ವಾಯು (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯ್ದೆ 1981

ಕೈಗಾರಿಕೀಕರಣವು ವಿಸ್ತಾರಗೊಂಡಂತೆ ದೇಶದಲ್ಲಿ ವಾಯು ಮಾಲಿನ್ಯದ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಿ ವಿವಿಧ ಕೈಗಾರಿಕಾ ಘಟಕಗಳಿಂದ, ಸಂಚಾರ, ತಾಪನ, ಗೃಹ ಬಳಕೆಯ ಇಂಧನ ಬಳಕೆ, ಕಸ, ದಹನ ಇತ್ಯಾದಿಗಳಿಗೆ ಸಂಬಂಧಿಸಿದ ಕೆಲವು ಮಾನವ ಚಟುವಟಿಕೆಗಳಿಂದ ಹೊರಹಾಕಲ್ಪಡುವ ವಿವಿಧ ಮಾಲಿನ್ಯಕಾರಕಗಳಿಂದ ಉಂಟಾಗುವ ವಾಯು ಮಾಲಿನ್ಯವನ್ನು ತಡೆಗಟ್ಟುವ ಮತ್ತು ಅದರ ಗುಣಮಟ್ಟವನ್ನು ನಿಯಂತ್ರಿಸುವ ಉದ್ದೇಶದಿಂದ ಕೇಂದ್ರ ಸರಕಾರವು ವಾಯು (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯ್ದೆ, 1981 ಎಂಬ ಕಾನೂನನ್ನು ದೇಶಾದ್ಯಂತ ಜ್ಯಾರಿಗೊಳಿಸಿರುತ್ತದೆ. ಅದೇ ಪ್ರಕಾರ ನೀರಿನ ಮಾಲಿನ್ಯವನ್ನು ತಡೆಗಟ್ಟುವ ಮತ್ತು ನಿಯಂತ್ರಿಸುವ ಹಾಗೂ ನೀರಿನ ಗುಣಮಟ್ಟವನ್ನು ಕಾಪಾಡುವ ಉದ್ದೇಶದಿಂದ ಸರಕಾರವು ನೀರು (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯ್ದೆ 1974 ಎಂಬ ಕಾನೂನನ್ನು ಸಹ ಸರಕಾರವು ದೇಶಾದ್ಯಂತ ಜ್ಯಾರಿಗೊಳಿಸಿರುತ್ತದೆ.

ವಾಯು ಮಾಲಿನ್ಯಕಾರಕ ಎಂದರೆ ಯಾವುದೇ ಘನ, ದ್ರವ ಅಥವಾ ಅನಿಲ ಪದಾರ್ಥದಿಂದ ಮನುಷ್ಯರಿಗೆ, ಇತರ ಜೀವಿಗಳಿಗೆ, ಸಸ್ಯಗಳಿಗೆ, ಆಸ್ತಿಗೆ ಅಥವಾ ಪರಿಸರಕ್ಕೆ ಹಾನಿಕಾರಕವಾಗಬಹುದಾದ ಸಾಂದ್ರತೆಯಿಂದ ವಾತಾವರಣವು ಮಾಲಿನ್ಯಗೊಳ್ಳುವುದು ಆಗಿರುತ್ತದೆ. ವಾಯು ಮತ್ತು ನೀರಿನ ಮಾಲಿನ್ಯ ನಿಯಂತ್ರಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳನ್ನು ರಚಿಸಿರುತ್ತದೆ. ಅದರಂತೆ ಕೇಂದ್ರ ಹಾಗೂ ರಾಜ್ಯ ವಾಯು ಮತ್ತು ನೀರಿನ ಮಾಲಿನ್ಯ ನಿಯಂತ್ರಣ ಮಂಡಳಿಗಳು ಮೇಲ್ಕಾಣಿಸಿದ ಕಾನೂನಿನ ನಿಬಂಧನೆಗೊಳಪಟ್ಟು ದೇಶದಲ್ಲಿ ವಾಯು (ಗಾಳಿ) ಮತ್ತು ನೀರಿನ ಮಾಲಿನ್ಯವನ್ನು ತಡೆಗಟ್ಟುವ ಅಥವಾ ನಿಯಂತ್ರಿಸುವ ಮೂಲಕ ಅದರ ಗುಣಮಟ್ಟವನ್ನು ಕಾಪಾಡುವ ಜವಾಬ್ದಾರಿ ಹೊಂದಿರುತ್ತದೆ. ಇದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ರಚಿಸುವ ಸದರಿ ಮಂಡಳಿಗಳು ವಾಯು ಮತ್ತು ನೀರಿನ ಮಾಲಿನ್ಯ ತಡೆಗಟ್ಟುವಿಕೆ, ನಿಯಂತ್ರಣ ಅಥವಾ ತಗ್ಗಿಸುವಿಕೆಯ ಉದ್ದೇಶ ಹೊಂದಿದ ವಿವಿಧ ಕಾರ್ಯಕ್ರದಲ್ಲಿ ತೊಡಗಿಸಿಕೊಳ್ಳುವ ವ್ಯಕ್ತಿಗಳಿಗೆ ಸೂಕ್ತ ತರಬೇತಿ ನೀಡಿ ವಿವಿಧ ಸಮಗ್ರ ಕಾರ್ಯಕ್ರಮಗಳನ್ನು ಸಮೂಹ ಮಾಧ್ಯಮಗಳ ಮೂಲಕ ಆಯೋಜಿಸಿ, ವಾಯು ಅಥವಾ ನೀರಿನ ಮಾಲಿನ್ಯಕ್ಕೆ ಸಂಬಂಧಿಸಿದ ತಾಂತ್ರಿಕ ಮತ್ತು ಅಂಕಿ ಅಂಶಗಳ ದತ್ತಾಂಶವನ್ನು ಸಂಗ್ರಹಿಸಿ, ಸಂಕಲಿಸಿ ಮತ್ತು ಪ್ರಕಟಿಸಿ ವಾಯು ಮತ್ತು ನೀರು ಮಾಲಿನ್ಯದ ತಡೆಗಟ್ಟುವಿಕೆ ಅಥವಾ ನಿಯಂತ್ರಣಕ್ಕಾಗಿ ವಿವಿಧ ಕೈಪಿಡಿಗಳನ್ನು ಅಥವಾ ಮಾರ್ಗದರ್ಶಿಗಳನ್ನು ಸಿದ್ಧಪಡಿಸಿ ವಾಯು ಮತ್ತು ನೀರಿನ ಗಣಮಟ್ಟಕ್ಕೆ ಮಾನದಂಡಗಳನ್ನು ನಿಗದಿಪಡಿಸುವ ಅಧಿಕಾರವನ್ನು ಹೊಂದಿರುತ್ತದೆ. ಈ ಉದ್ದೇಶಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರಕಾರದ ಮೇಲೆ ತಿಳಿಸಿದ ಮಂಡಳಿಗಳು ವಾಯು ಮತ್ತು ನೀರಿನ ಗುಣಮಟ್ಟವನ್ನು ನಿಯಂತ್ರಿಸುವ ಉದ್ದೇಶಕ್ಕಾಗಿ ತಮ್ಮ ತಮ್ಮ ಕಾರ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದಕ್ಕಾಗಿ ವಿವಿಧ ಪ್ರಯೋಗಾಲಯಗಳನ್ನು ಸ್ಥಾಪಿಸಿ ವಿವಿಧ ಸಮಿತಿಗಳ ಮೂಲಕ ಅವುಗಳಿಗೆ ಸಂಬಂಧಪಟ್ಟ ಕಾರ್ಯವನ್ನು ನಿರ್ವಹಿಸಬೇಕಾಗುತ್ತದೆ.

ಈ ಮೇಲ್ಕಾಣಿಸಿದ ಕಾನೂನಿನ ಪ್ರಕಾರ ಯಾವುದೇ ವಾಸ್ತವ್ಯದ ಪ್ರದೇಶದಲ್ಲಿ ಸಾರ್ವಜನಿಕರ ಆರೋಗ್ಯ ಮತ್ತು ನೆಮ್ಮದಿಗೆ ದಕ್ಕೆ ಬರುವ ರೀತಿಯ ಅಂದರೆ ಪರಿಸರ ಮಾಲಿನ್ಯ ಉಂಟುಮಾಡುವ ಹೊಗೆ ಹೊರಚಿಮ್ಮುವ ಯಾವುದೇ ಕೈಗಾರಿಕೆ ಅಥವಾ ಘಟಕಗಳನ್ನು ಸ್ಥಾಪಿಸುವುದು ಕಾನೂನುಬಾಹಿರವಾಗಿದೆ. ಅದೇ ರೀತಿಯಲ್ಲಿ ವಾಸ್ತವ್ಯದ ಪ್ರದೇಶದಲ್ಲಿ ವೆಲ್ಡಿಂಗ್, ಪೈಟಿಂಗ್ ಮುಂತಾದ ವಿವಿಧ ವಾಣಿಜ್ಯ ಚಟುವಟಿಕೆಗಳಿಂದ ವಿಪರೀತ ಶಬ್ದ ಮತ್ತು ಸಾರ್ವಜನಿಕರ ಆರೋಗ್ಯಕ್ಕೆ ಹಾನಿಕಾರಕವಾದ ಹೊಗೆಯನ್ನು ಹೊರಚಿಮ್ಮುವ ಅಟೋ ಗ್ಯಾರೇಜ್ ಮತ್ತಿತರ ಯಾವುದೇ ವಾಣಿಜ್ಯ ಘಟಕಗಳನ್ನು ನಡೆಸುವುದು, ಸಾರ್ವಜನಿಕರು ವಾಸಿಸುವ ಪ್ರದೇಶದಲ್ಲಿ ಕಲುಷಿತವಾದ ನೀರನ್ನು ಮುಕ್ತವಾಗಿ ಹರಿಯಲುಬಿಡುವುದು ಶಿಕ್ಷಾರ್ಹ ಅಪರಾಧಗಳಾಗಿರುತ್ತವೆ ಮತ್ತು ಈ ಬಗ್ಗೆ ಸೂಕ್ತ ಕ್ರಮವನ್ನು ಕೈಗೊಳ್ಳುವ ಜವಾಬ್ದಾರಿಯನ್ನು ಸಂಬಂಧಪಟ್ಟ ಸರಕಾರಿ ಇಲಾಖಾಧಿಕಾರಿಗಳು ಹೊಂದಿರುತ್ತಾರೆ.























































































































error: Content is protected !!
Scroll to Top