ಇಂದಿನ ಐಕಾನ್…  ಭಾರತದ ಜಿಮ್ನಾಸ್ಟಿಕ್ ಮಿರಾಕಲ್ ದೀಪಾ ಕರ್ಮಾಕರ್

ಐದು ಅಡಿಗೂ ಒಂದಿಂಚು ಕಡಿಮೆ ಎತ್ತರವಿರುವ ಆ ಪುಟ್ಟ ಹುಡುಗಿಯ ಪುಟ್ಟ ದೇಹದಲ್ಲಿ ಎಷ್ಟೊಂದು ಎನರ್ಜಿ ಇದೆ  ಎಂದು ಗೊತ್ತಾಗಬೇಕಾದರೆ ಆಕೆ ಜಿಮ್ನ್ಯಾಸ್ಟಿಕ್ ಕಣಕ್ಕೆ ಬರಬೇಕು.  ಜಾಗತಿಕ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ ಮತ್ತು ಪದಕವನ್ನು ಗೆದ್ದ ಮೊದಲ ಮಹಿಳಾ ಜಿಮ್ನ್ಯಾಸ್ಟಿಕ್ ಪಟು ಎಂಬ ಕೀರ್ತಿ ಆಕೆಗೆ ಈಗಾಗಲೇ ದೊರೆತಿದೆ. ಆಕೆ ನಮ್ಮ ಇಂದಿನ ಐಕಾನ್ ದೀಪಾ ಕರ್ಮಾಕರ್. ಇಂದು ಆಕೆಗೆ 27ನೆಯ ಹುಟ್ಟು ಹಬ್ಬ!

ಭಾರತದ ಈಶಾನ್ಯ ರಾಜ್ಯಗಳಲ್ಲಿ ಅತೀ  ಸುಂದರವಾದ ಸಿಕ್ಕಿಂ ಅವಳ ರಾಜ್ಯ. ಆಕೆ ಆ ರಾಜ್ಯದ ಮೊತ್ತ  ಮೊದಲ ಅಂತಾರಾಷ್ಟ್ರೀಯ ಕ್ರೀಡಾಪಟು. ಆ ರಾಜ್ಯದ ರಾಜಧಾನಿಯಾದ  ಅಗರ್ಥಲಾದಲ್ಲಿ ಆಕೆ ಹುಟ್ಟಿ ಬೆಳೆದವಳು. ಅವಳ ತಂದೆ ರಾಷ್ಟ್ರಮಟ್ಟದ ವೇಯ್ಟ್ ಲಿಫ್ಟಿಂಗ್ ಆಟಗಾರ ಮತ್ತು ಮುಂದೆ ಕೋಚ್ ಆಗಿದ್ದವರು. ತಂದೆಗೆ ಅವಳನ್ನು ಕ್ರೀಡೆಗೆ ದೊಡ್ಡದಾಗಿ ಪರಿಚಯ ಮಾಡಬೇಕು ಎಂದು ಆಸೆ. ಅವಳ ಚುರುಕುತನ, ದೇಹ  ಪ್ರಕೃತಿ ನೋಡಿ ಆರನೇ ವರ್ಷದಲ್ಲೀ ಜಿಮ್ನ್ಯಾಸ್ಟಿಕ್ ತರಬೇತಿಗೆ ಸೇರಿಸಿದರು.

ಆಗ ಇಡೀ ಭಾರತದಲ್ಲಿ ಜಿಮ್ನ್ಯಾಸ್ಟಿಕ್ ಬಗ್ಗೆ ಹೆಚ್ಚು ಅರಿವು, ಜಾಗೃತಿ ಇರಲಿಲ್ಲ. ‘ಸರ್ಕಸ್ ‘ಎಂದು ಅದನ್ನು ಹಂಗಿಸಿ ಅವಮಾನ  ಮಾಡಿದವರು ಬಹಳ ಮಂದಿ.

ಬಿಸ್ವೇಶ್ವರ ನಂದಿ ಎಂಬ ಅದ್ಭುತವಾದ ಕೋಚ್ ಆಕೆಯ ಪ್ರತಿಭೆಗೆ ಸಾಣೆ  ಹಿಡಿದರು.  ಆಕೆಯ ಸಾಧನೆಗಳ ಹಿಂದೆ ಅವರ ಪಾತ್ರ ಬಹಳ ದೊಡ್ಡದು.

ಅವಳ ಎರಡೂ ಪಾದಗಳು ಮಟ್ಟಸ ( ಫ್ಲಾಟ್)ಆಗಿದ್ದವು. ಇದು ಜಿಮ್ನಾಸ್ಟಿಕ್ ಕಸರತ್ತನ್ನು ಮಾಡಲು ತೊಂದರೆ  ಕೊಡುತ್ತಿತ್ತು.
ಆಗರ್ಥಲಾದಲ್ಲಿ ಯಾವ  ಜಿಮ್ನಾಸ್ಟಿಕ್ ಸಲಕರಣೆ ಕೂಡ ಆಗ ಇರಲಿಲ್ಲ. ಸುಸಜ್ಜಿತ ಜಿಮ್ ಇರಲಿಲ್ಲ. ಆದರೆ ಆಕೆ ಬಾಲ್ಯದಿಂದಲೂ ಹಠವಾದಿ. ಸತತ ಅಭ್ಯಾಸದಿಂದ ಅವಳ ಪಾದಗಳ ಸಮಸ್ಯೆ ಪರಿಹಾರ ಆಯಿತು. ಅವಳ  ದೇಹವು ಯಾವ  ಕೋನದಲ್ಲಿ ಕೂಡ ಬಾಗಲು ಸಿದ್ಧವಾಯಿತು. ಜಿಮ್ನಾಸ್ಟಿಕ್ ಕ್ರೀಡೆಯಲ್ಲಿ ಫ್ಲೋರ್, ವಾಲ್ಟ್, ಬ್ಯಾಲೆನ್ಸ್ ಬೀಮ್, ಅನ್ ಇವನ್ ಬಾರ್, ಆರ್ಟಿಸ್ಟಿಕ್ ಹೀಗೆ ಬೇರೆ ಬೇರೆ ವಿಭಾಗಗಳು ಇದ್ದು ಪ್ರತಿ ವಿಭಾಗದಲ್ಲಿ ಕೂಡ ಸತತ ಪರಿಶ್ರಮ, ದುಡಿಮೆ ಮತ್ತು ತಾಳ್ಮೆ ಅತಿ ಅಗತ್ಯ. ಅದರಲ್ಲಿ ವಾಲ್ಟ್  ಅಥವಾ ಸಮ್ಮರ್  ಸಾಲ್ಟ್ ಮಾಡುವಾಗ ಬಿದ್ದು ಗಾಯ ಮಾಡಿಕೊಳ್ಳುವುದು, ಮೂಳೆ ಮುರಿಯುವುದು, ನೋವು ಪಡುವುದು ತಪ್ಪುವುದೆ ಇಲ್ಲ! ಅಂತಹ ಒಂದು ಕ್ರೀಡೆಯಲ್ಲಿ ದೀಪಾ ಗೆಲ್ಲಲೇಬೇಕು ಎಂದು ಸಂಕಲ್ಪ ಮಾಡಿಕೊಂಡು ಹೊರಟಿದ್ದಳು. ದಿನಕ್ಕೆ ಕನಿಷ್ಟ ಏಳು ಘಂಟೆ ಆಕೆಯ ಅಭ್ಯಾಸವು ನಡೆಯುತ್ತಿತ್ತು.

2007ರ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಆಕೆ ಮೊದಲು ಭಾಗವಹಿಸಿ ತ್ರಿಪುರ ರಾಜ್ಯಕ್ಕೆ ಮೂರು ಚಿನ್ನ, ಎರಡು ಬೆಳ್ಳಿ ಪದಕ ಗೆದ್ದು ಬಂದಾಗ ಆ ಪುಟ್ಟ ರಾಜ್ಯದ ಸಂಭ್ರಮವು ಹೇಗಿರಬೇಡ! ಆ ಮಧ್ಯಮ ವರ್ಗದ ಕುಟುಂಬದ ಖುಷಿ ಎಷ್ಟಿರಬೇಡ! ಮುಂದೆ

2013ರವರೆಗೆ ಎಲ್ಲಾ ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಅವಳೇ ಗೆಲ್ಲುವ ಕುದುರೆ! ಆಕೆಗೆ ಸ್ಪರ್ಧೆಯೇ ಇರಲಿಲ್ಲ. ಒಟ್ಟು 77

ಹೊಳೆಯುವ ಪದಕಗಳು ಆಕೆಯ ಮುಡಿಗೆ ಏರಿದ್ದವು!  ಅದರಲ್ಲಿ 67 ಚಿನ್ನದ ಪದಕಗಳು! ಉಳಿದವು ಬೆಳ್ಳಿಯ ಪದಕಗಳು.

ಇಡೀ ಜಗತ್ತು ಆಕೆಯನ್ನು ಮೊದಲ ಬಾರಿಗೆ ಗುರುತು  ಮಾಡಿದ್ದು 2014ರಲ್ಲೀ.  ಗ್ಲ್ಯಾಸ್ಗೋ  ನಗರದಲ್ಲಿ ನಡೆದ ಕಾಮನ್‌ ವೆಲ್ತ್ ಗೇಮ್ಸ್ ಅವಳ ಭಾಗ್ಯದ ಬಾಗಿಲನ್ನು ತೆರೆಯಿತು. ಆಕೆ ಗೆದ್ದದ್ದು ಕಂಚಿನ ಪದಕವೇ ಆದರೂ ಅದು ಭಾರತೀಯ ಮಹಿಳೆಯ ಮೊದಲ ಸಾಧನೆ! 2015ರ ಜಪಾನ್ ದೇಶದಲ್ಲಿ  ನಡೆದ ಏಷಿಯನ್ ಸ್ಪರ್ಧೆಯಲ್ಲಿ ಮತ್ತೆ ಕಂಚು ಗೆದ್ದಳು. 2016ರ ವಿಶ್ವ ಮಟ್ಟದ ಸ್ಪರ್ಧೆಯಲ್ಲಿ ಐದನೇ ಸ್ಥಾನ ಪಡೆದಳು.

ಈ ಹಿನ್ನೆಲೆಗಳ ಜೊತೆಗೆ ದೀಪಾ 2016ರ ರಿಯೋ  ಒಲಿಂಪಿಕ್ಸ್ ಸ್ಪರ್ಧೆಗೆ ಆಯ್ಕೆ ಆದಳು. ಜಿಮ್ನ್ಯಾಸ್ಟಿಕ್ ಬಗ್ಗೆ ಹೆಚ್ಚೇನೂ ಅರಿಯದ ಭಾರತೀಯರು ಆಕೆ ಬೀಮ್ ಮೇಲಿಂದ ಹಾರಿ ಎರಡೆರಡು ಸಮ್ಮರ್ ಸಾಲ್ಟ್ ಪೂರ್ತಿ ಮಾಡಿ ಯಶಸ್ವಿ ಆಗಿ ಲ್ಯಾಂಡಿಂಗ್ ಆಗುವುದನ್ನು ಬೆರಗು ಕಣ್ಣುಗಳಿಂದ ನೋಡಿದರು!  ಅದಕ್ಕೆ PRODUNOVA ಎಂದು ಹೆಸರು. ಅತ್ಯಂತ ಕಷ್ಟಕರವಾದ ವಾಲ್ಟ್ ಅದು. ಸ್ವಲ್ಪ ಎಚ್ಚರ  ತಪ್ಪಿದರೂ ಬೆನ್ನು ಮೂಳೆ ಜಖಂ ಖಚಿತ! ಇಡೀ ಜಗತ್ತಿನಲ್ಲಿ ಆ ಜಿಗಿತವನ್ನು ಯಶಸ್ವಿ ಆಗಿ  ಮಾಡಿದವರು ಕೇವಲ ಐದು ಮಂದಿ ಮಾತ್ರ ಎನ್ನುವುದು ಆಕೆಯ ಹಿರಿಮೆ! 0.15  ಪಾಯಿಂಟ್ ಕೊರತೆಯಿಂದ ಅವಳು ಒಲಿಂಪಿಕ್ಸ್ ಕಂಚಿನ ಪದಕವನ್ನು ಮಿಸ್  ಮಾಡಿಕೊಂಡಾಗ 45 ನಿಮಿಷ  ಕಣ್ಣೀರು ಸುರಿಸುತ್ತ ನಿಂತದ್ದು, ಇಡೀ ಭಾರತವು ಆಕೆಯನ್ನು ಮನೆಮಗಳಾಗಿ ಸ್ವೀಕಾರ ಮಾಡಿದ್ದು, ಸಿಕ್ಕಿಂ ರಾಜ್ಯವು ಆಕೆಯನ್ನು ರಾಷ್ಟ್ರೀಯ ಐಕಾನ್ ಆಗಿ ಗುರುತು ಮಾಡಿದ್ದು ಎಲ್ಲವೂ ಅದ್ಭುತ!ದೀಪಾ ತನ್ನ ಮಿಸ್ ಆಗಿರುವ ಪದಕವನ್ನು 2020ರ  ಟೋಕಿಯೋ ಒಲಿಂಪಿಕ್ಸ್  ಕೂಟದಲ್ಲಿ ಪಡೆದೇ ಪಡೆಯುವೆ ಎಂದು ಪ್ರತಿಜ್ಞೆ ಮಾಡಿ ಹಿಂದೆ ಬಂದಿದ್ದಳು!

ಆಕೆಯ ಜಿಮ್ನ್ಯಾಸ್ಟಿಕ್ ಕ್ಷೇತ್ರದ ಸಾಧನೆಗೆ ಅರ್ಜುನ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ, ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಎಲ್ಲವೂ ದೊರೆತಿವೆ! ಪುಟ್ಟ ರಾಜ್ಯ ತ್ರಿಪುರಾದ ಸಣ್ಣ ಸಣ್ಣ ಹುಡುಗಿಯರು ಈಗ  ‘ದೀಪಾ ದೀದೀ’ಯ ಸ್ಫೂರ್ತಿಯಲ್ಲಿ ಜಿಮ್ನ್ಯಾಸ್ಟಿಕ್ ಕಣಕ್ಕೆ ಬರುತ್ತಿದ್ದಾರೆ. ಅದು ಆಕೆಯ ಪವರ್!

ಆಕೆಯ ಸಾಧನೆಗಳ ಬಗ್ಗೆ ಅವಳ ತಂದೆ ದುಲಾಲ್ ಕರ್ಮಾಕರ್ ಅವರು ಹೇಳುವ ಮಾತುಗಳನ್ನು ಕೇಳಿದಾಗ ಹೆಮ್ಮೆ ಅನ್ನಿಸುತ್ತದೆ. “ನನಗೆ ಇಬ್ಬರು ಹೆಣ್ಣು ಮಕ್ಕಳು. ದೀಪಾ ಕಿರಿಯಳು. ಅವಳನ್ನು ಜಿಮ್ನಾಸ್ಟಿಕ್ ಕ್ರೀಡೆಗೆ ಸೇರಿಸಿದಾಗ ನಮ್ಮ ಊರಿನ ಜನ ತಲೆಗೆ ಒಂದರ ಹಾಗೆ ಮಾತಾಡಿದರು. ಆ ಕ್ರೀಡೆಯು ತುಂಬಾ ಅಪಾಯಕಾರಿ. ನಿನ್ನ ಮಗಳು ಸತ್ತೇ ಹೋಗುತ್ತಾಳೆ ಅಂದರು. ಕೋಚ್ ಬಿಶ್ವೇಶ್ವರ್ ಅವರನ್ನು ಕೂಡ ಬಾಯಿಗೆ ಬಂದ ಹಾಗೆ ಬೈದರು. ಆದರೆ ಈಗ ಇಡೀ ರಾಜ್ಯ ಅವಳ ಬಗ್ಗೆ ಹೆಮ್ಮೆ ಪಡುತ್ತಿದೆ. ನನ್ನ ಮಗಳ ಸಾಧನೆ ಯಾವ ಗಂಡು ಮಕ್ಕಳ ಸಾಧನೆಗಿಂತ ಕಡಿಮೆಯಿದೆ?”

ಅವಳ ಕೋಚ್ ಮಾತನ್ನು ಕೇಳಿ. “ದೀಪಾ ತುಂಬಾ ಶ್ರಮ ಪಡುವ ಹುಡುಗಿ. ಅವಳ ಪದಕಗಳ ಹಿಂದೆ ಸಾಧನೆಯ ಹಸಿವು ಇದೆ. ಸಲಕರಣೆಗಳ ಕೊರತೆ ಇದ್ದಾಗಲೂ ಅವಳು ಸಾಧನೆಯಲ್ಲಿ ಹಿಂದೆ ಬೀಳಲಿಲ್ಲ. ನಾನು ಯಾವುದೇ  ಕಷ್ಟಕರವಾದ ವಾಲ್ಟನ್ನು ಮಾಡಲು ಹೇಳಿದಾಗಲೂ ಒಂದಿಷ್ಟು ಭಯಪಡದೆ ಅದನ್ನು 100% ಪರಿಪೂರ್ಣತೆಯ ಜೊತೆಗೆ ಅವಳು ಮಾಡಿ ಮುಗಿಸುವಾಗ ಹೆಮ್ಮೆ ಅನ್ನಿಸುತ್ತದೆ” ಅಂದಿದ್ದಾರೆ! ಕ್ರಿಕೆಟ್ ದೇವರು ಸಚಿನ್ ಆಕೆಯ  ಸಾಧನೆಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿ ಮುಂಬೈಗೆ ಕರೆದು ಸನ್ಮಾನ ಮಾಡಿದ್ದಾರೆ.

ಅದಕ್ಕಾಗಿ ದೀಪಾ  ಕರ್ಮಾಕರ್ ಅವರನ್ನು  ‘ಜಿಮ್ನ್ಯಾಸ್ಟಿಕ್ ಕ್ರೀಡೆಯ ಮಿರಾಕಲ್’ ಎಂದು  ಕರೆಯುವುದು! Happy Birthday DEEPA.

ರಾಜೇಂದ್ರ ಭಟ್ ಕೆ.





































error: Content is protected !!
Scroll to Top