ಫೇಕ್‌ಗೆ ಶಾಕ್ ಆದ ತಂದೆಯಿಂದ ದೂರು ದಾಖಲು
ಉಡುಪಿ : ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್.ಟಿ.ಎ.) ನಡೆಸಿದ ನೀಟ್ (National Eligibility cum Entrance Test) ಪರೀಕ್ಷೆಯಲ್ಲಿ 646 ಎಂದು ನೀಟಾಗಿ ಬಿಂಬಿಸಿ ಉಡುಪಿ ಜಿಲ್ಲೆಗೆ ಅಗ್ರಸ್ಥಾನಿ ಎಂದ ನೀಟ್ ವಿದ್ಯಾರ್ಥಿಗೆ ದೊರಕಿದ್ದು ಬರಿಯ 65.
ಓರ್ವ ಸಾಧಾರಣ ವಿದ್ಯಾರ್ಥಿ ಜಿಲ್ಲೆಗೆ ಟಾಪರ್ ಆಗಿರುವುದು ಸಹಪಾಠಿಗಳಲ್ಲಿ ಅನೇಕ ಅನುಮಾನವನ್ನುಂಟು ಮಾಡಿದ್ದು ಆ ಬಳಿಕ ವಿದ್ಯಾರ್ಥಿಗಳೇ ಸತ್ಯಾಸತ್ಯತೆ ಅರಿಯಲು ಮುಂದಾಗಿದ್ದರು. ಆಗ ನೀಟ್ ಟಾಪರ್ ಹಿಂದಿನ ನಿಜ ಬಣ್ಣ ಬಯಲಾಗಿದೆ.

ನಕಲಿ ಸೃಷ್ಟಿ ಹೇಗೆ ?
ಜಿಲ್ಲೆಗೆ ಟಾಪರ್ ಎಂದ ವಿದ್ಯಾರ್ಥಿಯ ಎರಡೆರಡು ನಕಲಿ ಸರ್ಟಿಫಿಕೇಟ್ ಹರಿದಾಡಿದ್ದು ಈ ನಕಲಿ ಸರ್ಟಿಫಿಕೇಟ್ ಮಾಡಿಕೊಟ್ಟವರು ಯಾರು ? ನಕಲಿ ಸರ್ಟಿಫಿಕೇಟ್ ಮಾಡಿಕೊಡುವ ಜಾಲ ಉಡುಪಿಯಲ್ಲಿ ಸಕ್ರಿಯವಾಗಿದೆಯೇ ? ಅಂತಹ ದಂಧೆ ಇದ್ದಲ್ಲಿ ಅದರ ಕಿಂಗ್ ಪಿನ್ ಯಾರು ? ಯಾವ ರೀತಿ ವಿದ್ಯಾರ್ಥಿಗಳನ್ನು ಹಾಗೂ ಪೋಷಕರನ್ನು ಯಾಮಾರಿಸಲಾಗುತ್ತಿದೆ ಎನ್ನುವ ವಿಚಾರದ ಬಗ್ಗೆ ಸೂಕ್ತ ತನಿಖೆಯಾಗಬೇಕೆಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿತ್ತು.
ತಂದೆಯಿಂದ ದೂರು
ರೋಷನ್ ಶೆಟ್ಟಿ ಎಂಬವರು ಈ ಬಗ್ಗೆ ಉಡುಪಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತನ್ನ ಮಗ ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ. ಎನ್.ಟಿ.ಎ. ದಿಂದ ಇತ್ತೀಚೆಗೆ ನಡೆದ ನೀಟ್ ಪರೀಕ್ಷೆಯನ್ನು ಬರೆದಿದ್ದ. ಯೂಟ್ಯೂಬ್ ಚಾನೆಲ್ ಒಂದರಲ್ಲಿ ನೀಟ್ ಕೋಚಿಂಗ್ ಬಗ್ಗೆ ಬಂದ ಮಾಹಿತಿ ಆಧರಿಸಿ ವಿಷು ಕುಮಾರ್ ಎಂಬಾತನನ್ನು ಸಂಪರ್ಕಿಸಿರುತ್ತಾನೆ.
ಅನಂತರದಲ್ಲಿ 17,000 ಸಾವಿರ ರೂ. ವರ್ಗಾಯಿಸಿಕೊಂಡು ಇದೀಗ ಡಿಜಿಟಲ್ ಆಗಿ ನೀಟ್ ಪರೀಕ್ಷೆಯ ನಕಲಿ ಅಂಕ ಪಟ್ಟಿ ಹಾಗೂ ಓಎಂಆರ್ ಶೀಟ್ ವಾಟ್ಯಾಪ್ ಮೂಲಕ ಕಳುಹಿಸಿಕೊಟ್ಟಿರುತ್ತಾನೆ. ನಕಲೀ ದಾಖಲೆಗಳನ್ನು ಸೃಷ್ಟಿಸಿ ಮಗನಿಗೆ ವಂಚಿಸಿ ಅಕ್ರಮವಾಗಿ ಹಣ ವರ್ಗಾವಣೆ ಮಾಡಿಕೊಂಡಿರುವ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ರೋಶನ್ ಅವರು ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.































































