ಕಾಸರಗೋಡು, ಸೆ. 15 : ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಕೊರೊನಾ ವೈರಸ್ ಸೋಂಕಿನ ಕುರಿತು ಜಾಗೃತಿ ಮೂಡಿಸಲು ನಡೆಸಿದ ಯಕ್ಷಗಾನ ಗೊಂಬೆಯಾಟ ವಿಶ್ವ ಆರೋಗ್ಯ ಸಂಸ್ಥೆ (WHO) ಮೆಚ್ಚುಗೆಗೆ ಪಾತ್ರವಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಸಾಂಕ್ರಾಮಿಕ ಪಿಡುಗು ಉಲ್ಬಣ ಮತ್ತು ಪ್ರತಿಸ್ಪಂದನಾ ಜಾಲ ಎಂಬ ವಿಭಾಗವು ಕಾಲಕಾಲಕ್ಕೆ ಜಾಗತಿಕ ಮಟ್ಟದಲ್ಲಿ ಕೊರೊನಾ ಉಂಟು ಮಾಡಿರುವ ಪರಿಣಾಮಗಳು ಹಾಗೂ ಅದರ ಬಗ್ಗೆ ಜಾಗೃತಿ ಮೂಡಿಸಲು ಜಾಗತಿಕ ಹಾಗೂ ಸ್ಥಳೀಯ ಮಟ್ಟದಲ್ಲಿ ನಡೆದ ಪ್ರಯತ್ನಗಳ ಪರಿವೀಕ್ಷಣೆ ನಡೆಸುತ್ತದೆ. ಸಿಂಗಾಪುರ ನ್ಯಾಶನಲ್ ಯುನಿವರ್ಸಿಟಿ ಹೆಲ್ತ್ ಸಿಸ್ಟಮ್‌ನಲ್ಲಿ ಪ್ರಾಧ್ಯಾಪಕರಾಗಿರುವ ಡೇಲ್ ಫಿಶರ್ ನೇತೃತ್ವದ ಈ ತಂಡಕ್ಕೆ ಸಿಂಗಾಪುರದ ಪ್ರೊ . ಪ್ರಕಾಶ್ ಹಂದೆ ಅವರು ಸಿರಿಬಾಗಿಲು ಪ್ರತಿಷ್ಠಾನ ಯಕ್ಷಗಾನ ಮತ್ತು ಗೊಂಬೆಯಾಟದ ಮೂಲಕ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುತ್ತಿರುವ ವಿಚಾರವನ್ನು ತಿಳಿಸಿದರು. ಡೇಲ್ ಫಿಶರ್ ಈ ಯಕ್ಷ ಜಾಗೃತಿಯ ವೀಡಿಯೊ ವೀಕ್ಷಿಸಿ ಸ್ಥಳೀಯ ಮಟ್ಟದಲ್ಲಿ ನಡೆದ ಈ ಪ್ರಯತ್ನವನ್ನು ಶ್ಲಾಘಿಸಿದರು. ಡೇಲ್ ಫಿಶರ್ ತಂಡದ ವೀಕ್ಷಣೆಗಾಗಿ ವೀಡಿಯೊ ಅವಧಿಯನ್ನು ಕಡಿಮೆಗೊಳಿಸಲಾಗಿತ್ತು.
ಸಿರಿಬಾಗಿಲು ಪ್ರತಿಷ್ಠಾನ ಇದಕ್ಕೂ ಮೊದಲು ಕೊರೊನಾ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಕೊರೊನಾಸುರ ವಧೆ ಎಂಬ ಒಂದು ತಾಸಿನ ಯಕ್ಷಗಾನವನ್ನೂ ಪ್ರದರ್ಶಿಸಿತ್ತು. ಕೊರೊನಾ ಪಿಡುಗಿನಿಂದಾಗಿ ಸಾಂಸ್ಕೃತಿಕ ಚಟುವಟಿಕೆಗಳೆಲ್ಲ ಸ್ಥಗಿತಗೊಂಡ ಕಾಲದಲ್ಲಿ ಪ್ರದರ್ಶಿಲ್ಪಟ್ಟ ಈ ಯಕ್ಷಗಾನವೂ ಅಪಾರ ಮೆಚ್ಚುಗೆಗೆ ಪಾತ್ರವಾಗಿತ್ತು.























