟಿವಿ ಕಾರ್ಯಕ್ರಮಕ್ಕೆ ಒಮ್ಮೆ ಬರ್ಬೇಕು ಸರ್ ಅಂತ ಪ್ರೀತಿಯಿಂದ ಕರೆದಿದ್ದೆ.

“ಕಾಲು ನೋವಿದೆ, ಮತ್ತೆ  ಊರಿಗೆ ಬಂದಾಗ ನೋಡುವಾ” ಎನ್ನುತ್ತಿದ್ದರು. ಅದೊಂದು  ಶೂನ್ಯ ನನ್ನನ್ನು ಖಂಡಿತವಾಗಿ ಕಾಡುತ್ತದೆ. ಇಂದು ಬೆಳಿಗ್ಗೆ ಎದ್ದು ಕಣ್ಣು ಬಿಡುವ ಹೊತ್ತಲ್ಲಿ ‘ಜಯ ಸಿ ಸುವರ್ಣ ಇನ್ನಿಲ್ಲ’  ಎನ್ನುವ ವಾಟ್ಸಪ್ ಸಂದೇಶ ನನ್ನನ್ನು ಅಲ್ಲಾಡಿಸಿಬಿಟ್ಟಿತು!  ಅವರಿಗೆ 74 ವರ್ಷ.

      ಕಾಪು ತಾಲೂಕಿನ  ನಂದಿಕೂರು ಸಮೀಪದ ಅಡ್ವೆ ಅವರ ಹುಟ್ಟಿದ ಊರು. ಅವರ ತಂದೆ ಚಂದು ಪೂಜಾರಿ. ತಾಯಿ ಅಚ್ಚು ಪೂಜಾರಿ. ಅವರು  ಅಲ್ಲಿನ ಸರಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ  ಓದಿದವರು. ಮನೆಯ ಬಡತನ ಅವರನ್ನು 14ನೆಯ ವರ್ಷಕ್ಕೆ ಮುಂಬಯಿಗೆ ಕರೆದುಕೊಂಡು ಹೋಯಿತು.

        ಯಾವ ಗಾಡ್ ಫಾದರ್ ಇಲ್ಲದೆ ಮುಂಬಯಿ  ಮಾಯಾನಗರಿಯಲ್ಲಿ ಹೆಜ್ಜೆ ಊರುವುದು ಸುಲಭ ಅಲ್ಲ. ಹಲವು ಕಡೆ ಸಣ್ಣ ಪುಟ್ಟ ಹೋಟೆಲುಗಳಲ್ಲಿ ಕೆಲಸ ಮಾಡುತ್ತಾ  ರಾತ್ರಿ ಕಾಲೇಜಿನಲ್ಲಿ ಓದುತ್ತಾ ಅಂಧೇರಿಯ ಚಿನ್ಮಯ ಕಾಲೇಜಿನಲ್ಲಿ ಡಿಗ್ರಿ  ಮಾಡಿದರು.  ಹತ್ತಾರು ಕಡೆಗಳಲ್ಲಿ  ಉದ್ಯೋಗದ ಅವಕಾಶಗಳು ದೊರೆತರೂ ನಿರಾಕರಿಸಿ ಸ್ವಂತ ಏನಾದರೂ ಮಾಡಬೇಕು ಎಂದು ನಿರ್ಧಾರ ಮಾಡಿ ಮುಂದುವರಿದರು. 

        ತೀರಾ ಬಡತನದ  ಕುಟುಂಬದಿಂದ ಬಂದ ಕಾರಣ ಬೇರೆಯವರ ಕಷ್ಟಗಳು ಬೇಗ ಅರ್ಥವಾಗುತ್ತಿತ್ತು. ಹಸಿವಿನ ಬೆಲೆ ಗೊತ್ತಿತ್ತು. ದುಡಿಮೆಯಲ್ಲಿ ನಂಬಿಕೆ ಇತ್ತು. ಶತಮಾನದಿಂದ ದಮನಿತರಾದ ಬಿಲ್ಲವ  ಸಮಾಜವನ್ನು ಸಂಘಟಿತ ಮಾಡಬೇಕು ಎನ್ನುವ ತುಡಿತ ಇತ್ತು. ಬ್ರಹ್ಮಶ್ರೀ ನಾರಾಯಣ  ಗುರುಗಳ ತತ್ವ, ಆದರ್ಶಗಳ ಪ್ರಭಾವ ಇತ್ತು.

        ಅವರು ಮುಂಬೈಯಲ್ಲಿ ಮೊದಲು ಸ್ಥಾಪನೆ ಮಾಡಿದ್ದು ಜಯಪ್ರಕಾಶ್ ಹೊಟೇಲು.  ಗೊರೆಗಾಂವ್ ನಗರದಲ್ಲಿ ಅದೊಂದು ತುಂಬಾ ಸಣ್ಣ  ಹೊಟೇಲು. ವ್ಯವಹಾರದಲ್ಲಿ ಶಿಸ್ತು, ಪ್ರಾಮಾಣಿಕತೆ, ನಂಬಿಕೆ ಮತ್ತು ಗ್ರಾಹಕರ ಪ್ರೀತಿ ಅವರ  ಯಶಸ್ಸಿನ ಮೆಟ್ಟಿಲುಗಳು. ಇವುಗಳೇ ಅವರನ್ನು ಬಹಳ ಎತ್ತರಕ್ಕೆ ಬೆಳೆಸಿದವು.

          85 ವರ್ಷಗಳ ಇತಿಹಾಸ ಹೊಂದಿರುವ ಬಿಲ್ಲವರ  ಅಸೋಷಿಯೇಶನ್,  ಮುಂಬೈ ಸಂಸ್ಥೆಯು  ಜಯ ಸುವರ್ಣರ ಪ್ರವೇಶದಿಂದ ಮಹಾಸಂಸ್ಥೆ ಆಗಿ ಬೆಳೆಯಿತು. 1991ರಿಂದ ಮುಂದಿನ 21 ವರ್ಷಗಳ ಕಾಲ ಆ ಸಂಸ್ಥೆಯ ಅಧ್ಯಕ್ಷರಾಗಿ ಅವರು ಶ್ರೇಷ್ಠ ನಾಯಕತ್ವವನ್ನು ನೀಡಿದರು. ಸುವರ್ಣರು ಮುಟ್ಟಿದ್ದೆಲ್ಲಾ ಚಿನ್ನವೇ ಆಯಿತು!

     ಸಾಂತಾಕ್ರೂಸ್‌ನಲ್ಲಿ ತಲೆ ಎತ್ತಿ ನಿಂತಿರುವ ಮಹೋನ್ನತ  ಬಿಲ್ಲವರ ಅಸೋಸಿಯೇಶನ್ ಆಡಳಿತ ಭವನ ಮತ್ತು ಗುರುಮಂದಿರದ ನಿರ್ಮಾಣಕ್ಕೆ ಕಾರಣರಾದರು. ಕುದ್ರೋಳಿಯ ಬಹುಪ್ರಸಿದ್ಧ ಶ್ರೀ  ಗೋಕರ್ಣನಾಥೇಶ್ವರ  ದೇವಸ್ಥಾನದ  ಜೀರ್ಣೋದ್ಧಾರದ ಕೆಲಸಕ್ಕೆ  ಜನಾರ್ದನ ಪೂಜಾರಿಯವರು ಕೈ ಹಾಕಿದಾಗ ಜಯ ಸುವರ್ಣ ಅವರನ್ನು ಸಮಿತಿಯ ಮುಖ್ಯ  ಸಂಚಾಲಕರಾಗಿ ಕರೆದರು.  ಅವರಿಬ್ಬರ ಗೆಳೆತನ ಕುದ್ರೋಳಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕಾರಣವಾಯಿತು.ಅಂದಿನಿಂದ ಜನಾರ್ದನ ಪೂಜಾರಿ ಮತ್ತು ಜಯ ಸುವರ್ಣರನ್ನು ಬಿಲ್ಲವ ಸಮಾಜವು ಐಕಾನಗಳಾಗಿ ಸ್ವೀಕರಿಸಿತು!

       ಬೇರೆ ಬೇರೆ ಕಾರಣಕ್ಕೆ ದ್ವೀಪಗಳಾಗಿ ಹಂಚಿಹೋಗಿದ್ದ ಬಿಲ್ಲವರ 275 ಶ್ರೇಷ್ಟವಾದ  ಸಂಸ್ಥೆಗಳನ್ನು ಒಂದು ವೇದಿಕೆಗೆ ಪ್ರೀತಿಯಿಂದ ಕರೆತಂದು “ರಾಷ್ಟ್ರೀಯ ಬಿಲ್ಲವ ಮಹಾ ಮಂಡಳ(ರಿ), ಮೂಲ್ಕಿ” ಎಂಬ ಸಂಸ್ಥೆಯನ್ನು ಸ್ಥಾಪನೆ ಮಾಡಿದ ಕೀರ್ತಿಯು ಜಯ ಸುವರ್ಣರಿಗೆ ಸಲ್ಲಬೇಕು. ಅದರ ಅಧ್ಯಕ್ಷರಾಗಿ ಅವರು ಎಲ್ಲರ ಪ್ರೀತಿಯನ್ನು ಗಳಿಸಿದರು. ಜಗತ್ತಿನ ಎಲ್ಲೆಡೆ ಇರುವ ಬಿಲ್ಲವರ ಪ್ರಾತಿನಿಧಿಕ ಸಂಸ್ಥೆ ಆಗಿ ಆ ಸಂಸ್ಥೆಯನ್ನು ಸುವರ್ಣರು ಕಟ್ಟಿದರು.  ಇತ್ತೀಚೆಗೆ ಆ ಸಂಸ್ಥೆಯು ಸುವರ್ಣ ಅವರನ್ನು ಆಜೀವ ಗೌರವ ಅಧ್ಯಕ್ಷರಾಗಿ ಘೋಷಣೆ ಮಾಡಿ  ಸನ್ಮಾನಿಸಿ ಗೌರವಿಸಿತ್ತು. ಸಂಘಟನೆಯಿಂದ ಬಲಯುತರಾಗಿ ಎಂದು ನಾರಾಯಣ ಗುರುಗಳು ಹೇಳಿದ್ದನ್ನು ಅಕ್ಷರಶಃ  ಅನುಷ್ಠಾನಕ್ಕೆ ತಂದವರು ಜಯ ಸುವರ್ಣರು.

     ಮುಂಬೈಯಲ್ಲಿ ಭಾರತ್ ಕೋ-ಆಪರೇಟಿವ್ ಬ್ಯಾಂಕು ಅವರಿಂದ ಸ್ಥಾಪನೆ ಆಯಿತು. ಕೇವಲ ನಾಲ್ಕು ಶಾಖೆಗಳಿಂದ ಆರಂಭವಾದ ಈ ಬ್ಯಾಂಕು ಇಂದು ಮೂರು ರಾಜ್ಯಗಳಲ್ಲಿ 103 ಶಾಖೆಗಳನ್ನು ಹೊಂದಿದೆ. ಕೋಟ್ಯಾಂತರ ರೂಪಾಯಿ ವ್ಯವಹಾರವನ್ನು ನಡೆಸುತ್ತಿದೆ. ದೇಶದ ಅತೀ ಶ್ರೇಷ್ಟ ಶೆಡ್ಯೂಲ್ ಬ್ಯಾಂಕು ಎಂಬ ಪ್ರಶಸ್ತಿಯನ್ನು ಪಡೆದಿದೆ. ಭಾರತ್ ಬ್ಯಾಂಕಿನ ಮೂಲಕ ಜಯ ಸುವರ್ಣರು ಸಾವಿರಾರು ಮಂದಿಗೆ ಉದ್ಯೋಗವನ್ನು ನೀಡಿದರು. ಅನ್ನದಾತ ಆದರು. ಲಕ್ಷ ಲಕ್ಷ ಜನರ ಬದುಕಿನಲ್ಲಿ ಬೆಳಕಿನ ಹಣತೆ ಹಚ್ಚಿದರು.

       ಕೆಲವರು ಸ್ವಂತಕ್ಕೆ ಏನೂ ಮಾಡದೇ ಸಮಾಜಕ್ಕೆ ಪೂರ್ಣ ಸಮರ್ಪಣೆ ಆಗಿರುತ್ತಾರೆ.  ಅಂಥವರು ಮಾತ್ರ ನೂರಾರು ಸಂಸ್ಥೆಗಳನ್ನು ಸ್ಥಾಪನೆ  ಮಾಡುತ್ತಾರೆ. ಲಕ್ಷ ಲಕ್ಷ  ಮಂದಿಯನ್ನು ಬೆಳೆಸುತ್ತಾರೆ. ಜಯ ಸುವರ್ಣ ಅವರು  ಅಂತಹ ಅಪೂರ್ವವಾದ  ವ್ಯಕ್ತಿತ್ವವನ್ನು  ಹೊಂದಿದವರು. ಮೂಲ್ಕಿ ನಾರಾಯಣ ಗುರು ವಿದ್ಯಾಸಂಸ್ಥೆ, ಪಡುಬೆಳ್ಳೆಯ ಶ್ರೀ ನಾರಾಯಣ ಗುರು ಶಿಕ್ಷಣ ಸಂಸ್ಥೆಗಳು, ಕಟಪಾಡಿಯ ಶ್ರೀ ವಿಶ್ವನಾಥ ಕ್ಷೇತ್ರ, ನೂರಾರು ನಾರಾಯಣ ಗುರು ಮಂದಿರಗಳು, ಸಹಕಾರಿ ಸಂಸ್ಥೆಗಳು, 23 ಸ್ಥಳೀಯ ಕಚೇರಿಗಳು, ಹತ್ತಾರು ಬಿಲ್ಲವರ ಭವನಗಳು ಎಲ್ಲವೂ ಅವರ ಕರ್ತೃತ್ವ ಶಕ್ತಿಗೆ ಸಾಕ್ಷಿಯಾಗಿ ನಿಂತಿವೆ. ಒಬ್ಬನೇ ವ್ಯಕ್ತಿಯು  ಇಷ್ಟೊಂದು ಸಂಸ್ಥೆಗಳನ್ನು ಹುಟ್ಟು ಹಾಕಿದರು ಅಂದರೆ ನಿಜವಾಗಿ ವಿಸ್ಮಯವೇ  ಮೂಡುತ್ತದೆ.

     ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ,  ಉದ್ಯೋಗ ರತ್ನ, ಸಮಾಜ ರತ್ನ, ಬಿಲ್ಲವ ರತ್ನ ಮೊದಲಾದ ಶ್ರೇಷ್ಟ ಮಟ್ಟದ ಪ್ರಶಸ್ತಿಗಳು,  ಸಾವಿರಾರು ಸನ್ಮಾನಗಳು   ದೊರೆತಿವೆ. ಅದಕ್ಕಿಂತ ದೊಡ್ಡದು ಜನರ ಪ್ರೀತಿ ಎಂದು ಅವರು ಕೊನೆಯವರೆಗೂ ನಂಬಿದ್ದರು.

14ನೆಯ ವರ್ಷಕ್ಕೆ ಹಸಿವು  ಹೊತ್ತುಕೊಂಡು ಮುಂಬಯಿಗೆ ಹೋಗಿದ್ದ ಸಾಮಾನ್ಯ ಹುಡುಗ ಇಷ್ಟೊಂದು ಸಾಧನೆ ಮಾಡಲು ದೈವಕೃಪೆಯೆ ಕಾರಣ ಎಂದು ನನ್ನ ಭಾವನೆ. ಅವರಿಗೆ ಅತ್ಯಂತ ಭಾವಪೂರ್ಣ ಶ್ರದ್ಧಾಂಜಲಿ.

ರಾಜೇಂದ್ರ ಭಟ್ ಕೆ.



































































































error: Content is protected !!
Scroll to Top