ರಾಜ್ಯಪಾಲರನ್ನು ಭೇಟಿಯಾದ ಯಡಿಯೂರಪ್ಪ : ಸಂಪುಟ ವಿಸ್ತರಣೆ ವದಂತಿಗೆ ರೆಕ್ಕೆಪುಕ್ಕ

ಬೆಂಗಳೂರು, ಜು. 31 :  ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು  ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ಜೊತೆಗೆ ಶುಕ್ರವಾರ  ದಿಢೀರ್‌ ರಾಜಭವನಕ್ಕೆ ತೆರಳಿ ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿರುವುದು ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ  ಊಹಾಪೋಹಗಳನ್ನು ಹುಟ್ಟುಹಾಕಿದೆ. ಸಂಪುಟ ವಿಸ್ತರಣೆ ಕುರಿತು ಚರ್ಚೆ ಮಾಡುವ ಸಲುವಾಗಿಯೇ ಸಿಎಂ ಯಡಿಯೂರಪ್ಪ ರಾಜ್ಯಪಾಲರನ್ನು ಭೇಟಿ ಮಾಡಿದ್ದಾರೆ ಎನ್ನಲಾಗುತ್ತಿದೆ. 

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಒಂದು ಒರ್ಷ ಕಳೆದಿದ್ದರೂ ಈವರೆಗೆ ಪೂರ್ಣ ಸಂಪುಟ ರಚಿಸಲಾಗಿಲ್ಲ. ಸಂಪುಟದಲ್ಲಿ ಆರು ಸಚಿವ ಸ್ಥಾನಗಳು ಖಾಲಿಯಾಗಿಯೇ ಇವೆ. ಆದರೆ, ಈ ಆರು ಸ್ಥಾನಗಳಿಗೆ ಕನಿಷ್ಟ 20 ಜನ ಸಚಿವ ಸ್ಥಾನ ಆಕಾಂಕ್ಷಿಗಳಿದ್ದಾರೆ. ಅಲ್ಲದೆ, ಹಲವು ಮಂದಿ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದಾರೆ.

ಈ ನಡುವೆ ಕಳೆದ ಹಲವು ದಿನಗಳಿಂದ ಬಿಜೆಪಿಯಲ್ಲಿ ನಾಯಕತ್ವದ ಬದಲಾವಣೆ ಕುರಿತ ಮಾತುಗಳು ಕೇಳಿಬರುತ್ತಿವೆ. ಇದರ ಬೆನ್ನಿಗೆ ಸಿಎಂ ಯಡಿಯೂರಪ್ಪ ಆಗಸ್ಟ್‌ ತಿಂಗಳಲ್ಲಿ ಸಂಪುಟ ವಿಸ್ತರಣೆ ಮಾಡಲು ಮನಸ್ಸು ಮಾಡಿದ್ದಾರೆ. ಹೈಕಮಾಂಡ್‌ ನಾಯಕರ ಇಶಾರೆಗೆ ಕಾಯುತ್ತಿದ್ದು, ಅವರು ಒಪ್ಪಿಗೆ ನೀಡಿದ ಬೆನ್ನಿಗೆ ಸಂಪುಟ ವಿಸ್ತರಣೆ ಖಚಿತ ಎನ್ನಲಾಗುತ್ತಿದೆ.

ಆಗಸ್ಟ್‌ ಎರಡನೇ ವಾರದಲ್ಲಿ ಸಂಪುಟ ವಿಸ್ತರಣೆ ಖಚಿತವಾಗಿದ್ದು, ಈ ಕುರಿತು ಹೈಕಮಾಂಡ್‌ ನಾಯಕರ ಜೊತೆಗೆ ಚರ್ಚೆ ನಡೆಸುವ ಮುನ್ನವೇ ರಾಜ್ಯಪಾಲ ವಜುಭಾಯಿ ವಾಲಾ ಅವರ ಜೊತೆ ಚರ್ಚಿಸಬೇಕು ಎಂಬ ಕಾರಣಕ್ಕಾಗಿಯೇ ಬಿ.ಎಸ್‌. ಯಡಿಯೂರಪ್ಪ ಇಂದು ರಾಜ್ಯಪಾಲರನ್ನು ಭೇಟಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

error: Content is protected !!
Scroll to Top