ಉಡುಪಿ : ದೆಹಲಿಯ ಭಾರತ ಮಂಟಪಂನಲ್ಲಿ ಜ. 9 ರಿಂದ 12ರವರೆಗೆ ನಡೆಯುವ ವಿಕಸಿತ ಭಾರತ ಯಂಗ್ ಲೀಡರ್ಸ್ ಡೈಲಾಗ್ 2026ರಲ್ಲಿ ಭಾಗವಹಿಸಲು ಕಾರ್ಕಳ ತಾಲೂಕು ಇನ್ನಾ ಗ್ರಾಮದ ಮನು ಶೆಟ್ಟಿ ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಚಾಣಕ್ಯ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯಾಗಿರುವ ಈಕೆ ಸತತ ಎರಡನೇ ಬಾರಿಗೆ ಆಯ್ಕೆಯಾಗಿರುತ್ತಾರೆ. ಈಕೆ ಇನ್ನಾದ ಉದಯ ಶೆಟ್ಟಿ ಹಾಗೂ ರೇಶ್ಮಾ ಉದಯ ಶೆಟ್ಟಿ ಅವರ ಪುತ್ರಿ.
ವಿಕಸಿತ ಭಾರತ 2047 ಗುರಿಯನ್ನು ತಲುಪುವಲ್ಲಿ ಯುವಕರ ಭೂಮಿಕೆಯನ್ನು ಉತ್ತೇಜಿಸುವ ಮತ್ತು ಅವರ ಯೋಚನೆಗಳನ್ನು ಹಂಚಿಕೊಳ್ಳಲು ಉದ್ದೇಶಿಸಿರುವ ಈ ಕಾರ್ಯಕ್ರಮದಲ್ಲಿ startup india ಮಹಿಳಾ ನೇತೃತ್ವ, ಪಾರದರ್ಶಕ ಆಡಳಿತ, ಸಾಂಸ್ಕೃತಿಕ ಪ್ರಭಾವ ಮತ್ತು ಆವಿಷ್ಕಾರ ಮೊದಲಾದ ವಿವಿಧ ಮಹತ್ವದ ಥೀಮ್ ಆಧಾರಿತ ಚರ್ಚೆಗಳು ನಡೆಯಲಿವೆ. ಗುಂಪು ಚರ್ಚೆಗಳಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್, ಬ್ಯಾಡ್ಮಿಂಟನ್ ಮಾಜಿ ಆಟಗಾರ ಪುಲ್ಲೇಲ ಗೋಪಿಚಂದ್, ಖ್ಯಾತ ಸಂವಹನ ತಜ್ಞೆ ಪಲ್ಕೀ ಶರ್ಮಾ ಮೊದಲಾದವರು ಭಾಗವಹಿಸಲಿದ್ದಾರೆ. ಜ. 12ರಂದು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಅನುಭವ ಮತ್ತು ಮಾರ್ಗದರ್ಶನ ಹಂಚಿಕೊಳ್ಳಲಿದ್ದು, ಈ ಸಂವಾದವು ಯುವ ಪೀಳಿಗೆಗೆ ರಾಷ್ಟ್ರದ ಗುರಿಗಳನ್ನು ರೂಪಿಸಲು ಪ್ರೇರಣೆ ನೀಡಲಿದೆ.
ವಿಕಸಿತ ಭಾರತ ಯಂಗ್ ಲೀಡರ್ಸ್ ಡೈಲಾಗ್ – ಸತತ ಎರಡನೇ ಬಾರಿಗೆ ಇನ್ನಾದ ಮನು ಶೆಟ್ಟಿ ಭಾಗಿ





















