ಮೂಡಬಿದಿರೆ : ಪರೀಕ್ಷೆಯ ನಡುವೆಯೇ ಹೆತ್ತ ತಾಯಿಯನ್ನು ಕಳೆದುಕೊಂಡರೂ, ದೃತಿಗೆಡದೆ ಬೆಟ್ಟದಷ್ಟು ದುಃಖವನ್ನು ಎದೆಯಲ್ಲೇ ಅದುಮಿಟ್ಟು ಪರೀಕ್ಷೆ ಬರೆದ ಮೂಡಬಿದಿರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ದಿಶಾ, ವಾಣಿಜ್ಯ ವಿಭಾಗದಲ್ಲಿ 600ಕ್ಕೆ 600 ಅಂಕ ಗಳಿಸಿ ಅಪ್ರತಿಮ ಸಾಧನೆ ಮೆರೆದಿದ್ದಾರೆ.
ಮೂರು ಪರೀಕ್ಷೆಗಳು ಮುಗಿಯುತ್ತಿದ್ದಂತೆ ತಾಯಿ ಆಕಸ್ಮಿಕವಾಗಿ ನಿಧನರಾದಾಗ ದಿಶಾ ಅವರ ಬದುಕೇ ಕತ್ತಲಾದಂತಾಗಿತ್ತು. ಒಂದೆಡೆ ಅಮ್ಮನಿಲ್ಲದ ಅನಾಥ ಪ್ರಜ್ಞೆ, ಇನ್ನೊಂದೆಡೆ ಭವಿಷ್ಯದ ಪರೀಕ್ಷೆಗಳ ಸವಾಲು; ಈ ಸಂಕಷ್ಟದ ನಡುವೆಯೂ ಅಮ್ಮನ ಕನಸನ್ನು ನನಸು ಮಾಡಲೇಬೇಕೆಂಬ ಹಠದೊಂದಿಗೆ ಅವರು ಪರೀಕ್ಷಾ ಕೇಂದ್ರಕ್ಕೆ ಮರಳಿದರು.
”ಹೆದರಬೇಡ ಮಗಳೇ, ನಿನ್ನ ಪರಿಶ್ರಮಕ್ಕೆ ದೇವರಿದ್ದಾನೆ” ಎಂದು ಧೈರ್ಯ ತುಂಬುತ್ತಿದ್ದ ಅಮ್ಮನ ಮಾತುಗಳೇ ದಿಶಾಗೆ ಶಕ್ತಿಯಾದವು. ಇಂದು ಅಮ್ಮ ಭೌತಿಕವಾಗಿ ಜೊತೆಗಿಲ್ಲದಿದ್ದರೂ, ಮಗಳ ಈ ಅದ್ಭುತ ಯಶಸ್ಸು ಆಕೆಯ ಆತ್ಮಕ್ಕೆ ಶಾಂತಿ ನೀಡಿದೆ. ಮಗಳ ಸಾಧನೆಯನ್ನು ಕಂಡು ಹರಸಲು ತಾಯಿ ಇಲ್ಲವಲ್ಲ ಎಂಬ ಮಾತು ಮಾತ್ರ ಎಲ್ಲರ ಕಣ್ಣಾಲಿಗಳನ್ನು ಒದ್ದೆ ಮಾಡಿದೆ.
ತಾಯಿಯ ಆಸೆಯಂತೆ ಮುಂದೆ ಚಾರ್ಟರ್ಡ್ ಅಕೌಂಟೆಂಟ್ (CA) ಆಗುವ ಗುರಿ ಹೊಂದಿರುವ ದಿಶಾ, ಜೂನಿಯರ್‌ಗಳಿಗೆ ಓದಿನ ಗುಣಮಟ್ಟದ ಮಹತ್ವದ ಬಗ್ಗೆ ಕಿವಿಮಾತು ಹೇಳಿದ್ದಾರೆ. ಜೀವನದ ಅತಿದೊಡ್ಡ ಪರೀಕ್ಷೆಯಲ್ಲಿ ಗೆದ್ದ ಈ ಹುಡುಗಿ, ಕಷ್ಟ ಕಾಲದಲ್ಲಿ ಗುರಿ ಮರೆಯಬಾರದು ಎಂಬುದಕ್ಕೆ ಜಗತ್ತಿಗೆ ಮಾದರಿಯಾಗಿದ್ದಾರೆ.
ದುಃಖದ ಮಡುವಿನಲ್ಲೂ ಧೃತಿ ಗೆಡದ ದಿಶಾ : ಅಮ್ಮನ ಅಗಲಿಕೆಯ ನೋವಿನಲ್ಲೂ 600ಕ್ಕೆ 600 ಅಂಕಗಳ ಐತಿಹಾಸಿಕ ಸಾಧನೆ



















