ಮುಂಬಯಿ : ಮುಂಬಯಿ ಲೋಕಲ್ ರೈಲುಗಳಲ್ಲಿ ಕಿಸೆಗಳ್ಳತನವಾಗುವುದು ಒಂದು ಮಾಮೂಲು ವಿಷಯ. ನಿತ್ಯ ಲೋಕಲ್ ರೈಲುಗಳಲ್ಲಿ ಪ್ರಯಾಣಿಸುವವರಾಗಿದ್ದಾರೆ ಜೀವನದಲ್ಲಿ ಒಮ್ಮೆಯೂ ಜೇಬಿನಿಂದ ಯಾರೂ ಪರ್ಸ್ ಎಗರಿಸಿಲ್ಲ ಎಂದು ಸವಾಲು ಹಾಕು ದಮ್ ಯಾವ ಮುಂಬಯಿಕರ್‌ಗೂ ಇರುವುದಿಲ್ಲ.ಒಂದು ವೇಳೆ ಲೋಕಲ್ ರೈಲಿನಲ್ಲಿ ಒಮ್ಮೆಯೂ ಕಿಸೆಗಳ್ಳತನವಾಗಿಲ್ಲ ಎಂದು ಯಾರಾದರೂ ಹೇಳಿದರೆ ಅದು ದಾಖಲೆಗೆ ಅರ್ಹವಾದ ವಿಚಾರ.
ನಾವು ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಕಿಸೆಗಳ್ಳರು ತಮ್ಮ ಕೈಚಳಕ ತೋರಿಸಿಯೇ ಬಿಡುತ್ತಾರೆ. ಹೀಗೆ ಕಿಸೆಗಳ್ಳತನವಾದರೆ ಯಾರೂ ದೂರು ಕೊಡುವ ಗೋಜಿಗೆ ಹೋಗುವುದಿಲ್ಲ. ಯಾಕೆಂದರೆ ದೂರು ಕೊಟ್ಟರೂ ಏನೂ ಪ್ರಯೋಜನವಾಗುವುದಿಲ್ಲ ಎನ್ನುವುದು ಅವರಿಗೂ ಗೊತ್ತಿದೆ ಪೊಲೀಸರಿಗೂ ಗೊತ್ತಿದೆ.ನಿತ್ಯ 100ಕ್ಕೂ ಹೆಚ್ಚು ಕಿಸೆಗಳ್ಳತನವಾಗುತ್ತದೆ. ಪೊಲೀಸರು ಎಷ್ಟು ಎಂದು ತನಿಖೆ ಮಾಡಿಯಾರು. ಆದರೂ ಕೆಲವರು ದೂರದ ಆಸೆ ಇಟ್ಟುಕೊಂಡು ದೂರು ನೀಡುತ್ತಾರೆ.
ಹೇಮಂತ್ ಪಡಾಲ್ಕರ್ ಮುಂಬಯಿಯ ಓರ್ವ ಸಾಮಾನ್ಯ ಪ್ರಜೆ. 2006ರಲ್ಲಿ ಹೀಗೆ ಲೋಕಲ್ ರೈಲಿನಲ್ಲಿ ಪ್ರಯಾಣಿಸುವಾಗ ಪರ್ಸ್ ಕಳೆದುಕೊಂಡಿದ್ದರು. ಅವರ ಮನೆಯಿರುವುದು ಪನ್ವೇಲ್‌ನಲ್ಲಿ.ನಿತ್ಯ ಛತ್ರಪತಿ ಶಿವಾಜಿ ಟರ್ಮಿನಸ್ ತನಕ ರೈಲಿನಲ್ಲಿ ಲೋಕಲ್ ರೈಲಿನಲ್ಲಿ ಪ್ರಯಾಣಿಸಿ ಫೋರ್ಟ್ ಪರಿಸರದಲ್ಲಿರುವ ಕಚೇರಿ ತಲುಪಿಕೊಳ್ಳುತ್ತಾರೆ. ಹೀಗಿರುವಾಗ 2006ರಲ್ಲಿ ಒಂದು ದಿನ ಅವರ ಪ್ಯಾಂಟಿನ ಜೇಬಿನಲ್ಲಿದ್ದ ಪರ್ಸ್ ಕಿಸೆಗಳ್ಳರ ಜೇಬು ಸೇರಿತು.ಪರ್ಸ್ ನಲ್ಲಿ 900 ರೂ. ಇತ್ತು. ಆ ಕಾಲಕ್ಕೆ ಅದು ದೊಡ್ಡ ಮೊತ್ತವೇ. ಪಡಾಲ್ಕರ್ ಕೂಡ ಒಂದು ಕಂಪ್ಲೇಟ್ ಗೀಚಿ ವಾಶಿ ರೈಲ್ವೇ ಪೊಲೀಸರಿಗೆ ಕೊಟ್ಟು ಆ ವಿಚಾರವನ್ನು ಅಲ್ಲಿಗೆ ಮರೆತುಬಿಟ್ಟರು.
ಎಪ್ರಿಲ್ ನಲ್ಲಿ ಪಡಾಲ್ಕರ್‌ಗೆ ಜೀವಮಾನದ ಅಚ್ಚರಿಯೊಂದು ಕಾದಿತ್ತು. ರೈಲ್ವೇ ಪೊಲೀಸರು ಫೋನ್ ಮಾಡಿ ನಿಮ್ಮ ಪರ್ಸ್ ಸಿಕ್ಕಿದೆ, ಬಂದು ತೆಗೆದುಕೊಂಡು ಹೋಗಿ ಎಂದರು. ಆಗ ಲಾಕ್ ಡೌನ್ ಇದ್ದ ಕಾರಣ ಪಡಾಲ್ಕರ್ ಗೆ ವಾಶಿ ತನಕ ಹೋಗಿ ಪರ್ಸ್ ಪಡೆದುಕೊಳ್ಳಲು ಆಗಲಿಲ್ಲ. ಕೆಲ ದಿನಗಳ ಹಿಂದೆ ಅವರು ವಾಶಿಗೆ ಹೋಗಿ ಪರ್ಸ್ ಪಡೆದುಕೊಂಡರು. ಕಳೆದುಕೊಂಡದ್ದು 900 ರೂ. ಆದರೂ ಪಡಾಲ್ಕರ್ ಗೆ ಸಿಕ್ಕಿದ್ದು 300 ರೂ. ಮಾತ್ರ. ಪರ್ಸ್ ನಲ್ಲಿದ್ದ 500 ರೂ ನೋಟು ಹಳತು. ಅದು ಈಗ ಚಲಾವಣೆಯಲ್ಲಿಲ್ಲ. ನಾವೇ ಬದಲಾಯಿಸಿ ಕೊಡುತ್ತೇವೆ ಎಂದು ಹೇಳಿ ಪೊಲೀಸರೇ ಇಟ್ಟುಕೊಂಡರು. 100 ರೂ.ಯನ್ನು ಮುದ್ರಾಂಕ ಶುಲ್ಕ ಎಂದು ಮುರಿದುಕೊಂಡರು.
14 ವರ್ಷಗಳ ಬಳಿಕ ಪರ್ಸ್ ಸಿಕ್ಕಿದ್ದು ಹೇಗೆ?,ಇಷ್ಟೆಲ್ಲ ವರ್ಷ ಕದ್ದ ಹಣವನ್ನು ಖರ್ಚು ಮಾಡದೆ ಇಟ್ಟುಕೊಂಡ ಆ ಪುಣ್ಯಾತ್ಮ ಕಳ್ಳ ಯಾರು? ಈ ಎಲ್ಲ ಪ್ರಶ್ನೆಗಳಿಗೆ ಪೊಲೀಸರು ಉತ್ತರ ಕೊಟ್ಟಿಲ್ಲ. ಕಳ್ಳ ಸಿಕ್ಕಿಬಿದ್ದಿದ್ದಾನೆ. ಅವನ ಬಳಿ ನಿಮ್ಮ ಪರ್ಸ್ ಇತ್ತು ಎಂದಷ್ಟೇ ಅವರು ಮಾಹಿತಿ ನೀಡಿದ್ದಾರೆ. ಕೊರೊನಾದ ಈ ಕಷ್ಟ ಕಾಲದಲ್ಲಿ ಸಿಕ್ಕಿದ್ದು ಲಾಭ ಎಂದು ಪಡಾಲ್ಕರ್ 300ರೂ. ಜೇಬಿಗಿಳಿಸಿಕೊಂಡು ತೆಪ್ಪಗೆ ಮನೆಗೆ ನಡೆದರು.