
ಕಡಲ್ಗಳೊಂದಾದೊಡಂ ಪೊಡವಿ ಹಬೆಯಾದೊಡಂ,
ಬಿಡದಿರೊಳನೆಮ್ಮದಿಯ,ಬಿಡು ಗಾಬರಿಕೆಯ,
ಕಡಲ ನೆರೆ ತಗ್ಗುವುದು, ಪೊಡವಿ ಧೂಳಿಳಿಯುವುದು.
ಗಡುವಿರುವುದೆಲ್ಲಕಂ-ಮಂಕುತಿಮ್ಮ
ಹವಾಮಾನ ವೈಪರೀತ್ಯದಿಂದ ಕಡಲುಗಳು ಪ್ರಕ್ಷುಬ್ಧಗೊಂಡು ಉಕ್ಕಿ ಒಂದಾದರೂ, ಭೂಮಿಯು ಬಿಸಿಯಾಗಿ ಉರಿದು ವಾತಾವರಣದಲ್ಲಿ ಧೂಳಿನ ಮೋಡ ಮುಸುಕಿದರೂ ನೀನು ಆತಂಕಗೊಂಡು ಅಂತರಂಗದ ನೆಮ್ಮದಿಯ ಕಳೆದುಕೊಳ್ಳಬೇಡ. ಏಕೆಂದರೆ ಇವಕ್ಕೆಲ್ಲ ಒಂದು ಅಂತ್ಯ ಎನ್ನುವುದು ಇದೆ. ಉಕ್ಕಿ ಹರಿದ ಸಮುದ್ರವು ಶಾಂತವಾಗುತ್ತದೆ. ಧರೆಯು ತಣ್ಣಗಾಗಿ ಮೇಲೆದ್ದ ಧೂಳೆಲ್ಲಾ ಭುವಿಗಿಳಿದು ವಾತಾವರಣ ತಿಳಿಯಾಗುವುದು.
ಇಂದು ನಾವೆಲ್ಲ ಆತಂಕದಲ್ಲಿದ್ದೇವೆ. ಕೊರೊನಾದ ಕಪಿಮುಷ್ಟಿಗೆ ಸಿಲುಕಿದ ಜಗತ್ತು ಭಯದಿಂದ ತಲ್ಲಣಿಸುತ್ತಿದೆ. ಕೊರೊನಾಕ್ಕಿಂತ ಅದು ಉಂಟು ಮಾಡಿದ ಭಯ ನಮ್ಮನ್ನು ಬಹಳವಾಗಿ ಕಾಡುತ್ತಿದೆ. ಡಿ.ವಿ.ಜಿ. ಯವರ ಮಾತಿನಂತೆ ಪ್ರತಿಯೊಂದನ್ನು ಕೊನೆ ಎಂಬುದು ಇದ್ದು, ಅಂತೆಯೇ ಕೊರೊನಾ ಸೋಂಕಿಗೂ ಒಂದು ಕೊನೆಯಿದೆ. ಅದಕ್ಕಾಗಿ ಕಾಯುವ ಸಹನೆ ಮತ್ತು ಧೈರ್ಯ ನಾವು ರೂಢಿಸಿಕೊಳ್ಳಬೇಕು.
ಜೀವನ ಎನ್ನುವುದು ನಾವು ಎಣಿಸಿದ ಹಾಗೆ ಬರುವುದಿಲ್ಲ. ಬಂದುದೆಲ್ಲಾ ಬರಲಿ ಗೋವಿಂದನ ದಯೆ ಒಂದಿರಲಿ ಎಂಬಂತೆ ಭಗವಂತನಲ್ಲಿ ಭಕ್ತಿ ಜೀವನದಲ್ಲಿ ನಂಬಿಕೆಯೇ ಬದುಕಿಗೆ ಬಲ. ಕತ್ತಲಾದ ಮೇಲೆ ಬೆಳಕು ಮೂಡಲೇ ಬೇಕು. ಇದು ಪ್ರಕೃತಿ ನಿಯಮ. ಜೀವನದ ಏರಿಳಿತಗಳನ್ನು ಧೃತಿಗೆಡದೇ ಸಮಚಿತ್ತ ಸಮಭಾವದಿಂದ ಸ್ವೀಕರಿಸಬೇಕು. ಕಾಲಾಯ ತಸ್ಮೈ ನಮಃ ಎಂದು ಸಕಾಲಕ್ಕಾಗಿ ಸಕಾರಾತ್ಮಕ ಮನೋಭಾವದಿಂದ ಕಾಯಬೇಕು.
ಪ್ರಭಾಕರ ಶೆಟ್ಟಿ, ಕೊಂಡಳ್ಳಿ
ಕಾರ್ಕಳ ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷರು
ಎಂತಹ ಸಮಯದಲ್ಲೂ ಸಮಚಿತ್ತದ ಸ್ಥಿತ ಪ್ರಜ್ಞೆ ಮತ್ತು ತಾಳ್ಮೆ ಅವಶ್ಯ ಎಂಬುದನ್ನು ಜೀವನ ಸೂತ್ರ ಕಗ್ಗದ ಸಾರ ಅರ್ಥಪೂರ್ಣ.ಧನ್ಯವಾದಗಳು ಸರ್.