ಬೆಂಗಳೂರು, ಆ.10 :ಬಹಳ ಕಾತರದಿಂದ ಕಾಯುತ್ತಿದ್ದ ಎಸ್ಎಸ್ಎಲ್ ಸಿ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ಶೇ.71.80 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ಫಲಿತಾಂಶ ಬಿಡುಗಡೆಗೊಳಿಸಿದರು. ರಾಜ್ಯಾದ್ಯಂತ 8, 48, 203 ವಿದ್ಯಾರ್ಥಿಗಳು ಪರೀಕ್ಷೆ ನೋಂದಾಯಿಸಿಕೊಂಡಿದ್ದು, ಈ ಪೈಕಿ 8,11,050 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 34 ಶೈಕ್ಷಣಿಕ ಜಿಲ್ಲೆಗಳ 22 ಕೇಂದ್ರಗಳಲ್ಲಿ ಮೌಲ್ಯಮಾಪನ ಮಾಡಲಾಗಿತ್ತು ಎಂದು ತಿಳಿಸಿದರು.
ಈ ವರ್ಷ ಶೇ.71.80 ಮಂದಿ ಅಂದರೆ 5, 82, 314 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಕಳೆದ ವರ್ಷ 73.70 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಈ ಬಾರಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರಥಮ ಸ್ಥಾನ ಲಭಿಸಿದ್ದು, ಬೆಂಗಳೂರು ಗ್ರಾಮಾಂತರ ದ್ವಿತೀಯ ಮಧುಗಿರಿ ತೃತೀಯ, ಮಂಡ್ಯ ಜಿಲ್ಲೆಗೆ ನಾಲ್ಕನೇ ಸ್ಥಾನ ಲಭಿಸಿದೆ. ಫಲಿತಾಂಶದಲ್ಲಿ ಸದಾ ಮುಂಚೂಣಿಯಲ್ಲಿರುವ ಉಡುಪಿ ಮತ್ತು ಮಂಗಳೂರು ಈ ಸಲ ಹಿ<ದಿಳಿದು ಅಚ್ಚರಿಯುಂಟು ಮಾಡಿವೆ.ಉಡುಪಿಗೆ 7ನೇ ಸ್ಥಾನ ಮತ್ತು ಮಂಗಳೂರಿಗೆ 12ನೇ ಸ್ಥಾನ ದಕ್ಕಿದೆ. ಯಾದಗಿರಿ ಕೊನೆಯ ಸ್ಥಾನ ಲಭಿಸಿದೆ. 2, 28, 734 ವಿದ್ಯಾರ್ಥಿಗಳು ಅನುತೀರ್ಣರಾಗಿದ್ದಾರೆ.
ಈ ಪೈಕಿ ಸರ್ಕಾರಿ ಶಾಲೆಗಳ ಶೇ.72.79 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಅನುದಾನಿತ ಶಾಲೆಗಳ ಶೇ. 70.60 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅನುದಾನ ರಹಿತ ಶಾಲೆಗಳ ಶೇ.83.12ಮಂದಿ ವಿದ್ಯಾರ್ಥಿಗಲು ಉತ್ತೀರ್ಣರಾಗಿದ್ದಾರೆ.
ಪ್ರತಿ ಬಾರಿಯಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಈ ಬಾರಿ ಶೇ.66.41 ಬಾಲಕರು ಉತ್ತೀರ್ಣರಾಗಿದ್ದು, ಶೇ.77.74ರಷ್ಟು ಬಾಲಕಿಯರು ಉತ್ತೀರ್ಣರಾಗಿದ್ದಾರೆ. 6 ಮಂದಿ ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಗಳಿಸಿದ್ದು, ಕಳೆದ ಬಾರಿ ಇಬ್ಬರು ಮಾತ್ರ ಈ ಸಾಧನೆಗೈದಿದ್ದರು.
ಅಂತೆಯೇ ಈ ಬಾರಿ 11 ಮಂದಿ 625ಕ್ಕೆ 624 ಅಂಕಗಳನ್ನು ಪಡೆದಿದ್ದಾರೆ.
ಇನ್ನು ನಗರ ಪ್ರದೇಶದಲ್ಲಿ ಶೇ.73.41 ರಷ್ಟು ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಗ್ರಾಮೀಣ ಭಾಗದ ಶೇ.77.18 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕನ್ನಡ ಮಾಧ್ಯಮದ ಶೇ. 70.49 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು. ಆಂಗ್ಲ ಮಾಧ್ಯಮದ ಶೇ.84.98 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.