ಹೈಕಮಾಂಡ್ ಹೇಳೋವರೆಗೂ ನಾನೇ ಮುಖ್ಯಮಂತ್ರಿ

ಬೆಳಗಾವಿ : ನೀವೇ ಐದು ವರ್ಷ ಸಿಎಂ ಆಗಿರ್ತೀರಾ ಸರ್ ಎಂಬ ಆರ್. ಅಶೋಕ್ ಅವರ ಪ್ರಶ್ನೆಗೆ, ಹೈಕಮಾಂಡ್ ಹೇಳೋವರೆಗೂ ನಾನೇ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಉತ್ತರಿಸಿದ್ದಾರೆ.

ಮಂಗಳವಾರ ವಿಧಾನಸಭಾ ಕಲಾಪದಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಕುಣಿಗಲ್ ರಂಗನಾಥ್ ಮಾತಿಗೆ ಪ್ರತಿಕ್ರಿಯೆಯಾಗಿ ಆರ್. ಅಶೋಕ್ ಅವರು ಸಿದ್ದರಾಮಯ್ಯ ಅವರ ಕಾಲೆಳೆದರು. ಇದಕ್ಕೆ ‘ಉರಿಯುದಕ್ಕೆ ಉಪ್ಪು ಹಾಕ್ಬೇಡ ನೀನು’ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು. ಈ ವೇಳೆ ‘ಹಾಗಾದ್ರೆ ಉರಿತೈತಾ’ ಎಂದು ಅಶೋಕ್ ಕಾಲೆಳೆದರು. ಅದು ಗಾದೆ ಮಾತು, ನಮ್ಮಲ್ಲಿ ಉರಿತಾ ಇಲ್ಲ ಎಂದು ಸಿದ್ದರಾಮಯ್ಯ ಸಮಜಾಯಿಷಿ ಕೊಡುವ ಪ್ರಯತ್ನ ನಡೆಸಿದರು. ಈ ವೇಳೆ ಸಿಎಂ ಬದಲಾವಣೆ, ಐದು ವರ್ಷ ಅಧಿಕಾರ ಬಗ್ಗೆ ಸದನದಲ್ಲಿ ಸ್ವಾರಸ್ಯಕರ ಚರ್ಚೆ ನಡೆಯಿತು. ಈ ಸಂದರ್ಭ ಅಶೋಕ್‌ ಪ್ರಶ್ನೆಗೆ ಉತ್ತಿರಿಸಿದ ಸಿಎಂ, ವಿರೋಧ ಪಕ್ಷದವರು ಏನೇ ಪ್ರಚೋದನೆ ಮಾಡಿದರೂ, ನಮ್ಮ ಶಾಸಕರಾರೂ ಪ್ರಚೋದಿತರಾಗುವುದಿಲ್ಲ. ಐದು ವರ್ಷ ನಾನೇ ಮುಖ್ಯಮಂತ್ರಿಯಾಗಿರಬೇಕೆಂದು ಜನರು ಆಶೀರ್ವಾದ ಮಾಡಿ ಕಳಿಸಿದ್ದಾರೆ. 140 ಶಾಸಕರು ನಮ್ಮ ಜೊತೆ ಇದ್ದಾರೆ. ವಿರೋಧಪಕ್ಷದವರು ಇದರಲ್ಲಿ ಹುಳಿ ಹಿಂಡುವ ಅಗತ್ಯವಿಲ್ಲ ಎಂದು ಕಿಡಿಕಾರಿದರು.

2023ರಲ್ಲಿ ಜನರು ಆಶೀರ್ವಾದ ಮಾಡಿದಂತೆ 2028ರಲ್ಲಿಯೂ ಕಾಂಗ್ರೆಸ್ ಸರ್ಕಾರವೇ ಆಡಳಿತಕ್ಕೆ ಬರಲಿದೆ. ಜನರ ನಾಡಿಮಿಡಿತ ಸರ್ಕಾರಕ್ಕೆ ತಿಳಿದಿದೆ. ಕರ್ನಾಟಕದ ಜನ ಬಿಜೆಪಿಗೆ ಎಂದಿಗೂ ಅಧಿಕಾರಕ್ಕೆ ತರುವುದಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಎರಡು ಬಾರಿ ಅಧಿಕಾರ ನಡೆಸಿದರೂ, ಒಂದು ಬಾರಿಯೂ ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬಂದಿಲ್ಲ. 2008, 2018ರಲ್ಲಿ ಆಪರೇಷನ್ ಕಮಲ ಮಾಡಿ, ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿದ್ದಾರೆ. ರಾಜ್ಯದ ಜನ ಬಿಜೆಪಿಗೆ ಆಶೀರ್ವಾದ ಮಾಡುವುದಿಲ್ಲ ಎಂಬುದು ಸ್ಪಷ್ಟವಾಗಿದೆ. 2019ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬಾರದೆಂಬ ಉದ್ದೇಶದಿಂದ ಜೆಡಿಎಸ್‌ನೊಂದಿಗೆ ಸರ್ಕಾರ ರಚಿಸಲಾಯಿತು. ಆದರೆ ಬಿಜೆಪಿಯವರು, ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡಿರುವ ಉದ್ದೇಶದ ಬಗ್ಗೆ ಪ್ರಶ್ನಿಸಿದರು.‌

ಕಾಂಗ್ರೆಸ್ ಪಕ್ಷದಲ್ಲಿ ಹೈಕಮಾಂಡ್ ಮಾತು ಅಂತಿಮವಾಗಿರುತ್ತದೆ. ಆದರೆ ಬಿಜೆಪಿಯ ಅಧ್ಯಕ್ಷಗಿರಿ ಆಯ್ಕೆಯಲ್ಲಿ ಒಮ್ಮತ ಸಾಧಿಸಿಲ್ಲ. ಬಿಜೆಪಿಯವರಿಗೆ ಅಸೂಯೆ ಕಾಡುತ್ತಿದೆ. ಐದು ವರ್ಷ ಸುಭದ್ರ ಸರ್ಕಾರ ನೀಡುತ್ತೇವೆ ಹಾಗೂ ಮತ್ತೆ ಚುನಾವಣೆ ಎದುರಿಸಿ 2028ರಲ್ಲಿಯೂ ಕಾಂಗ್ರೆಸ್ ಸರ್ಕಾರವೇ ಅಧಿಕ್ಕಾರಕ್ಕೆ ಬರಲಿದೆ. 2013ರಲ್ಲಿ 2023ರಲ್ಲಿಯೂ ಕಾಂಗ್ರೆಸ್‌ಗೆ ಜನರು ಆಶೀರ್ವಾದ ಮಾಡಿದ್ದಾರೆ, ಆದರೆ ಬಿಜೆಪಿಯವರಿಗೆ ಒಮ್ಮೆಯೂ ಜನಾದೇಶ ದೊರೆತಿಲ್ಲ ಹಾಗೂ ಭವಿಷ್ಯದಲ್ಲಿಯೂ ದೊರೆಯುವುದಿಲ್ಲ. ಬಿಜೆಪಿಯವರು ಸದಾ ವಿರೋಧಪಕ್ಷದ ಸ್ಥಾನದಲ್ಲಿಯೇ ಇರಲಿದೆ. “ಇದು ನನ್ನ ಸರ್ಕಾರವಲ್ಲ, ನಮ್ಮ ಸರ್ಕಾರ”. ಈಗಲೂ ನಾನೇ ಮುಖ್ಯಮಂತ್ರಿ. ಹೈಕಮಾಂಡ್ ಹೇಳುವ ತನಕವೂ ನಾನೇ ಮುಖ್ಯಮಂತ್ರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.































































































error: Content is protected !!
Scroll to Top