ಇಂದಿನ ಐಕಾನ್ – ಗಂಡು ಕಲೆಯಲ್ಲಿ ಮೆರೆಯುತ್ತಿರುವ ಹೆಣ್ಣು ಧ್ವನಿ  ಕಾವ್ಯಶ್ರೀ ಆಜೇರು

0

ಯಕ್ಷಗಾನದ ಕ್ಷೇತ್ರವು ಇಂದು ಸಾಕಷ್ಟು ಯುವ ಪ್ರತಿಭೆಗಳ ಆಗಮನದಿಂದ ಸಿಂಗಾರಗೊಂಡಿದೆ.  ಅಂತಹ ಯುವ ಪ್ರತಿಭೆಗಳ ಶ್ರೇಣಿಯ ತುತ್ತ ತುದಿಯ ಮತ್ತು ಶ್ರೇಷ್ಟವಾದ ಹೆಸರು ಕಾವ್ಯಶ್ರೀ ನಾಯಕ್ ಆಜೇರು. ಆಕೆ ತನ್ನ ಅಭಿಜಾತವಾದ ಪ್ರತಿಭೆ ಹಾಗೂ ಸ್ವರ ಸಂಪತ್ತಿನಿಂದ ಇಂದು  ಸಾವಿರಾರು ಅಭಿಮಾನಿಗಳನ್ನು ಸಂಪಾದಿಸಿ ಕೊಂಡಿದ್ದಾರೆ.

ಬಂಟ್ವಾಳ ತಾಲೂಕಿನ ಪುಣಚ ಅವರ ಹುಟ್ಟೂರು. ತಂದೆ ಶ್ರೀಪತಿ ನಾಯಕರು ಶಿಕ್ಷಕರು ಮತ್ತು ಹವ್ಯಾಸಿ ಭಾಗವತರು. ಅಜ್ಜ  ರಾಮಪ್ಪಯ್ಯ ನಾಯಕರು   ಕೂಡ ಯಕ್ಷಗಾನದ ಭಾಗವತಿಕೆ ಮಾಡುತ್ತಿದ್ದರು ಮತ್ತು ಚೆಂಡೆ, ಮದ್ದಲೆ ನುಡಿಸುತ್ತಿದ್ದರು. ತಾಯಿ ಉಮಾ ಗೃಹಿಣಿ. ಹಾಗೆ ಯಕ್ಷಗಾನದ ಕಲೆ ಆಕೆಗೆ ರಕ್ತಗತವಾಗಿ ಬಂದಂತಿತ್ತು. ತಂದೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರ ಹತ್ತಿರ ಭಾಗವತಿಕೆಯ  ಅಭ್ಯಾಸಕ್ಕೆ ಹೋಗುವಾಗ ಪುಟ್ಟ ಮಗಳನ್ನು ಕರೆದುಕೊಂಡು ಹೋಗುತ್ತಿದ್ದರು. ಮನೆಯ ಹೊರಗೆ ಕುಳಿತು ಯಕ್ಷಗಾನದ  ಹಾಡುಗಳನ್ನು ಗುನುಗುತ್ತ  ಕಲಿತವರು ಆಕೆ. ಒಂದು ದಿನ ಆಕೆಯನ್ನು ಗಮನಿಸಿದ ಮಾಂಬಾಡಿ ಗುರುಗಳು ನೀನೇಕೆ ಹಾಡಲು ಪ್ರಯತ್ನ ಮಾಡಬಾರದು? ಎಂದು ಕೇಳಿದ್ದೇ ಕೇಳಿದ್ದು ಹುಡುಗಿ ರೋಮಾಂಚನಪಟ್ಟಳು! ಅಪ್ಪ ಮಗಳ ಪ್ರತಿಭೆಯನ್ನು ಬೆಂಬಲಿಸಿದರು.

ಅಂದಿನಿಂದ ಮಾಂಬಾಡಿ ಗುರುಗಳ ಬಳಿ ಕಲಿಕೆ ಆರಂಭ. ಹರೀಶ ಬಳಂತಿಮೊಗರು ಅವರ ಬಳಿ ಪ್ರಸಂಗ ಸಾಹಿತ್ಯದ  ಅಧ್ಯಯನವೂ ಜೊತೆಯಾಗಿ  ಸಾಗಿತು. ಇವೆಲ್ಲದಕ್ಕೂ ಪೂರಕ ಆಗಿ ವಿದುಷಿ ಸಂಧ್ಯಾ ಕುಸುಮ ಅವರಲ್ಲಿ ಶಾಸ್ತ್ರೀಯ ಸಂಗೀತವನ್ನು ಕಲಿತು ಪರೀಕ್ಷೆ ಬರೆದರು. ಭಾವಗೀತೆ, ಭಕ್ತಿಗೀತೆ, ಜಾನಪದ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ಹಲವು ಬಹುಮಾನ ಗೆದ್ದರು. ಈ ಎಲ್ಲಾ ಹಿನ್ನೆಲೆಗಳ  ಜೊತೆಗೆ ತನ್ನ ಆರನೇ  ತರಗತಿಯ ಹೊತ್ತಿಗೆ ಮೊದಲ ಭಾಗವತಿಕೆಯ ಕಾರ್ಯಕ್ರಮ ನೀಡಿದರು. ಮುಂದೆ ಅಪ್ಪನ ಕೈ ಹಿಡಿದು ಬಂದು ವಿನಾಯಕ ಮಕ್ಕಳ ಮೇಳ ಕೆರೆಕಾಡು, ಮೂಲ್ಕಿ ಇಲ್ಲಿ  ಭಾಗವತಿಕೆ  ಆರಂಭಿಸಿದರು! ದೈವದತ್ತವಾಗಿ ಬಂದ ಶ್ರೀಮಂತ ಕಂಠಶ್ರೀ, ಆಳವಾದ ಪ್ರಸಂಗದ ಜ್ಞಾನ, ಸಾಹಿತ್ಯ ಪ್ರಜ್ಞೆ, ಮಹಿಳಾ ಭಾಗವತರಾದ ಭವ್ಯಶ್ರೀ ಮಂಡೆಕೋಲು ಅವರ ಸೂಕ್ತ  ಮಾರ್ಗದರ್ಶನ ಎಲ್ಲವೂ ಸೇರಿ ಇಂದು ಕಾವ್ಯಶ್ರೀ ಯಕ್ಷಗಾನದ ವೃತ್ತಿಪರ ಭಾಗವತರಾಗಿ  ಬೆಳೆಯುತ್ತಿದ್ದಾರೆ.

ತೆಂಕುತಿಟ್ಟಿನ  ಭಾಗವತರಾಗಿದ್ದರೂ ಎರಡೂ ತಿಟ್ಟುಗಳ ಅಭಿಮಾನಿಗಳನ್ನು ಗಳಿಸಿರುವುದು ಆಕೆಯ  ಪ್ರತಿಭೆಗೆ ಸಾಕ್ಷಿ. ಸಾಗರದಲ್ಲಿ ನಡೆದ ಉಭಯ ತಿಟ್ಟುಗಳ ಗಾನ ವೈಭವ ಕಾರ್ಯಕ್ರಮದಲ್ಲಿ ಧಾರೇಶ್ವರ ಭಾಗವತರ ಜೊತೆಗೆ ಹಾಡಿದ್ದು ತನ್ನ ಜೀವನದ ಪ್ರಮುಖ ತಿರುವು ಎಂದು ಆಕೆ ಹೇಳುತ್ತಾರೆ. ಅದರಿಂದ ಕರಾವಳಿಯ ಉದ್ದಗಲಕ್ಕೂ ತಿಟ್ಟುಗಳ ಬೇಧವಿಲ್ಲದೆ ಅಸಂಖ್ಯ ಅಭಿಮಾನಿಗಳನ್ನು ಪಡೆಯಲು ಆಕೆಗೆ ಸಾಧ್ಯವಾಯಿತು.

ಕಾವ್ಯಶ್ರೀ ನಾಯಕ್ ಕಳೆದ 13-14 ವರ್ಷಗಳಿಂದ ಯಕ್ಷಗಾನದ ಕ್ಷೇತ್ರದಲ್ಲಿ ಮಿಂಚು  ಹರಿಸುತ್ತಿದ್ದಾರೆ. ಒಂದು ಸಾವಿರಕ್ಕೂ ಅಧಿಕ ಕಾರ್ಯಕ್ರಮಗಳನ್ನು  ನೀಡಿದ್ದಾರೆ. ನೂರಾರು ವೇದಿಕೆಗಳಲ್ಲಿ ಹಾಡಿದ್ದಾರೆ.  ಪಟ್ಲ ಸತೀಶ್ ಶೆಟ್ಟಿ, ಜನ್ಸಾಲೆ, ಕನ್ನಡಿಕಟ್ಟೆ, ಪುತ್ತಿಗೆ ರಘುರಾಮ ಹೊಳ್ಳ, ಪದ್ಯಾಣ, ಲೀಲಾವತಿ ಬೈಪಡಿತ್ತಾಯ, ಪುಣಿಚಿತಾಯ, ರಾಮಕೃಷ್ಣ ಮಯ್ಯ, ಗಿರೀಶ್ ರೈ ಕಕ್ಕೆಪದವು ಮೊದಲಾದ ಭಾಗವತರ ಜೊತೆಗೆ ಕೂಡಾಟ, ಗಾನ ವೈಭವ ಕಾರ್ಯಕ್ರಮಗಳಲ್ಲಿ  ಹಾಡಿದ್ದಾರೆ. ಪೌರಾಣಿಕ ಪ್ರಸಂಗದ ಹಾಡುಗಳನ್ನು ತುಂಬಾ ಚಂದವಾಗಿ  ಹಾಡುತ್ತಾರೆ. ಮುಂಬಯಿ, ಚೆನ್ನೈ, ಬೆಂಗಳೂರು, ಹರಿದ್ವಾರ,  ದುಬಾಯಿ, ದೆಹಲಿ, ನೀನಾಸಂ ಹೆಗ್ಗೋಡು ಮೊದಲಾದ ಕಡೆ ಯಕ್ಷಗಾನದ ವೇದಿಕೆಯಲ್ಲಿ  ಹಾಡಿದ್ದಾರೆ ಮತ್ತು ಸನ್ಮಾನಗಳನ್ನು ಸ್ವೀಕರಿಸಿದ್ದಾರೆ. ಆಕಾಶವಾಣಿ ಮತ್ತು ದೂರದರ್ಶನಗಳಲ್ಲಿ ನಿರಂತರ ಕಾರ್ಯಕ್ರಮ ನೀಡಿದ್ದಾರೆ. ನೂರಾರು ಸನ್ಮಾನ, ಪ್ರಶಸ್ತಿ, ಗೌರವಗಳು ಅವರಿಗೆ ಈಗಾಗಲೇ ದೊರೆತಿವೆ.

ಕಾವ್ಯಶ್ರೀ ಬೆಟ್ಟಂಪಾಡಿಯ  ಸರಕಾರಿ ಪದವಿ ಕಾಲೇಜಿನಲ್ಲಿ B.Sc ಪದವಿ ಪಡೆದವರು.  ಮುಂದೆ ಪುತ್ತೂರಿನ ಶ್ರೇಷ್ಠ  ವಿವೇಕಾನಂದ ಕಾಲೇಜಿನಲ್ಲಿ ರಸಾಯನ ಶಾಸ್ತ್ರದಲ್ಲಿ M.Sc ಓದಿದರು. ಕಳೆದ ವರ್ಷ B.Ed ಕೂಡಾ ಮುಗಿಸಿರುವ ಅವರಿಗೆ ಶಿಕ್ಷಕಿಯಾಗಿ ಬೆಳೆಯಬೇಕು ಎಂಬ ಹಂಬಲ ಕೂಡ ಇದೆ. ಕಾಲೇಜು ಕಲಿಯುತ್ತಿದ್ದಾಗಲೆ ಯಕ್ಷಗಾನದ ತಂಡವನ್ನು  ಕಟ್ಟಿಕೊಂಡು ವಿವಿ ಮಟ್ಟದಲ್ಲಿ ಬಹುಮಾನ ಗೆದ್ದ ಹಿನ್ನೆಲೆ ಅವರಿಗೆ ಇದೆ. ಯಕ್ಷಗಾನದ ಆಸಕ್ತಿಯು ತನ್ನ ವಿದ್ಯಾಭ್ಯಾಸಕ್ಕೆ ಎಂದೂ ತೊಂದರೆ ಮಾಡಿಲ್ಲ  ಎಂದು ಅವರು ಹೇಳುತ್ತಾರೆ.

ಇನ್ನು ನಾನು ಅವರ  ಭಾಗವತಿಕೆಯ ಗುಣಮಟ್ಟದ  ಬಗ್ಗೆ ಹೇಳಬೇಕು. ಯಕ್ಷಗಾನಕ್ಕೆ ಅದರದ್ದೇ ಆದ ಸಂಪ್ರದಾಯ  ಮತ್ತು ಸ್ವರ ವಿನ್ಯಾಸಗಳು ಇವೆ. ಮೂರು ಸ್ಥಾಯಿಗಳಲ್ಲಿ ಶ್ರುತಿ ಸೌಖ್ಯವು ಕಾವ್ಯಶ್ರೀ ಅವರ ಬಹುದೊಡ್ಡ ಶಕ್ತಿ. ಏರು  ಶ್ರುತಿಯಲ್ಲಿ ಹಾಡುವಾಗ  ಸಾಹಿತ್ಯ ಮತ್ತು ಶ್ರುತಿ ಒಂದಿಷ್ಟೂ ಕೆಡದ ಹಾಗೆ ಅವರು ಹಾಡುವುದನ್ನು ಕೇಳುವಾಗ ರೋಮಾಂಚನ ಆಗುತ್ತದೆ.  ಮಾಧುರ್ಯ ಮತ್ತು ನಾದ ಸೌಖ್ಯ ಅವರ ನಿಜವಾದ  ಶಕ್ತಿಗಳು. ಹಾಡುಗಳ ನವ ರಸಗಳನ್ನು ಗ್ರಹಿಸಿ, ಅನುಭವಿಸಿ ಹಾಡುವ ಕಾರಣ ಮುಖದ ಭಾವನೆಗಳು ಸ್ಪಷ್ಟವಾಗಿ ಮೂಡುತ್ತವೆ. ಆಕೆ ಪದ್ಮಾಸನ ಹಾಕಿಕೊಂಡು  ಹಾಡಲು ತೊಡಗಿದಾಗ ವೇದಿಕೆಯಲ್ಲಿ  ಸಂಗೀತ ಸರಸ್ವತಿಯ ಆವಾಹನೆ ಆಗಿರುತ್ತದೆ. ಹುಣ್ಣಿಮೆಯ ತಣ್ಣನೆಯ ರಾತ್ರಿಯಲ್ಲಿ ಮೌನವಾಗಿ ನಡೆದಾಡಿದ  ಅನುಭವ ನೀಡುತ್ತದೆ. ಇದು ಅವರ ಜನಪ್ರಿಯತೆಗೆ ಕಾರಣ.

“ನಾನು ಸಾಧನೆ ಮಾಡಿದ್ದು ಏನೂ ಇಲ್ಲ. ಇನ್ನೂ ನಾನು ಅಂಬೆಗಾಲು ಇಡುತ್ತ ಕಲಿಯುತ್ತಿರುವ ಮಗು” ಎಂದು ಆಕೆ ಹೇಳುತ್ತಾರೆ. ಈ ವಿನಮ್ರತೆ ಮತ್ತು ಸೌಜನ್ಯ ಅವರನ್ನು ಬಹಳ ಎತ್ತರಕ್ಕೆ ಬೆಳೆಸಿದೆ.

ಆಕೆಗಿನ್ನೂ 26 ವರ್ಷ. ತಾಂತ್ರಿಕ ಶಿಕ್ಷಣ ಪಡೆದಿರುವ ಮತ್ತು ಕೃಷಿಕ ಕುಟುಂಬದಿಂದ ಬಂದಿರುವ ಗುರುಪ್ರಸಾದ್ ನಾಯಕ್ ಅವರ ಕೈ ಹಿಡಿದು ಗೃಹಿಣಿ ಆಗಿರುವ ಕಾವ್ಯಶ್ರೀ ಇಂದು ಉಳಿ ಎಂಬಲ್ಲಿ ನೆಲೆಸಿದ್ದಾರೆ. ತನ್ನ ಪತಿ, ಮಾವ, ತಂದೆ, ತಾಯಿ, ಗುರುಗಳು ಇವರೆಲ್ಲರ ಬೆಂಬಲದಿಂದ ತನಗೆ ಯಕ್ಷಗಾನದಲ್ಲಿ ಬೆಳೆಯಲು ಸಾಧ್ಯವಾಗಿದೆ ಎನ್ನುತ್ತಾರೆ. ರಂಗ ಬಂದನೆ ಪಾಂಡುರಂಗ ಬಂದನೆ,  ಮುರಹರ ಶಶಿಧರ…ಮೊದಲಾದ  ಹಾಡುಗಳನ್ನು ಅವರ ಶ್ರೀಮಂತ  ಕಂಠದಿಂದ ಕೇಳುತ್ತಿದ್ದರೆ ನೀವು ಯಾವುದೋ ಒಂದು ಅನೂಹ್ಯ ಅನುಭೂತಿಗೆ ಒಳಗಾಗುವುದು ಖಂಡಿತ!

ಈ ಯುವ ಸಾಂಸ್ಕೃತಿಕ ರಾಯಭಾರಿಗೆ ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದಗಳು  ದೊರೆಯಲಿ. ಅವರಿಗೆ ಉಜ್ವಲ ಭವಿಷ್ಯವಿದೆ ಅನ್ನುವುದು ಅಷ್ಟೇ ನಿಜ.

ನೆರವು – ಸಿಯಾ ಸಂತೋಷ್ ನಾಯಕ್.

ರಾಜೇಂದ್ರ ಭಟ್ ಕೆ.---
Previous articleಚೀನ ಕಂಡು ಹಿಡಿಯಿತೇ ಕೊರೊನಾ ಲಸಿಕೆ?  
Next articleಕಾಶ್ಮೀರ : ಪುಲ್ವಾಮ ಮಾದರಿ ಸಂಚು ವಿಫಲ

LEAVE A REPLY

Please enter your comment!
Please enter your name here