ಕಾರ್ಕಳ : ಜಿಲ್ಲಾಡಳಿತದ ಆದೇಶದಂತೆ ನಿರ್ಮಿತ ಕೇಂದ್ರ ಶುಕ್ರವಾರ ಬೈಲೂರು ಪರಶುರಾಮ ಥೀಮ್ ಪಾರ್ಕ್‌ನ ಸ್ವಚ್ಛತಾ ಕಾರ್ಯ ಕೈಗೊಂಡಿದೆ. 2023ರ ಜನವರಿಯಲ್ಲಿ ಲೋಕಾರ್ಪಣೆಗೊಂಡಿದ್ದ ಪರಶುರಾಮ ಥೀಮ್ ಪಾರ್ಕ್ ಬಳಿಕ ರಾಜಕೀಯ ಮೇಲಾಟಕ್ಕೆ ಬಲಿಯಾಗಿದ್ದು, ಪ್ರವಾಸಿಗರ ಪ್ರವೇಶಕ್ಕೆ ನಿಷೇಧ ಹೇರಲಾಗಿತ್ತು. ಪರಿಣಾಮವಾಗಿ ಥೀಮ್ ಪಾರ್ಕ್ ಆವರಣದಲ್ಲಿ ಹುಲ್ಲು, ಪೊದೆಗಳು ತುಂಬಿ ಥೀಮ್ ಪಾರ್ಕ್ ಪಾಳುಬಿದ್ದ ಸ್ಥಿತಿ ನಿರ್ಮಾಣವಾಗಿತ್ತು.
ಇತ್ತೀಚೆಗೆ ಥೀಮ್ ಪಾರ್ಕ್‌ನಲ್ಲಿ ಕಟ್ಟಡದ ಬಾಗಿಲು ಮುರಿದು ಒಳ ನುಗ್ಗಿರುವ ಕಳ್ಳರು, ಮೇಲ್ಚಾವಣಿಗೆ ಹಾಕಿದ್ದ ತಾಮ್ರದ ಹೊದಿಕೆ ಕಿತ್ತು ಹೊತ್ತೊಯ್ದಿದ್ದರು. ಘಟನೆ ಬೆನ್ನಲ್ಲೇ ಥೀಂ ಪಾರ್ಕ್ಗೆ ಭೇಟಿ ನೀಡಿದ್ದ ಶಾಸಕ ಸುನಿಲ್ ಕುಮಾರ್ ಅಲ್ಲಿನ ಪರಿಸ್ಥಿತಿ ಅವಲೋಕಿಸಿ ಜಿಲ್ಲಾಡಳಿತ ಪಾರ್ಕ್ ಸ್ವಚ್ಛತೆಗೊಳಿಸದೇ ಇದ್ದಲ್ಲಿ ಜ. 11ರ ಭಾನುವಾರ ಕಾರ್ಯಕರ್ತರು ಸೇರಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುವುದು. ಮಕರ ಸಂಕ್ರಾಂತಿಯ ಅನಂತರ ಒಂದು ತಿಂಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವುದಾಗಿ ತಿಳಸಿದ್ದರು. ಇದೀಗ ಜಿಲ್ಲಾಡಳಿತ ಥೀಮ್ ಪಾರ್ಕ್‌ನ ಸ್ವಚ್ಚತಾ ಕಾರ್ಯ ಕೈಗೊಳ್ಳುವಂತೆ ನಿರ್ಮಿತಿ ಕೇಂದ್ರಕ್ಕೆ ಆದೇಶಿಸಿದೆ. ಈ ನಿಟ್ಟಿನಲ್ಲಿ ಕಾರ್ಕಳ ನಗರ ಪೊಲೀಸರ ಉಪಸ್ಥಿತಿಯಲ್ಲಿ ನಿರ್ಮಿತಿ ಕೇಂದ್ರ ಸ್ವಚ್ಛತಾ ಕಾರ್ಯ ನಡೆಸುತ್ತಿದೆ.
ಥೀಮ್ ಪಾರ್ಕ್ ಕಾಮಗಾರಿ ಇನ್ನೂ ಪೂರ್ಣಗೊಂಡು ಹಸ್ತಾಂತರವಾಗದ ಕಾರಣ, ಅಲ್ಲಿನ ಬೆಲೆಬಾಳುವ ಎಲೆಕ್ಟ್ರಾನಿಕ್ ಉಪಕರಣಗಳು ಮತ್ತು ಸಾಮಗ್ರಿಗಳನ್ನು ರಕ್ಷಿಸುವ ಹೊಣೆಗಾರಿಕೆ ಅನುಷ್ಠಾನ ಸಂಸ್ಥೆಯಾದ ನಿರ್ಮಿತಿ ಕೇಂದ್ರದ್ದೇ ಆಗಿದೆ ಎಂದು ಡಿಸಿ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕರು ಸ್ವಯಂಪ್ರೇರಿತವಾಗಿ ಸ್ವಚ್ಛತೆಗೆ ಮುಂದಾಗುವುದು ಸೂಕ್ತವಲ್ಲದ ಕಾರಣ ಇಲಾಖಾವತಿಯಿಂದಲೇ ಕಾರ್ಯ ನಡೆಸಲು ತೀರ್ಮಾನಿಸಲಾಗಿದೆ. ಪಾರ್ಕ್ ಆವರಣದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು ಹಾಗೂ ದಿನದ 24 ಗಂಟೆಯೂ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ನಿರ್ದೇಶಿಸಿದ್ದಾರೆ.

ತನಿಖೆ ನಡೆಯುತ್ತಿರುವುದರಿಂದ ಅಧಿಕೃತ ವ್ಯಕ್ತಿಗಳನ್ನು ಹೊರತುಪಡಿಸಿ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಯಾರಾದರೂ ಅತಿಕ್ರಮ ಪ್ರವೇಶ ಮಾಡಿದರೆ ಅವರ ವಿರುದ್ಧ ಹೊಸ ಕಾಯ್ದೆಯಾದ BNSS 2023 ರಡಿ ಎಫ್‌ಐಆರ್ ದಾಖಲಿಸಲು ಸೂಚಿಸಲಾಗಿದೆ. ಇನ್ನು ಕೈಗೊಂಡ ಕ್ರಮಗಳ ಬಗ್ಗೆ ಜನವರಿ 10ರೊಳಗೆ ಅನುಪಾಲನಾ ವರದಿ ಸಲ್ಲಿಸಬೇಕು. ಅಲ್ಲದೆ, ಪ್ರತಿ ವಾರ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರು ಸ್ಥಳಕ್ಕೆ ಭೇಟಿ ನೀಡಿ ಜಿಪಿಎಸ್ ಫೋಟೋದೊಂದಿಗೆ ವರದಿ ನೀಡಲು ಆದೇಶಿಸಲಾಗಿದೆ.
ಜ. 14ರಿಂದ ಒಂದು ತಿಂಗಳ ಕಾಲ ಪಾರ್ಕ್‌ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಅನುಮತಿ ನೀಡುವಂತೆ ಸ್ಥಳೀಯ ಶಾಸಕರು ಕೋರಿದ್ದರು. ಆದರೆ, ಪ್ರಕರಣ ಸಿಐಡಿ ತನಿಖೆಯಲ್ಲಿರುವುದು ಹಾಗೂ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ಪಾರ್ಕ್‌ನ ಸುರಕ್ಷತೆಗೆ ಜಿಲ್ಲಾಡಳಿತ ಮೊದಲ ಆದ್ಯತೆ ನೀಡಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.





















