ಇಂದಿನ ಐಕಾನ್ – ಶೂನ್ಯದಿಂದ ಸಾಮ್ರಾಜ್ಯ ಕಟ್ಟಿದ ಸತೀಶ್ (ರಾವ್) ಮರಾಠೆ

  ( ಭಾಗ 1)

         ಕೆಲವರ ಬದುಕು ಅತ್ಯಂತ ರೋಚಕ ಥ್ರಿಲ್ಲರ್ ಸಿನೆಮಾದ  ಹಾಗೆ ನನಗೆ ಭಾಸವಾಗುತ್ತದೆ. ಇಂದಿನ ಐಕಾನ್ ಸತೀಶ್ ರಾವ್ ಅವರ ಬಗ್ಗೆ ಒಂದು ಸುಂದರವಾದ ಪುಸ್ತಕ ಬರೆಯುವಷ್ಟು ಮಾಹಿತಿ ಇಟ್ಟುಕೊಂಡು ಈ ಲೇಖನ ಬರೆಯಲು ಕುಳಿತಿದ್ದೇನೆ. ಅವರು ಅಮೆರಿಕದಿಂದ ನನ್ನ ಜೊತೆಗೆ ಮಾತಾಡಿದ 75 ನಿಮಿಷಗಳಷ್ಟು ಹೊತ್ತು ನಾನು ಮೈಮರೆತು ಅವರ ಮಾತನ್ನು  ಕೇಳುತ್ತಿದ್ದೆ! ಅವರ ಬದುಕಿನ  ರೋಚಕವಾದ ಕತೆಯನ್ನು ಅವರದ್ದೇ ಮಾತುಗಳಲ್ಲಿ ಕೇಳುತ್ತಾ ಹೋಗೋಣ.

        ನಾನು ಸತೀಶ್. ಉಡುಪಿ ತಾಲೂಕಿನ ಒಂದು ಸಣ್ಣ  ಪಟ್ಟಣವಾದ ಹಿರಿಯಡ್ಕ ನನ್ನ ಊರು. ನಮ್ಮದು ಸಾರಸ್ವತ ಕುಟುಂಬ. ನನ್ನ ತಂದೆ ಕಾರವಾರದಲ್ಲಿ ಒಂದು ಸಣ್ಣ ಕ್ಯಾಂಟೀನ್ ನಡೆಸುತ್ತಿದ್ದರು. ಮನೆಗೆ ನಾನೊಬ್ಬನೇ ಗಂಡು ಮಗ. ನನಗೆ ನಾಲ್ಕು ಜನ ಸಹೋದರಿಯರು. ಅಮ್ಮ ತುಂಬಾ ಕಠಿಣ ದುಡಿಮೆ ಮಾಡುತ್ತಿದ್ದರೂ ಮನೆಯ ಖರ್ಚು ಹೊಂದಿಸಲು ಆಗುತ್ತಿರಲಿಲ್ಲ. ನನ್ನ ಕುಟುಂಬಕ್ಕೆ ನೆರವಾಗಬೇಕು, ಅಮ್ಮನಿಗೆ ಸಹಾಯ ಮಾಡಬೇಕು ಎನ್ನುವ ತುಡಿತ ಹೆಚ್ಚಾದಂತೆ ಶಾಲೆಯಲ್ಲಿ ಮನಸ್ಸು ನಿಲ್ಲಲಿಲ್ಲ. ಮೂರನೇ  ಕ್ಲಾಸ್ ಓದುತ್ತಿರುವಾಗ ನಾನು ಬಾಡಿಗೆಯ ಬೈಸಿಕಲ್ ಹಿಂದೆ ಸೋಡಾ ಬಾಟಲ್ ಟ್ರೇಯನ್ನು ಕಟ್ಟಿಕೊಂಡು ಹಿರಿಯಡ್ಕ ಬಸ್ಸು ನಿಲ್ದಾಣದಲ್ಲಿ ಸೋಡಾ ಮಾರಾಟ ಶುರು ಮಾಡಿದ್ದೆ. ಸಂತೆಯಲ್ಲಿ, ಜಾತ್ರೆಯಲ್ಲಿ,  ಯಕ್ಷಗಾನದ ಟೆಂಟ್ ಪಕ್ಕದಲ್ಲಿ ಇಡೀ ರಾತ್ರಿ ನಿದ್ದೆ ಬಿಟ್ಟು ಕಡ್ಲೆ ಮಾರಿ ಚಿಲ್ಲರೆ ಹಣ ಸಂಪಾದನೆ ಮಾಡುತ್ತಿದ್ದೆ. ಊರಲ್ಲಿ ಕೋಳಿ ಖರೀದಿ ಮಾಡಿ ಬೈಸಿಕಲ್ ಹಿಂದೆ ಕಟ್ಟಿಕೊಂಡು ಉಡುಪಿಯ  ವರೆಗೆ ಹೋಗಿ ನಟರಾಜ  ಹೋಟೆಲಿಗೆ ಮಾರಿ ಸಂಪಾದನೆ ಮಾಡುತ್ತಿದ್ದೆ. ಊರಿನವರು ತಲೆಗೊಂದು ಮಾತಾಡುತ್ತಿದ್ದರು. ಅಮ್ಮನ ಬಳಿ ಬಂದು ಚಾಡಿ  ಹೇಳುತ್ತಿದ್ದರು.

     ” ಏನಮ್ಮ, ನಿಮ್ಮ ಮಗ ಶಾಲೆಗೆ ಚಕ್ಕರ್ ಹೊಡೆದು ಸೋಡಾ ಮಾರುತ್ತಾನೆ.  ಬ್ರಾಹ್ಮಣ ಆದರೂ ಕೋಳಿ ಮಾರುತ್ತಾನೆ! ಒಂದಿಷ್ಟು ಜವಾಬ್ದಾರಿ ಬೇಡವಾ?” ಅಂತೆಲ್ಲ  ಹೇಳುತ್ತಿದ್ದರು. ಆದರೆ ನಾನು ಅಷ್ಟೆಲ್ಲ ಮಾಡುತ್ತಿದ್ದದ್ದು ಅಮ್ಮನಿಗೆ ಸಹಾಯ ಮಾಡಲು ಎಂದು ನನಗೆ ಮಾತ್ರ ಗೊತ್ತಿತ್ತು! ನನ್ನ ಅಮ್ಮ ಕಣ್ಣೀರು ಹಾಕಿ ನನಗೆ ಬುದ್ಧಿ ಹೇಳಲು ನಿಂತಾಗ ನಾನು ತಲೆತಗ್ಗಿಸಿ ನಿಲ್ಲುತ್ತಿದ್ದೆ.

        ಅಷ್ಟು ಹೊತ್ತಿಗೆ ಅಪ್ಪ ಕಾರವಾರದಿಂದ ಬೆಂಗಳೂರಿಗೆ ಬಂದು ಕಂಠೀರವ ಸ್ಟೇಡಿಯಂ    ಬಳಿ ಒಂದು ಸಣ್ಣ ಕ್ಯಾಂಟೀನ್ ಆರಂಭ ಮಾಡಿದ್ದರು. ದೊಡ್ಡ ವ್ಯಾಪಾರ ಇರಲಿಲ್ಲ. ಅವರಿಗೆ ಸಹಾಯ ಮಾಡಲು ನಾನು ಹೋಗಲೇ ಬೇಕಾಗಿತ್ತು. ಪ್ರತೀ ದಿನ ಅಮ್ಮನ ಕಣ್ಣೀರನ್ನು  ನೋಡಲು ಆಗದೇ  ನಾನೊಬ್ಬನೇ ಬೆಂಗಳೂರು ಬಸ್ಸು ಹತ್ತಿದ್ದೆ. ಆಗ ನಾನು ಕೇವಲ ಐದನೇ ಕ್ಲಾಸು ಮುಗಿಸಿದ್ದೆ!

        ಬೆಂಗಳೂರಿಗೆ ಬಂದು ಅಪ್ಪನಿಗೆ ಒಂದಿಷ್ಟು ಸಹಾಯ ಮಾಡುತ್ತ ನೆಲೆ ಹುಡುಕುವಾಗ ನನಗೆ ಬೈಸಿಕಲ್ ರೇಸ್ ಹುಚ್ಚು ಅಂಟಿಕೊಂಡಿತು. ಅಪ್ಪ ತೆಗೆಸಿ ಕೊಟ್ಟ ಅಟ್ಲಾಸ್ ಬೈಸಿಕಲನ್ನು ರೇಸ್ ಬೈಸಿಕಲ್ ಆಗಿ ನಾನೇ ಮಾರ್ಪಾಡು ಮಾಡಿಕೊಂಡು ದೂರ ದೂರಕ್ಕೆ ಒಬ್ಬನೇ ಸವಾರಿ ಹೋಗುತ್ತಿದ್ದೆ. ಬೆಂಗಳೂರಿಂದ ಮಡಿಕೇರಿ, ಧರ್ಮಸ್ಥಳ, ಬೇಲೂರು, ಹಳೇಬೀಡು… ಹೀಗೆಲ್ಲ ನನ್ನ ಬೈಸಿಕಲ್ ಗಾಳಿ ಸೀಳಿಕೊಂಡು ಓಡುತ್ತಿತ್ತು!

        ಒಮ್ಮೆ ಬೆಂಗಳೂರು ಟು ಕನಕಪುರ ಬೈಸಿಕಲ್ ರೇಸಿನಲ್ಲಿ ಬಹುಮಾನ ಗೆದ್ದಾಗ ಪೇಪರಿನಲ್ಲಿ ನನ್ನ ಹೆಸರು ಬಂದಿತು. ಅಪ್ಪನಿಗೆ ಖುಷಿಯೋ ಖುಷಿ. ನಿಧಾನಕ್ಕೆ ಅಪ್ಪ ನನ್ನ ಬೆಂಬಲಕ್ಕೆ ನಿಲ್ಲತೊಡಗಿದರು.  ಶಾಲೆಯಲ್ಲಿ ಆಸಕ್ತಿ ಕರಗಿ ಹೋಗಿ ಏಳನೇ ತರಗತಿಗೆ ಶಿಕ್ಷಣ  ನಿಂತಿತ್ತು. ಅಪ್ಪ ಹೊಟೇಲು ವ್ಯವಹಾರದಲ್ಲಿ ಮುಳುಗಿದ್ದರು. ನನಗೆ ಬೈಸಿಕಲ್ ಬೆಸ್ಟ್ ಫ್ರೆಂಡ್ ಆಯಿತು. ಶಬರಿಮಲೆಗೆ ಮೂರು ಬಾರಿ ಬೈಸಿಕಲ್ ಮೇಲೆ ಹೋಗಿ ಬಂದೆ. 1978ರಲ್ಲಿ   ಬೆಂಗಳೂರಿನಿಂದ ಹೊರಟು ಕನಕಪುರ, ಅಲ್ಲಿಂದ ಮತ್ತೆ ಬೆಂಗಳೂರು ತಲುಪುವ  ರಾಷ್ಟ್ರಮಟ್ಟದ ಬೈಸಿಕಲ್ ರೇಸಲ್ಲಿ ಪ್ರಥಮ ಸ್ಥಾನ, ನಗದು ಬಹುಮಾನ ಗೆದ್ದಾಗ ಭಾರತರತ್ನ ಗೆದ್ದಷ್ಟು ಖುಷಿ! ಎಲ್ಲ ಪತ್ರಿಕೆಗಳಲ್ಲೂ ಮಗನ ಹೆಸರು, ಫೋಟೋ ಬಂದಾಗ ಅಪ್ಪನ ಕಾಲು ನೆಲದ ಮೇಲಿರಲಿಲ್ಲ! ಮಗನ ಕನಸಿಗೆ ರೆಕ್ಕೆ ಬಂದಿತ್ತು! ಅಲ್ಲಿಂದ ಆರಂಭಿಸಿ ಎಲ್ಲೇ ಬೈಸಿಕಲ್ ರೇಸ್ ನಡೆದರೂ ನಾನು ಹೋಗುತ್ತಿದ್ದೆ. ಹತ್ತಾರು ರಾಜ್ಯ, ರಾಷ್ಟ್ರ ಮಟ್ಟದ ಪದಕಗಳು ನನಗೆ ದೊರೆತವು.

     ಅದೇ ಹೊತ್ತಿಗೆ (1982) ದೆಹಲಿಯಲ್ಲಿ ಏಷ್ಯನ್ ಗೇಮ್ಸ್ ನಡೆಯುವ ಸುದ್ದಿ ಬಂತು. ಅದರಲ್ಲಿ ಬೈಸಿಕಲ್ ರೇಸ್ ಕೂಡ ಇದೆ ಅಂತ ಸುದ್ದಿ ಬಂತು. ಸತತ ಅಭ್ಯಾಸದಿಂದ ನನ್ನ ಆಯ್ಕೆ ಕೂಡ ಆಯಿತು. ವಿಶೇಷವಾಗಿ ಡಿಸೈನ್ ಮಾಡಿದ ಬೈಸಿಕಲ್ (ಅದರ ಬೆಲೆ ಆ ಕಾಲಕ್ಕೆ ಐದರಿಂದ ಆರು ಲಕ್ಷ!) ತೆಗೆದುಕೊಂಡು ನಾನು ದೆಹಲಿಗೆ ಬಂದಿದ್ದೆ. ಭಾರತೀಯ ಸೈಕ್ಲಿಂಗ್ ಫೆಡರೇಶನ್ ನನ್ನ ಮೇಲೆ ಬಹಳ ಭರವಸೆ ಇಟ್ಟಿತ್ತು. ಆದರೆ ನನ್ನ ದುರದೃಷ್ಟ ನನಗಿಂತ ಮುಂದೆ ಇತ್ತು. ಏಷಿಯನ್ ಕ್ರೀಡಾಕೂಟ  ಆರಂಭವಾಗುವ ಒಂದೆರಡು ದಿನ ಮೊದಲು ನನ್ನ ಬೈಸಿಕಲ್ ಚೈನ್ ತುಂಡಾಗಿ ನಾನು ಕೆಳಗೆ ಬಿದ್ದೆ. ನನ್ನ ಕಾಲು ಮೂಳೆ ಮುರಿದಿತ್ತು! ಹಾಗೆಯೇ ನನ್ನ ಬಹು ದೊಡ್ಡ ಕನಸು ಕೂಡ!

      ಆದರೆ ನಾನು ಧೃತಿ ಕೆಡುವ ಮಾತೇ ಇರಲಿಲ್ಲ. ಒಂದು  ಕನಸು ಮುರಿದು ಹೋದಾಗ  ಮತ್ತೊಂದು ಟ್ರಿಗರ್ ಆಗುವ ಸ್ವಭಾವ  ನನ್ನದು! ಈ ಬಾರಿ ನನ್ನ ಕನಸು ಕೇಳಿ ನೀವು ಖಂಡಿತವಾಗಿ ನಗುತ್ತೀರಿ! ಅದು ಬೈಸಿಕಲ್ ಮೇಲೆ ಜಗತ್ತನ್ನು ಸುತ್ತುವುದು!!

       ಆಗಲೇ ನನ್ನ ಅಪ್ಪನಿಗೆ ನನ್ನ  ದುಂದು ವೆಚ್ಚದ ಕನಸುಗಳು ಬಿಸಿ ಮುಟ್ಟಿಸಿದ್ದವು! ನನ್ನ ಕನಸುಗಳು ಯಾರಿಗೂ ಅರ್ಥ ಆಗುತ್ತಿರಲಿಲ್ಲ. ಆದರೆ ನಾನು ಯಾರು ಅಂತ ನನಗೆ ಅರ್ಥ ಆಗಿತ್ತು! ನನ್ನ ವಯಸ್ಸು ಇನ್ನೂ ತುಂಬಾ ಸಣ್ಣದು. ನನಗೆ ವಿದೇಶಕ್ಕೆ ಹೋಗಲು ಪಾಸ್ ಪೋರ್ಟ್, ವೀಸಾ ಬೇಕು ಅಂತ ಕೂಡ ಗೊತ್ತಿರಲಿಲ್ಲ! ಬಹಳ ಕಷ್ಟ ಪಟ್ಟುಕೊಂಡು YMCA ಸದಸ್ಯತ್ವ ಪಡೆದುಕೊಂಡಿದ್ದೆ.  ಹಿರಿಯ ಅಧಿಕಾರಿಗಳ ಮೂಲಕ ಶಿಪ್ಪಿಂಗ್ ಕಾರ್ಪೋರೇಶನ್ ಮಂದಿಯ ಪರಿಚಯ ಆಯಿತು. ಅವರು ನನ್ನ ರೇಸಿಂಗ್ ಸಾಧನೆ ನೋಡಿ ಪ್ರಾಯೋಜಕತ್ವ ನೀಡಲು ಒಪ್ಪಿದರು. ‘ ಹಡಗಲ್ಲಿ ಎಲ್ಲಿಗೆ ಬೇಕಾದರೂ  ಹೋಗಬಹುದು!’ ಅಂದರು. ಇನ್ನೊಂದು ಕನಸಿಗೆ ಬಣ್ಣ ತುಂಬುತ್ತಾ ನಾನು, ನನ್ನ ಬೈಸಿಕಲ್ ಎರಡೂ ಹಡಗನ್ನು ಏರಿ ಆಗಿತ್ತು! ( ನಾಳೆಗೆ ಮುಂದುವರೆಯುವುದು).

ನೆರವು – ಸಿಯಾ ಸಂತೋಷ್ ನಾಯಕ್.

ಬರಹ – ರಾಜೇಂದ್ರ ಭಟ್ ಕೆ.



































































































error: Content is protected !!
Scroll to Top