ಕೊರೊನೋತ್ತರ ಯಕ್ಷಗಾನ ಪ್ರದರ್ಶನ ಹೇಗಿರಬಹುದು?

ಇಡೀ ಜಗತ್ತಿಗೆ ಕೊರೊನಾ ಕಂಟಕ ತಟ್ಟಿದಾಗ ಮನರಂಜನಾ ಕಾರ್ಯಕ್ರಮಗಳು, ಆರಾಧನಾ ಕಲೆಗಳು ಹೆಚ್ಚು ತೊಂದರೆಗೆ ಒಳಗಾದವು. ಮಾರ್ಚ್ 15ರ ನಂತರ ಯಕ್ಷಗಾನ ಕಾರ್ಯಕ್ರಮಗಳು ನಡೆದಿಲ್ಲ. ಈ ವರ್ಷ ಮಳೆಗಾಲದ ಪ್ರದರ್ಶನಗಳೂ ನಡೆದಿಲ್ಲ. ಮಳೆ ಸುರಿದ ತಕ್ಷಣ ಮುಂಬೈ, ಬೆಂಗಳೂರಿನ ಕಲಾಭಿಮಾನಿಗಳು ಯಕ್ಷಗಾನದ ಕಾರ್ಯಕ್ರಮಗಳಿಗೆ ಸಿದ್ಧರಾಗುತ್ತಾರೆ. ಒಂದಿಷ್ಟು  ಕಲಾವಿದರು ಮಿಂಚುತ್ತಾರೆ.  ಆದರೆ ಈ ವರ್ಷ ಮಳೆಗಾಲದ ಪ್ರದರ್ಶನಗಳು ಕೂಡ ನಡೆದಿಲ್ಲ. ಯಕ್ಷಗಾನದ ಕಲಾವಿದರಿಗೆ ಸರಕಾರ ಅಥವಾ ಅಕಾಡೆಮಿಗಳ ವತಿಯಿಂದ ದೊಡ್ಡ ಮಟ್ಟದಲ್ಲಿ ಸಹಾಯ ಮತ್ತು ಸಹಕಾರ ದೊರೆತಿಲ್ಲ. ಯಾವಾಗ ಮೇಳಗಳು ಆರಂಭ ಆಗುತ್ತದೆಯೋ ಎಂದು ಕಲಾವಿದರು ಚಾತಕ ಪಕ್ಷಿಗಳಂತೆ ಕಾಯುವ ಸನ್ನಿವೇಶ ಎದುರಾಗಿದೆ. ಆನ್ಲೈನ್ ವೇದಿಕೆಗಳಲ್ಲಿ ಒಂದಿಷ್ಟು ಯಕ್ಷಗಾನ ಪ್ರದರ್ಶನಗಳು ನಡೆದಿವೆ. ಆದರೆ ಅದರಿಂದಾಗಿ ಯಕ್ಷಗಾನಕ್ಕೆ ಅಥವಾ ಕಲಾವಿದರಿಗೆ ದೊಡ್ಡ ಮಟ್ಟದ ಪ್ರಯೋಜನ ಆಗಿಲ್ಲ ಅನ್ನುವುದು ಹಲವರ ಅಭಿಪ್ರಾಯ. ಯಕ್ಷಗಾನವನ್ನು ಲೈವ್ ಆಗಿ ಜಗಮಗಿಸುವ ವೇದಿಕೆಯಲ್ಲಿ ನೋಡುವಾಗ ಆಗುವ ಸಂತೋಷವನ್ನು ಆನ್ಲೈನ್ ವೇದಿಕೆಯಲ್ಲಿ ಪಡೆಯುವುದು ಕಷ್ಟ. ಎಷ್ಟೋ ಯಕ್ಷಗಾನ ಕಲಾವಿದರು ಕೃಷಿ, ಹೊಟೇಲು, ತೋಟ ಎಂದು ಅನ್ನದ ಬಟ್ಟಲು ಹುಡುಕಿದರು. ಕೆಲವರು ಕೂಲಿ ಕೆಲಸ, ಸಂತೆ ವ್ಯಾಪಾರ, ಆಮ್ಲೆಟ್ ಅಂಗಡಿ ಮಾಡಿ ಕಷ್ಟಪಟ್ಟರು. ಇದು ನಿಜವಾಗಿ ಕಣ್ಣೀರ ಕಥೆ!

    ಇದೀಗ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಜಿಲ್ಲಾಡಳಿತ ಮತ್ತು ಮೇಳದ ಯಜಮಾನರನ್ನು ಸೇರಿಸಿ ಸಭೆ ಮಾಡಿ ಒಂದಿಷ್ಟು ನಿಬಂಧನೆಗಳ ಜೊತೆಗೆ ಮೇಳಗಳನ್ನು ಆರಂಭ ಮಾಡಲು ಸೂಚನೆ ನೀಡಿದ್ದಾರೆ.

    ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಯಕ್ಷಗಾನ ಕಲಾವಿದರಲ್ಲಿ ಹೆಚ್ಚಿನವರು ಆರ್ಥಿಕವಾಗಿ ಸಬಲರು ಅಲ್ಲ. ಮೇಳ ನಡೆಸುವ ಯಜಮಾನರು ಕೂಡ ಆಗರ್ಭ ಶ್ರೀಮಂತರು ಅಲ್ಲ. ಶ್ರೀಮಂತವಾದ ಯಕ್ಷಗಾನದ ಮೇಲಿನ ಪ್ರೀತಿಯಿಂದ ಅದನ್ನೇ ನಂಬಿಕೊಂಡು ಬಂದಿರುವ ಕಲಾವಿದರ ಸಂಖ್ಯೆ ತುಂಬಾ ಹೆಚ್ಚಿದೆ. ಯಕ್ಷಗಾನ ಕಲಾವಿದರಲ್ಲಿ ಹೆಚ್ಚಿನವರಿಗೆ ಬೇರೆ ವ್ಯವಹಾರಗಳು ಗೊತ್ತಿಲ್ಲ. ಅನ್ಯ ಕಸುಬು ಇಲ್ಲ. ಇದನ್ನು ಗಮನಿಸಿದಾಗ ಕಲಾವಿದರ ಬದುಕಿನ ಬವಣೆ ನಮಗೆ ಅರ್ಥವಾಗುತ್ತದೆ.

ಸಾಂದರ್ಭಿಕ ಚಿತ್ರ

     ಇದೀಗ ನವೆಂಬರ್ ಹೊತ್ತಿಗೆ ಯಕ್ಷಗಾನದ ಪ್ರದರ್ಶನ ಆರಂಭವಾಗುವ ಸಾಧ್ಯತೆ ನಿಚ್ಚಳವಾಗಿ ಕಂಡುಬರುತ್ತಿದೆ. ಕಲಾವಿದರು ಸಿದ್ಧರಾಗಿದ್ದಾರೆ. ಆದರೆ ಪ್ರೇಕ್ಷಕರು? ಯಕ್ಷಗಾನ ಪ್ರದರ್ಶನಕ್ಕೆ 200ಕ್ಕಿಂತ ಹೆಚ್ಚು ಪ್ರೇಕ್ಷಕರಿಗೆ ಅನುಮತಿ ಇಲ್ಲ ಎಂದಿದ್ದಾರೆ ಸಚಿವರು. SOP ಸಿದ್ಧವಾಗುತ್ತಿದೆ. ಪ್ರತಿಯೊಬ್ಬ ಯಕ್ಷಗಾನ ಕಲಾವಿದ ಕೂಡ ಕೊರೊನಾ ಪರೀಕ್ಷೆಗೆ  ಕಡ್ಡಾಯವಾಗಿ ಒಳಪಡಬೇಕು ಮೊದಲಾದ ಕಠಿಣ ನಿಯಮಗಳು ಇವೆ. ಈ ಅಂಶಗಳ ಆಧಾರದ ಮೇಲೆ ಮುಂದಿನ ಪ್ರದರ್ಶನಗಳು ಹೇಗಿರಬಹುದು ಅನ್ನುವುದನ್ನು ಊಹಿಸಬಹುದು.

1.  ಯಕ್ಷಗಾನ ಮೇಳಗಳು ಕಡ್ಡಾಯವಾಗಿ ಕಾಲಮಿತಿಗೆ ಒಳಪಡಬಹುದು. ರಾತ್ರಿ ಇಡೀ ಕೂತು ಆಟ ನೋಡುವ ಸಂದರ್ಭಗಳು ಮುಗಿದು ಹೋಗಬಹುದು. ಹರಕೆ ಮೇಳಗಳು ಕೂಡ ಕಾಲಮಿತಿಯ ವ್ಯವಸ್ಥೆಗೆ ಒಳಪಡಬಹುದು.

2. ಟೆಂಟ್ ಮೇಳಗಳ ಸಂಖ್ಯೆ ಈಗಲೇ ಕಡಿಮೆ ಇದೆ. ಅವುಗಳ ಆಕರ್ಷಣೆ ಕಡಿಮೆ ಆಗಬಹುದು.

3. ಖರ್ಚು ಉಳಿಸುವ ಜಿದ್ದಿಗೆ ಮೇಳಗಳು ಬಿದ್ದಾಗ ಸ್ಟಾರ್ ಕಲಾವಿದರನ್ನು ಮಾತ್ರ ಉಳಿಸಿಕೊಳ್ಳಬಹುದು. ಉಳಿದ ಕಲಾವಿದರಿಗೆ ತೊಂದರೆ ಆಗಬಹುದು. ಕೆಲವು ಮೇಳಗಳು ಅದನ್ನು ಈಗಾಗಲೇ ಅದನ್ನು ಮಾಡಿವೆ.

3. ಮೇಳಗಳ ಸಂಖ್ಯೆ ಹೆಚ್ಚಾಗಬಹುದು. ಈಗಾಗಲೇ ಪಟ್ಲ ಭಾಗವತರು ಹೊಸ ಮೇಳದ ಘೋಷಣೆ ಮಾಡಿದ್ದಾರೆ.

4. 50 ವರ್ಷ ಮೇಲ್ಪಟ್ಟ ಕಲಾವಿದರಿಗೆ ಸರಕಾರ ವೇತನ ಅಥವಾ ಸಂಭಾವನೆ ನೀಡಿ ನಿವೃತ್ತರಾಗಿ ಎನ್ನಬಹುದು. ಸಚಿವ ಪೂಜಾರಿ ಅವರು ಈ ಸೂಚನೆ ನೀಡಿದ್ದಾರೆ.

5. ಕಾಲ್ಪನಿಕ ಪ್ರಸಂಗಗಳಿಗೆ ಬ್ರೇಕ್ ಬೀಳಬಹುದು. ಮೇಳಗಳು ಪೌರಾಣಿಕ ಪ್ರಸಂಗಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಬಹುದು.

6. ಯಕ್ಷಗಾನ ಕಲೆಗೆ ಧಾರಾಳ ಸಂಪನ್ಮೂಲ ಹರಿಸುತ್ತಿದ್ದ ಮುಂಬೈ ಮತ್ತು ಬೆಂಗಳೂರಿನ ಉದ್ಯಮಿಗಳು ಈಗಾಗಲೇ ತೊಂದರೆ ಅನುಭವಿಸುತ್ತಿರುವ ಕಾರಣ ಮುಂದಿನ ಒಂದೆರಡು ವರ್ಷಗಳ ಕಾಲ ಯಕ್ಷಗಾನದ ಆರ್ಥಿಕತೆಯ ಮೇಲೆ ಹೊಡೆತ ಬೀಳುವುದು ಖಂಡಿತ. ಅದಕ್ಕೆ ನಾವು ಮಾನಸಿಕವಾಗಿ ಸಿದ್ಧರಾಗಬೇಕು.

7. ಆರ್ಥಿಕತೆಯ ಹಿನ್ನಡೆಯಿಂದ ಕಷ್ಟಪಡುತ್ತಿರುವ ಯಕ್ಷಗಾನದ  ಇತರ ಕಾರ್ಮಿಕರು( ಬ್ಯಾನರ್ ಹಾಕುವವರು, ಟೆಂಟ್ ಕಟ್ಟುವವರು, ಪ್ರಚಾರ ಮಾಡುವವರು, ಪ್ರಸಾದನ ಕಲಾವಿದರು ಇತ್ಯಾದಿ) ಇವರ ಬಗ್ಗೆ ಕೂಡ ಸರಕಾರ ಮತ್ತು ಕಲಾಭಿಮಾನಿಗಳು ಹೆಚ್ಚು ಕಾಳಜಿ ವಹಿಸುವ ಅಗತ್ಯವಿದೆ.

8.ಎಲ್ಲ ಮನೋರಂಜನಾ ಟಿವಿ ಚಾನೆಲ್‌ ಗಳು ವಾರಕ್ಕೆ ಕನಿಷ್ಟ ಒಂದಾದರೂ ಯಕ್ಷಗಾನ ಕಾರ್ಯಕ್ರಮ ನಡೆಸುವ ಹಾಗೆ ಸರಕಾರ ನಿರ್ದೇಶನ ಕೊಡಬೇಕು. ಉದ್ಯಮಗಳು ತಮ್ಮ ಸಿಎಸ್ಆರ್ ನಿಧಿಯಲ್ಲಿ ಒಂದಿಷ್ಟು ಭಾಗವನ್ನು ಮೀಸಲು ಇಡಬೇಕು.

9. ಯಕ್ಷಗಾನ ಕಲಾವಿದರ ಆರೋಗ್ಯವನ್ನು ಕೂಡ ಕಾಲಕಾಲಕ್ಕೆ ಪರೀಕ್ಷಿಸುವ, ತಪಾಸಣೆ ನಡೆಸುವ, ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡುವ ಬಗ್ಗೆ ನಿಗಾ ವಹಿಸಬೇಕು.

10. ಯಕ್ಷಗಾನ ಕಲಾವಿದರಿಗೆ ನಿವೃತ್ತಿ ವೇತನ ಸರಕಾರವೇ ನೀಡಬೇಕು ಎನ್ನುವುದು ಬಹುಕಾಲದ ಬೇಡಿಕೆ. ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಲು ಇದು ಸಕಾಲ.  

ಸಾಂದರ್ಭಿಕ ಚಿತ್ರ

       ಯಕ್ಷಗಾನ ದೇವಕಲೆ. ಅದಕ್ಕೆ ಸಮನಾದ ಬೇರೆ ಯಾವುದೇ ಕಲೆ ಇರಲು  ಸಾಧ್ಯವೇ ಇಲ್ಲ. ಇದನ್ನು ಮನದಲ್ಲಿ ಇರಿಸಿಕೊಂಡು ಸರಕಾರ, ಅಕಾಡೆಮಿ, ಮೇಳದ ಯಜಮಾನರು ಮತ್ತು ಕಲಾಭಿಮಾನಿ ಪ್ರೇಕ್ಷಕರು ಕಲೆಯನ್ನು ಉಳಿಸಿ, ಬೆಳೆಸುವ ಪ್ರಯತ್ನಗಳನ್ನು ಮಾಡಬೇಕು ಎನ್ನುವುದು ಕಾಳಜಿ.

ರಾಜರಾಜೇಂದ್ರ



































































































error: Content is protected !!
Scroll to Top