ಟ್ರಸ್ಟ್‌ಗಳಿಗೆ ಸಂಬಂಧಪಟ್ಟ ಕಾನೂನು

ಟ್ರಸ್ಟ್‌ಗಳಲ್ಲಿ ಚಾರಿಟೇಬಲ್ ಟ್ರಸ್ಟ್ (ದಾನ ಧರ್ಮಕ್ಕೆ ಸಂಬಂಧಪಟ್ಟ ದತ್ತಿ ಟ್ರಸ್ಟ್), ಖಾಸಗಿ ಟ್ರಸ್ಟ್, ಸಾರ್ವಜನಿಕ ಟ್ರಸ್ಟ್, ಜೀವಂತ ಟ್ರಸ್ಟ್ ಮುಂತಾದ ವಿವಿಧ ರೀತಿಯ ಟ್ರಸ್ಟ್‌ಗಳಿರುತ್ತವೆ. ಚಾರಿಟೇಬಲ್ ಟ್ರಸ್ಟ್‌ನ್ನು ಸಾಮಾನ್ಯವಾಗಿ ದತ್ತಿ ಸಂಸ್ಥೆಗಳು ಸಾರ್ವಜನಿಕರಿಂದ ದೇಣಿಗೆಯನ್ನು ಪಡೆದು ಸಾರ್ವಜನಿಕ ಕ್ಷೇತ್ರದಲ್ಲಿನ ವಿವಿಧ ಧಾರ್ಮಿಕ, ಶೈಕ್ಷಣಿಕ, ವೈಜ್ಞಾನಿಕ ಮತ್ತಿತರ ವಿವಿಧ ಸಾರ್ವಜನಿಕ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶಕ್ಕಾಗಿ ರಚಿಸಲಾಗುತ್ತದೆ. ಖಾಸಗಿ ಟ್ರಸ್ಟ್‌ನ್ನು ಯಾವುದೇ ಒಬ್ಬ ಖಾಸಗಿ ವ್ಯಕ್ತಿ ಅಥವಾ ಒಂದು ಕುಟುಂಬದ ವ್ಯಕ್ತಿಗಳು ಸೇರಿಕೊಂಡು ತಮ್ಮ ಸ್ವಂತ ವೈಯುಕ್ತಿಕ ನಿಧಿಯಿಂದ ಕುಟುಂಬಕ್ಕೆ ಸಂಬಂಧಪಟ್ಟ ವಿವಿಧ ಖಾಸಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅಥವಾ ತಮ್ಮ ಟ್ರಸ್ಟ್ ಹೊಂದಿರುವ ಫಂಡ್‌ನಿಂದ ಟ್ರಸ್ಟ್‌ನ ಹೆಸರಿನಲ್ಲಿ ಸಾರ್ವಜನಿಕರ ಏಳಿಗೆಗಾಗಿ ದೇಣಿಗೆಯನ್ನು ನೀಡಿ ಸಹಕರಿಸುವ ಉದ್ದೇಶಕ್ಕಾಗಿ ರಚಿಸಲಾಗುತ್ತದೆ. ಅದೇ ರೀತಿ ಸಾರ್ವಜನಿಕ ಟ್ರಸ್ಟ್‌ನ್ನು ಸಾರ್ವಜನಿಕ ಸೇವೆಗಳಿಗೆ ಸಂಬಂಧಪಟ್ಟ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾರ್ವಜನಿಕ ಕ್ಷೇತ್ರದಲ್ಲಿನ ವಿವಿಧ ರೀತಿಯ ಸೇವಾ ಚಟುವಟಿಕೆಗಳನ್ನು ನಡೆಸುವ ಉದ್ದೇಶಕ್ಕಾಗಿ ರಚಿಸಲಾಗುತ್ತದೆ. ಧಾರ್ಮಿಕ ಟ್ರಸ್ಟ್‌ನ್ನು ಯಾವುದೇ ಒಂದು ನಿರ್ಧಿಷ್ಟವಾದ ಖಾಸಗಿ ದೇವಸ್ಧಾನ, ದೈವಸ್ಧಾನ, ಮಸೀದಿ, ಚರ್ಚ್ ಈ ರೀತಿಯ ವಿವಿಧ ಖಾಸಗಿ ಧಾರ್ಮಿಕ ಸಂಸ್ಧೆಯನ್ನು ವಿವಿಧ ಕಾನೂನುಬದ್ಧ ಚಟುವಟಿಕೆಗಳಿಗಾಗಿ ರಚಿಸಲಾಗುತ್ತದೆ.

ಭಾರತೀಯ ಟ್ರಸ್ಟ್ ಕಾಯಿದೆ 1882ರ ಕಲಂ 4ರ ಪ್ರಕಾರ ಟ್ರಸ್ಟ್‌ನ್ನು ಒಂದು ನ್ಯಾಯಬದ್ಧ ಉದ್ದೇಶಕ್ಕೆ ರಚಿಸಬಹುದಾಗಿದೆ. ಟ್ರಸ್ಟ್ ರಚಿಸುವುದಕ್ಕಾಗಿ ಒಂದು ಲಿಖಿತವಾದ ಒಡಂಬಡಿಕೆ ಪತ್ರದ ಅವಶ್ಯಕತೆ ಇರುತ್ತದೆ. ಟ್ರಸ್ಟ್ ಪ್ರಾರಂಭಿಸಲು ಯಾವುದೇ ನಿಖರವಾದ ನಮೂನೆಯು ಅಗತ್ಯ ಇರುವುದಿಲ್ಲ. ಆದರೆ ಸ್ಥಾಪಕನ ಉದ್ದೇಶವು ಸ್ಪಷ್ಟವಾಗಿರಬೇಕಿದ್ದು, ಸ್ಥಾಪಿಸಲು ಚರ ಅಥವಾ ಸ್ಥಿರ ಆಸ್ತಿಗಳನ್ನು ಒಳಪಡಿಸಬಹುದಾಗಿದೆ. ಕೆಲವೊಂದು ಸಂದರ್ಭಗಳಲ್ಲಿ ಟ್ರಸ್ಟ್‌ನ್ನು ರಚಿಸಲು ಬರುವುದಿಲ್ಲ. ಅವುಗಳು ಯಾವುದೆಂದರೆ
(1) ಟ್ರಸ್ಟ್ ರಚಿಸುವ ಉದ್ದೇಶವು ಕಾನೂನು ಬದ್ಧವಾಗಿರದೇ ಕಾನೂನು ಬಾಹಿರವಾಗಿದ್ದಲ್ಲಿ
(2) ಟ್ರಸ್ಟ್ ರಚಿಸುವ ಮೂಲ ಉದ್ದೇಶವು ಭಾರತೀಯ ಟ್ರಸ್ಟ್ ಕಾಯಿದೆಗಳ ನಿಯಮಾವಳಿಗಳಿಗೆ ವಿರುದ್ಧವಾಗಿದ್ದಲ್ಲಿ
(3) ಟ್ರಸ್ಟ್ನ ರಚನೆ ನಂತರ ಮೋಸ, ವಂಚನೆ ಇತ್ಯಾದಿಗಳಿಗೆ ಅವಕಾಶ ಉಂಟಾದಲ್ಲಿ
(4) ಟ್ರಸ್ಟ್ ರಚನೆಯ ಉದ್ದೇಶವು ಒಬ್ಬ ವ್ಯಕ್ತಿಯ ಆಸ್ತಿಗೆ ಹಾನಿಯನ್ನು ಉಂಟುಮಾಡುವ ಹಾಗಿದ್ದರೆ ಟ್ರಸ್ಟ್ನ್ನು ಸ್ಥಾಪಿಸಲು ಬರುವುದಿಲ್ಲ.

ಅದೇ ರೀತಿ ಭಾರತೀಯ ಟ್ರಸ್ಟ್ ಕಾಯಿದೆ 1982ರ ಕಲಂ 7ರ ಪ್ರಕಾರ ಕ್ರಮ ಬದ್ಧವಾದ ಒಡಂಬಡಿಕೆಗಳನ್ನು ಮಾಡಿಕೊಳ್ಳಲು ಅರ್ಹನಾಗಿದ್ದಲ್ಲಿ ಅಂತಹ ವ್ಯಕ್ತಿಯು ಟ್ರಸ್ಟ್‌ನು ಸ್ಥಾಪನೆ ಮಾಡಬಹುದಾಗಿದೆ. ಮೈನರ್‌ಗಳ ಪರವಾಗಿ ಟ್ರಸ್ಟ್‌ನ್ನು ಸ್ಥಾಪನೆ ಮಾಡುವ ಸಂದರ್ಭದಲ್ಲಿ ಸಂಬಂಧಪಟ್ಟ ಸಿವಿಲ್ ನ್ಯಾಯಾಲಯದ ಅನುಮತಿಯ ಅಗತ್ಯವಿರುತ್ತದೆ. ಕರ್ನಾಟಕ ನೋಂದಣಿ ನಿಯಮಾವಳಿ 1965ರ ನೋಂದಣಿ ಫೀ ಕೋಷ್ಟಕ (ಅನುಚ್ಚೇದ) 1ರ ಅನ್ವಯ ಟ್ರಸ್ಟ್ ಡೀಡ್‌ನಲ್ಲಿ ಸ್ಥಾಪಕನು ಸೂಚಿಸಿರುವ ಮೌಲ್ಯ ಅಥವಾ ಚರ ಸ್ಥಿರ ಆಸ್ತಿಯ ಒಟ್ಟು ಮೌಲ್ಯದ ಆಧಾರದಲ್ಲಿ ನೋಂದಣಿ ಫೀ ಪಾವತಿ ಮಾಡಬೇಕಾಗುತ್ತದೆ. ಭಾರತೀಯ ಟ್ರಸ್ಟ್ ಕಾಯಿದೆ 1882ರ ಕಲಂ 78ರ ಅನ್ವಯ ಟ್ರಸ್ಟ್‌ನ್ನು ಈ ಕೆಳಕಂಡ ಕಾರಣಗಳಿಗೆ ರದ್ದು ಮಾಡಬಹುದಾಗಿದೆ. ಅವುಗಳು ಯಾವುದೆಂದರೆ;

  1. ಟ್ರಸ್ಟ್‌ನ ಫಲಾನುಭವಿಗಳು ಅಪೇಕ್ಷೆಪಟ್ಟಾಗ
  2. ಟ್ರಸ್ಟ್ ಡೀಡ್‌ನಲ್ಲಿ ಅದನ್ನು ರದ್ದು ಪಡಿಸುವ ಅವಕಾಶ ಮಾಡಿಕೊಂಡಿದ್ದಾಗ ಟ್ರಸ್ಟ್‌ನ ಸ್ಥಾಪಕನು ಟ್ರಸ್ಟ್‌ನ ರದ್ದು ಪಡಿಸಬಹುದು.
  3. ಟ್ರಸ್ಟ್‌ನ ಸ್ಥಾಪಕನು ತಾನು ಮಾಡಿದ ಸಾಲದ ತೀರುವಳಿಗಾಗಿ ಟ್ರಸ್ಟ್‌ನ್ನು ಸ್ಥಾಪಿಸಿದ್ದು ಈ ವಿಷಯವನ್ನು ಸಾಲಗಾರರಿಗೆ ತಿಳಿಸದಿದ್ದಂತಹ ಸಂದರ್ಭದಲ್ಲಿ ಸ್ಥಾಪಕನು ಟ್ರಸ್ಟ್‌ನ್ನು ರದ್ದು ಮಾಡಬಹುದು.

ಟ್ರಸ್ಟ್ ಡೀಡ್‌ನ್ನು ರಚಿಸುವಾಗ ಅದರಲ್ಲಿ ನ್ಯೂನತೆಗಳು ಇದ್ದರೆ ಅದನ್ನು ಸರಿಪಡಿಸುವ ಉದ್ದೇಶಕ್ಕಾಗಿ ಟ್ರಸ್ಟ್ ಡೀಡ್‌ನ್ನು ತಿದ್ದುಪಡಿ ಮಾಡಬಹುದಾಗಿದೆ. ಕರ್ನಾಟಕ ರಾಜ್ಯದೊಳಗಿನ ಯಾವುದೇ ಮಠ ಅಥವಾ ಮಠಕ್ಕೆ ಸೇರಿದ ಅಥವಾ ಮಠದ ಮುಖಾಂತರ ನಿರ್ವಹಣೆಗೊಳಪಟ್ಟ ದೇವಸ್ಥಾನಗಳು, ಕುಟುಂಬದ ದೇವಸ್ಥಾನಗಳು ಅಂದರೆ ಕುಟುಂಬದ ಸಾರ್ವಜನಿಕರಿಂದ ಯಾವುದೇ ದಾನ ಅಥವಾ ಕೊಡುಗೆಗಳನ್ನು ಸ್ವೀಕರಿಸದೆ ಕುಟುಂಬದ ಅಥವಾ ಕುಟುಂಬದ ಸದಸ್ಯರ ನಿಧಿಯಿಂದಲೇ ಸ್ಥಾಪಿಸಲಾಗಿರುವ ಯಾವುದೇ ಧರ್ಮದಾಯ ಸಂಸ್ಥೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಖಾಸಗಿ ಅಥವಾ ಸಾರ್ವಜನಿಕ ದೇವಸ್ಥಾನಗಳು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997ರ ಪ್ರಕಾರದ ಕಾನೂನಿನ ನಿಯಂತ್ರಣಕ್ಕೊಳಪಟ್ಟಿರುತ್ತದೆ.









































































































error: Content is protected !!
Scroll to Top