ಕಗ್ಗದ ಸಂದೇಶ – ಹೊಸತಿಗೂ ಮಿತಿಯಿರಲಿ

 ಮತಿವಂತರಿದ್ದರಲ ನಮ್ಮ ಹಿಂದೆಯುಮಿಲ್ಲಿ,

ಹಿತ ಚಿಂತಕರು ಜನಕೆ ಕೃತ ಪರಿಶ್ರಮರು,

ಅತಿವೈದ್ಯದಿಂದ ಹೊಸರುಜಿನಕೆಡೆಯಾದೀತೋ|

ಮಿತಿಯಿಂ  ನವೀಕರಣ-ಮಂಕುತಿಮ್ಮ.

        ಜಗತ್ತಿನ ಮಾನವ ಇತಿಹಾಸವನ್ನು  ಅವಲೋಕಿಸಿದಾಗ  ನಮಗಿಂತ ಹಿಂದೆಯೂ ಇಲ್ಲಿ ಬುದ್ಧಿವಂತರಿದ್ದರು.ಸಮಷ್ಟಿ ಹಿತದ ಬಗ್ಗೆ ಚಿಂತಿಸುವವರು,ಜಗತ್ತಿನ ಒಳಿತಿಗಾಗಿ ದುಡಿಯುವವರು ಇದ್ದಾರಲ್ಲವೆ? ಅತಿಯಾದ ವೈದ್ಯೋಪಚಾರ ಹೊಸ ರೋಗಕ್ಕೆ ಎಡೆಮಾಡಿಕೊಟ್ಟಂತೆ ಇರುವುದನ್ನು ಅತಿಯಾಗಿ, ತೀವ್ರಗತಿಯಲ್ಲಿ ಬದಲಿಸಿದರೆ ಹೊಸ ಸಮಸ್ಯೆ ಉಂಟಾಗುತ್ತದೆ. ಹಾಗಾಗಿ ಮಿತಿಯಲ್ಲಿ ನವೀನತೆಯನ್ನು ಕಂಡುಕೊಳ್ಳಬೇಕೆಂದು ಡಿ.ವಿ.ಜಿ. ಎಚ್ಚರಿಸಿದ್ದಾರೆ.

       ಬದಲಾವಣೆ ಜಗದ ನಿಯಮ, ಅದಕ್ಕೆ ಹೊಂದಿಕೊಳ್ಳಬೇಕಾದುದು ನಮ್ಮ ಧರ್ಮ.ಬದಲಾವಣೆ ಎಂಬುದು ನಿರಂತರ ಪ್ರಕ್ರಿಯೆ.ಬುದ್ಧಿವಂತ ಹಿತಚಿಂತಕರಿಂದ ಇದು ಹಿಂದಿನಿಂದಲೂ ನಡೆಯುತ್ತಾ ಬಂದಿದೆ. ಆದರೆ ಅತಿಯಾದ ತೀವ್ರತರವಾದ ಬದಲಾವಣೆ ಅಪಾಯವನ್ನು ತರುವ ಸಾಧ್ಯತೆಯು ಇರುತ್ತದೆಯಲ್ಲವೆ?

      ಮಾನವನು ತನ್ನ ಒಳಿತಿಗಾಗಿ ಇದ್ದುದನ್ನು ಬದಲಾಯಿಸುವ ಪ್ರಯತ್ನದಲ್ಲಿ ಹಳತನ್ನು ತೊಲಗಿಸಿ ಹೊಸತನ್ನು ಸೃಷ್ಟಿಸುತ್ತಾನೆ.ಆ ಹೊಸತು ಕೇವಲ ಒಳಿತನ್ನೇ ಮಾಡುವುದಿಲ್ಲ.ಇನ್ನೊಂದು ರೀತಿಯಲ್ಲಿ ಕೆಡುಕನ್ನು ಉಂಟುಮಾಡುತ್ತದೆ.ಹೊಸ ಆವಿಷ್ಕಾರಗಳು ಕತ್ತಿಯ ಎರಡು ಬದಿಯ ಅಲುಗಿದ್ದಂತೆ.ಎರಡು ಕಡೆ ತಮ್ಮ ಪ್ರಭಾವವನ್ನು ತೋರುತ್ತವೆ.ಒಂದು ಕಡೆ ಒಳಿತನ್ನು ಮಾಡಿದರೆ ಮತ್ತೊಂದೆಡೆ ಕೆಡುಕಿಗೂ ಬಳಸುವ ಅವಕಾಶವನ್ನು ನೀಡುತ್ತದೆ.ಆದ್ದರಿಂದ ಜಾಗರೂಕತೆಯಿಂದ ಬಳಸುವ ವಿವೇಚನೆ ನಮ್ಮದಾಗಬೇಕು.

      ಯಾವುದೇ ಕಾಯಿಲೆಗೆ ಅತಿಯಾಗಿ ಉಪಚರಿಸಿದಾಗ ಇನ್ನೊಂದು ಹೊಸ ರೋಗ ಬರುವ ಸಾಧ್ಯತೆಯಿದೆ. ಇಂದು ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಯ ವಿರುದ್ಧವಾಗಿ ನಡೆಯುತ್ತಿರುವ ನಾನಾ ಚಟುವಟಿಕೆಗಳು ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತಿವೆ. ಹೊಸ ಹೊಸ ರೋಗಗಳು ಉದ್ಭವಿಸುತ್ತಿವೆ. ಬದಕು ಅಭಿವೃದ್ಧಿಯತ್ತ ಅಲ್ಲ  ಅಪಾಯದತ್ತ ಸಾಗುತ್ತಿರುವುದು    ವಿಪರ್ಯಾಸದ ಸಂಗತಿ.ಇನ್ನಾದರೂ “ಮಿತಿಯಿಂ ನವೀಕರಣ” ಎಂಬ  ಡಿ.ವಿ.ಜಿ. ಯವರ ಮಾತಿನಂತೆ ನಡೆದರೆ ಒಳಿತಲ್ಲವೆ?

ಪ್ರಭಾಕರ ಶೆಟ್ಟಿ ಕೊಂಡಳ್ಳಿ

ಕಾರ್ಕಳ ತಾಲೂಕು ಸಾಹಿತ್ಯ ಪರಿಷತ್‌ ಅಧ್ಯಕ್ಷರು



































































































error: Content is protected !!
Scroll to Top