ರೈಲು ಇಲ್ಲದೆ ಮುಂಬಯಿ ಇಲ್ಲ
79 ವರ್ಷದ ಜೆ.ಆರ್. ಭೋಸಲೆ ಮುಂಬಯಿಯ ಕಾರ್ಮಿಕ ನಾಯಕ.ಸುಮಾರು ಆರು ದಶಕಗಳಿಂದ ಮುಂಬಯಿಯ ಲೋಕಲ್ ರೈಲುಗಳನ್ನು ಹತ್ತಿರದಿಂದ ನೋಡುತ್ತಾ ಬಂದವರು.1976ರ ಕಾರ್ಮಿಕ ಮುಷ್ಕರ ಅವರ ಮನಸಿನಲ್ಲಿನ್ನೂ ಹಸಿರಾಗಿದೆ.ಜಗತ್ತಿನ ಅತಿ ದೊಡ್ಡ ಕಾರ್ಮಿಕ ಮುಷ್ಕರ ಎಂದು ಹೆಸರಾಗಿದ್ದ ಈ ಮುಷ್ಕರದ ಸಂದರ್ಭದಲ್ಲಿ 20 ದಿನ ರೈಲು ಸಂಚಾರ ಸ್ಥಗಿತವಾಗಿತ್ತು.ಅನಂತರ 2006ರಲ್ಲಿ ಲೋಕಲ್ ರೈಲುಗಳಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿದಾಗೊಮ್ಮೆ 24 ತಾಸುಗಳ ಮಟ್ಟಿಗೆ ಲೋಕಲ್ ರೈಲು ಸಂಚಾರ ಬಂದ್ ಆಯ್ತು.ಆದರೆ ಇವೆಲ್ಲ ತಾತ್ಕಾಲಿಕ ಮಾತ್ರ. ಎರಡು ತಿಂಗಳಿಗೂ ಮಿಕ್ಕಿ ರೈಲು ಸ್ಥಗಿತವಾದದ್ದು ಇದೇ ಮೋದಲು ಎನ್ನುತ್ತಿದ್ದಾರೆ ಭೋಸಲೆ.
ರೈಲುಗಳಲ್ಲಿ ಅಂತರ ಕಾಪಾಡಿಕೊಳ್ಳುವುದು ಅಸಾಧ್ಯ. ಹೀಗಾಗಿ ಸಂಚಾರ ನಿಲ್ಲಿಸುವುದು ಅನಿವಾರ್ಯವಾಗಿತ್ತು ಎನ್ನುತ್ತಾರೆ ಪಶ್ಚಿಮ ರೈಲ್ವೇ ನೌಕರರ ಯೂನಿಯನ್ ಅಧ್ಯಕ್ಷರಾಗಿರುವ ಭೋಸಲೆ.
ಲೋಕಲ್ ರೈಲುಗಳು ಮುಂಬಯಿಯ ಜೀವನಾಡಿಯಿದ್ದ ಹಾಗೆ.ನಿತ್ಯ 80 ಲಕ್ಷ ಮಂದಿ ಲೋಕಲ್ ರೈಲುಗಳಲ್ಲಿ ಪ್ರಯಾಣಿಸುತ್ತಾರೆ.ಇದೀಗ ರೈಲುಗಳು ಇಲ್ಲದೆ ಜನರು ಕಂಗಾಲಾಗಿದ್ದಾರೆ. ಒಂದು ರೀತಿಯಲ್ಲಿ ಜೀವಚ್ಚವಹದಂತಾಗಿದ್ದಾರೆ. ಮುಂಬಯಿ ಮರಳಿ ಜೀವ ಪಡೆದುಕೊಳ್ಳಬೇಕಾದರೆ ರೈಲುಗಳು ಎಂದಿನಂತೆ ಸಂಚರಿಸಬೇಕು. ಸದ್ಯದ ಸಂದರ್ಭದಲ್ಲಿ ಆ ಸಾಧ್ಯತೆ ಕಾಣಿಸುವುದಿಲ್ಲ.