ವರ್ಷಕ್ಕೆ 660 ರೂ. ಹೂಡಿಕೆ – 36 ಸಾವಿರ ರೂ. ಪ್ರತಿಫಲ ಮೋದಿ ಸರಕಾರದ ಪಿಂಚಣಿ ವ್ಯವಸ್ಥೆಯ ವಿವರ

ಕಡಿಮೆ ಆದಾಯ ವರ್ಗದವರಿಗೆ ಕೇಂದ್ರ ಸರಕಾರದಿಂದ ಶ್ರಮ ಯೋಗಿ ಮಾನ್ ಧನ್ ಯೋಜನೆಯಡಿ  ಪಿಂಚಣಿ

ದಿಲ್ಲಿ :  ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಪಿಎಂ ಶ್ರಮ ಯೋಗಿ ಮಾನ್ ಧನ್ ಯೋಜನೆಯಡಿ ಕಡಿಮೆ ಆದಾಯ ಇರುವವರಿಗೆ ಪಿಂಚಣಿ ವ್ಯವಸ್ಥೆ ಮಾಡಿದೆ. ಈ ಯೋಜನೆಯಡಿ 60 ವರ್ಷಗಳ ನಂತರ ಪ್ರತಿ ತಿಂಗಳು 3000 ರೂಪಾಯಿ ಪಿಂಚಣಿ ಸಿಗುತ್ತದೆ.  18 ರಿಂದ 40 ವರ್ಷ ವಯಸ್ಸಿನ ಯಾವುದೇ ಭಾರತೀಯ ಪ್ರಜೆ ಪಿಎಂ ಶ್ರಮ ಯೋಗಿ ಮಾನ್ ಧನ್ ಯೋಜನೆ ಸೇರಬಹುದು. ಆದರೆ ಯೋಜನೆಗೆ ಸೇರುವವರ ಮಾಸಿಕ ಆದಾಯವು 15 ಸಾವಿರ ರೂಪಾಯಿಗಳಿಗಿಂತ ಹೆಚ್ಚಿರಬಾರದು. ಈ ಯೋಜನೆ ಭಾರಿ ಜನಪ್ರಿಯವಾಗಿದ್ದು, ಕೇವಲ 2 ವರ್ಷದಲ್ಲಿ  ಸುಮಾರು 44 ಲಕ್ಷ ಜನರು ಈ ಯೋಜನೆಗೆ ತಮ್ಮ ಹೆಸರು ನೊಂದಾಯಿಸಿದ್ದಾರೆ. ಇವರಲ್ಲಿ ಮಹಿಳೆಯರ ಸಂಖ್ಯೆಯೂ ಹೆಚ್ಚು ಇದೆ. ಇಲ್ಲಿದೆ ಈ ಯೋಜನೆಯ ಸಂಪೂರ್ಣ ವಿವರ.

44.17 ಲಕ್ಷ ನೋಂದಣಿ
ಪಿಎಂ ಶ್ರಮ ಯೋಗಿ ಮಾನ್ ಧಾನ್ ಯೋಜನೆಯಡಿ ಇದುವರೆಗೆ ಸುಮಾರು 44,17,275 ಜನರು ಹೆಸರನ್ನು ನೊಂದಾಯಿಸಿದ್ದಾರೆ. ಇವರಲ್ಲಿ 20,78,914 ಜನರು ಮಹಿಳೆಯರಾಗಿದ್ದಾರೆ, ಪುರುಷರ ಸಂಖ್ಯೆ 18,32,440 ರಷ್ಟಿದೆ. ಹರಿಯಾಣದಿಂದ ಗರಿಷ್ಠ ನೋಂದಣಿ ಮಾಡಲಾಗಿದ್ದು, ಇಲ್ಲಿಯವರೆಗೆ ಈ ಯೋಜನೆಯಲ್ಲಿ 8,01,239 ಜನರು ಸೇರಿದ್ದಾರೆ. ಹರಿಯಾಣದ ಬಳಿಕ ಯುಪಿ ಎರಡನೇ ಸ್ಥಾನದಲ್ಲಿದ್ದು, ಇಲ್ಲಿ 6,01,607 ಜನರು ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಅದರ ನಂತರ ಸ್ಥಾನಗಳಲಿ ಮಹಾರಾಷ್ಟ್ರ, ಗುಜರಾತ್, ಛತ್ತೀಸ್‌ಗಢ ಮತ್ತು ಬಿಹಾರ ರಾಜ್ಯಗಳಿವೆ. ಇದರಲ್ಲಿ 26 ರಿಂದ 35 ವರ್ಷ ವಯಸ್ಸಿನ ಜನರು ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಂದರೆ ಈ ಯೋಜನೆಗೆ 26-35 ವರ್ಷ ವಯಸ್ಸಿನ ಸುಮಾರು 20,15,876 ಜನರು ತಮ್ಮ ಹೆಸರು ನೊಂದಾಯಿಸಿದ್ದಾರೆ.

ರೂ.55 ರಿಂದ ಕೊಡುಗೆ ಆರಂಭ
ಈ ಯೋಜನೆಯಲ್ಲಿ ವಿವಿಧ ವಯಸ್ಸಿನ ಜನರು ಮಾಸಿಕ 55 ರಿಂದ 200 ರೂಪಾಯಿಗಳ ಕೊಡುಗೆಯನ್ನು ನೀಡಬಹುದಾಗಿದೆ. ಉದಾಹರಣೆಗೆ, ನೀವು 18 ನೇ ವಯಸ್ಸಿನಲ್ಲಿ ಯೋಜನೆಗೆ ಸೇರಿದರೆ, ನಿಮ್ಮ ಪರವಾಗಿ ಮಾಸಿಕ ಕೊಡುಗೆ 55 ರೂಪಾಯಿಗಳು ಇರಲಿದೆ.ಇದೇ ವೇಳೆ 30 ವರ್ಷ ವಯಸ್ಸಿನವರು 100 ರೂ. ಮತ್ತು 40 ವರ್ಷ ವಯಸ್ಸಿನವರು 200 ರೂ. ಕೊಡುಗೆಯನ್ನು ನೀಡಬೇಕು. ನೀವು 18 ವರ್ಷ ವಯಸ್ಸಿಗೆ ಈ ಯೋಜನೆಗೆ ಸೇರಿದರೆ, ನಿಮ್ಮ ವಾರ್ಷಿಕ ಕೊಡುಗೆ 660 ರೂ. ಗಳಷ್ಟಾಗಲಿದೆ. ಇದನ್ನು ನೀವು 42 ವರ್ಷಗಳವರೆಗೆ ಮುಂದುವರೆಸಿದರೆ ನಿಮ್ಮ ಒಟ್ಟು ಹೂಡಿಕೆ 27,720 ರೂ ಆಗಲಿದೆ. ಆ ನಂತರ ನಿಮಗೆ ಪ್ರತಿ ತಿಂಗಳು 3000 ರೂ. ನಂತೆ ಜೀವಿತಾವಧಿಯವರೆಗೆ ಪಿಂಚಣಿ ನೀಡಲಾಗುತ್ತದೆ. ಇದರಲ್ಲಿ ಖಾತೆದಾರರು ಎಷ್ಟು ಕೊಡುಗೆ ನೀಡುತ್ತಾರೋ, ಅವರ ಪರವಾಗಿ ಸರ್ಕಾರ ಕೂಡ ಸಮನಾದ ಕೊಡುಗೆ ನೀಡುತ್ತದೆ.

ನೋಂದಾವಣೆ ಹೇಗೆ?
– ಪ್ರಧಾನ್ ಮಂತ್ರಿ ಶ್ರಮಯೋಗಿ ಮಾನ್ ಧನ್ ಪಿಂಚಣಿ ಯೋಜನೆಯಲ್ಲಿ ಹೆಸರು ನೋಂದಣಿಗಾಗಿ, ಹತ್ತಿರದ CSC ಕೇಂದ್ರಕ್ಕೆ ಭೇಟಿ ನೀಡಬೇಕು.
– ಇದರ ನಂತರ, ಐಎಫ್‌ಎಸ್‌ಸಿ ಕೋಡ್‌ನೊಂದಿಗೆ ಆಧಾರ್ ಕಾರ್ಡ್ ಮತ್ತು ಉಳಿತಾಯ ಖಾತೆ ಅಥವಾ ಜನ ಧನ್ ಖಾತೆಯ ಬಗ್ಗೆ ಮಾಹಿತಿ ನೀಡಬೇಕು. ಪಾಸ್‌ ಬುಕ್, ಚೆಕ್‌ ಬುಕ್ ಅಥವಾ ಬ್ಯಾಂಕ್ ಸ್ಟೇಟ್ಮೆಂಟ್ ಅನ್ನು ಪುರಾವೆಯಾಗಿ ತೋರಿಸಬೇಕು.
– ಖಾತೆ ತೆರೆಯುವ ಸಮಯದಲ್ಲಿ ನೀವು ನಾಮಿನಿಯನ್ನು ಸಹ ನೋಂದಾಯಿಸಬಹುದು.
– ನಿಮ್ಮ ವಿವರಗಳನ್ನು ಕಂಪ್ಯೂಟರ್‌ನಲ್ಲಿ ನೋಂದಾಯಿಸಿದ ಬಳಿಕ, ನಿಮ್ಮ ಮಾಸಿಕ ಕೊಡುಗೆಯ ಮಾಹಿತಿಯು ಡಿಸ್ ಪ್ಲೇ ಆಗುತ್ತದೆ.
– ಇದರ ನಂತರ ನೀವು ನಿಮ್ಮ ಆರಂಭಿಕ ಕೊಡುಗೆಯನ್ನು ನಗದು ರೂಪದಲ್ಲಿ ನೀಡಬೇಕಾಗುತ್ತದೆ.
-ಬಳಿಕ  ನಿಮ್ಮ ಖಾತೆಯನ್ನು ತೆರೆಯಲಾಗುತ್ತದೆ ಮತ್ತು ನಿಮಗೆ ಶ್ರಮ ಯೋಗಿ ಕಾರ್ಡ್ ಸಿಗುತ್ತದೆ.
– ಈ ಯೋಜನೆಯ ಬಗ್ಗೆ ನೀವು 1800 267 6888 ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡುವ ಮೂಲಕ ಹೆಚ್ಚಿನ ಮಾಹಿತಿ ಪಡೆಯಬಹುದು.error: Content is protected !!
Scroll to Top