ಪರ್ಯಾಯ ಮಹೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಡಿಸಿ ಸೂಚನೆ

ಉಡುಪಿ : 2026 ರ ಜನವರಿಯಲ್ಲಿ ನಡೆಯಲಿರುವ ಶ್ರೀ ಕೃಷ್ಣ ಮಠದ ಪರ್ಯಾಯ ಮಹೋತ್ಸವಕ್ಕೆ ಹೆಚ್ಚು ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಅಗತ್ಯ ಮೂಲಭೂತ ಸೌಕರ್ಯ ಸೇರಿದಂತೆ ಕಾನೂನು ಸುವ್ಯವಸ್ಥೆಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಉಡುಪಿ ಶ್ರೀ ಕೃಷ್ಣ ಮಠದ ಪರ್ಯಾಯ ಮಹೋತ್ಸವ ಕಾರ್ಯಕ್ರಮ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶ್ರೀ ಕೃಷ್ಣ ಮಠದ ಪರ್ಯಾಯ ಮಹೋತ್ಸವ ಕಾರ್ಯಕ್ರಮಕ್ಕೆ ಹೊರ ಜಿಲ್ಲೆ, ಹೊರ ರಾಜ್ಯ, ವಿದೇಶಗಳಿಂದ ಹೆಚ್ಚಿನ ಭಕ್ತರು ಉಡುಪಿ ನಗರಕ್ಕೆ ಆಗಮಿಸುವ ಸಾಧ್ಯತೆಗಳಿದೆ. ಅವರಿಗೆ ಅಗತ್ಯ ಮೂಲಭೂತ ಸೌಕರ್ಯ, ಕುಡಿಯುವ ನೀರು, ವಾಹನಗಳ ಸುಗಮ ಸಂಚಾರದ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ, ಜನರ ದಟ್ಟಣೆಯಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಬೇಕು ಎಂದವರು ಅಧಿಕಾರಿಗಳಿಗೆ ತಿಳಿಸಿದರು.

ಪರ್ಯಾಯ ಕಾರ್ಯಕ್ರಮಕ್ಕೆ ಆಗಮಿಸುವ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ರಸ್ತೆಗಳ ದುರಸ್ತಿಯನ್ನು ಗುಣಮಟ್ಟದೊಂದಿಗೆ ಕೈಗೊಳ್ಳಬೇಕು. ದಾರಿದೀಪಗಳು ಸುಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂದ ಅವರು, ನಗರದ ಶುಚಿತ್ವ ಕಾಪಾಡುವ ನಿಟ್ಟಿನಲ್ಲಿ ಹೆಚ್ಚು ಪೌರ ಕಾರ್ಮಿಕರನ್ನು ನಿಯೋಜಿಸಬೇಕು ಎಂದು ಪೌರಾಯುಕ್ತರಿಗೆ ಸೂಚನೆ ನೀಡಿದರು.

ಕಂಟ್ರೋಲ್‌ ರೂಂ
ಮಠದ ಆವರಣದಲ್ಲಿ ಜನಜಂಗುಳಿಯಾಗಿ ಜನರ ಸಂಚಾರಕ್ಕೆ ತೊಂದರೆಯಾಗದಂತೆ ಅಗತ್ಯವಿರುವ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ನಗರದಲ್ಲಿ ಬಂದೋಬಸ್ತ್ ಗೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಬೇಕು. ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಅಳವಡಿಸುವುದರೊಂದಿಗೆ ಕಂಟ್ರೋಲ್ ರೂಮ್‌ಗಳು ದಿನದ 24 ಗಂಟೆ ಕಾರ್ಯಾಚರಿಸುವಂತೆ ನೋಡಿಕೊಳ್ಳಬೇಕು. ವಾಹನಗಳ ಸುಗಮ ಸಂಚಾರಕ್ಕೆ, ಅವುಗಳ ನಿಲುಗಡೆಗೆ ತಾತ್ಕಾಲಿಕ ಪಾರ್ಕಿಂಗ್ ವ್ಯವಸ್ಥೆಗಳನ್ನು ಕಲ್ಪಿಸಬೇಕು ಎಂದು ಪೊಲೀಸ್ ಇಲಾಖೆಗೆ ಡಿಸಿಯವರು ಸೂಚನೆ ನೀಡಿದರು.

ಆರೋಗ್ಯ ಕೇಂದ್ರ
ತುರ್ತು ಆರೋಗ್ಯ ಚಿಕಿತ್ಸೆ ನೀಡಲು ಶ್ರೀಕೃಷ ಮಠದ ಆವರಣದಲ್ಲಿ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯನ್ನೊಳಗೊಂಡ ತಂಡದ ಆರೋಗ್ಯ ಕೇಂದ್ರಗಳನ್ನು ತಾತ್ಕಾಲಿಕವಾಗಿ ರಚಿಸುವುದರೊಂದಿಗೆ ಆಂಬುಲೆನ್ಸ್ ನಿಯೋಜಿಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪರ್ಯಾಯ ಮಹೋತ್ಸವ ಸಂದರ್ಭದಲ್ಲಿ ನಿರಂತರ ವಿದ್ಯುಚ್ಛಕ್ತಿ ಪೂರೈಕೆಗೆ ಅಗತ್ಯ ಕ್ರಮ ವಹಿಸಬೇಕು. ಅಗ್ನಿಶಾಮಕ ಹೆಚ್ಚುವರಿ ವಾಹನಗಳನ್ನು ನಿಯೋಜಿಸಬೇಕು. ಪರ್ಯಾಯೋತ್ಸವ ಅಂಗವಾಗಿ ವಾಹನಗಳಲ್ಲಿ ಹೊರೆ ಕಾಣಿಕೆಗಳು ಬರಲಿದ್ದು, ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆಗಳಾಗದ ರೀತಿಯಲ್ಲಿ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಪುರ ಮೆರವಣಿಗೆಯಲ್ಲಿ ವಿವಿಧ ಸಾಂಸ್ಕೃತಿಕ ತಂಡಗಳು, ಸ್ತಬ್ಧ ಚಿತ್ರಗಳು ಭಾಗವಹಿಸಲಿದ್ದು, ಇವುಗಳು ಶಿಸ್ತುಬದ್ಧವಾಗಿ ಸಾಗುವ ರೀತಿ ನೋಡಿಕೊಳ್ಳಬೇಕು ಎಂದ ಅವರು, ಮೆರವಣಿಗೆ ಸಾಗುವ ದಾರಿಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳಿದ್ದಲ್ಲಿ ಅವುಗಳನ್ನು ಗುರುತಿಸುವುದರೊಂದಿಗೆ ಸಾರ್ವಜನಿಕರಿಗೆ ತೊಂದರೆ ಆಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಮೆರವಣಿಗೆ ಸಾಗುವ ದಾರಿಯಲ್ಲಿ ಅಪಾಯಕಾರಿ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಡಿಸಿ ಸೂಚನೆ ನೀಡಿದರು.

ಶಾಸಕ ಯಶ್‌ಪಾಲ್ ಎ ಸುವರ್ಣ ಮಾತನಾಡಿ, ಪರ್ಯಾಯ ಮಹೋತ್ಸವ ಸಂದರ್ಭದಲ್ಲಿ ಜನಸಂದಣಿ ಹೆಚ್ಚಾಗಲಿರುವುದರಿಂದ ಯಾವುದೇ ಅವಘಡಗಳು ಸಂಭವಿಸದಂತೆ ಸೂಕ್ತ ಮುನ್ನೆಚ್ಚರಿಕ ಕ್ರಮ ಕೈಗೊಳ್ಳಬೇಕು. ವಾಹನಗಳು ಹೆಚ್ಚು ಆಗಮಿಸುವ ಸಾಧ್ಯತೆಗಳಿರುವ ಹಿನ್ನೆಲೆ, ಅವುಗಳಿಗೆ ಸೂಕ್ತ ಪಾರ್ಕಿಂಗ್ ಸ್ಥಳ ನಿಗದಿಪಡಿಸಬೇಕು. ಊರ ಹಬ್ಬದ ರೀತಿಯಲ್ಲಿ ಪರ್ಯಾಯ ಮಹೋತ್ಸವ ಕಾರ್ಯಕ್ರಮ ಯಶಸ್ಸಿಗೆ ಅಧಿಕಾರಿಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಸಹಾಯಕ ಕಮಿಷನರ್ ರಶ್ಮಿ, ಮಠದ ದಿವಾನರಾದ ಡಾ. ಉದಯ್ ಕುಮಾರ್ ಸರಳತ್ತಾಯ, ವಿವಿಧ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು, ಸ್ವಾಗತ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.









































































































error: Content is protected !!
Scroll to Top