ಸಚಿನ್‌ ಪಾಂಚಾಳ್‌ ಆತ್ಮಹತ್ಯೆ ಪ್ರಕರಣ – ಪ್ರಿಯಾಂಕ ಖರ್ಗೆ ಹಣಿಯಲು ಬಿಜೆಪಿ ಹುನ್ನಾರ

ಉಡುಪಿ : ನೇರ ನಿರ್ಭಿಡೆಯ ಕಾಂಗ್ರೆಸ್ ನಾಯಕ, ಸಚಿವ ಪ್ರಿಯಾಂಕ ಖರ್ಗೆಯವರನ್ನು ಹಣಿಯಲು ರಾಜ್ಯ ಬಿಜೆಪಿ ಗುತ್ತಿಗೆದಾರನೊಬ್ಬನ ಆತ್ಮಹತ್ಯೆಯನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿರುವುದರ ಹಿಂದೆ ಅದರ ಮನುವಾದಿ ಸಂಸ್ಕೃತಿಯ ದಲಿತ ದಮನದ ರಾಜಕೀಯ ಸಂಚು ಅಡಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹೇಳಿದೆ.
ದಲಿತನೊಬ್ಬ ರಾಜ್ಯದಲ್ಲಿ ಸೃಜನಶೀಲ ರಾಜಕಾರಿಣಿಯಾಗಿ ಬೆಳೆಯುತ್ತಿರುವುದನ್ನು ಕಂಡು ಬಿಜೆಪಿ ಬೆದರಿದೆ. ಇದ‌ನ್ನು ಸಹಿಸಲಾಗದೇ ಸಂಬಂಧವೇ ಇಲ್ಲದ ಗುತ್ತಿಗೆದಾರನೊಬ್ಬನ ಆತ್ಮಹತ್ಯಾ ಪ್ರಕರಣದಲ್ಲಿ ಯಾರೋ ಒಬ್ಬನನ್ನು ನಿಮಿತ್ತವಾಗಿಸಿ ಸಚಿವ ಖರ್ಗೆಯ ಹೆಸರನ್ನು ಎಳೆದು ತಂದು ಅಪರಾಧಿ ಎಂದು ಬಿಂಬಿಸಿ ರಾಜೀನಾಮೆ ಕೇಳುವ ನಾಟಕ ಮಾಡುತ್ತಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಪಾದಿಸಿದ ಸಾಂವಿಧಾನಿಕ ಮೌಲ್ಯದಡಿಯಲ್ಲಿ ತಮ್ಮ ಕಾರ್ಯನಿರ್ವಹಿಸಬೇಕಾದ ಬಿಜೆಪಿಯ ಕೆಲವೊಂದು ದಲಿತ ನಾಯಕರಿಗೆ ಅವರದ್ದೇ ಪಕ್ಷದ ಈ ಷಡ್ಯಂತ್ರ ಅರ್ಥ ಆಗದಿರುವುದು ವಿಷಾದನೀಯ ಎಂದು ಕಾಂಗ್ರೆಸ್ ಹೇಳಿದೆ.
ಮೃತ ಗುತ್ತಿಗೆದಾರ ಸಚಿನ್ ಪಾಂಚಾಳ್ ತನ್ನ ಮರಣ ಪತ್ರದಲ್ಲಿ ಉಲ್ಲೇಖಿಸಿದ ಆಪಾದಿತ ರಾಜು ಕಪನೂರ ಸಚಿವ ಖರ್ಗೆಗೆ ಬೆದರಿಕೆ ಒಡ್ಡುತ್ತಿರುವ ರೌಡಿ ಮಣಿಕಂಠ ರಾಟೋಡ್ ಇವರೆಲ್ಲರೂ ಬಿಜೆಪಿಯ ರಾಜಕೀಯದಲ್ಲಿ ಗುರುತಿಸಿಕೊಂಡವರೆ ಆಗಿದ್ದಾರೆ. ತನ್ನವರು ಮಾಡಿದ ತಪ್ಪನ್ನು ಅನ್ಯರ ತಲೆಗೆ ಹೊರಿಸಿ ರಾಜಕೀಯ ಲಾಭ ಗಳಿಸುವುದು ಬಿಜೆಪಿಯ ಪರಂಪರಾನುಗತ ರಾಜನೀತಿ. ಒಟ್ಟಾರೆ ಪ್ರಕರಣ ಬಿಜೆಪಿಯ ದ್ವೇಷ, ಸ್ವಾರ್ಥ, ಭ್ರಷ್ಟ ರಾಜಕೀಯ ಕರ್ಮಕಾಂಡದ ಫಲಶ್ರುತಿಯಾಗಿದೆ ಹೊರತು ಇದರಲ್ಲಿ ಕಾಂಗ್ರೆಸ್ ಪಕ್ಷದ ಅಥವಾ ಸಚಿವ ಖರ್ಗೆಯವರ ಪಾತ್ರವಿಲ್ಲ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.





























































































error: Content is protected !!
Scroll to Top