ಇಂದಿನ ಐಕಾನ್ – ಶ್ರೀನಗರದ CRPF ನೂತನ IG ಚಾರು ಸಿನ್ನಾ ಐಪಿಎಸ್

       ಭಾರತದ ಕೀರ್ತಿ ಮುಕುಟ  ಎಂದೇ ಕರೆಯಲ್ಪಡುವ ಜಮ್ಮು – ಕಾಶ್ಮೀರ ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರದ  ಗಮನವನ್ನು ಹೆಚ್ಚು ಸೆಳೆಯುತ್ತಿದೆ. ಒಂದು ಕಡೆ ಪ್ರಕೃತಿ ಸೌಂದರ್ಯ, ಇನ್ನೊಂದು ಕಡೆ ಶಾಂತಿ ಸ್ಥಾಪನೆಯ ಬಹು ದೊಡ್ಡ ಕನಸು ಮತ್ತು ನಿರಂತರ ಪ್ರಯತ್ನಗಳು, ಮತ್ತೊಂದು ಕಡೆ ಸೆರಗಿನ ಕೆಂಡವಾಗಿರುವ  ಭಯೋತ್ಪಾದನಾ ಚಟುವಟಿಕೆ, ಅದರೊಂದಿಗೆ ಆಂತರಿಕ ಕ್ಷೋಭೆಗಳು ಎಲ್ಲವೂ ಸೇರಿದರೆ ಅದು ಕಾಶ್ಮೀರ ಆಗುತ್ತದೆ!

    ಶ್ರೀನಗರ ಅದರ ರಾಜಧಾನಿ. ಅಲ್ಲಿ ಶಾಂತಿ ಸ್ಥಾಪನೆಯ ಕನಸು ಹೊತ್ತುಕೊಂಡು ನೂತನ CRPF   ಇನ್ಸಪೆಕ್ಟರ್ ಜನರಲ್  ನೇಮಕವನ್ನು ಈ ತಿಂಗಳ ಮೊದಲ ದಿನವೇ ಕೇಂದ್ರ  ಸರ್ಕಾರ ಮಾಡಿದೆ. ಆ ಹುದ್ದೆಗೆ ನೇಮಕ ಆದ ಮೊದಲ ಮಹಿಳೆ ಎಂಬ ಕೀರ್ತಿಯೊಂದಿಗೆ  ಅವರು ಸೆಪ್ಟೆಂಬರ್  ಒಂದರಂದು ಅಧಿಕಾರ ಸ್ವೀಕಾರ ಮಾಡಿದ್ದಾರೆ! ಅವರು ನಮ್ಮ ಇಂದಿನ ಐಕಾನ್ ಚಾರು ಸಿನ್ನಾ ಐಪಿಎಸ್!

        ಅವರ ಟ್ರಾಕ್ ರೆಕಾರ್ಡ್ ನೋಡಿದರೆ ನೀವು ವಿಸ್ಮಯ ಪಡುತ್ತೀರಿ. ಆಕೆ ಮೂಲತಃ ಹೈದರಾಬಾದಿನವರು. ಹೈದರಾಬಾದಿನ ಸೈಂಟ್  ಫ್ರಾನ್ಸಿಸ್ ಕಾಲೇಜಿನಲ್ಲಿ  ಇಂಗ್ಲಿಷ್ ಮೇಜರ್ ಜೊತೆಗೆ ಪದವಿ ಪಡೆದವರು. ನಂತರ  ರಾಜನೀತಿ ಶಾಸ್ತ್ರದಲ್ಲಿ ಸ್ನಾತಕೋತ್ತರ ಅಧ್ಯಯನ ಅವರದ್ದು. ಮೊದಲ ಪ್ರಯತ್ನದಲ್ಲಿ ರಾಂಕ್ rank  ಪಡೆದು ಐಪಿಎಸ್ ಪರೀಕ್ಷೆ ಗೆದ್ದವರು. ಅವರು ತೆಲಂಗಾಣದ 1996ರ ಕೆಡರಿನ ಐಪಿಎಸ್ ಅಧಿಕಾರಿ.

         ಕಳೆದ ಇಪ್ಪತ್ತನಾಲ್ಕು ವರ್ಷಗಳ ಅವಧಿಯಲ್ಲಿ ಅವರ ಸೇವೆಯಲ್ಲಿ ಒಂದು ಕಪ್ಪು ಚುಕ್ಕೆ ಕೂಡ ಇಲ್ಲ. ಅವರು ಸುದೀರ್ಘ ಅವಧಿಗೆ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ನಕ್ಸಲ್  ಚಟುವಟಿಕೆ, ಕೋಮುವಾದ ಮತ್ತು ರಕ್ತಪಾತದ ನಡುವೆ ಕರ್ತವ್ಯ ನಿಭಾಯಿಸಿ ಗೆದ್ದವರು. ಪ್ರಕಾಶಂ, ನಿಜಾಮಾಬಾದ, ಚಿತ್ತೂರು, ಮೆಹಬೂಬ್ ನಗರ, ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಅವರು SP ಆಗಿದ್ದಾಗ ನಕ್ಸಲ್ ಚಟುವಟಿಕೆ ಪೂರ್ತಿ ನಿಂತೇ ಹೋಯಿತು. ಕೋಮು ಪ್ರಚೋದನಕಾರಿ ಚಟುವಟಿಕೆ ಮಾಡುವವರಿಗೆ ಅವರು ಸಿಂಹಸ್ವಪ್ನ ಆದರು.  ಚಾರು ಮೇಡಂ ಅರೆಸ್ಟ್ ಮಾಡಿದರು ಅಂದರೆ ಜಾಮೀನು ಕೂಡ ಸಿಗೋದಿಲ್ಲ ಎಂದು ಅಪರಾಧಿಗಳಿಗೆ ಅವರು ಅರ್ಥ ಮಾಡಿಸಿದ್ದರು. ಸೋಶಿಯಲ್ ಮೀಡಿಯಾವನ್ನು ಜಾಲಾಡಿ  ಸಾಕ್ಷಿ ಸಂಗ್ರಹ ಮಾಡುವುದರಲ್ಲಿ ಅವರು ಸಿದ್ಧಹಸ್ತರು. ಲಂಚಕೋರ ಅಧಿಕಾರಿಗಳು ಅವರ ಮುಂದೆ ನಿಲ್ಲಲು ಹೆದರುವ ಪ್ರಸಂಗ ಇತ್ತು. ಅಪರಾಧಿಗಳು ರಾತ್ರಿ ಕೂಡ ಮನೆಯಿಂದ ಹೊರಬರಲು ಹೆದರುತ್ತಿದ್ದರು. ಚಿತ್ತೂರು ಜಿಲ್ಲೆಯಲ್ಲಿ  ಕರ್ತವ್ಯ ನಿರತರಾಗಿದ್ದಾಗ ಅಲ್ಲಿನ  HIV ಪೀಡಿತ ಮಹಿಳೆಯರು ಮತ್ತು ಮಕ್ಕಳನ್ನು ಮನೆಯವರೇ ಮನೆಯಿಂದ ಹೊರಹಾಕಿದಾಗ ಸಂತ್ರಸ್ತರ ಆಸ್ತಿ ಹಕ್ಕಿಗಾಗಿ ಚಾರು ಮೇಡಂ ಬೀದಿಗೆ ಇಳಿದು  ಹೋರಾಟ ಮಾಡಿದ್ದರು!

    ಒಮ್ಮೆ ಒಬ್ಬ ಯುವ  ಪತ್ರಕರ್ತ ಅವರನ್ನು ಹೊಗಳುವ ಭರದಲ್ಲಿ ” ಚಾರು ಮೇಡಂ ಅವರು ಮಹಿಳಾ ಅಧಿಕಾರಿ  ಆಗಿದ್ದರೂ…” ಅಂತ ನ್ಯೂಸ್ ಮಾಡಿದ್ದ. ಅವನನ್ನು ಚಾರು ಮೇಡಂ ಸ್ಟೇಷನ್ನಿಗೆ ಕರೆಸಿ,  ನನ್ನನ್ನು ಐಪಿಎಸ್ ಅಧಿಕಾರಿ ಅಂತ ಕರೆಯಿರಿ. ‘ಮಹಿಳಾ ಅಧಿಕಾರಿ’ ಎಂದು ಗುರುತಿಸುವ  ಅಗತ್ಯ ಇಲ್ಲ ಅಂತ ಕ್ಲಾಸ್ ತೆಗೆದುಕೊಂಡಿದ್ದರು!

      ಇನ್ನೊಮ್ಮೆ ಇನ್ನೊಬ್ಬ ತರಲೆ ಪತ್ರಕರ್ತ ಕೆಮರಾ ಹಿಡಿದು ಅವರು ಹೋದಲ್ಲೆಲ್ಲ ಬಿಡದೆ ಹಿಂಬಾಲಿಸಿಕೊಂಡು ಬರಲು ತೊಡಗಿದ. “ಏನ್ರೀ, ಪೋಲಿಸ್ ಅಧಿಕಾರಿಗಳಿಗೆ ಖಾಸಗಿ ಜೀವನ ಇಲ್ಲವಾ?” ಅಂತ ಮೇಡಂ ಬೈದು  ರುಬ್ಬಿದ್ದರು. ಇಂತಹ ಘಟನೆಗಳು ನೂರಾರು ನಡೆದಿದ್ದು ಚಾರೂ ಮೇಡಂ ‘ಸಿಕ್ಕಾಪಟ್ಟೆ ಖಡಕ್’ ಎಂದು ಪ್ರತೀತಿ ಬೆಳೆಯಿತು.

       ಮುಂದೆ ಬಿಹಾರದ ನಕ್ಸಲ್ ನಿಬಿಡ ಪ್ರದೇಶದಲ್ಲಿ CRPF IG ಆಗಿ ಅಲ್ಲಿನ ಸರಕಾರ ಅವರ  ಸೇವೆಯನ್ನು ಬಯಸಿದಾಗ ಚಾರೂ ಮೇಡಂ ರಾತ್ರಿ ಹಗಲು ಕೆಲಸ ಮಾಡಿ ಗೆದ್ದಿರುವುದು ಬಹು ರೋಚಕವಾದ ಸಾಹಸವೇ ಆಗಿದೆ. ಆಕೆ ಯಾವ ವಿಧ್ವಂಸಕ ಶಕ್ತಿಗಳಿಗೆ ಕೂಡ ಹೆದರಿದ ಉದಾಹರಣೆ ಇಲ್ಲವೇ ಇಲ್ಲ. ನೋ ಕಾಂಪ್ರಮೈಸ್ ಅಧಿಕಾರಿ ಅವರು! ಮುಂದೆ IG (ತರಬೇತಿ) ಹುದ್ದೆಯನ್ನು ಅಲಂಕರಿಸಿ ಅವರು ಇಪ್ಪಂತ್ತೆಂಟು ಪೋಲಿಸ್  ಅಕಾಡೆಮಿಗಳ 12,000 ಪೋಲಿಸ್ ಪೇದೆಗಳಿಗೆ

ತರಬೇತಿ ನೀಡಿ ದಾಖಲೆ ಮಾಡಿದ್ದರು! 

       ಕ್ರಿಮಿನಲ್ ಅಪರಾಧಿಗಳ ಬಗ್ಗೆ ಅವರು ಎಷ್ಟು ನಿರ್ದಯಿ ಆಗಿದ್ದರೂ ತಮ್ಮ ಜೊತೆಗೆ ಕೆಲಸ ಮಾಡುವ ಪೋಲಿಸ್ ಮತ್ತು CRPF ಜವಾನರ ಬಗ್ಗೆ ಅಷ್ಟೇ ಕಾಳಜಿ ವಹಿಸುತ್ತಿದ್ದರು. ಅವರ ಮಾನಸಿಕ ಆರೋಗ್ಯದ ಬಗ್ಗೆ, ಕೌಟುಂಬಿಕ ಸಮಸ್ಯೆಗಳ ಬಗ್ಗೆ ನೂರಾರು  ಕಾರ್ಯಾಗಾರಗಳನ್ನು ಅವರು ಮಾಡಿದ್ದಾರೆ. ಪೊಲೀಸರ ಪತ್ನಿಯರನ್ನು ಕೂಡ ಸೇರಿಸಿ ಕೌಟುಂಬಿಕ ಸಾಮರಸ್ಯ ಮತ್ತು ಒತ್ತಡ ನಿರ್ವಹಣೆ ಬಗ್ಗೆ ಅವರು ನೀಡುವ ತರಬೇತಿಗಳು ಬಹಳ ಜನಪ್ರಿಯ ಆದವು. CRPF ಯೋಧರ ಮನೆಗಳಿಗೂ ಮೇಡಂ ಭೇಟಿ ಕೊಡುತ್ತಿದ್ದರು. ಹಾಗೆ ಹೋಗುವಾಗ ಪೋಲಿಸ್ ದಿರಿಸಿನಲ್ಲಿ  ಹೋಗದೆ ಸಾದಾ  ಸೀರೆಯಲ್ಲಿ ಹೋಗುತ್ತಿದ್ದರು ಮತ್ತು ಅವರ ಮಕ್ಕಳಿಗೆ ಉಡುಗೊರೆ ತೆಗೆದುಕೊಂಡು ಹೋಗಲು ಮರೆಯುತ್ತಿರಲಿಲ್ಲ!

      ಕಳೆದ ವರ್ಷ ಅವರು ಜಮ್ಮು ವಲಯದ CRPF IG ಆಗಿ ಅಧಿಕಾರ ಸ್ವೀಕರಿಸಿದರು. ಆಗ  ಜೈಷ್ – ಎ – ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಮೂವರು ಪ್ರಮುಖರನ್ನು ಎನ್ಕೌಂಟರ್ ಮಾಡಿ ಉಡಾವಣೆ ಮಾಡಿದ್ದನ್ನು ದೇಶ ಇಂದಿಗೂ ಮರೆತಿಲ್ಲ. ಅಂತಹ ಹಿನ್ನೆಲೆ ಮತ್ತು ದಿಟ್ಟತನವನ್ನು ಹೊಂದಿರುವ ಚಾರು ಮೇಡಂ ಇದೀಗ ಶ್ರೀನಗರದ ಕೇಂದ್ರೀಯ ಮೀಸಲು ಪಡೆಯ IG ಆಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಎರಡು ರೇಂಜರ್ಸ್, ಇಪ್ಪತ್ತೆರಡು ಯೂನಿಟ್, ಮೂರು ಮಹಿಳಾ ಕಂಪೆನಿ ಇವಿಷ್ಟನ್ನು ಅವರು ಮುನ್ನಡೆಸಲಿದ್ದಾರೆ. ಶಾಂತಿಯ ಹಳಿಗೆ ಮರಳಲು  ಯತ್ನಿಸುತ್ತಿರುವ ರಾಜ್ಯಕ್ಕೆ ಒಬ್ಬ ಖಡಕ್ ಅಧಿಕಾರಿ ಸಿಕ್ಕಿದ್ದಾರೆ. ಆ ಸ್ಥಾನಕ್ಕೆ ಆಯ್ಕೆ ಆದ ಮೊದಲ “ಮಹಿಳೆ” ಆಕೆ ಎನ್ನುವ ಧೈರ್ಯ ನಾನಂತೂ ಮಾಡುವುದಿಲ್ಲ!   ಚಾರು ಮೇಡಂ, ನಿಮಗೆ ಶುಭವಾಗಲಿ.

ಬರಹ – ರಾಜೇಂದ್ರ ಭಟ್ ಕೆ.































































































error: Content is protected !!
Scroll to Top