ಅಜೆಕಾರ್ ಪದ್ಮಗೋಪಾಲ್ ಸಭಾಂಗಣ ಲೋಕಾರ್ಪಣೆ
ಭಾರತೀಯ ಸೇನೆಗೆ 1 ಲ. ರೂ. ಹಸ್ತಾಂತರದೊಂದಿಗೆ ದೇಶಸುಧಾ ಉದ್ಘಾಟನೆ
ಸುಧಾಕರರು ಶೈಕ್ಷಣಿಕ ಕ್ಷೇತ್ರ ಕಂಡ ನಿಜವಾದ ಸುಧಾರಕ : ಕೃಷ್ಣಾಪುರ ಶ್ರೀ ಜನ್ಮ

ಕಾರ್ಕಳ : ಭೂಮಿಯನ್ನು ಶ್ರೇಷ್ಠವಾಗಿ ಪರಿಗಣಿಸಿ, ಇಲ್ಲಿ ವಿದ್ಯಾಸಂಸ್ಥೆಯನ್ನು ಕಟ್ಟಿ ತನ್ನ ಹುಟ್ಟೂರಿನ ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡಬೇಕೆಂಬ ಸಂಕಲ್ಪ ತೊಟ್ಟ ಸುಧಾಕರರು ಶೈಕ್ಷಣಿಕ ಕ್ಷೇತ್ರ ಕಂಡ ನಿಜವಾದ ಸುಧಾರಕ ಎಂದು ಉಡುಪಿಯ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ನುಡಿದರು.
ಅವರು ಅಜೆಕಾರಿನ ಪದ್ಮನಗರದಲ್ಲಿ ನೂತನವಾಗಿ ಆರಂಭಗೊಂಡ ಅಜೆಕಾರ್ ಜ್ಞಾನಸುಧಾ ಆಂಗ್ಲಮಾಧ್ಯಮ ಪ್ರೌಢಶಾಲೆ ಮತ್ತು ಅಜೆಕಾರ್ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಥಮ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವನ್ನು ಹಾಗೂ ಅಜೆಕಾರ್ ಪದ್ಮಗೋಪಾಲ್ ಸಭಾಂಗಣವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಆಶೀರ್ವಚನ ನೀಡಿ ಮಾತನಾಡಿದರು.
ಉತ್ತಮ ಫಲಿತಾಂಶದೊಂದಿಗೆ ವಿದ್ಯಾರ್ಥಿಗಳಲ್ಲಿ ನೈತಿಕತೆಯನ್ನು, ರಾಷ್ಟ್ರಪ್ರೇಮವನ್ನು ಉದ್ದೀಪನಗೊಳಿಸುತ್ತಿರುವುದೇ ಜ್ಞಾನಸುಧಾದ ಹೆಗ್ಗಳಿಕೆಯಾಗಿದೆ. ಈ ಸಂಸ್ಥೆ ರಾಷ್ಟ್ರ ನಿರ್ಮಾಣದ ಬಹುದೊಡ್ಡ ಕಾರ್ಯವನ್ನು ಮಾಡುತ್ತಿದೆ. ಮನುಷ್ಯ ತನ್ನ ಬದುಕಿಗೋಸ್ಕರ ಅನೇಕ ವೃತ್ತಿಗಳನ್ನು ಮಾಡುತ್ತಾನೆ. ಯಾವ ವೃತ್ತಿಯಿಂದ ತಾನು ಬದುಕುತ್ತಾನೋ ಅವನು ಉಳಿದವರನ್ನು ಬದುಕಿಸುತ್ತಾನೆ. ಜೀವನದ ಶ್ರೇಯಸ್ಸಿಗೆ ಜ್ಞಾನವೇ ಮೆಟ್ಟಿಲು. ಜ್ಞಾನ ಅಜ್ಞಾನವನ್ನು ತೊಲಗಿಸಿ ಸರಿಯಾದ ದಾರಿಯನ್ನು ತೋರಿಸುತ್ತದೆ. ಇಂದಿನ ಆಧುನಿಕ ಕಾಲದಲ್ಲಿ ವಿದ್ಯಾರ್ಥಿಗಳಿಗೆ ಬದುಕಿಗೆ ಬೇಕಾದ ವಿದ್ಯೆಯನ್ನು ಕಟ್ಟಿಕೊಡುತ್ತಿರುವ ಜ್ಞಾನಸುಧಾದಂತಹ ಶಿಕ್ಷಣ ಸಂಸ್ಥೆಗಳ ಕಾರ್ಯ ಶ್ಲಾಘನೀಯ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ವಿಧಾನ ಪರಿಷತ್‌ನ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರವರು ಟ್ರಸ್ಟಿನ ವತಿಯಿಂದ ಒಂದು ಲಕ್ಷ ರೂಪಾಯಿಯನ್ನು ಭಾರತೀಯ ಸೇನೆಗೆ ಹಸ್ತಾಂತರ ಮಾಡುವುದರ ಮೂಲಕ ದೇಶಸುಧಾ ಕಾರ್ಯಕ್ರಮವನ್ನು ಉದ್ಘಾಟಿಸಿ, ಕಾರ್ಯಕ್ರಮದ ಒಂದನೇ ಸರಣಿಯಲ್ಲಿ ಬಾಗಲಕೋಟೆಯ ರಂಗಪ್ಪ ಆಲೂರರ ದೇಶಪ್ರೇಮದ ಕುರಿತಾಗಿ ಮಾತನಾಡುತ್ತಾ, ಶಿಕ್ಷಣದ ಜೊತೆಗೆ ದೇಶಭಕ್ತಿಯನ್ನು ನಮ್ಮ ವ್ಯಕ್ತಿತ್ವದೊಂದಿಗೆ ಜೋಡಿಸಿಕೊಂಡಾಗ ರಾಷ್ಟ್ರಮೊದಲು ಎಂಬ ಭಾವ ನಮ್ಮೊಳಗೆ ಮೊಳಗಲು ಸಾಧ್ಯವಿದೆ ಎಂದರು.
ಉಡುಪಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) ಉಪನಿರ್ದೇಶಕ ಮಾರುತಿಯವರು ಮಾತನಾಡಿ, ರಾಜ್ಯಮಟ್ಟದಲ್ಲಿ ಉಡುಪಿ ಜಿಲ್ಲೆಯು ಫಲಿತಾಂಶದಲ್ಲಿ ಅಗ್ರ ಸ್ಥಾನಿಯಾಗಲು ಜ್ಞಾನಸುಧಾದಂತಹ ಶಿಕ್ಷಣ ಸಂಸ್ಥೆಗಳ ಕೊಡುಗೆ ಗಣನೀಯ. ಡಾ.ಸುಧಾಕರ್ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಒಮ್ಮನಸಿನಿಂದ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳ ಶ್ರದ್ಧೆಯಿಂದ ಕೂಡಿದ ಬದ್ದತೆಯೇ ಇಂದು ಇಡೀ ನಾಡೇ ಜ್ಞಾನಸುಧಾವನ್ನು ದಾಖಲಾತಿ ಹೊಂದಲು ಹಾತೊರೆಯುತ್ತಿರುವುದಕ್ಕೆ ಕಾರಣ ಎಂದರು.
ಇನ್ನೋರ್ವ ಅತಿಥಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಲೋಕೇಶ್ ಮಾತನಾಡಿ, ತಂದೆ ತಾಯಿಯವರ ಋಣವನ್ನು ಹೇಗೆ ತೀರಿಸಬಹುದು ಎಂಬುದಕ್ಕೆ ಡಾ.ಸುಧಾಕರ್ ಶೆಟ್ಟಿಯವರು ಸಮಾಜಕ್ಕೊಂದು ಮಾದರಿ. ಸಕಾರಾತ್ಮಕ ಆಲೋಚನೆ, ಸಮಾಜಮುಖಿ ಚಿಂತನೆ, ಶಿಕ್ಷಣದಿಂದ ಸಮಾಜಕ್ಕೆ ಸೇವೆ ನೀಡಿ ಆ ಮೂಲಕ ಸದೃಢ ಸಮಾಜ ನಿರ್ಮಾಣ ಮಾಡುತ್ತಿರುವ ಅವರ ಕಾರ್ಯ ಶ್ಲಾಘನೀಯ ಎಂದರು.
ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿಯವರು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಟ್ರಸ್ಟಿಗಳಾದ ಅನಿಲ್ ಕುಮಾರ್ ಜೈನ್, ಸಿ.ಎ. ನಿತ್ಯಾನಂದ ಪ್ರಭು ಹಾಗೂ ಗಗನ್ ಎಸ್. ಶೆಟ್ಟಿ, ಆಡಳಿತ ಮಂಡಳಿ ಸದಸ್ಯರಾಸ ಶಾಂತಿರಾಜ್ ಹೆಗ್ಡೆ ಮತ್ತು ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು, ಉಪಪ್ರಾಂಶುಪಾಲರುಗಳು ಸಹಿತ ಬೊಧಕ ಬೋಧಕೇತರ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಆಂಗ್ಲಭಾಷಾ ಉಪನ್ಯಾಸಕಿ ದರ್ಶಿನಿ ಕಾರ್ಯಕ್ರಮ ನಿರೂಪಿಸಿ, ಆಂಗ್ಲಭಾಷಾ ವಿಭಾಗದ ಮುಖ್ಯಸ್ಥೆ ಸಂಗೀತಾ ಕುಲಾಲ್ ಸಂಸ್ಥೆಯ ಹಿನ್ನೋಟದ ಜೊತೆಗೆ ಹಾಗೂ ಅತಿಥಿ ಅಭ್ಯಾಗತರನ್ನು ಪರಿಚಯಿಸಿದರು.































