‘ಸ್ಟಾರ್ ಪಟ್ಟ ಶಾಪ ನನಗೆ’ ಎಂದು ರಜನೀಕಾಂತ್ ಹೇಳಿದ್ದು ಯಾಕೆ?
ಸೂಪರ್ ಸ್ಟಾರ್ ರಜನಿಕಾಂತ್ ಬಗ್ಗೆ ಎಷ್ಟು ಬರೆದರೂ ಅದು ಮುಗಿದು ಹೋಗುವುದಿಲ್ಲ!
ಒಬ್ಬ ಮಹಾನ್ ನಟ, ತನ್ನ ಅಭಿಮಾನಿಗಳ ಹೃದಯ ಸಾಮ್ರಾಟ, ಭಾರತದ ಅತೀ ದೊಡ್ಡ ಸೂಪರ್ ಸ್ಟಾರ್, ಜಗತ್ತಿನಾದ್ಯಂತ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿದ ನಟ, ಏಷಿಯಾದಲ್ಲಿ ಎರಡನೇ ಅತೀ ಹೆಚ್ಚು ಸಂಭಾವನೆ ಪಡೆಯುವ ನಟ, ವಿದೇಶಗಳಲ್ಲಿ ಕೋಟಿ ಕೋಟಿ ಬಿಸಿನೆಸ್ ಮಾಡುವ ಸಿನೆಮಾಗಳ ಹೀರೋ, ಜಪಾನೀಸ್, ಚೈನೀಸ್ ಮೊದಲಾದ ಭಾಷೆಗಳಿಗೆ ಅವರ ಸಿನೆಮಾ ಡಬ್ ಆಗಿ ಜನಪ್ರಿಯತೆ ಪಡೆದ ಭಾರತದ ಏಕೈಕ ಸ್ಟಾರ್, ತನ್ನ ಸಿನೆಮಾ ಬಿಡುಗಡೆ ಆಗುವ ಮೊದಲ ದಿನವೇ 100 ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡುವ ಮಾಸ್ ಹೀರೋ………..ಇನ್ನೂ ನೂರಾರು ವಿಶೇಷಣಗಳು ರಜನಿಕಾಂತ್‌ಗೆ ಇವೆ! ಅವರು ಈ ಎಲ್ಲಾ ವಿಶೇಷಣಗಳನ್ನು ಮೀರಿ ನಿಂತವರು ಅನ್ನುವುದು ನನ್ನ ಅಭಿಪ್ರಾಯ.

ರಜನಿ ಸಿನೆಮಾಕ್ಕೆ ಬಂದು 50 ವರ್ಷಗಳು ಪೂರ್ತಿ ಆದವು!
1975ರ ಆಗಸ್ಟ್ 15ರಂದು ತಮಿಳಿನ ಸ್ಟಾರ್ ನಿರ್ದೇಶಕ ಕೆ. ಬಾಲಚಂದರ್ ನಿರ್ದೇಶನದ ಸಿನೆಮಾ ಅಪೂರ್ವ ರಾಗಂಗಳ್ ಬಿಡುಗಡೆ ಆಗಿತ್ತು. ಅದು ಕಮಲ್ ಹಾಸನ್ ಹೀರೋ ಆಗಿದ್ದ ಸಿನೆಮಾ. ಅದರಲ್ಲಿ ಶಕ್ತಿಶಾಲಿಯಾದ ಒಂದು ಪಾತ್ರವನ್ನು ಕಪ್ಪು ಚರ್ಮದ ಓರ್ವ ಯುವಕ ಮಾಡಿದ್ದನು. ಆತನು ಮುಂದೆ ಇತಿಹಾಸ ಬರೆಯುತ್ತಾನೆ ಎಂದು ಕೆ. ಬಾಲಚಂದರ್ ಅವರಿಗೆ ಖಚಿತವಾಗಿ ಗೊತ್ತಿತ್ತು ಅನ್ನಿಸುತ್ತದೆ. ಸಿನೆಮಾದಲ್ಲಿ ಆತನ ಎಂಟ್ರಿ ಸೀನ್ ಅದ್ಭುತವಾಗಿತ್ತು. ಎರಡು ಗೇಟ್ ಜೊತೆಯಾಗಿ ಓಪನ್ ಮಾಡಿ ಬಲಗಾಲು ಮೊದಲಿಟ್ಟು ಒಳಗೆ ಬರುವ ದೃಶ್ಯ ಅದು! ಒಬ್ಬ ಸೂಪರ್ ಸ್ಟಾರ್ ಲಾಂಚ್ ಅದ ದೃಶ್ಯ ಅದು. ಅದಕ್ಕೂ ಮೊದಲು ಪುಟ್ಟಣ್ಣ ಕಣಗಾಲ್ ನಿರ್ದೇಶನ ಮಾಡಿದ ಕಥಾ ಸಂಗಮ ಕನ್ನಡ ಸಿನೆಮಾದಲ್ಲಿ ಆತ ಮುನಿ ತಾಯಿ ಪಾತ್ರವನ್ನು ಮಾಡಿದ್ದನು. ಆದರೆ ಅದು ಬಿಡುಗಡೆ ಆಗುವುದು ತಡವಾದ ಕಾರಣ ಅದು ಆತನ ಎರಡನೇ ಸಿನೆಮಾ ಆಯಿತು.
ಸೂಪರ್ ಸ್ಟಾರಗೆ ಈಗ 74 ವರ್ಷ!
ಆತ ಸಿನೆಮಾಕ್ಕೆ ಬಂದು 50 ವರ್ಷ ಪೂರ್ತಿ ಆಯಿತು. ನಾನು ಇನ್ನೂ ನಿನ್ನೆ ಅಥವಾ ಮೊನ್ನೆ ಬಂದ ಹಾಗೆ ಅನ್ನಿಸುತ್ತದೆ ಎನ್ನುತ್ತಾರೆ ಅವರು. 171 ಅತ್ಯಂತ ಯಶಸ್ವೀಯಾದ ಸಿನೆಮಾಗಳು ಆತನ ಲಿಸ್ಟಲ್ಲಿ ಇವೆ! ಭಾರತದ ಯಾವ ಸ್ಟಾರ್ ನಟನೂ ಏರಲಾಗದ ಎತ್ತರವನ್ನು ಆತ ಏರಿ ಆಗಿದೆ! ಕಳೆದ ವರ್ಷ ಬಿಡುಗಡೆಯಾದ ಜೈಲರ್ ಸಿನೆಮಾ ಮೊದಲ ದಿನ 74 ಕೋಟಿ ಕಮಾಯಿ ಮಾಡಿತ್ತು. ಮೊನ್ನೆ ಬಿಡುಗಡೆಯಾದ ಕೂಲಿ ಮೊದಲ ದಿನದ ಕಮಾಯಿ ನೂರು ಕೋಟಿ ದಾಟಿದೆ! 12 ಲಕ್ಷ ಟಿಕೆಟುಗಳು ಬಿಡುಗಡೆಗೆ ಮೊದಲೇ ಮಾರಾಟ ಆಗಿವೆ. ಜಪಾನ್ ಮತ್ತು ಚೀನಾದಲ್ಲಿ ಈ ಸಿನೆಮಾ ಬಿಡುಗಡೆ ಆಗಿದೆ. ಆದರೆ ಅಲ್ಲಿನ ಸಾವಿರಾರು ಜನರು ವಿಮಾನದಲ್ಲಿ ಭಾರತಕ್ಕೆ ಆತನ ಸಿನೆಮಾ ನೋಡುವುದಕ್ಕಾಗಿ ಬರುತ್ತಾರೆ ಅಂದರೆ ಅದು ರಜನಿಕಾಂತ್ ತಾಕತ್ತು! ಚೆನ್ನೈ ನಗರದಲ್ಲಿ 24 ಘಂಟೆ ಥಿಯೇಟರಗಳು ರಜನಿ ಸಿನೆಮಾ ತೋರಿಸುತ್ತಿವೆ. ಟಿಕೆಟ್ ಸಿಗದವರು ನೆಲದ ಮೇಲೆ ಕೂತು ಶಿಳ್ಳೆ ಹೊಡೆದು ಸಿನೆಮಾ ನೋಡುತ್ತಾರೆ! ಆತನೊಟ್ಟಿಗೆ ಕುಣಿಯುತ್ತಾರೆ ಮತ್ತು ಸಂಭ್ರಮ ಪಡುತ್ತಾರೆ.
ಸ್ಟಾರ್ ಪಟ್ಟ ನನಗೆ ಶಾಪ ಅಂದರು ರಜನಿ!
ಈ ಸ್ಟಾರ್ ಪಟ್ಟವು ನನಗೆ ಸೆರೆಮನೆ ಆಗಿದೆ. ನಾನು ರಸ್ತೆಗೆ ಬಂದರೆ ಸಾಕು ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ನನ್ನಲ್ಲಿ ದೇವರನ್ನು ಹುಡುಕುತ್ತಾರೆ. ಅದು ನನಗೆ ಮುಜುಗರ ತರುವ ಸಂಗತಿ. ರಸ್ತೆ ಬದಿಯ ಸಣ್ಣ ಅಂಗಡಿಯಲ್ಲಿ ಪಾನಿ ಪುರಿ ತಿನ್ನಬೇಕು ಎಂದು ಎಷ್ಟೋ ಬಾರಿ ಆಸೆಯಾಗ್ತದೆ. ಆದರೆ ಆಗ್ತಾ ಇಲ್ಲ. ಎಷ್ಟೋ ಬಾರಿ ನಾನು ಮತ್ತು ನನ್ನ ಗೆಳೆಯ ರಾಜ ಬಹಾದ್ದೂರ್ ಸೇರಿ ವೇಷ ಮರೆಸಿಕೊಂಡು ಸುತ್ತಾಡುತ್ತೇವೆ. ಎಲ್ಲೆಂದರಲ್ಲಿ ತಿರುಗಾಡುತ್ತೇವೆ. ಸಿಕ್ಕಿದ್ದನ್ನು ತಿಂದು ಖುಷಿ ಪಡುತ್ತೇವೆ. ಎಲ್ಲೆಲ್ಲೋ ಮೈ ಚಾಚಿ ಮಲಗುತ್ತೇವೆ. ನನಗೆ ಅಂತಹ ಬದುಕೇ ಇಷ್ಟ. ಜನರ ಮಧ್ಯೆಯೇ ಯಾವಾಗಲೂ ಇರಲು ಬಯಸುತ್ತೇನೆ. ಆದರೆ ಈ ಸ್ಟಾರ್ ಪಟ್ಟದಿಂದ ಹೊರಬರಲು ಆಗದೇ ಒದ್ದಾಡುತ್ತಿದ್ದೇನೆ.
ನನ್ನ ಕಣ್ಣುಗಳೇ ನನ್ನ ಆಸ್ತಿ!
ನನಗೆ ಗೊತ್ತಿಲ್ಲ. ನನ್ನ ಗುರು ಕೆ. ಬಾಲಚಂದರ್ ಅವರು ಹೇಳುತ್ತಿದ್ದರು ‘ನಿನ್ನ ಕಣ್ಣುಗಳೇ ನಿನ್ನ ಆಸ್ತಿ ಎಂದು. ನನ್ನ ಭಾವನೆಗಳನ್ನು ನಾನು ಕಣ್ಣುಗಳ ಮೂಲಕ ಸರಿಯಾಗಿ ಅಭಿವ್ಯಕ್ತ ಮಾಡುತ್ತೇನೆ ಎನ್ನುವುದು ನನ್ನ ನಂಬಿಕೆ. ಜೈಲರ್ ಸಿನೆಮಾದಲ್ಲಿ ನೆಲ್ಸನ್ ಅದನ್ನೇ ಚೆನ್ನಾಗಿ ಉಪಯೋಗ ಮಾಡಿದ್ದಾರೆ. ಈ ಕೂಲಿ ಸಿನೆಮಾದಲ್ಲಿ ಲೋಕೇಶ್ ಕನಕರಾಜ್ ಇಡೀ ಪರದೆಯಲ್ಲಿ ನನ್ನ ಕಣ್ಣುಗಳನ್ನೇ ತೋರಿಸುವಾಗ ನಾನೇ ಬೆಚ್ಚಿಬೀಳುತ್ತೇನೆ!
ನಾನು ನಿರ್ದೇಶಕರ ನಟ, ಅವರ ಕೈಗೊಂಬೆ, ಸ್ಟಾರ್ ಅಲ್ಲ!
ನನ್ನ ಗುರುಗಳಾದ ಕೆ. ಬಾಲಚಂದರ್ ನನ್ನನ್ನು ಬೆಳೆಸಿದವರು. ಅವರಿಗೆ ನಾನು ಮತ್ತು ಕಮಲಹಾಸನ್ ಸೇರಿ ಪಾದ ಪೂಜೆ ಮಾಡಿ ಸುವರ್ಣ ಅಭಿಷೇಕ ಮಾಡಿದ್ದೇವೆ. ಹಾಗೆಯೇ ಖ್ಯಾತ ನಿರ್ದೇಶಕರಾದ ಪುಟ್ಟಣ್ಣ ಕಣಗಾಲ್, ಬಾಲು ಮಹೇಂದ್ರ, ಮಣಿರತ್ನಮ್, ಭಾರತೀರಾಜ, ಶಂಕರ್, ರಾಮನಾಥನ್ ಮೊದಲಾದವರು ನನ್ನನ್ನು ಬೆಳೆಸಿದವರು. ಅವರು ಹೇಳಿದ್ದನ್ನು ಮಾಡುವುದು ಮಾತ್ರ ನನ್ನ ಕೆಲಸ. ನನ್ನ ಪಾತ್ರವನ್ನು ವಿಜೃಂಭಿಸುವುದು ಬೇಡ ಎಂದು ಎಲ್ಲರಿಗೂ ನಾನು ಹೇಳುತ್ತೇನೆ. ಆದರೆ ಅಭಿಮಾನಿಗಳು ಬಿಡಬೇಕಲ್ಲ? 74 ವರ್ಷ ಆಗಿದೆ ನನಗೆ. ಮನಸ್ಸು ಹೇಳಿದ್ದನ್ನು ದೇಹವು ಕೇಳುವುದಿಲ್ಲ. ನಾನು ಈ ವಯಸ್ಸಿನಲ್ಲಿ ಕೂಡ ಡ್ಯಾನ್ಸ್, ಫೈಟ್ ಮಾಡಬೇಕು ಎಂದು ನನ್ನ ಅಭಿಮಾನಿಗಳು ಆಸೆ ಪಡುತ್ತಾರೆ. ರೋಮಾನ್ಸ್ ಮಾಡಬೇಕು ಅಂತಾರೆ. ಆದರೆ ಅದು ಆಗ್ತದಾ?
ಸಿನೆಮಾ ಲಾಸ್ ಆದಾಗ ನಿರ್ಮಾಪಕರಿಗೆ ನಷ್ಟ ತುಂಬಿ ಕೊಟ್ಟಿದ್ದೇನೆ
2002ರಲ್ಲಿ ನಾನೇ ಸ್ಕ್ರಿಪ್ಟ್ ಬರೆದು ‘ಬಾಬಾ’ ಎಂಬ ಸಿನೆಮಾ ಮಾಡಿದ್ದೆ. ನಾನು ಹಿಮಾಲಯದಲ್ಲಿ ಕುಳಿತು ಬರೆದ ಸ್ಕ್ರಿಪ್ಟ್ ಅದು. ಸಿನೆಮಾ ಚೆನ್ನಾಗಿತ್ತು. ಆದರೆ ಜನರಿಗೆ ಇಷ್ಟ ಆಗಲಿಲ್ಲ. ಸಿನೆಮಾ ದೊಡ್ಡ ಫ್ಲಾಪ್ ಆಯ್ತು. ಆಗ ನಿರ್ಮಾಪಕರಿಗೆ, ವಿತರಕರಿಗೆ ಆದ ನಷ್ಟವನ್ನು ತುಂಬಿಸಿ ಕೊಟ್ಟಿದ್ದೇನೆ. ಹೀಗೆ ಹಲವು ನಿರ್ಮಾಪಕರಿಗೆ ನಷ್ಟವಾದಾಗ ಸಹಾಯ ಮಾಡಿದ್ದೇನೆ. ಹಂಚಿಕೆದಾರರಿಗೆ ನಷ್ಟವಾದ ದುಡ್ಡು ತುಂಬಿಸಿ ಕೊಟ್ಟಿದ್ದೇನೆ. ನನಗೆ ದುಡ್ಡು ಆದ್ಯತೆ ಅಲ್ಲ. ನಾನು ಸತ್ತ ನಂತರ ನನ್ನ ಎಲ್ಲ ಆಸ್ತಿಯೂ ಚಾರಿಟಿಗೆ ಬಳಕೆ ಆಗಬೇಕು ಎನ್ನುವುದು ನನ್ನ ಆಸೆ.
ಗೆಳೆತನದ ಕಾರಣಕ್ಕೆ ನಾನು ಹಲವು ಸಿನೆಮಾಗಳಲ್ಲಿ ಅತಿಥಿ ನಟನಾಗಿ ಅಭಿನಯಿಸಿದ್ದು ಇದೆ. ವಿಶೇಷವಾಗಿ ಹೊಸ ನಟರ ಸಿನೆಮಾಗಳಿಗೆ ಬೆಂಬಲ ಕೊಡುವುದು ನನ್ನ ಉದ್ದೇಶ. ಆಗೆಲ್ಲ ಕೇವಲ ಒಂದು ರೂಪಾಯಿ ಸಂಭಾವನೆ ಪಡೆದು ಅಭಿನಯ ಮಾಡಿದ್ದೇನೆ. ನನ್ನ ಹೆಂಡತಿ ಲತಾ ಬಡಮಕ್ಕಳಿಗಾಗಿ ಒಂದು ಶಾಲೆಯನ್ನೇ ನಡೆಸುತ್ತಿದ್ದಾರೆ.
ಮನಶ್ಯಾಂತಿ ಹುಡುಕಿಕೊಂಡು ಹಿಮಾಲಯಕ್ಕೆ
ನನಗೆ ಚಿಕ್ಕಂದಿನಿಂದ ಆಧ್ಯಾತ್ಮದ ಸೆಳೆತ ಹೆಚ್ಚು. ರಾಮಕೃಷ್ಣ ಪರಮಹಂಸ, ರಾಘವೇಂದ್ರ ಸ್ವಾಮಿಗಳು ನನ್ನ ಮೇಲೆ ದಟ್ಟವಾದ ಪ್ರಭಾವ ಬೀರಿದ್ದಾರೆ. ನಾನು ರಾಘವೇಂದ್ರ ಸ್ವಾಮಿ ಅವರ ಪಾತ್ರವನ್ನು ಒಮ್ಮೆ ಮಾಡಿದ್ದು ನನಗೆ ಲೈಫ್ ಟೈಮ್ ಮೆಮೊರಿ. ಎಷ್ಟೋ ಬಾರಿ ನಾನು ಒತ್ತಡ ಆದಾಗ ಮನಶ್ಯಾಂತಿ ಹುಡುಕಿಕೊಂಡು ಹಿಮಾಲಯಕ್ಕೆ ಹೋಗ್ತೇನೆ. ಅಲ್ಲಿ ಹೃಷಿಕೇಶದಲ್ಲಿ ಇರುವ ಆಶ್ರಮಗಳಲ್ಲಿ ಸಂತರ, ಮಹಂತರ ಸೇವೆ ಮಾಡುತ್ತಾ ಕಾಲ ಕಳೆಯುತ್ತೇನೆ. ಧ್ಯಾನ ಮಾಡುತ್ತೇನೆ. ಒತ್ತಡ ಆದಾಗಲೆಲ್ಲ ವೇಷ ಮರೆಸಿಕೊಂಡು ಪುಣ್ಯಕ್ಷೇತ್ರಗಳಿಗೆ ಭೇಟಿ ಕೊಡುತ್ತೇನೆ. ನಾನು ಇಷ್ಟೆಲ್ಲ ಸಾಧನೆ ಮಾಡಲು ಕಾರಣ ಆದದ್ದೇ ದೇವರ ಆಶೀರ್ವಾದ. ಬಾಬಾ ನನ್ನದೇ ಬದುಕಿನ ಕಥೆ. ನನಗೆ ತುಂಬಾ ಇಷ್ಟವಾದ ಸಿನೆಮಾ ಅದು.
ಸ್ಮೋಕಿಂಗ್ ಮತ್ತು ಆಲ್ಕೋಹಾಲ್ ನನ್ನನ್ನು ಖಾಲಿ ಮಾಡಿತು
ಬಾಲ್ಯದಲ್ಲಿ ಅಮ್ಮನ ಪ್ರೀತಿ ಕಳೆದುಕೊಂಡೆ. ಆ ಕೊರತೆ ನನ್ನನ್ನು ಭಾವಜೀವಿಯಾಗಿ ಮಾಡಿತು. ಯೌವ್ವನದಲ್ಲಿ ಕುಡಿತ ಮತ್ತು ಸ್ಮೋಕಿಂಗ್ ನನ್ನನ್ನು ಖಾಲಿ ಮಾಡಿತು. ಸ್ಕ್ರೀನ್ ಮೇಲೆ ಸುರುಳಿ ಸುರುಳಿ ಆಗಿ ಹೊಗೆ ಬಿಡುವಾಗ ಥ್ರಿಲ್ ಆಗುತ್ತಿತ್ತು. ನನ್ನ ಅಭಿಮಾನಿಗಳಿಗೂ ಅದೇ ಬೇಕಾದದ್ದು. ಆದರೆ ಅವೆರಡೂ ನನ್ನ ಆರೋಗ್ಯವನ್ನು ಖಾಲಿ ಮಾಡಿದವು. ಹಲವು ಬಾರಿ ಆರೋಗ್ಯವನ್ನು ಕೆಡಿಸಿಕೊಂಡು ಆಸ್ಪತ್ರೆಗೆ ಸೇರಿದ್ದೇನೆ. ನನಗೆ ಒಂದು ಕೆಮ್ಮು ಬಂದರೂ ಸಾಕು , ಅಭಿಮಾನಿಗಳು ಮನೆಯ ಮುಂದೆ ಬಂದು ಸೇರುತ್ತಾರೆ. ಅದು ನನ್ನ ಆತಂಕಕ್ಕೆ ಕಾರಣ. ನಾನು ನನ್ನ ಎಲ್ಲ ಯುವ ಸ್ನೇಹಿತರಿಗೆ ಹೇಳುವ ಪ್ರೀತಿಯ ಎಚ್ಚರಿಕೆ ಏನೆಂದರೆ ಕುಡಿತ, ಜೂಜು ಬೇಡವೇ ಬೇಡ. ಅದು ನಿಮ್ಮನ್ನೂ, ನಿಮ್ಮ ಸಂಸಾರವನ್ನೂ ನಾಶ ಮಾಡುತ್ತದೆ.
CBSE ಪಠ್ಯದಲ್ಲಿ ನನ್ನ ಕತೆ ಇದೆ!
ನಾನು ಕಲಿಯುವುದರಲ್ಲಿ ಸಾಧಾರಣ ವಿದ್ಯಾರ್ಥಿಯಾಗಿದ್ದೆ. ನಾನು ತುಂಬಾ ಓದಬೇಕು ಎಂದು ನನ್ನ ಅಣ್ಣಂದಿರು ಆಸೆ ಪಡುತ್ತಿದ್ದರು. ಆದರೆ ನನ್ನ ಆಸಕ್ತಿ ಬೇರೆಯೇ ಇತ್ತು. ನನ್ನ ಅಣ್ಣ ಆ ಕಾಲಕ್ಕೆ ದೊಡ್ಡ ಮೊತ್ತವಾದ 170 ರೂ. ದುಡಿದು ತಂದು ನನ್ನ ಪರೀಕ್ಷಾ ಫೀಸ್ ತುಂಬಿಸಿದ್ದರು. ಪರೀಕ್ಷೆ ಎದುರಿಸುವ ಧೈರ್ಯ ಇಲ್ಲದೆ ನಾನು ಚೆನ್ನೈಗೆ ಓಡಿಹೋಗಿದ್ದೆ. ಅಲ್ಲಿ ಯಾವುದೇ ಸರಿಯಾದ ಉದ್ಯೋಗ ದೊರೆಯದೆ ಹೋದಾಗ ಸೋತು ಮತ್ತೆ ಮನೆಗೆ ಬಂದಾಗ ನನ್ನ ಅಪ್ಪ ಮತ್ತು ಅಣ್ಣಂದಿರು ನನ್ನ ಹತ್ತಿರ ಮಾತಾಡುವುದನ್ನೇ ಬಿಟ್ಟರು! ಹಾಗೆ ಶಿಕ್ಷಣವನ್ನು ಅರ್ಧದಲ್ಲಿ ಬಿಟ್ಟ ನನ್ನ ಬದುಕಿನ ಕತೆಯು ಈಗ CBSE ಪಠ್ಯದಲ್ಲಿ ಸೇರ್ಪಡೆ ಆಗಿದೆ! ನನ್ನ ಬದುಕು ಯಾರಿಗೂ ಮಾದರಿ ಆಗೋದು ಬೇಡ. ಬಸ್ ಕಂಡಕ್ಟರ್ ಆಗಿದ್ದವನು ಸೂಪರ್ ಸ್ಟಾರ್ ಆದ ಅನ್ನೋದು ಯಶಸ್ಸು ಅಲ್ಲ. ನಾನು ಎಷ್ಟು ಜನರ ಬದುಕಿನಲ್ಲಿ ಬೆಳಕು ತುಂಬಿದ್ದೇನೆ ಅನ್ನೋದು ಯಶಸ್ಸು!
ಸರಳವಾಗಿ ಬದುಕುವುದು ನನಗೆ ಇಷ್ಟ. ತೆರೆಯ ಮೇಲೆ ನನ್ನ ಅಭಿಮಾನಿಗಳಿಗೆ ಹೇಗೆ ಬೇಕೋ ಹಾಗೆ ನಾನು ಇರಬೇಕು. ಆದರೆ ನಿಜ ಜೀವನದಲ್ಲಿ ನನಗೆ ಹೇಗಿರಬೇಕು ಅನ್ನಿಸುತ್ತದೆಯೋ ಹಾಗೆ ನಾನಿರಬೇಕು. ಆ ಎರಡು ಲೈಫ್ ನಡುವೆ ಇರುವ ಗೆರೆ ನಾನು ದಾಟಬಾರದು. ತುಂಬಾ ಸರಳವಾದ ಊಟ, ಡ್ರೆಸ್, ನಡೆ, ನುಡಿ ನನ್ನನ್ನು ಖುಷಿಯಾಗಿ ಇಡುತ್ತದೆ. ನನ್ನ ಇಮೇಜಿಗೆ ಹೊರತಾಗಿ ಕೆಲವು ಸಿನೆಮಾ ಮಾಡಬೇಕು ಎಂದು ಆಸೆ ಇದೆ. ಹೊಸ ನಿರ್ದೇಶಕರ ಜೊತೆ ಕೆಲಸ ಮಾಡಬೇಕು ಎಂದು ಆಸೆ ಇದೆ. ನೂರಾರು ಕನಸು ಬಾಕಿ ಇದೆ. ದೇವರು ಆಯಸ್ಸನ್ನು ಕೊಟ್ಟರೆ ಎಲ್ಲವನ್ನೂ ಮಾಡುತ್ತೇನೆ.
ಕೂಲಿ – ನನ್ನ ಬದುಕಿಗೆ ಹತ್ತಿರವಾದ ಸಿನೆಮಾ
ಯಾಕೆಂದರೆ ಶಿಕ್ಷಣವನ್ನು ಅರ್ಧದಲ್ಲಿ ಬಿಟ್ಟುಬಂದ ನನ್ನನ್ನು ಮನೆಯವರು ಕೂಲಿ ಕೆಲಸಕ್ಕೆ ಸೇರಿಸಿದರು. ಅಲ್ಲಿ ಸಣಕಲು ಶರೀರದ ನಾನು ನೂರು ಕೆಜಿ ತೂಕದ ಮೂಟೆಗಳನ್ನು ಹೊರಬೇಕಾಗಿತ್ತು. ಒಂದು ಮೂಟೆ ಲೋಡ್ ಮಾಡಿದರೆ ಹತ್ತು ಪೈಸೆ ಕೂಲಿ! ದಿನಕ್ಕೆ ಆಗ ಹತ್ತು ರೂಪಾಯಿ ಸಂಪಾದನೆ ಆದರೆ ಹೆಚ್ಚು! ಎಷ್ಟೋ ಬಾರಿ ಹಸಿವು, ನಿಶ್ಯಕ್ತಿ ಆಗಿ ತಲೆ ತಿರುಗಿ ಬಿದ್ದ ಘಟನೆಗಳು ನಡೆದಿದ್ದವು. ಆಗ ನಡೆದ ಕೆಲವು ಘಟನೆಗಳು ಕೂಲಿ ಸಿನೆಮಾದಲ್ಲಿ ಇವೆ. ಆದ್ದರಿಂದ ಇದು ನನ್ನದೇ ಕಥೆ. ಮುಂದೆ ಬೆಂಗಳೂರಿನಲ್ಲಿ ಕಂಡಕ್ಟರ್ ಆಗಿ ಹಲವು ವರ್ಷ ದುಡಿದೆ. ಆಗ ನನ್ನ ಅಭಿನಯ ಸಾಮರ್ಥ್ಯವನ್ನು ಗುರುತಿಸಿದ ನನ್ನ ಕೆಲವು ಸ್ನೇಹಿತರು ದುಡ್ಡು ಒಟ್ಟು ಮಾಡಿ ನನ್ನನ್ನು ಫಿಲಂ ಇನಸ್ಟಿಟ್ಯೂಟ್ ಅಭಿನಯವನ್ನು ಕಲಿಯಲು ಕಳುಹಿಸಿಕೊಟ್ಟಿದ್ದರು. ಅವರ ಉಪಕಾರವನ್ನು ನಾನು ಮರೆಯುವುದು ಹೇಗೆ? ಕೂಲಿಯಾಗಿ ಉದ್ಯೋಗ ಆರಂಭ ಮಾಡಿದ್ದ ನಾನು ಇಂದು ಅಭಿಮಾನಿಗಳ ಪ್ರೀತಿಯ ಕೂಲಿ ಆಗಿ ನಿಂತಿದ್ದೇನೆ.
ಯಾವುದೇ ಸಿನೆಮಾದಲ್ಲಿ ರಜನಿ ಸಾಯುವುದಿಲ್ಲ!
ತುಂಬಾ ವರ್ಷಗಳ ಹಿಂದೆ ಯಾವುದೋ ಒಂದು ಸಿನೆಮಾದಲ್ಲಿ ನಾನು ಸಾಯುವ ದೃಶ್ಯ ಇತ್ತು. ಅದು ನನ್ನ ಅಭಿಮಾನಿಗಳಿಗೆ ಸಿಟ್ಟು ತಂದಿತು. ಅವರು ಥಿಯೇಟರಿಗೆ ಬೆಂಕಿ ಹಚ್ಚಿದ್ದರು. ನಂತರ ನಾನು ಯಾವುದೇ ಸಿನೆಮಾದಲ್ಲಿ ಸಾಯುವ ದೃಶ್ಯ ಇರುವುದಿಲ್ಲ. ಶಿವಾಜಿ ಸಿನೆಮಾದಲ್ಲಿ ನಾನು ಒಮ್ಮೆ ಸಾಯುತ್ತೇನೆ, ಆದರೆ ಮತ್ತೆ ಎದ್ದು ಬರುತ್ತೇನೆ. ಅದು ವಿದೇಶದಲ್ಲಿ ಅತೀ ಹೆಚ್ಚು ದುಡ್ಡು ಗಳಿಕೆ ಮಾಡಿದ ಭಾರತೀಯ ಸಿನೆಮಾ ಎಂಬ ಕೀರ್ತಿಯನ್ನು ಪಡೆಯಿತು. ಶಿವಾಜಿ ನನ್ನ ಕನಸುಗಳ ಸಿನೆಮಾ. ನಾನು ಏನೆಲ್ಲಾ ಬದುಕಿನಲ್ಲಿ ಮಾಡಬೇಕು ಎಂದು ಕನಸು ಕಂಡಿದ್ದೆ ಎಲ್ಲವನ್ನೂ ಆ ಸಿನೆಮಾದಲ್ಲಿ ಪೂರ್ತಿ ಮಾಡಿದ್ದೇನೆ.
ಎಂದಿರನ್ (ರೋಬೋಟ್) ಹತ್ತಾರು ವಿದೇಶದ ಭಾಷೆಗಳಿಗೆ ಡಬ್ ಆಗಿತ್ತು. ಅದು ನನಗೆ ನಿಜವಾಗಿ ಸವಾಲಿನ ಪಾತ್ರವೇ ಆಗಿತ್ತು. ಗೆಲ್ಲಿಸಿದ್ದು ದೇವರೇ ಹೊರತು ನಾನಲ್ಲ! ಅದೇ ರೀತಿ ನಾನು ಯಾವುದೇ ಸಿನೆಮಾದಲ್ಲಿ ಅರೆಸ್ಟ್ ಆಗುವುದನ್ನು ಕೂಡ ಅಭಿಮಾನಿಗಳು ಇಷ್ಟ ಪಡುವುದಿಲ್ಲ. (ಜೈಲರ್ ಸಿನೆಮಾದಲ್ಲಿ ಸಾಲು ಸಾಲು ಕ್ರಿಮಿನಲಗಳ ಕೊಲೆ ಮಾಡುವ ರಜನೀಕಾಂತ್ ಕೊನೆಗೂ ಅರೆಸ್ಟ್ ಆಗುವುದಿಲ್ಲ. ಪೊಲೀಸರಿಗೆ ಸರೆಂಡರ್ ಕೂಡ ಆಗುವುದಿಲ್ಲ. ಹಾಗೆ ಮಾಡುವುದು ಅವರ ಅಭಿಮಾನಿಗಳಿಗೆ ಇಷ್ಟ ಆಗುವುದಿಲ್ಲ)
ಅಭಿಮಾನಿಗಳಿಗಾಗಿ ತನ್ನ ಬದುಕು ಮತ್ತು ತನಗಾಗಿ ತನ್ನ ಬದುಕನ್ನು ಪ್ರತ್ಯೇಕವಾಗಿ ನೋಡಿ ಸರಿಯಾಗಿ ನಿರ್ವಹಣೆ ಮಾಡಲು ಕಲಿತಿರುವ ರಜನೀಕಾಂತ್ ನಿಜಕ್ಕೂ ಗ್ರೇಟ್ ಅಲ್ಲವಾ?




















