ಕರ್ನಾಟಕ ರಾಜ್ಯ ನಾಗರಿಕ ಸೇವಾ(ನಡತೆ) ನಿಯಮಗಳು 2021

ಕರ್ನಾಟಕ ರಾಜ್ಯವು ತನ್ನ ಆಡಳಿತವನ್ನು ಚುರುಕುಗೊಳಿಸುವ ಮತ್ತು ಸರ್ಕಾರಿ ನೌಕರರು ತಮ್ಮ ಕಾರ್ಯಕ್ಷಮತೆಯ ಗುಣಮಟ್ಟವನ್ನು ಉಳಿಸಿಕೊಂಡು ಕಳಂಕರಹಿತವಾಗಿ ಶ್ರದ್ದೆ ಮತ್ತು ನಿಷ್ಠೆಯಿಂದ ಸಾರ್ವಜನಿಕರ ಸೇವೆಯನ್ನು ನಿರ್ವಹಿಸುವಂತೆ ಮಾಡುವ ಉದ್ದೇಶದಿಂದ ಕರ್ನಾಟಕ ರಾಜ್ಯ ನಾಗರಿಕ ಸೇವಾ (ನಡತೆ) ನಿಯಮಗಳು 2021 ಎಂಬ ನಿಯಮವು ನಮ್ಮ ರಾಜ್ಯದಲ್ಲಿ ಜಾರಿಯಲ್ಲಿದೆ. ಈ ನಿಯಮದ ಪ್ರಕಾರ ಪ್ರತಿಯೊಬ್ಬ ಸರ್ಕಾರಿ ನೌಕರನು ತನ್ನ ಸೇವಾ ಸಂದರ್ಭದಲ್ಲಿ ಯಾವುದೇ ಅಪರಾಧಿಕ ಚಟುವಟಿಕೆಯಲ್ಲಿ ಭಾಗಿಯಾಗದೇ ಸಂಪೂರ್ಣ ನೀತಿ, ನಿಷ್ಠೆ ಮತ್ತು ಶ್ರದ್ದೆಯಿಂದ ತನ್ನ ಕರ್ತವ್ಯವನ್ನು ನಿರ್ವಹಿಸಬೇಕಾದ ಸಂಪೂರ್ಣ ಜವಾಬ್ದಾರಿಯನ್ನು ಹೊಂದಿರುತ್ತಾನೆ. ಇದಲ್ಲದೆ ಆತನು ರಾಜಕೀಯವಾಗಿ ತಟಸ್ಥ ಧೋರಣೆಯೊಂದಿಗೆ ಉನ್ನತ ನೈತಿಕ ಆದರ್ಶಗಳನ್ನು ಹೊಂದಿ, ತನ್ನ ಕರ್ತವ್ಯಗಳನ್ನು ನ್ಯಾಯ ಸಮ್ಮತ ಮತ್ತು ನಿಷ್ಪಕ್ಷಪಾತತೆಯ ಮೂಲ ತತ್ವಗಳೊಂದಿಗೆ ಅಳವಡಿಸಿಕೊಂಡು ಸಾರ್ವಜನಿಕರೊಂದಿಗೆ ಸೌಜನ್ಯ ಹಾಗೂ ವಿನಯದಿಂದ ವರ್ತಿಸಿ ಪಾರದರ್ಶಕತೆಯ ಸಾರ್ವಜನಿಕ ಸೇವಾ ಕರ್ತವ್ಯವನ್ನು ನಿರ್ವಹಿಸಬೇಕಾಗುತ್ತದೆ.

ಈ ನಿಯಮದ ಪ್ರಕಾರ ಒಬ್ಬ ಸರ್ಕಾರಿ ನೌಕರನು ತನಗೆ ವಹಿಸಿದ ಕಾರ್ಯವನ್ನು ನಿಗದಿಪಡಿಸಿದ ಸಮಯದೊಳಗೆ ನಿರೀಕ್ಷಿತ ಕಾರ್ಯಕ್ಷಮತೆಯ ಗುಣಮಟ್ಟದೊಂದಿಗೆ ನಿರ್ವಹಿಸಲು ವಿಫಲನಾದಲ್ಲಿ ಅದನ್ನು ಆತನ ಕರ್ತವ್ಯದ ಮೇಲಿನ ಶ್ರದ್ದೆಯ ಕೊರತೆ ಎಂದು ಪರಿಗಣಿಸಬೇಕಾಗುತ್ತದೆ. ಸರ್ಕಾರಿ ನೌಕರನು ತನ್ನ ಅಧಿಕೃತ ಕರ್ತವ್ಯಗಳ ನಿರ್ವಹಣೆಯ ಸಂದರ್ಭದಲ್ಲಿ ತನ್ನ ಕಛೇರಿ ಮುಖ್ಯಸ್ಥನಿಗೆ ತಿಳಿಸದೆ ಅಥವಾ ಅವರ ಅನುಮತಿ ಪಡೆಯದೆ ತನ್ನ ಕರ್ತವ್ಯ ಸ್ಥಳದ ಅಧಿಕಾರ ವ್ಯಾಪ್ತಿಯ ಪ್ರದೇಶದಿಂದ ಹೊರಗೆ ಹೋಗುವಂತಿಲ್ಲ. ಅದೇ ರೀತಿ ಯಾವುದೇ ಸರ್ಕಾರಿ ನೌಕರನು ಯಾವುದೇ ರಾಜಕೀಯ ಪಕ್ಷದ ಅಥವಾ ರಾಜಕಾರಣದಲ್ಲಿ ಭಾಗವಹಿಸುವಂತಹ ಯಾವುದೇ ಸಂಘ ಸಂಸ್ಥೆಯ ಸದಸ್ಯನಾಗಿರಬಾರದು ಮತ್ತು ಯಾವುದೇ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುವಂತಿಲ್ಲ. ಪ್ರತಿಯೊಬ್ಬ ಸರ್ಕಾರಿ ನೌಕರನು ವಿಶ್ವಾಸಾರ್ಹತೆಯಿಂದ ಕೂಡಿದ ತನ್ನ ಕರ್ತವ್ಯ ನಿರ್ವಹಣೆಯ ಸಂದರ್ಭದಲ್ಲಿ ಮಾಹಿತಿಯಲ್ಲಿ ಮಾಹಿತಿಯನ್ನು ಮಾಹಿತಿ ಹಕ್ಕು, ಕಾಯ್ದೆ (2005 ಕೇಂದ್ರಿಯ ಕಾಯ್ದೆ 22) ಮತ್ತು ಅದರಡಿ ರಚಿಸಲಾದ ನಿಯಮಗಳನ್ವಯ ಮಾಹಿತಿಯನ್ನು ಸಾರ್ವಜನಿಕರಿಗೆ ಒದಗಿಸಲು ಬದ್ಧರಾಗಿರುತ್ತಾರೆ.

ಯಾರೇ ಸರ್ಕಾರಿ ನೌಕರನು ನಿಯಮಿಸಲಾದ ಪ್ರಾಧಿಕಾರದಿಂದ ಪೂರ್ವ ಮಂಜೂರಾತಿಯನ್ನು ಪಡೆಯದ ಹೊರತು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಯಾವುದೇ ರೀತಿಯ ವ್ಯಾಪಾರದಲ್ಲಿ ಅಥವಾ ವ್ಯವಹಾರದಲ್ಲಿ ಭಾಗಿಯಾಗಕೂಡದು. ಅದೇ ರೀತಿಯಾಗಿ ಸರ್ಕಾರಿ ನೌಕರನು ಯಾವುದೇ ಬಂಡವಾಳ ಹೂಡಿಕೆಯ ವ್ಯವಹಾರದಲ್ಲಿ ಭಾಗಿಯಾಗಬಾರದು. ಸರ್ಕಾರಿ ನೌಕರನು ತನ್ನ ಸೇವೆಗೆ ನೇಮಕವಾಗುವಾಗ ಆತನು ತನ್ನ ಸ್ವಂತ ಹೆಸರಿನಲ್ಲಿ ಅಥವಾ ತನ್ನ ಕುಟುಂಬದ ಸದಸ್ಯರ ಹೆಸರಿನಲ್ಲಿ ಸ್ವಯಾರ್ಜಿತವಾಗಿ ಅಥವಾ ಪಿತ್ರಾರ್ಜಿತವಾಗಿ ಹೊಂದಿರುವ ಸ್ಥಿರಾಸ್ತಿಯ ಸಂಪೂರ್ಣ ವಿವರಗಳನ್ನು ನಿಗದಿತ ನಮೂನೆಯ ಪೂರಕ ದಾಖಲೆಗಳೊಂದಿಗೆ ತಾನು ಸೇವೆಗೆ ಸೇರಿದ ಮೂರು ತಿಂಗಳ ಒಳಗಾಗಿ ಸರ್ಕಾರಕ್ಕೆ ಸಲ್ಲಿಸಬೇಕಾಗುತ್ತದೆ.































































































error: Content is protected !!
Scroll to Top