ಅಕ್ಷರ ಕ್ರಾಂತಿಯಿಂದ ಸಮಾಜದ ಅಭಿವೃದ್ಧಿ – ಸುನಿಲ್ ಕುಮಾರ್
ಕಾರ್ಕಳ : ಅಮ್ಮನ ನೆರವು ಟ್ರಸ್ಟ್(ರಿ) ಸಂಸ್ಥೆಯಿಂದ ಬೈಲೂರು ಮತ್ತು ಸುತ್ತಮುತ್ತಲಿನ ಶಾಲೆಗಳ ಪ್ರತಿಭಾವಂತ ಪಿಯುಸಿ ಮತ್ತು ಎಸ್ಸೆಸೆಲ್ಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮ ಜೂ. 26ರಂದು ಬೈಲೂರು ಜ್ಯೂನಿಯರ್ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ವಿ. ಸುನಿಲ್ ಕುಮಾರ್ ಮಾತನಾಡಿ, ಅಕ್ಷರ ಕಾಂತಿಯಿಂದ ಸಮಗ್ರ ಸಮಾಜದ ಅಭಿವೃದ್ಧಿಯಾಗುತ್ತದೆ. ಅಮ್ಮನ ನೆರವು ಟ್ರಸ್ಟ್ ಸರಕಾರಿ ಶಾಲೆಗಳಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ದೊಡ್ಡ ಮೊತ್ತದ ವಿದ್ಯಾರ್ಥಿ ವೇತನವನ್ನು ನೀಡುವುದರ ಮೂಲಕ ಒಂದು ಉತ್ತಮ ಮೇಲ್ಪಂಕ್ತಿ ಹಾಕಿಕೊಟ್ಟಿದೆ. ಟ್ರಸ್ಟನ ಅಧ್ಯಕ್ಷ ಅವಿನಾಶ್ ಜಿ. ಶೆಟ್ಟಿಯಂತಹ ಯುವಕರು ಈ ಟ್ರಸ್ಟ್ ಸ್ಥಾಪನೆ ಮಾಡಿದ್ದು ತಾಲೂಕಿನಾದ್ಯಂತ ನೂರಾರು ವಿದ್ಯಾರ್ಥಿಗಳಿಗೆ ಅಂದಾಜು 16 ಲಕ್ಷ ರೂ. ಮೊತ್ತದ ವಿದ್ಯಾರ್ಥಿ ವೇತನ ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.

ತಾಲೂಕಿನ ಏಳು ಕೇಂದ್ರಗಳಲ್ಲಿ ಈ ವಿದ್ಯಾರ್ಥಿ ವೇತನ ವಿತರಣೆಯ ಕಾರ್ಯಕ್ರಮಗಳು ನಡೆಯಲಿದ್ದು ಅದರ ಮೊದಲ ಹಂತದ ಕಾರ್ಯಕ್ರಮವು ಬೈಲೂರು ಜೂನಿಯರ್ ಕಾಲೇಜಿನಲ್ಲಿ ನಡೆದಿದೆ. ಒಟ್ಟು 16 ಲಕ್ಷ ರೂ. ಮೊತ್ತದ ವಿದ್ಯಾರ್ಥಿವೇತನ ಈ ವರ್ಷ ವಿತರಣೆ ಆಗಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಅವಿನಾಶ್ ಜಿ. ಶೆಟ್ಟಿ ಹೇಳಿದರು.
ಕಾರ್ಯಕ್ರಮದಲ್ಲಿ 13 ಪಿಯುಸಿ ವಿದ್ಯಾರ್ಥಿಗಳಿಗೆ ತಲಾ 10,000 ರೂ., 32 ಎಸ್ಸೆಸೆಲ್ಸಿ ವಿದ್ಯಾರ್ಥಿಗಳಿಗೆ ತಲಾ 5,000 ರೂ. ಮತ್ತು ಒಂದು ಶಾಲೆಗೆ 10,000 ನೆರವು ಹಸ್ತಾಂತರ ಮಾಡಲಾಯಿತು.
ಜ್ಞಾನಸುಧಾ ವಿದ್ಯಾಸಂಸ್ಥೆಗಳ ಸ್ಥಾಪಕ ಡಾ. ಸುಧಾಕರ್ ಶೆಟ್ಟಿ ಮಾತನಾಡಿ, ಅಮ್ಮನ ನೆರವು ಟ್ರಸ್ಟಿನಿಂದ ಪಡೆದ ವಿದ್ಯಾರ್ಥಿವೇತನಗಳ ಹಿಂದೆ ಉದಾತ್ತವಾದ ಆಶಯವಿದೆ. ಆದ್ದರಿಂದ ಅದನ್ನು ಸದುಪಯೋಗ ಪಡಿಸುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿ ಶುಭ ಹಾರೈಸಿದರು.
ಉದ್ಯಮಿಗಳಾದ ಚಂದ್ರಶೇಖರ್ ಶೆಟ್ಟಿ, ಬೈಲೂರು ಕೃಷ್ಣರಾಜ್ ಹೆಗ್ಡೆ, ಸುಮಿತ್ ಶೆಟ್ಟಿ ಬೈಲೂರು, ಲಯನ್ಸ್ ಅಧ್ಯಕ್ಷ ಗುತ್ತುಮನೆ ಪ್ರಶಾಂತ್ ಶೆಟ್ಟಿ, ಗುತ್ತಿಗೆದಾರ ಪ್ರಸನ್ನ ಶೆಟ್ಟಿ ಬೈಲೂರು, ಉದ್ಯಮಿ ಜಯಪ್ರಕಾಶ್ ಶೆಟ್ಟಿ, ಶಾಲಾ ಎಸ್ಡಿಎಂಸಿ ಅಧ್ಯಕ್ಷ ಸ್ಟೀವನ್ ಡಿಸೋಜಾ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸೀತಾರಾಮ್, ಪ್ರೌಢಶಾಲೆಯ ಮುಖ್ಯಶಿಕ್ಷಕ ನಾಗರಾಜ್ ಉಪಸ್ಥಿತರಿದ್ದರು. ಶಿಕ್ಷಕ ರಾಜೇಂದ್ರ ಭಟ್ ಕೆ. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ನಿವೃತ್ತ ಶಿಕ್ಷಕ ವಸಂತ ಎಂ. ವಂದಿಸಿದರು.



























































