ನಿಂಗ್ಬೊ (ಚೀನಾ) : ಕಾರ್ಕಳ ಸಾಣೂರಿನ ಉದಯೋನ್ಮುಖ ಪ್ರತಿಭೆ ಆಯುಷ್ ಶೆಟ್ಟಿ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಅಕ್ಷರಶಃ ವಿಶ್ವವನ್ನೇ ಬೆರಗುಗೊಳಿಸಿದ್ದಾರೆ. ಶನಿವಾರ ನಡೆದ ಪುರುಷರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ವಿಶ್ವದ ನಂಬರ್ 1 ಆಟಗಾರ ಥಾಯ್ಲೆಂಡ್‌ನ ಕುನ್ಲಾವುತ್ ವಿಟಿಡ್ಸರ್ನ್ ಅವರನ್ನು ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
ಐತಿಹಾಸಿಕ ಜಯ:
20 ವರ್ಷದ ಭರವಸೆಯ ಆಟಗಾರ ಆಯುಷ್ ಶೆಟ್ಟಿ ಪ್ಯಾರಿಸ್ ಒಲಿಂಪಿಕ್ಸ್‌ನ ಬೆಳ್ಳಿ ಪದಕ ವಿಜೇತ ವಿಟಿಡ್ಸರ್ನ್ ವಿರುದ್ಧ 10-21, 21-19, 21-17 ಅಂತರದಲ್ಲಿ ರೋಚಕ ಜಯ ಸಾಧಿಸಿದರು. ಮೊದಲ ಸೆಟ್‌ನಲ್ಲಿ ಸೋತು ಹಿನ್ನಡೆ ಅನುಭವಿಸಿದರೂ ದೃತಿಗೆಡದ ಕಾರ್ಕಳದ ಈ ಪ್ರತಿಭೆ, ದ್ವಿತೀಯ ಮತ್ತು ನಿರ್ಣಾಯಕ ಸೆಟ್‌ನಲ್ಲಿ ಅದ್ಭುತ ಚೇತರಿಕೆ ಕಂಡು ಇತಿಹಾಸ ನಿರ್ಮಿಸಿದ್ದಾರೆ. ಈ ಗೆಲುವಿನೊಂದಿಗೆ ಆಯುಷ್ ಶೆಟ್ಟಿ ಮಹತ್ತರ ಸಾಧನೆಯೊಂದಕ್ಕೆ ಪಾತ್ರರಾಗಿದ್ದಾರೆ.
61 ವರ್ಷಗಳ ದಾಖಲೆ
1965ರಲ್ಲಿ ದಿನೇಶ್ ಖನ್ನಾ ಅವರ ಅನಂತರ ಈ ಪ್ರತಿಷ್ಠಿತ ಕಾಂಟಿನೆಂಟಲ್ ಟೂರ್ನಿಯ ಫೈನಲ್ ತಲುಪಿದ ಎರಡನೇ ಭಾರತೀಯ ಎಂಬ ಕೀರ್ತಿ ಆಯುಷ್ ಪಾಲಾಗಿದೆ. ಸೆಮಿಫೈನಲ್ ಪ್ರವೇಶದೊಂದಿಗೆ ಪದಕ ಖಚಿತಪಡಿಸಿಕೊಂಡಿದ್ದ ಅವರು 2018ರಲ್ಲಿ ಎಚ್.ಎಸ್. ಪ್ರಣಯ್ ನಂತರ ಈ ಸಾಧನೆ ಮಾಡಿದ ಮೊದಲ ಭಾರತೀಯ ಸಿಂಗಲ್ಸ್ ಆಟಗಾರ ಎನಿಸಿಕೊಂಡಿದ್ದಾರೆ.
ಸಾಗಿ ಬಂದ ಹಾದಿ
ಸಾಣೂರಿನ ಈ ಯುವ ಆಟಗಾರ ಈ ಟೂರ್ನಿಯುದ್ದಕ್ಕೂ ದೈತ್ಯ ಸಂಹಾರಿಯಾಗಿಯೇ ಹೊರಹೊಮ್ಮಿದ್ದಾರೆ. ಅವರ ಈ ಹಾದಿ ಅಪ್ರತಿಮವಾದುದು. ಮೊದಲ ಸುತ್ತಿನಲ್ಲಿ ವಿಶ್ವದ 7ನೇ ಶ್ರೇಯಾಂಕಿತ ಲಿ ಶಿ ಫೆಂಗ್ ವಿರುದ್ಧ ಭರ್ಜರಿ ಜಯ. ಎರಡನೇ ಸುತ್ತಿನಲ್ಲಿ ಚೀನಾದ ಚೆನ್ ಯು ಜೆನ್ ಅವರಿಗೆ ಸೋಲು. ಕ್ವಾರ್ಟರ್ ಫೈನಲ್ ನಲ್ಲಿ ವಿಶ್ವದ 4ನೇ ಶ್ರೇಯಾಂಕಿತ ಜೊನಾಥನ್ ಕ್ರಿಸ್ಟಿ ಅವರನ್ನು ಮಣಿಸಿ ಸೆಮಿಫೈನಲ್‌ಗೆ ಪ್ರವೇಶ.

ಕಾರ್ಕಳ ತಾಲೂಕಿನ ಸಾಣೂರಿನಿಂದ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದು ನಿಂತಿರುವ ಆಯುಷ್ ಶೆಟ್ಟಿ ಅವರ ಈ ಸಾಧನೆ ಕರಾವಳಿ ಕರ್ನಾಟಕಕ್ಕೆ ಮಾತ್ರವಲ್ಲದೇ ಇಡೀ ದೇಶಕ್ಕೆ ಹೆಮ್ಮೆಯ ಸಂಗತಿ. 2023ರಲ್ಲಿ ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ ಜೋಡಿ ಗೆದ್ದಿದ್ದ ಪದಕದ ಬಳಿಕ, ಭಾರತಕ್ಕೆ ಮತ್ತೊಂದು ಚಿನ್ನದ ಪದಕ ತಂದುಕೊಡುವ ಭರವಸೆ ಆಯುಷ್ ಅವರ ಮೇಲಿದೆ. ನಾಳೆಯ ಫೈನಲ್ ಪಂದ್ಯವು ಕಾರ್ಕಳದ ಈ ಆಯುಷ್ ಶೆಟ್ಟಿ ಪಾಲಿಗೆ ಮತ್ತು ಭಾರತೀಯ ಬ್ಯಾಡ್ಮಿಂಟನ್ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆಯುವ ನಿರೀಕ್ಷೆ ಮೂಡಿಸಿದೆ. ಆಯುಷ್ ಶೆಟ್ಟಿ ಸಾಣೂರಿನ ಮಿತ್ತಲ ಮನೆಯ ರಾಮ್ ಪ್ರಕಾಶ್ ಶೆಟ್ಟಿ ಮತ್ತು ಶಾಲ್ಮಿಲಿ ದಂಪತಿ ಪುತ್ರ.






































