ಇಂದಿನ ಐಕಾನ್ – ಸುಗಮ ಸಂಗೀತಲೋಕದ ಮಹಾತಾರೆ ಸಿ. ಅಶ್ವತ್ಥ

        ಭಾರತದ ಬೇರೆ ಹಲವು ರಾಜ್ಯಗಳಿಗೆ ಹೋಲಿಸಿದರೆ ಕನ್ನಡದ ಭಾವಗೀತೆಗಳು ಬಹಳ ಎತ್ತರದ ಸ್ಥಾನವನ್ನು  ಪಡೆಯುತ್ತವೆ. ಅದಕ್ಕೆ ಕಾರಣ ಬಹಳ ಸ್ಪಷ್ಟ. ಕವಿಗಳು ಯಾವ ಭಾವನೆಯಿಂದ ತಮ್ಮ ಭಾವಗೀತೆಗಳನ್ನು ಬರೆದರೋ ಅದೇ ಭಾವನೆಯೊಂದಿಗೆ ರಾಗ ಸಂಯೋಜನೆ ಮಾಡಿ ಮತ್ತು ಹಾಡಿ ಜನಸಾಮಾನ್ಯರಿಗೆ ತಲುಪಿಸಿದ ಕೀರ್ತಿಯು ಖಂಡಿತವಾಗಿಯೂ ಸಿ. ಅಶ್ವತ್ಥ ಅವರಿಗೆ ಸಲ್ಲುತ್ತದೆ!  ಅವರು ‘ಸುಗಮ ಸಂಗೀತ ಕ್ಷೇತ್ರದ ಧ್ರುವತಾರೆ’ ಎಂದರೆ ಅದು ಉತ್ಪ್ರೇಕ್ಷೆ ಆಗಲಾರದು.

     ಅಶ್ವತ್ಥ ಅವರು ಹುಟ್ಟಿದ್ದು ಚೆನ್ನರಾಯ ಪಟ್ಟಣದಲ್ಲಿ (ಡಿಸೆಂಬರ್  29,1939). ಬಾಲ್ಯದಲ್ಲಿ ಸಂಗೀತದ ಪ್ರಭಾವ ದಟ್ಟವಾಗಿತ್ತು. ಹಿಂದುಸ್ಥಾನಿ ಸಂಗೀತದ ಮಹಾಗುರುಗಳಾದ  ದೇವಗಿರಿ ಶಂಕರ ರಾವ್ ಅವರಿಂದ ಸಂಗೀತ ಅಭ್ಯಾಸವು ನಡೆಯಿತು. ನಂತರ ಬೆಂಗಳೂರು ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ B.Sc ಪದವಿಯನ್ನು ಪಡೆದರು.  ನಂತರ 27 ವರ್ಷಗಳ ಕಾಲ ಇಂಡಿಯನ್ ಟೆಲಿಫೋನ್ ಇಂಡಸ್ಟ್ರಿಯಲ್ಲಿ  ಉದ್ಯೋಗವನ್ನು ಮಾಡಿ  ಎಕ್ಸಿಕ್ಯೂಟಿವ್ ಇಂಜಿನಿಯರ್ ಆಗಿ ನಿವೃತ್ತರಾದರು.

      ಆರಂಭದಲ್ಲಿ ನಾಟಕಗಳಿಗೆ ಸಂಗೀತ ನಿರ್ದೇಶನವನ್ನು ಮಾಡುತ್ತಿದ್ದ ಅಶ್ವತ್ಥ ಅವರು ಬಹು ಬೇಗ ಕನ್ನಡದ ಭಾವಗೀತೆ ಮತ್ತು ಜಾನಪದ ಗೀತೆಯಿಂದ ಆಕರ್ಷಿತರಾದರು. ಕುವೆಂಪು, ಬೇಂದ್ರೆ, ನರಸಿಂಹ ಸ್ವಾಮಿ, ಲಕ್ಷ್ಮಣ್ ರಾವ್, ಶಿವರುದ್ರಪ್ಪ , ವೆಂಕಟೇಶ ಮೂರ್ತಿ, ಲಕ್ಷ್ಮಿನಾರಾಯಣ ಭಟ್ಟ ಮೊದಲಾದವರ ಶ್ರೇಷ್ಟ ಭಾವಗೀತೆಗಳನ್ನು ಚಂದವಾಗಿ ಅಧ್ಯಯನ ಮಾಡಿ ಸಂಗೀತ  ಸಂಯೋಜನೆ ಮಾಡಲು ತೊಡಗಿದರು. ಸಾಹಿತ್ಯದ ಆಳವಾದ ಪ್ರಜ್ಞೆ ಇದ್ದರೆ ಮಾತ್ರ ಅದಕ್ಕೆ ಸರಿಯಾದ ರಾಗ ಸಂಯೋಜನೆಯನ್ನು ಮಾಡಲು ಸಾಧ್ಯ ಮತ್ತು ಅದನ್ನು ಸುಲಲಿತವಾಗಿ ಹಾಡಲು ಸಾಧ್ಯ.  ಅವರ ಸುವರ್ಣ ಸ್ಪರ್ಶ ಪಡೆದ ಗೀತೆಗಳು ಅಮರತ್ವವನ್ನು ಪಡೆಯುತ್ತ ಹೋದವು.

      ಕೆ. ಎಸ್. ನರಸಿಂಹ  ಸ್ವಾಮಿ ಅವರ ಮೈಸೂರು ಮಲ್ಲಿಗೆಯ ಹಾಡುಗಳು ಸರಸ, ವಿರಸ, ವಿರಹ ಮತ್ತು ಸಮರಸದ ರಸಪಾಕಗಳು. ಅಂತಹ ಹಾಡುಗಳನ್ನು ಸಿ. ಅಶ್ವತ್ಥ ಅವರ ಸಂಯೋಜನೆ ಮತ್ತು ಧ್ವನಿಯಲ್ಲಿಯೇ ಕೇಳಬೇಕು. ಶಿಶುನಾಳ ಶರೀಫರ ಅಷ್ಟೂ ತತ್ವ ಪದಗಳು, ಕುವೆಂಪು ಅವರ ಶ್ರೇಷ್ಟ ಗೀತೆಗಳು, ಬೇಂದ್ರೆಯವರ ಸಾವು ಇರದ ಗೀತೆಗಳು ಅಶ್ವತ್ಥ ಅವರಿಂದ ಬಹು ಜನಪ್ರಿಯವಾದವು. ಸುಮಾರು 150ಕ್ಕಿಂತ ಅಧಿಕ ಭಾವಗೀತೆಗಳ ಆಲ್ಬಂಗಳಿಗೆ ಸಂಗೀತ  ಸಂಯೋಜನೆ ಮಾಡಿ, ಹಾಡಿದ ಕೀರ್ತಿ ಅವರಿಗೆ ಸಲ್ಲಬೇಕು. ಅದರಲ್ಲೂ ಮೈಸೂರು ಮಲ್ಲಿಗೆ, ಶಿಶುನಾಳ ಶರೀಫರ ಗೀತೆಗಳು, ಶ್ರಾವಣ( ಬೇಂದ್ರೆ), ದೀಪಿಕಾ (ಲಕ್ಷ್ಮೀ ನಾರಾಯಣ ಭಟ್ಟ), ಸುಬ್ಬಾ ಭಟ್ಟರ ಮಗಳೆ( ಲಕ್ಷ್ಮಣ್ ರಾವ್), ಕೈಲಾಸಂ ಗೀತೆಗಳು,  ತೂಗು ಮಂಚ( ಹೆಚ್. ಎಸ್. ವೆಂಕಟೇಶ್ ಮೂರ್ತಿ),  ನನ್ನವಳು( ಲಕ್ಷ್ಮಣ್ ರಾವ್), ಎಲ್ಲಾದರೂ ಇರು ( ಕುವೆಂಪು), ಮಾವು ಬೇವು (ದೊಡ್ಡರಂಗೆ ಗೌಡ), ನೇಸರ ನೋಡು (ರಂಗ ಭೂಮಿಯ ಗೀತೆಗಳು) ತುಂಬಾ ಜನಪ್ರಿಯವಾದವು. ಅದರಲ್ಲೂ ರಾಜಕುಮಾರ್ ಹಾಡಿದ ‘ಎಲ್ಲಾದರೂ ಇರು ಎಂತಾದರೂ ಇರು’ ಗೀತೆ ಕನ್ನಡದ ಭಾವನೆಗಳನ್ನು ಮೀಟಿತು. ರತ್ನಮಾಲಾ ಪ್ರಕಾಶ್, ಬಿ. ಆರ್. ಛಾಯಾ, ಮಂಜುಳಾ ಗುರುರಾಜ್ ಮೊದಲಾದ ಹೊಸ ಪರಂಪರೆಯ ಹಾಡುಗಾರರನ್ನು ಕೂಡ ಬೆಳೆಸಿದ ಕೀರ್ತಿ ಅಶ್ವತ್ಥ ಅವರಿಗೆ ಸಲ್ಲುತ್ತದೆ.

        ‘ಕಾಕನ ಕೋಟೆ’ ಸಿನೆಮಾಕ್ಕೆ ಸಂಗೀತ ನಿರ್ದೇಶನವನ್ನು ಮಾಡುವ ಮೂಲಕ ಅವರು ಮತ್ತೊಂದು ಮಜಲನ್ನು ತಲುಪಿದರು. ನಂತರ ಎಲ್. ವೈದ್ಯನಾಥನ್ ಅವರನ್ನು ಸೇರಿಕೊಂಡು ‘ ಅಶ್ವತ್ಥ – ವೈದಿ’ ಎಂಬ ಹೆಸರಿನೊಂದಿಗೆ  27 ಸಿನೆಮಾಗಳಿಗೆ ಸಂಗೀತ ನಿರ್ದೇಶನ ಮಾಡಿದರು. ಚಿನ್ನಾರಿ ಮುತ್ತ, ಸಂತ ಶಿಶುನಾಳ ಶರೀಫ, ಮೈಸೂರು ಮಲ್ಲಿಗೆ, ನಾಗಮಂಡಲ, ಕೊಟ್ರೇಶಿ ಕನಸು, ಬಾಡದ ಹೂವು, ಸ್ಪಂದನ, ಅನುಪಮಾ, ನಾರದ ವಿಜಯ, ಆಲೆಮನೆ, ಕಾಂಚನ ಮೃಗ, ಸಿಂಗಾರೆವ್ವ…ಈ ಸಿನೆಮಾಗಳ ಹಾಡುಗಳನ್ನು ಯಾರು ಕೂಡ ಮರೆಯಲು ಸಾಧ್ಯವಿಲ್ಲ. ಸ್ಪಂದನ ಮತ್ತು ಚಿನ್ನಾರಿ ಮುತ್ತ ಸಿನೆಮಾಗಳಿಗೆ ಅವರಿಗೆ ಅತ್ಯುತ್ತಮ ಸಂಗೀತ ನಿರ್ದೇಶನ ರಾಜ್ಯ ಪ್ರಶಸ್ತಿ ಬಂದರೆ, ಮೈಸೂರು ಮಲ್ಲಿಗೆ ಸಿನೆಮಾವು ಫಿಲ್ಮ್ ಫೇರ್ ಪ್ರಶಸ್ತಿ ಗೆದ್ದು ಕೊಟ್ಟಿತು.

         ರಾಜ್ಯ ಸರ್ಕಾರದ ವಿನಂತಿಯ ಮೇರೆಗೆ ರೈತಗೀತೆ (ಕುವೆಂಪು ಅವರ ನೇಗಿಲ ಯೋಗಿ)ಯನ್ನು ಸಮರ್ಪಣೆ ಮಾಡಿದ್ದು ಕೂಡ ಅವರೇ. ತಮ್ಮ ಸುಗಮ ಸಂಗೀತದ ತಂಡವನ್ನು ಕಟ್ಟಿಕೊಂಡು ರಾಜ್ಯದ ಮೂಲೆ ಮೂಲೆಯಲ್ಲಿ ಸಾವಿರಾರು  ಕಾರ್ಯಕ್ರಮಗಳನ್ನು ಅವರು ನೀಡಿದರು. ಆಸ್ಟ್ರೇಲಿಯಾದ ಮೆಲ್ಬರ್ನ್ ನಗರ, ಅಮೆರಿಕ ಮತ್ತು ಲಂಡನ್ ನಗರದಲ್ಲಿ ಕೂಡ ಅವರು ಕಾರ್ಯಕ್ರಮ ನೀಡಿದ್ದಾರೆ.

      2005ರಲ್ಲೀ ಅವರು ಬೆಂಗಳೂರಿನ ಪ್ಯಾಲೇಸ್ ಗ್ರೌಂಡಿನಲ್ಲಿ ನಡೆಸಿಕೊಟ್ಟ ‘ಕನ್ನಡವೆ ಸತ್ಯ’ ಕಾರ್ಯಕ್ರಮಕ್ಕೆ 1,50,000 ಸಂಗೀತದ ಅಭಿಮಾನಿಗಳು ಸೇರಿದ್ದು ಒಂದು ಅದ್ಭುತವಾದ ದಾಖಲೆ. ಅವರಿಗೆ 1986ರಲ್ಲಿ ರಾಜ್ಯ ಸರ್ಕಾರವು ‘ರಾಜ್ಯೋತ್ಸವ ಪ್ರಶಸ್ತಿ’ ನೀಡಿ ಗೌರವಿಸಿದೆ. ಸಿ. ಅಶ್ವತ್ಥ ಅವರು 2009ರ ಇಸವಿ ತಮ್ಮ ಹುಟ್ಟುಹಬ್ಬದಂದು ನಮ್ಮನ್ನು ಅಗಲಿ ಹೋದರು.

ಇಂದಿಗೂ ಕೂಡ ನೀ ಹೀಂಗ ನೋಡಬ್ಯಾಡ ನನ್ನ, ಕಾಣದ ಕಡಲಿಗೆ, ಕುರುಡು ಕಾಂಚಾಣ, ಎಲ್ಲೋ ಹುಡುಕಿದೆ ಇಲ್ಲದ ದೇವರ, ಹೇಳಿ ಹೋಗು ಕಾರಣ, ಬಾ ಇಲ್ಲಿ ಅವತರಿಸು, ಬಾರೆ ನನ್ನ ದೀಪಿಕಾ, ನಿನ್ನ ಪ್ರೇಮದ ಪರಿಯ, ತೂಗು ಮಂಚದಲ್ಲಿ ಕೂತು, ಶ್ರಾವಣ ಬಂತು ಕಾಡಿಗೆ, ರಾಯರು ಬಂದರು, ಕೋಡಗನ ಕೋಳಿ ನುಂಗಿತ್ತಾ, ಒಳಿತು ಮಾಡು ಮನುಷ್ಯ… ಮೊದಲಾದ ಚಿರಂಜೀವಿ  ಹಾಡುಗಳನ್ನು ಕೇಳುವಾಗ ಅಶ್ವತ್ಥ ಅವರು ಕಣ್ಣು ಮುಂದೆ ಬರುತ್ತಾರೆ. ಅವರ ಹಾಡುಗಳ ಹಾಗೆ ಅವರೂ ಚಿರಂಜೀವಿ.

ಬರಹ – ರಾಜೇಂದ್ರ ಭಟ್ ಕೆ.



































































































error: Content is protected !!
Scroll to Top