ಸಂಘಟನೆ ಗ್ರಾಮದ ಶಕ್ತಿಯಾಗಲಿ – ಚಾರುಕೀರ್ತಿ ಶ್ರೀ

ಕಾರ್ಕಳ : ಸಂಘಟನೆ ಎಂಬುದು ಗ್ರಾಮದ ಸರ್ವತೋಮುಖ ಬೆಳವಣಿಗೆಯ ಶಕ್ತಿಯಾಗಬೇಕು. ಈ ನಿಟ್ಟಿನಲ್ಲಿ ಗ್ರಾಮದ ಎಲ್ಲಾ ಧರ್ಮದವರನ್ನು ಒಗ್ಗೂಡಿಸಿಕೊಂಡು ಮುಂಬೈ ಮತ್ತು ಕುಕ್ಕುಂದೂರಿನಲ್ಲಿ ಸಂಘಟಿತವಾದ ಕುಕ್ಕುಂದೂರು ಫ್ರೆಂಡ್ಸ್ ತಂಡದ ಸದಸ್ಯರು ತಮ್ಮ ಕಾಯಕದ ಒಂದಿಷ್ಟನ್ನು ಜನೋಪಕಾರಿ ಕೆಲಸಕ್ಕೆ ವಿನಿಯೋಗಿಸುತ್ತಿರುವುದು ಆದರ್ಶನೀಯ ಎಂದು ಮೂಡುಬಿದಿರೆ ಜೈನ ಮಠದ ಜಗದ್ಗುರು ಡಾ|| ಸ್ವಸ್ತಿ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಶುಭ ನುಡಿಗಳನ್ನಾಡಿದರು.

ಅವರು ಫೆ. 7ರಂದು ಕುಕ್ಕುಂದೂರು ಟಪ್ಪಾಲುಕಟ್ಟೆ ಶ್ರೀ ದುರ್ಗಾದೇವಿ ಅ.ಹಿ.‌ಪ್ರಾ.ಶಾಲಾ ಬಳಿಯ ಸಮಾಜ ಮಂದಿರದಲ್ಲಿ ನಡೆದ ಕುಕ್ಕುಂದೂರು ಫ್ರೆಂಡ್ಸ್ ರಿ. ಕುಕ್ಕುಂದೂರು- ಮುಂಬೈ ಘಟಕದ 17ನೇ ವಾರ್ಷಿಕೋತ್ಸವದಲ್ಲಿ ಆಶೀರ್ವಚನ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಕುಕ್ಕುಂದೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ವೇದಮೂರ್ತಿ ಶಂಕರನಾರಾಯಣ ಭಟ್ ಮಾತನಾಡಿ, ಒಬ್ಬ ವ್ಯಕ್ತಿ ಒಂದು ರಥವನ್ನು ನಿರ್ಮಿಸಬಹುದು. ಆದರೆ ಅದನ್ನು ಎಳೆಯಲು ಅನೇಕ ಮಂದಿ ಬೇಕು.‌ ಹಾಗೆಯೇ ಸಮಾಜದಲ್ಲಿ ಏನಾದರೂ ತೊಂದರೆಯುಂಟಾಗುವಾಗ ಸಂಘ ಸಂಸ್ಥೆಯಿಂದಾಗ ಸಮರ್ಥವಾಗಿ ಎದುರಿಸಲು ಸಾಧ್ಯ. ಈ ನಿಟ್ಟಿನಲ್ಲಿ ಸಮಾಜದ ಸುಸ್ಥಿರತೆ ಕಾಪಾಡುವಲ್ಲಿ ಕಳೆದ 16 ವರ್ಷಗಳಿಂದ ಕುಕ್ಕುಂದೂರು ಫ್ರೆಂಡ್ಸ್ ಮಾಡುತ್ತಿರುವ ಕಾರ್ಯವೈಖರಿ ಮುಂದೆಯೂ ನಿರಂತರವಾಗಿ ನಡೆಯಲಿ ಎಂದರು.

ಸನ್ಮಾನ
ಕಾರ್ಯಕ್ರಮದಲ್ಲಿ ಕುಕ್ಕುಂದೂರು ಶ್ರೀ ದುರ್ಗಾದೇವಿ ಅನುದಾನಿತ ಹಿ. ಪ್ರಾ. ಶಾಲಾ ಸಂಚಾಲಕ ಕೆ. ರಾಜೇಂದ್ರ ಮುದ್ಯ, ಜಿಲ್ಲಾರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಬಿಪಿನ್ ಚಂದ್ರಪಾಲ್ ನಕ್ರೆ, ಕ್ರೀಡಾ ಸಾಧಕರಾದ ಹೇಮಲತಾ ಸುಧಾಕರ್ ಶೆಟ್ಟಿ ಹಾಗೂ ಉಷಾ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಶೈಕ್ಷಣಿಕ ಸಾಧಕರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಂಗವಾಗಿ ನಡೆಸಿದ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಮಾದರಿ ಸಂಸ್ಥೆ – ಜಿತೇಂದ್ರ ಕುಂದೇಶ್ವರ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪತ್ರಕರ್ತ ಜಿತೇಂದ್ರ ಕುಂದೇಶ್ವರ ಮಾತನಾಡಿ, ಪರಿಸರ ಸಂರಕ್ಷಣೆ, ಆರೋಗ್ಯ ಶಿಬಿರದಂತಹ ಸಮಾಜ ಜಾಗೃತಿಯ ವಿಶೇಷ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ,‌ ಪ್ರತಿಭೆಗಳಿಗೆ ಪ್ರೋತ್ಸಾಹದಂತಹ ಕಾರ್ಯಕ್ರಮಗಳ ಮೂಲಕ ಸಮಾಜಕ್ಕೊಂದು ಮಾದರಿ ಸಂಸ್ಥೆಯಾಗಿ ಕುಕ್ಕುಂದೂರು ಫ್ರೆಂಡ್ಸ್ ಮೂಡಿಬಂದಿದೆ ಎಂದರು.

ವೇದಿಕೆಯಲ್ಲಿ ಶ್ರೀ ದುರ್ಗಾದೇವಿ ಅ.‌ಹಿ.ಪ್ರಾ.ಶಾಲಾ‌ ಮುಖ್ಯ ಶಿಕ್ಷಕಿ ಸುಜಾನ್ ಎನ್. ರಾಜ್, ಕುಕ್ಕುಂದೂರು ಫ್ರೆಂಡ್ಸ್ ಗೌರವಾಧ್ಯಕ್ಷ ತ್ರಿವಿಕ್ರಮ ಕಿಣಿ, ಉದ್ಯಮಿ ಕಮಲಾಕ್ಷ ನಾಯಕ್, ಕುಕ್ಕುಂದೂರು ಫ್ರೆಂಡ್ಸ್ ಅಧ್ಯಕ್ಷರಾದ ರವೀಂದ್ರ ಶೆಟ್ಟಿ ಹಾಗೂ ಶ್ರೀನಿವಾಸ‌ ಕಿಣಿ ಉಪಸ್ಥಿತರಿದ್ದರು. ಪ್ರಸನ್ನ ಕುಕ್ಕುಂದೂರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಳಿನಿ ಎಸ್.‌ ಸುವರ್ಣ ಕಾರ್ಯಕ್ರಮ ನಿರೂಪಿಸಿದರು. ಹರೀಶ್ ಸಾಲ್ಯಾನ್ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಸಾಮೂಹಿಕ ಸತ್ಯನಾರಾಯಣ ಪೂಜೆ ನೆರವೇರಿತು.



































































































error: Content is protected !!
Scroll to Top