ಅಪರಾಧ ಶಾಸ್ತ್ರದಲ್ಲಿ (ಕ್ರಿಮಿನಾಲಜಿ) ಪೊಲೀಸರ ಆಡಳಿತ ವ್ಯವಸ್ಥೆಯು ಅತ್ಯಂತ ಮಹತ್ತರವಾದ ಸ್ಥಾನವನ್ನು ಹೊಂದಿರುತ್ತದೆ. ಈ ನಿಟ್ಟಿನಲ್ಲಿ ಸಮಾಜದಲ್ಲಿ ಶಾಂತಿ ಹಾಗೂ ಸುವ್ಯವಸ್ಥೆಯನ್ನು ಕಾಪಾಡುವುದಕ್ಕಾಗಿ, ಅಪರಾಧಗಳನ್ನು ತಡೆಗಟ್ಟುವುದಕ್ಕಾಗಿ ಪೊಲೀಸ್ ಆಡಳಿತ ವ್ಯವಸ್ಥೆಗೆ ಸಂಬಂಧಪಟ್ಟಂತೆ ‘ಪೊಲೀಸ್ ಅಧಿನಿಯಮ 1861’ ಎಂಬ ಕಾನೂನು ಅನೇಕ ವರ್ಷಗಳ ಹಿಂದೆಯೇ ಜ್ಯಾರಿಗೆ ಬಂದಿರುತ್ತದೆ. ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ಪೊಲೀಸ್ ಅಧಿನಿಯಮ 1963 ಎಂಬ ಕಾನೂನಿನ ಅಡಿಯಲ್ಲಿ ರಾಜ್ಯದ ಗೃಹ ಇಲಾಖೆಯು ಪೊಲೀಸರ ಆಡಳಿತ ವ್ಯವಸ್ಥೆಯನ್ನು ನಿಯಂತ್ರಿಸುತ್ತಿದೆ. ಸಾಮಾನ್ಯವಾಗಿ ಪೋಲೀಸ್ ಇಲಾಖೆಯಲ್ಲಿ (1)ರೈಲ್ವೆ ಮತ್ತು ಇಂಟೆಲಿಜೆನ್ಸ್ ವಿಭಾಗ (2)ಪತ್ತೆದಾರ ದಳ (3)ಪೊಲೀಸ್ ತರಬೇತಿ ಇಲಾಖೆ (4)ಪೋಲೀಸ್ ಅರಣ್ಯ ಇಲಾಖೆ (5)ವೈರ್ ಲೆಸ್ ವಿಭಾಗ (6)ಆಹಾರ ಶಾಖೆ (7)ಪಾನ ನಿರೋದ ಸುದ್ದಿ ವಿಭಾಗ (8)ಅಸ್ಪಶ್ಯತಾ ನಿವಾರಣಾ ವಿಭಾಗ (9)ಸಿ.ಏ.ಆರ್. ಮತ್ತು ಮೋಟರ್ ವಾಹನಗಳ ವಿಭಾಗ (10) ಅಶ್ವಾರೋಹಿ ಪೊಲೀಸ್ ಪಡೆ ಮತ್ತು ಅನಶ್ವಾರೋಹಿ ಪೊಲೀಸ್ ಪಡೆ (11) ವಿಧಿವಿಜ್ನಾನ ಪ್ರಯೋಗಾಲಯ (12) ಬೆರಳಚ್ಚು ವಿಭಾಗ (13)ರಾಜ್ಯ ಕಾಯ್ದಿಟ್ಟ ಪೊಲೀಸ್ ವಿಭಾಗ (14) ಜಿಲ್ಲಾ ಸಶಸ್ತ್ರ ಪಡೆ, (15) ಗ್ರಹ ರಕ್ಷಕ ದಳ (16) ಅಶ್ರುವಾಯು ದಳ (17) ಪೊಲೀಸ್ ಬ್ಯಾಂಡ್ ಮತ್ತು (18) ಗ್ರಾಮ ರಕ್ಷಕ ದಳ ಇತ್ಯಾದಿ ವಿವಿಧ ಉಪವಿಭಾಗಗಳಿದ್ದು ಪ್ರತಿಯೊಂದು ಉಪವಿಭಾಗಗಳು ದೇಶದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ, ಅಪರಾಧಗಳನ್ನು ತಡೆಗಟ್ಟುವಲ್ಲಿ ಮತ್ತು ಅಪರಾಧಗಳನ್ನು ತನಿಕೆ ಮಾಡಿ ಅಪರಾಧಿಗಳಿಗೆ ನ್ಯಾಯಾಲಯದ ಮುಖಾಂತರ ಶಿಕ್ಷೆ ಕೊಡಿಸುವಲ್ಲಿ ಮತ್ತು ನಿರಪರಾಧಿಗಳ ಮೇಲಿನ ಅಪವಾದಗಳನ್ನು ವಿಮೋಚನೆಗೊಳಿಸಿ ನಾಗರಿಕರಿಗೆ ಸೂಕ್ತ ರಕ್ಷಣೆ ನೀಡುವ ಮೂಲಕ ಸಮಾಜದಲ್ಲಿ ಶಾಂತಿ, ಸುರಕ್ಷಿತ ಮತ್ತು ನೆಮ್ಮದಿಯ ಜೀವನವನ್ನು ಸಾಗಿಸುವರೇ ನೆರವಾಗುವಲ್ಲಿ ಅತ್ಯಂತ ಮಹತ್ವದ ಸ್ಥಾನ ಹೊಂದಿರುತ್ತದೆ.
ಪೊಲೀಸರು ತಮ್ಮ ಕಾರ್ಯದಲ್ಲಿ ನೈಪುಣ್ಯತೆಯನ್ನು ಹೊಂದಬೇಕಾದರೆ ಅವರು ಕೆಲವೊಂದು ಅರ್ಹತೆಗಳನ್ನು ಹೊಂದಿರಬೇಕಾಗಿರುತ್ತದೆ. ಒಳ್ಳೆಯ ಗುಣ ಮತ್ತು ಅನುಭವವನ್ನು ಹೊಂದಿರುವ ಪೋಲೀಸರು ತಮ್ಮ ಕರ್ತವ್ಯದಲ್ಲಿ ಯಶಸ್ಸನ್ನು ಗಳಿಸುವುದರಲ್ಲಿ ಸಂದೇಹವಿಲ್ಲ. ಸಾರ್ವಜನಿಕರು ಯಾವುದೇ ಅಪರಾಧ ಕೃತ್ಯದ ಬಗ್ಗೆ ಅಥವಾ ಅವ್ಯವಹಾರಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಪೋಲೀಸರಿಗೆ ನೀಡುವುದರಿಂದ ಪೊಲೀಸರು ತಮ್ಮ ಕರ್ತವ್ಯಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಸಹಾಯವಾಗುತ್ತದೆ.
ಪ್ರತಿಯೊಬ್ಬ ಪೊಲೀಸ್ ತನಗೆ ಮೇಲಾಧಿಕಾರಿಯಿಂದ ಅಥವಾ ನ್ಯಾಯಾಲಯದಿಂದ ನೀಡಲ್ಪಟ್ಟ ಸಮನ್ಸ್ ಅಥವಾ ವಾರಂಟ್‌ನ್ನು ಜಾರಿ ಮಾಡುವ, ತನ್ನ ಹಿರಿಯ ಅಧಿಕಾರಿಗಳ ನ್ಯಾಯ ಸಮ್ಮತವಾದ ಆಜ್ಞೆಗಳನ್ನು ನೆರವೇರಿಸುವ, ಅಪರಾಧಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುವ, ಅಪರಾಧಿಗಳನ್ನು ಶಿಕ್ಷಿಸಲು ಸೂಕ್ತ ಮಾಹಿತಿ ಒದಗಿಸಿ ಕಾನೂನು ರೀತಿಯ ಕ್ರಮ ಕೈಗೊಳ್ಳುವ, ಅಪರಾಧಿಗಳನ್ನು ಬಂಧಿಸುವ, ಅಪರಾಧಗಳನ್ನು ಮತ್ತು ಸಾರ್ವಜನಿಕ ಶಾಂತಿ ಭಂಗವನ್ನು ತಡೆಗಟ್ಟುವ, ಸಾರ್ವಜನಿಕರಿಗೆ ಉಂಟಾಗುವ ತೊಂದರೆಗಳನ್ನು ತಡೆಯುವ, ಸಮಾಜದಲ್ಲಿ ಶಾಂತಿ ನೆಲೆಸುವಂತೆ ಮಾಡುವ ಮತ್ತು ಪ್ರಜೆಗಳ ಆಸ್ತಿ, ಜೀವ ಮತ್ತು ಮಾನ ರಕ್ಷಣೆ ಮಾಡುವ ಸಾರ್ವಜನಿಕ ವಲಯದಲ್ಲಿನ ಅಸಭ್ಯ ವರ್ತನೆಗಳನ್ನು ಕೊನೆಗಾಣಿಸುವ, ಸಮಾಜದಲ್ಲಿನ ಅಕ್ರಮ, ಅನೈತಿಕ ಮತ್ತು ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಯುವ, ಸಾರ್ವಜನಿಕ ಸ್ಥಳದಲ್ಲಿ ವಾಹನಗಳನ್ನು ನಿಯಂತ್ರಿಸಿ ಸಾರ್ವಜನಿಕರಿಗೆ ರಸ್ತೆ ದಾಟುವ ಪೋಲೀಸರ ಬಂಧನದಲ್ಲಿರುವ ವ್ಯಕ್ತಿಗೆ ಕಾಯಿಲೆ ಅಥವ ನೋವು ಉಂಟಾದಲ್ಲಿ ಅವನಿಗೆ ಸೂಕ್ತ ವೈದ್ಯಕೀಯ ಸಹಾಯ ಕೊಡಿಸುವ ಬೆಂಕಿ ಅನಾಹುತಗಳ ಸಂದರ್ಭಗಳಲ್ಲಿ ಸಾರ್ವಜನಿಕರೊಂದಿಗೆ ಸಹಕರಿಸಿ ಆಸ್ತಿಪಾಸ್ತಿಗಳನ್ನು ರಕ್ಷಿಸುವ, ಸಾರ್ವಜನಿಕರಿಗೆ ಉಂಟಾಗುವ ಯಾವುದೇ ತೊಂದರೆ ಮತ್ತು ಅಪಾಯವನ್ನು ತಡೆಗಟ್ಟುವ, ಜಾತ್ರೆ, ಸಭೆ, ನಾಟಕ ಮತ್ತಿತರ ಸಾರ್ವಜನಿಕ ಕಾರ್ಯಕ್ರಮಗಳ ಸಂದರ್ಭಗಳಲ್ಲಿ ಜನರು ಶಿಸ್ತು ಬಧ್ದವಾಗಿ ಮತ್ತು ಶಾಂತಿಯುತವಾಗಿ ವರ್ತಿಸುವಂತೆ ಸೂಕ್ತ ಕ್ರಮ ಕೈಗೊಳ್ಳುವ, ರಸ್ತೆ ಸಂಚಾರಕ್ಕೆ ಅಡಚಣೆ ಉಂಟು ಮಾಡುವ ವಾರಿಸುದಾರರಿಲ್ಲದ ಯಾವುದೇ ಆಸ್ತಿ, ಸೊತ್ತು ಅಥವ ಪ್ರಾಣಿಗಳನ್ನು ತಮ್ಮ ವಶಕ್ಕೆ ಪಡೆಯುವ, ಬೀದಿಯಲ್ಲಿ ತಿರುಗಾಡುವ ಅನುಮಾನಾಸ್ಪದ ವ್ಯಕ್ತಿಗಳನ್ನು ವಿಚಾರಿಸಿ ಅಗತ್ಯವಿದ್ದಲ್ಲಿ ಯೋಗ್ಯ ಕ್ರಮ ಕೈಗೊಳ್ಳುವ, ಸಾರ್ವಜನಿಕ ಸ್ಥಳದಲ್ಲಿ ಜುಗಾರಿ ಮತ್ತಿತರ ಕಾನೂನು ಬಾಹಿರ ಕೃತ್ಯಗಳನ್ನು ತಡೆಗಟ್ಟುವ, ತಮಗೆ ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ತಮ್ಮ ಬೀಟಿಗೆ ಬೇಟಿ ನೀಡುವ ಕಾಣೆಯಾದ ವ್ಯಕ್ತಿಗಳನ್ನು ಅಥವ ಸ್ವತ್ತುಗಳನ್ನು ಹುಡುಕಿ ಸಂಬಂಧ ಪಟ್ಟವರಿಗೆ ಒಪ್ಪಿಸುವ ಇತ್ಯಾದಿ ಆದ್ಯ ಕರ್ತವ್ಯಗಳನ್ನು ನಿಷ್ಠೆಯಿಂದ ನಿಭಾಯಿಸುವುದು ಪೋಲೀಸರ ಆದ್ಯ ಕರ್ತವ್ಯವಾಗಿರುತ್ತದೆ. ಪೋಲೀಸರು ಸಹ ಈ ರೀತಿಯ ತಮ್ಮ ಕರ್ತವ್ಯವನ್ನು ನಿಭಾಯಿಸುವರೆ ಸೂಕ್ತ ಕಾನೂನು ಬಧ್ಧ ಅಧಿಕಾರವನ್ನು ಹೊಂದಿರುತ್ತಾರೆ. ಯಾವುದೇ ಪೊಲೀಸ್ ಅಧಿಕಾರಿ ತನ್ನ ವ್ಯಾಪ್ತಿಯೊಳಗಿನ ಕಾನೂನು ಬದ್ಧ ಅಧಿಕಾರವನ್ನು ಮತ್ತು ಕರ್ತವ್ಯವನ್ನು ನಿರ್ವಹಿಸಲು ಸಾರ್ವಜನಿಕರೊಂದಿಗೆ ಉತ್ತಮ ಭಾಂದವ್ಯವನ್ನು ಹೊಂದಿರುವುದು ಅಗತ್ಯವಾಗಿರುತ್ತದೆ. ತಮ್ಮ ವಿವಿಧ ರೀತಿಯ ಸಮಸ್ಯೆಗಳ ಪರಿಹಾರಗಳಿಗಾಗಿ ಪೊಲೀಸ್ ಠಾಣೆಗೆ ಬರುವ ಸಾರ್ವಜನಿಕರೊಂದಿಗೆ ತಾಳ್ಮೆಯಿಂದ ವರ್ತಿಸಿ, ಗೌರವ ನೀಡಿ ನಿಷ್ಪಕ್ಷಪಾತವಾಗಿ ಅವರ ಸಮಸ್ಯೆಗಳನ್ನು ಕಾನೂನಿನ ಚೌಕಟ್ಟಿನ ಒಳಗೆ ವಿಲೇವಾರಿ ಮಾಡುವುದು ಒಳ್ಳೆಯ ಪೋಲೀಸ್ ಅಧಿಕಾರಿ ಹೊಂದಿರಬೇಕಾದ ಮುಖ್ಯ ಜವಾಬ್ಧಾರಿಯಾಗಿರುತ್ತದೆ.























