ಬೀಜಿಂಗ್ , ಆ. 17: ವಿಶ್ವದಲ್ಲೇ ಮೊದಲಾಗಿ ರಷ್ಯಾ ಕೊರೊನಾಗೆ ಲಸಿಕೆ ಕಂಡು ಹಿಡಿದಿರುವ ಬಗ್ಗೆ ಬಿಸಿಬಿಸಿ ಚರ್ಚೆಗಳು ನಡೆಯುತ್ತಿರುವ ಮಧ್ಯೆಯೇ ಈಗ ಚೀನ ಕೂಡಾ ಕೊರೊನಾ ಲಸಿಕೆ ಬಗ್ಗೆ ಶುಭ ಸುದ್ದಿ ನೀಡಿದೆ.
ಚೀನದ ಸರಕಾರಿ ಪತ್ರಿಕೆ ಗ್ಲೋಬಲ್ ಟೈಮ್ಸ್ ಪ್ರಕಾರ,’ ಕ್ಯಾನ್ಸಿನೋ ಬಯಾಲಾಜಿಕ್ಸ್ ಇಂಕ್ ನ ಕೊರೊನಾ ಲಸಿಕೆ Ad5-nCov ನ ಪೇಟೆಂಟ್ ಲಭಿಸಿದೆಯಂತೆ.ನ್ಯಾಷನಲ್ ಇಂಟೆಲೆಕ್ಚುವಲ್ ಪ್ರಾಪರ್ಟಿ ಅಡ್ಮಿನಿಸ್ಟ್ರೇಷನ್ ಈ ಮಾಹಿತಿಯನ್ನು ನೀಡಿದೆಯಂತೆ.
ಲಭ್ಯ ಮಾಹಿತಿಯ ಪ್ರಕಾರ, ಪೇಟೆಂಟ್ ಗಾಗಿಮಾರ್ಚ್ 18 ರಂದೇ ಮನವಿಯನ್ನು ಮಾಡಲಾಗಿತ್ತು.ಆದರೆ ಆಗಸ್ಟ್ 11ರಂದು ಅನುಮೋದನೆ ಸಿಕ್ಕಿರುತ್ತದೆ.ಚೀನಿ ಸೈನ್ಯ ಮತ್ತು ಕ್ಯಾನ್ಸಿನೊ ಬಯಾಲಾಜಿಕ್ಸ್ ಜಂಟಿಯಾಗಿ ಈ ಲಸಿಕೆಯನ್ನು ಸಿದ್ಧ ಪಡಿಸುತ್ತಿದೆ.

ಚೀನೀ ತಜ್ಞರ ಪ್ರಕಾರ, ಈ ಲಸಿಕೆ ಬಹಳ ಸುರಕ್ಷಿತ ಮತ್ತು ಪ್ರಭಾವಶಾಲಿಯಾಗಿದೆ.ಕೊರೊನಾ ಲಸಿಕೆ ತಯಾರಿಕೆಯತ್ತ ಬಹಳ ವೇಗದ ಹೆಜ್ಜೆಯನ್ನು ಇಡಲಾಗುತ್ತಿದೆ.ಈ ವರ್ಷದ ಅಂತ್ಯದ ಒಳಗಾಗಿ ಲಸಿಕೆ ಮಾರುಕಟ್ಟೆಗೆ ಬರುವ ಭರವಸೆ ಇಡಲಾಗಿದೆ.
ಸದ್ಯ ಚೀನ ವಿಶ್ವದ ಹಲವು ದೇಶಗಳಲ್ಲಿ ಈ ಲಸಿಕೆಯ ಮೂರನೇ ಹಂತದ ಪ್ರಯೋಗ ನಡೆಸುತ್ತಿದೆ. ಪರೀಕ್ಷೆ ವೇಳೆ ಲಸಿಕೆಯ ಪ್ರಭಾವ ಮತ್ತು ಕ್ಷಮತೆಯ ಬಗ್ಗೆ ಗಮನ ಹರಿಸಲಾಗುತ್ತಿದೆ.ಒಂದು ವೇಳೆ ಇದು ಯಶಸ್ವಿಯಾದರೆ ಇದನ್ನು ಮಾರುಕಟ್ಟೆಗೆ ತರಲಾಗುವುದು ಎಂದು ಚೀನದ ಸರ್ಕಾರ ಹೇಳಿದೆ.ಚೀನಾ ತನ್ನ ಸೈನಿಕರಿಗೆ ಈಗಾಗಲೇ ಈ ಲಸಿಕೆಯನ್ನು ಹಾಕಲಾರಂಭಿಸಿದೆ ಎಂದು ಕೆಲ ಮೂಲಗಳು ಹೇಳುತ್ತಿವೆ.
ಏಳಿಂಜೆ ನಾಗೇಶ್, ಮುಂಬಯಿ (9892980750)








































