ಮಾಳದೂರಿನ ಒಡೆಯ ಶ್ರೀ ವಿಷ್ಣುಮೂರ್ತಿ ದೇವರಿಗೆ ಬ್ರಹ್ಮಕಲಶೋತ್ಸವ ಸಂಭ್ರಮ

ಕಾರ್ಕಳ : ಕಾರ್ಕಳ ತಾಲೂಕಿನ ಒಂದು ಪುಟ್ಟ ಊರು ಒಂದು ಸಣ್ಣ ಊರು ಪ್ರಕೃತಿ ಸೌಂದರ್ಯದ ಜೊತೆಗೆ ಗುಡ್ಡ ಕಾಡುಗಳ ನಡುವೆ ಸುಂದರವಾಗಿ ಸ್ವಚ್ಛವಾಗಿ ಇರುವ ಊರು ನಮ್ಮೂರು ಮಾಳ. ನಂಬಿದವರಿಗೆ ಅನುಗ್ರಹಿಸಿ ಮನದ ಅಭಿಲಾಷೆಗಳನ್ನು ಪರಿಪೂರ್ಣ ಆಗುವ ಹಾಗೆ ಹರಸುತ್ತಿರುವ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಇರುವುದು ಇದುವೇ ಮಾಳದ ಹಳಪಳ್ಳಿ ಎಂಬ ಸ್ಥಳದಲ್ಲಿ. ಸರಿಸುಮಾರು ಕ್ರಿ.ಶ.16ನೇ ಶತಮಾನದ ದೇವಸ್ಥಾನ ಎಂದು ಇಲ್ಲಿಯ ಶಿಲಾಶಾಸನಗಳಿಂದ ತಿಳಿದು ಬರುತ್ತದೆ.
ಇದೊಂದು ಪರಮ ಪವಿತ್ರ ಪುಣ್ಯಭೂಮಿ ಅನ್ನುವುದು ನಿಶ್ಚಿತ. ಕ್ರಿ.ಶ 1535ರಿಂದ ಕ್ರಿ.ಶ 1560 ಕಾಲಕ್ಕೆ ಕಾರ್ಕಳವನ್ನು ಆಳುತ್ತಿದ್ದ ಭೈರವ ಅರಸರು ದೇವಸ್ಥಾನಕ್ಕೆ ಉಂಬಳಿಗಳನ್ನು ನೀಡಿರುವುದರ ಬಗ್ಗೆ ಅಧ್ಯಯನದಿಂದ ತಿಳಿದು ಬಂದಿರುತ್ತದೆ.
9ನೇ ಶತಮಾನದಲ್ಲಿ ಈ ಸರಹದ್ದಿನಲ್ಲಿ ಶ್ರೀ ಗೋಪಾಲಕೃಷ್ಣ ದೇವರ ಮಠ ಇದ್ದು, ಆ ನಂತರದಲ್ಲಿ ಕಾಲನ ಹೊಡೆತಕ್ಕೆ ಸಿಕ್ಕಾಗ ಸೋದೆ ಮಠದ ವಾದಿರಾಜ ಯತಿಗಳ ಆಣತಿಯಂತೆ ಮತ್ತು ಅರಸರ ಆಜ್ಞೆಯ ಪ್ರಕಾರ ಇಲ್ಲಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಸ್ಥಾಪನೆ ಮಾಡಲಾಗಿದೆ ಎಂದು ಅದರ ಬಗ್ಗೆ ಮಾಹಿತಿ ಇರುವವರು ತಿಳಿಸಿರುತ್ತಾರೆ. ಆಗಿನ ಕಾಲದಲ್ಲಿ ಹತ್ತುಹಲವು ಮನೆತನದವರ ಜೊತೆಗೆ ಬ್ರಾಹ್ಮಣ ಕುಟುಂಬದವರು, ಊರಿನ ಪರವೂರಿನ ಭಕ್ತರ ಸಂಪೂರ್ಣ ಸಹಕಾರದಿಂದ ಆ ಕಷ್ಟದ ಸಮಯದಲ್ಲಿ ದೇವಸ್ಥಾನವನ್ನು ನಡೆಸಿಕೊಂಡು ಬರಲಾಗಿತ್ತು.
1977ರ ಕಾಲಕ್ಕೆ ದೇವಸ್ಥಾನ ಆಡಳಿತ ಕೊನೆಗೊಂಡು ಅವ್ಯವಸ್ಥೆಯಲ್ಲಿದ್ದ ಸಮಯಕ್ಕೆ ಊರಿನ ಪ್ರಮುಖರು ಹಿರಿಯರು ಗ್ರಾಮಸ್ಥರ ಒಮ್ಮತದ ಅಭಿಪ್ರಾಯದ ಮೇರೆಗೆ ಶಂಕರನಾರಾಯಣ ಭಟ್ಟರನ್ನು ಮೊಕ್ತೇಸರರಾಗಿ ಆಯ್ಕೆ ಮಾಡಿ ಆ ನಂತರದಲ್ಲಿ 1991ರಲ್ಲಿ ಅಷ್ಟಬಂಧ ಬ್ರಹ್ಮಕಲಶ ಅಭಿಷೇಕ ನಡೆದಿರುತ್ತದೆ.

ಶಂಕರನಾರಾಯಣ ಭಟ್ ಅವರ ಪುತ್ರ ಶ್ರೀನಿವಾಸ ಭಟ್ ಆಡಳಿತದಲ್ಲಿ ಊರವರ ಸಹಕಾರದಿಂದ ನೂತನ ರಥ , ಪುಷ್ಕರಿಣಿ, ಮಹಾದ್ವಾರಗಳ ನಿರ್ಮಾಣ ಮಾಡಿ ಮತ್ತೆ ಬ್ರಹ್ಮಕಲಶ ಅಭಿಷೇಕ ನಡೆದಿರುವ ಬಗ್ಗೆ ಮಾಹಿತಿ ಇರುತ್ತದೆ. ಇಲ್ಲಿ ಕಾಲಕಾಲಕ್ಕೆ ಉತ್ಸವ, ಬಲಿ, ಕೋಲ ಇನ್ನಿತರ ದೇವತಾ ಕಾರ್ಯಗಳು ಸರ್ವರ ಸಹಕಾರದಿಂದ ನಡೆದುಕೊಂಡು ಬಂದಿದ್ದು, ಈಗ ಮತ್ತೆ ಪ್ರಶ್ನಾಚಿಂತನೆಯಲ್ಲಿ ಕಂಡು ಬಂದ ಪ್ರಕಾರ ಮತ್ತು ಕ್ಷೇತ್ರದ ತಂತ್ರಿ ವಿದ್ವಾನ್ ಸರ್ವೇಶ್ ತಂತ್ರಿಯವರ ಮಾರ್ಗದರ್ಶನದ ಪ್ರಕಾರ ನೂತನವಾಗಿ ಗೋಪಾಲಕೃಷ್ಣ ಗರ್ಭಗುಡಿ, ನಾಗಬನ, ಧ್ವಜಸ್ತಂಭ, ಪುಷ್ಕರಿಣಿ, ಮುಖಮಂಟಪ, ಸುತ್ತುಪೌಳಿ, ಸಮುದಾಯ ಭವನ, ಒಳ ಸುತ್ತಿನ ಛಾವಣಿ, ಆವರಣ ಗೋಡೆ, ನೆಲಕ್ಕೆ ಹಾಸುಗಲ್ಲು ಕಾಮಗಾರಿಯು ಭರದಿಂದ ಸಾಗುತ್ತಿದೆ. ಇದರ ಖರ್ಚು ಸುಮಾರು ನಾಲ್ಕು ಕೋಟಿ ಅಂದಾಜು ಮಾಡಿರುತ್ತಾರೆ.
ಧರ್ಮಸ್ಥಳದ ಧರ್ಮಾಧಿಕಾರಿಗಳ ಶುಭ ಆಶೀರ್ವಾದದ ಜೊತೆಗೆ ಕಾರ್ಕಳ ಕ್ಷೇತ್ರದ ಶಾಸಕರು ಗೌರವ ಅಧ್ಯಕ್ಷರಾಗಿದ್ದು, ಈಗಾಗಲೇ ಜೀರ್ಣೊದ್ದಾರ ಸಮಿತಿಯ ಅಧ್ಯಕ್ಷರು ಮತ್ತು ಪೂರ್ತಿ ತಂಡದವರ ಸತತ ಪರಿಶ್ರಮ ಅದರೊಂದಿಗೆ ವ್ಯವಸ್ಥಾಪನಾ ಸಮಿತಿಯವರ ಸಹಕಾರದಿಂದ, ವೈದಿಕರ ಮತ್ತು ಪೂಜಾ ಕೈಂಕರ್ಯವನ್ನು ನಡೆಸಿಕೊಡುವವರ ಸಹಕಾರದಿಂದ, ಹಿರಿಯರ ಕಿರಿಯರ ಸಹಕಾರದಿಂದ ಊರಿನ ಎಲ್ಲ ಭಕ್ತರ ಸಂಪೂರ್ಣ ಸಹಕಾರ ಮತ್ತು ಪರಿಶ್ರಮ ಮತ್ತು ಸೇವೆಯಿಂದ ಹಾಗೂ ಒಂದೇ ಮಾತಿನಲ್ಲಿ ಹೇಳುವುದಾದರೆ ಶ್ರೀ ವಿಷ್ಣುಮೂರ್ತಿ ಮತ್ತು ಸಪರಿವಾರ ದೇವತೆಗಳ ಅನುಗ್ರಹದಿಂದ ಏಪ್ರಿಲ್ 9ರಿಂದ ಏಪ್ರಿಲ್ 14ರ ತನಕ ವೈಭಯುತವಾದ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನಡೆಯಲಿದೆ.
ಈ ಮೇಲೆ ತಿಳಿಸಿರುವ ಹತ್ತುಹಲವು ಕೆಲಸ ಕಾರ್ಯಗಳಿಗೆ ಮತ್ತು ಬ್ರಹ್ಮಕಲಶೋತ್ಸವಕ್ಕೆ ಹಣಕಾಸಿನ ಅಗತ್ಯವಿದ್ದು ಜೀರ್ಣೊದ್ದಾರ ಸಮಿತಿಯವರು ಸರ್ವರು ಸಹಕಾರ ಮಾಡುವಂತೆ ವಿನಂತಿ ಮಾಡಿಕೊಂಡಿರುತ್ತಾರೆ. ತನು ಮನ ಧನ ಸಹಾಯ ಮಾಡಿ ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾಗುವುದರ ಜೊತೆಗೆ ದೇವಸ್ಥಾನದಲ್ಲಿ ನಡೆಯುತ್ತಿರುವ ಎಲ್ಲ ಚಟುವಟಿಕೆಗಳಲ್ಲಿ ಭಾಗಿಯಾಗಿ ನಮ್ಮಿಂದ ಆಗುವ ಸೇವೆ ಮಾ‌ಡೋಣ.

ಸತೀಶ್ ಕಾತ್ಯಾಯಿನಿ

































































































error: Content is protected !!
Scroll to Top