370ನೇ ವಿಧಿ ರದ್ದತಿ ಈಗ ಕಾಲೇಜು ಪಠ್ಯ

ದಿಲ್ಲಿ: ಜಮ್ಮು-ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ ೩೭೯ನೇ ವಿಧಿಯನ್ನು ರದ್ದುಪಡಿಸಿದ ನರೇಂದ್ರ ಮೋದಿ ಸರಕಾರದ ಐತಿಹಾಸಿಕ ನಿರ್ಧಾರ ಈಗ ಪಠ್ಯವಾಗುತ್ತಿದೆ.   ರಾಷ್ಟ್ರೀಯ ಶೈಕ್ಷಣಿಕ ಸಂಶೋಧನಾ ಮತ್ತು ತರಬೇತಿ ಮಂಡಳಿ ( NCERT) 12 ನೇಯ ತರಗತಿಯ ರಾಜ್ಯಶಾಸ್ತ್ರ ಪಠ್ಯ ವಿಷಯವನ್ನು ಪರಿಷ್ಕರಿಸಿದ್ದು, ಅದರಲ್ಲಿ ಆರ್ಟಿಕಲ್ 370 ರದ್ದತಿಗೆ ಸಂಬಂಧಪಟ್ಟ ಅಂಶಗಳನ್ನು ಸೇರ್ಪಡೆ ಮಾಡಿದೆ.

ಈ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ಸ್ವಾತಂತ್ರ್ಯ  ನಂತರದ ಭಾರತದ ರಾಜಕಾರಣ ಎಂಬ ಪಠ್ಯವನ್ನು ಈಗ ಬದಲಾವಣೆ ಮಾಡಲಾಗಿದೆ. ಇದರಲ್ಲಿನ ‘ಪ್ರತ್ಯೇಕವಾದ ಮತ್ತು ಅದರ ಹಿಂದೆ’ ಎಂಬ ಉಪ ಪಠ್ಯದಿಂದ ಹಲವು ವಿಚಾರಗಳನ್ನು ಕೈ ಬಿಡಲಾಗಿದ್ದು, ಪ್ರಾದೇಶಿಕ ನಿರೀಕ್ಷೆಗಳು ಎಂಬ ಉಪ ಪಠ್ಯಕ್ರಮದ ಅಡಿಯಲ್ಲಿ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿರುವುದಕ್ಕೆ ಸಂಬಂಧಪಟ್ಟ ಅಂಶಗಳನ್ನು ಸೇರ್ಪಡೆ ಮಾಡಲಾಗಿದೆ. ಪರಿಷ್ಕರಿಸಲಾಗಿರುವ ಹೊಸ ಪಠ್ಯಕ್ರಮದ ಅಡಿಯಲ್ಲಿ ಕಣಿವೆ ರಾಜ್ಯದಲ್ಲಾಗುತ್ತಿರುವ ಅಭಿವೃದ್ಧಿ ಸಂಬಂಧಿತ ವಿಚಾರಗಳನ್ನೂ ಅಳವಡಿಸಲಾಗಿರುವುದಾಗಿ ಮೂಲಗಳು ತಿಳಿಸಿವೆ.

ಅದರಂತೆ ಈ ಪಠ್ಯದಲ್ಲಿ ಭಾರತ ಮತ್ತು ಪಾಕಿಸ್ಥಾನ ಇವೆರಡರ ಜೊತೆಗೂ ವಿಲೀನಗೊಳ್ಳದೆ ಸ್ವತಂತ್ರವಾಗಿ ಗುರುತಿಸಲ್ಪಡಲು ಬಯಸುವ ಜನರ ಬಗೆಗಿನ ಒಂದು ಉಪ ಪಠ್ಯ, ಕಾಶ್ಮೀರವನ್ನು ಪಾಕಿಸ್ಥಾನಕ್ಕೆ ಸೇರಬೇಕೆಂದು ಬಯಸುವ ಗುಂಪಿನ ಕುರಿತಂತೆ ಮತ್ತು ಭಾರತದ ಒಕ್ಕೂಟದ ಒಳಗೆ ಕಾಶ್ಮೀರವನ್ನು ವಿಲೀನ ಮಾಡಿ, ಅಲ್ಲಿನ ಜನರಿಗೆ ಹೆಚ್ಚಿನ ಸ್ವಾಯತ್ತತೆ ಒದಗಿಸಿಕೊಡುವ ಕುರಿತಂತೆಯೂ ಈ ಪಾಠದಲ್ಲಿ ವಿಚಾರಗಳನ್ನು ಮಂಡಿಸಲಾಗಿದೆ.

ಕಳೆದ ವರ್ಷದ ಆಗಸ್ಟ್ ತಿಂಗಳಿನಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಮ್ಮು – ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿದ್ದ ಕಾಯ್ದೆ 370 ನ್ನು ರದ್ದುಗೊಳಿಸಿ, ಇಡೀ ದೇಶಕ್ಕೆ ಏಕರೂಪದ ಸಂವಿಧಾನ ಅನ್ವಯವಾಗುವಂತೆ ಕ್ರಮ ಕೈಗೊಂಡಿತ್ತು. ಇದೀಗ ಈ ವಿಚಾರಗಳನ್ನು ದ್ವಿತೀಯ ಪಿಯುಸಿ ಮಕ್ಕಳಿಗೆ ಅರಿವು ಮೂಡಿಸುವ ಸಲುವಾಗಿ  ಪಠ್ಯ ಕ್ರಮದಲ್ಲಿ ಅಳವಡಿಕೆ ಮಾಡಲಾಗಿದೆ.

error: Content is protected !!
Scroll to Top