ಡಿ.16 ವಿಜಯ್‌ ದಿವಸ್‌ – 1971ರಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಐತಿಹಾಸಿಕ ವಿಜಯ ಸಾಧಿಸಿದ ದಿನ

ದೆಹಲಿ : ಪ್ರತಿ ವರ್ಷವು ಡಿಸೆಂಬರ್ 16 ರಂದು ಭಾರತದಲ್ಲಿ ವಿಜಯ್ ದಿವಸ್ ಆಚರಿಸಲಾಗುತ್ತದೆ. 1971ರಲ್ಲಿ ಈ ದಿನದಂದು, ಭಾರತೀಯ ಸೇನೆಯು ಪಾಕಿಸ್ತಾನದ ವಿರುದ್ಧ ಐತಿಹಾಸಿಕ ವಿಜಯ ಸಾಧಿಸಿತ್ತು. 13 ದಿನಗಳ ಕಾಲ ನಡೆದ ಯುದ್ಧದ ನಂತರ ಈ ದಿನದಂದು ಪಾಕಿಸ್ತಾನಿ ಸೇನೆಯು ಭಾರತೀಯ ಸೇನೆಯ ಶೌರ್ಯದ ಮುಂದೆ ಶರಣಾಯಿತು ಮತ್ತು ಬಾಂಗ್ಲಾದೇಶ ಸ್ವಾತಂತ್ರ್ಯವನ್ನು ಗಳಿಸಿತು.

ಈ ದಿನದಂದು, 1971 ರ ಇಂಡೋ-ಪಾಕ್ ಯುದ್ಧದಲ್ಲಿ ಭಾಗವಹಿಸಿದ ಎಲ್ಲಾ ಮಾಜಿ ಸೈನಿಕರನ್ನು ಹಾಗೂ ಹುತಾತ್ಮ ಸೈನಿಕರ ಪತ್ನಿಯರು ಮತ್ತು ಕುಟುಂಬಗಳನ್ನು ಗೌರವಿಸಲು ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಮಾಜಿ ಸೈನಿಕರನ್ನು ಅವರ ಅತ್ಯುತ್ತಮ ಕೆಲಸ, ಧೈರ್ಯ ಮತ್ತು ತ್ಯಾಗಕ್ಕಾಗಿ ಗೌರವಿಸಲಾಗುತ್ತದೆ. ಯುವಜನರು ಸಶಸ್ತ್ರ ಪಡೆಗಳಿಗೆ ಸೇರಲು ಮತ್ತು ದೇಶವನ್ನು ರಕ್ಷಿಸಲು ಪ್ರೇರೇಪಿಸಲು ವಿವಿಧ ಸ್ಥಳಗಳಲ್ಲಿ ದೇಶಭಕ್ತಿಯ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.

ಯುದ್ಧಕ್ಕೆ ಕಾರಣವೇನು
ಪಾಕಿಸ್ತಾನವು ಪಶ್ಚಿಮ ಪಾಕಿಸ್ತಾನ ಮತ್ತು ಪೂರ್ವ ಪಾಕಿಸ್ತಾನ ಎಂಬ ಎರಡು ಭಾಗಗಳಾಗಿ ವಿಭಜಿತವಾಗಿತ್ತು. ಪೂರ್ವ ಪಾಕಿಸ್ತಾನದಲ್ಲಿ ಬಂಗಾಳಿ ಭಾಷಿಕರು ಬಹುಸಂಖ್ಯೆಯಲ್ಲಿ ಇದ್ದರು. ಆದರೆ ಪಶ್ಚಿಮ ಪಾಕಿಸ್ತಾನ ಸರ್ಕಾರವು ಪೂರ್ವ ಪಾಕಿಸ್ತಾನದ ಜನರನ್ನು ಅನ್ಯಾಯವಾಗಿ ನಡೆಸಿಕೊಂಡು, ಬಂಗಾಳಿ ಭಾಷೆಯನ್ನು ರಾಷ್ಟ್ರೀಯ ಭಾಷೆಯಾಗಿ ಗುರುತಿಸಲು ನಿರಾಕರಿಸಿತು. 24 ವರ್ಷಗಳ ಕಾಲ ನಡೆದ ದೌರ್ಜನ್ಯ ಮತ್ತು ದಮನದ ಪರಿಣಾಮವಾಗಿ, ಪಾಕಿಸ್ತಾನಿ ಸೇನೆ ಪೂರ್ವ ಪಾಕಿಸ್ತಾನದಲ್ಲಿ ಕ್ರೂರ ಕಾರ್ಯಾಚರಣೆ ಆರಂಭಿಸಿತು. ಇದರಿಂದ ಲಕ್ಷಾಂತರ ಜನರು ಭಾರತದಲ್ಲಿ ಆಶ್ರಯ ಪಡೆಯಬೇಕಾಯಿತು. ಈ ಹಿನ್ನೆಲೆಯಲ್ಲಿ ಭಾರತವು ಪೂರ್ವ ಪಾಕಿಸ್ತಾನದ ಸ್ವಾತಂತ್ರ್ಯ ಹೋರಾಟಕ್ಕೆ ಬೆಂಬಲ ನೀಡಿತು. ಡಿಸೆಂಬರ್ 4, 1971ರಂದು ಭಾರತವು ಪಾಕಿಸ್ತಾನದ ವಿರುದ್ಧ ಯುದ್ಧ ಘೋಷಿಸಿತು. ಡಿಸೆಂಬರ್ 16ರಂದು ಯುದ್ಧ ಅಂತ್ಯಗೊಂಡು, ಭಾರತದ ವಿಜಯದೊಂದಿಗೆ ಪೂರ್ವ ಪಾಕಿಸ್ತಾನ ಸ್ವತಂತ್ರ ರಾಷ್ಟ್ರವಾದ ಬಾಂಗ್ಲಾದೇಶವಾಗಿ ಉದಯಿಸಿತು.

93,000 ಪಾಕಿಸ್ತಾನಿಗಳ ಶರಣಾಗತಿ
ಈ ಯುದ್ಧದಲ್ಲಿ ಭಾರತೀಯ ಸೇನೆಯ ಶೌರ್ಯಕ್ಕೆ ತಲೆಬಾಗಿ ಢಾಕಾದಲ್ಲಿ 93,000 ಪಾಕಿಸ್ತಾನಿ ಸೈನಿಕರು ಶರಣಾದರು. ಪಾಕಿಸ್ತಾನಿ ಸೇನೆಯನ್ನು ಮುನ್ನಡೆಸುತ್ತಿದ್ದ ಲೆಫ್ಟಿನೆಂಟ್ ಜನರಲ್ ಎ.ಕೆ. ನಿಯಾಜಿ, ತಮ್ಮ 93,000 ಸೈನಿಕರೊಂದಿಗೆ ಭಾರತೀಯ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಜಗಜಿತ್ ಸಿಂಗ್ ಅರೋರಾ ಅವರಿಗೆ ಶರಣಾಗುವ ಮೂಲಕ ಸೋಲನ್ನು ಒಪ್ಪಿಕೊಂಡರು. ಭಾರತ-ಪಾಕ್ ಯುದ್ಧದ ಸಮಯದಲ್ಲಿ ಜನರಲ್ ಸ್ಯಾಮ್ ಮಾಣೆಕ್ ಶಾ ಭಾರತೀಯ ಸೇನೆಯ ಮುಖ್ಯಸ್ಥರಾಗಿದ್ದರು. ಈ ಯುದ್ಧದಲ್ಲಿ ಸುಮಾರು 3,900 ಭಾರತೀಯ ಸೈನಿಕರು ಹುತಾತ್ಮರಾದರು ಮತ್ತು 9,851 ಜನರು ಗಾಯಗೊಂಡರು.

ವಿಜಯ್ ದಿವಸ್ ಮುನ್ನಾ ದಿನದಂದು, ಸೋಮವಾರ, ಭಾರತೀಯ ಸೇನೆಯು ನವದೆಹಲಿಯ ಸೇನಾ ಭವನದಲ್ಲಿ ವಿಜಯ್ ದಿವಸ್-ಅಟ್-ಹೋಮ್ ಕಾರ್ಯಕ್ರಮವನ್ನು ಆಯೋಜಿಸಿತ್ತು. ರಾಷ್ಟ್ರಪತಿ ದ್ರೌಪದಿ ಮುರ್ಮು ಉಪಸ್ಥಿತರಿದ್ದರು. ಈ ಕಾರ್ಯಕ್ರಮವು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನಗಳು ಮತ್ತು ವಿಶೇಷ ಸಾಮರ್ಥ್ಯಗಳನ್ನು ಪ್ರದರ್ಶಿಸಿತು, ಇದು ಸೇನೆಯು ಆಧುನಿಕ, ನವೀನ ಮತ್ತು ಸ್ವಾವಲಂಬಿ ಶಕ್ತಿಯಾಗಿ ನಿರಂತರ ರೂಪಾಂತರಗೊಳ್ಳುವುದನ್ನು ಪ್ರತಿಬಿಂಬಿಸುತ್ತದೆ. ಇಂದು ಅನೇಕ ಕಾರ್ಯಕ್ರಮಗಳು ನಡೆಯಲಿವೆ.































































































error: Content is protected !!
Scroll to Top