ಪತ್ನಿಯ ಅನೈತಿಕ ಸಂಬಂಧಕ್ಕೆ ಪತಿ ಬಲಿ

ಕಾರ್ಕಳ : ಪತ್ನಿಯೇ ಪತಿಯನ್ನು ಕೊಲೆಗೈದ ಘಟನೆ ಮರ್ಣೆ ಗ್ರಾಮದ ಅಜೆಕಾರಿನ ದೆಪ್ಪುತ್ತೆಯಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ. ಬಾಲಕೃಷ್ಣ ಪೂಜಾರಿ (44) ಕೊಲೆಯಾದವರು, ಅವರ ಪತ್ನಿ ಪ್ರತಿಮಾ (36) ಮತ್ತು ಆಕೆಯ ಪ್ರಿಯಕರ ದಿಲೀಪ್‌ ಹೆಗ್ಡೆ (28) ಕೊಲೆಗೈದ ಆರೋಪಿಗಳು.

ಘಟನೆ
ಬಾಲಕೃಷ್ಣ ಅವರಿಗೆ 25 ದಿನಗಳ ಹಿಂದೆ ಜ್ವರ ಮತ್ತು ವಾಂತಿ ಶುರುವಾಗಿದ್ದು, ಕಾರ್ಕಳ ರೋಟರಿ ಆಸ್ಪತ್ರೆಯಲ್ಲಿ ಪರೀಕ್ಷಿಸಿದಾಗ ಕಾಮಾಲೆ ರೋಗವಿರುವುದು ಗಮನಕ್ಕೆ ಬಂದಿರುತ್ತದೆ. ಅಲ್ಲಿ 6 ದಿನ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆದಿದ್ದು, ಅನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆ ಬಳಿಕ ಮಂಗಳೂರು ವೆನ್ಲಾಕ್‌ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಅಲ್ಲಿ ಪರೀಕ್ಷಿಸಿದ ವೈದ್ಯರು ಬಾಲಕೃಷ್ಣ ಅವರಿಗೆ ನರ ರೋಗವಿರುವುದಾಗಿ ತಿಳಿಸಿರುತ್ತಾರೆ. ಬೆಂಗಳೂರಿನ ನಿಮ್ಹಾನ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆಯೂ ಸಲಹೆ ನೀಡಿರುತ್ತಾರೆ. ಅದರಂತೆ ನಿಮ್ಹಾನ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ಅಲ್ಲಿಯೂ ಗುಣಮುಖರಾಗದೇ ಇದ್ದಾಗ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಅಲ್ಲಿ 1 ವಾರ ಕಾಲ ಚಿಕಿತ್ಸೆ ಪಡೆದ ಬಳಿಕ ವೈದ್ಯಾಧಿಕಾರಿಯವರು ಬಾಲಕೃಷ್ಣ ಅವರನ್ನು ಉದ್ಯಾವರ ಅಥವಾ ಅಂಕೋಲಾ ಆಯರ್ವೇದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ತಿಳಿಸಿರುತ್ತಾರೆ. ಅ. 19ರಂದು ವಿಕ್ಟೋರಿಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆದ ಬಾಲಕೃಷ್ಣ ಅವರು ರಾತ್ರಿ 10 ಗಂಟೆಗೆ ಅಜೆಕಾರು ದೆಪ್ಪುತ್ತೆಯಲ್ಲಿರುವ ತಮ್ಮ ಮನೆಗೆ ಬಂದಿದ್ದು, ಅದೇ ದಿನ ರಾತ್ರಿ ಮನೆಯಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾರೆ.

ಅನುಮಾನ – ದೂರು ದಾಖಲು
ಬಾಲಕೃಷ್ಣ ಅವರ ಸಾವಿನ ಬಗ್ಗೆ ಅನುಮಾನಗೊಂಡ ಅವರ ಮನೆಯವರು ಅಜೆಕಾರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ಬೆನ್ನುಹತ್ತಿದ ಪೊಲೀಸರು ಬಾಲಕೃಷ್ಣ ಅವರ ಸಾವಿನ ಕುರಿತು ತನಿಖೆ ನಡೆಸಿದ್ದು ಪ್ರಕರಣವನ್ನು ಭೇದಿಸಿರುತ್ತಾರೆ. ಕೊಲೆಗೈದ ಆರೋಪಿಗಳಾದ ಬಾಲಕೃಷ್ಣ ಅವರ ಪತ್ನಿ ಪ್ರತಿಮಾ ಹಾಗೂ ಆಕೆಯ ಪ್ರಿಯಕರ ದಿಲೀಪ್‌ ಹೆಗ್ಡೆಯನ್ನು ವಶಪಡೆದಿದ್ದಾರೆ.

ಊಟದಲ್ಲಿ ಸ್ಲೋ ಪಾಯಿಸನ್ ಬೆರೆಸಿ ಕೊಲೆ
ಅಜೆಕಾರಿನ ಪ್ರತಿಮಾ ಮತ್ತು ಹಿರ್ಗಾನ ಗ್ರಾಮದ ದಿಲೀಪ್‌ ನಡುವೆ ಅನೈತಿಕ ಸಂಬಂಧವಿತ್ತು. ಈ ವಿಚಾರ ಬಾಲಕೃಷ್ಣ ಅವರಿಗೂ ತಿಳಿದಿತ್ತು ಎನ್ನಲಾಗುತ್ತಿದೆ. ತಮ್ಮ ಅನೈತಿಕ ಚಟುವಟಿಕೆಗೆ ಗಂಡ ಅಡ್ಡಿಪಡಿಸಲಿದ್ದಾನೆ ಎಂದು ಇಬ್ಬರು ಸೇರಿ ಬಾಲಕೃಷ್ಣ ಅವರ ಬಾಳನ್ನು ಮುಗಿಸಿಬಿಟ್ಟಿದ್ದಾರೆ.
ಬಾಲಕೃಷ್ಣ ಅವರನ್ನು ಕೊಲೆ ಮಾಡಲು ಸ್ಕೆಚ್‌ ರೂಪಿಸಿದ ದಿಲೀಪ್‌, ಪ್ರತಿಮಾಳಿಗೆ ವಿಷ ಪದಾರ್ಥವನ್ನು ಕೊಟ್ಟು ಅದನ್ನು ಊಟದಲ್ಲಿ ಬೆರೆಸಿ ಬಾಲಕೃಷ್ಣರಿಗೆ ನೀಡುವಂತೆ ತಿಳಿಸಿದ್ದ. ಅದರಂತೆ ಆಕೆ ಪತಿಗೆ ಊಟದಲ್ಲಿ ವಿಷ ಹಾಕಿ ಕೊಟ್ಟಿದ್ದಾಳೆ. ನಂತರ ಬಾಲಕೃಷ್ಣ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಅ. 20 ರಂದು ರಾತ್ರಿ ಸುಮಾರು 1:30 ಗಂಟೆ ಸುಮಾರಿಗೆ ದಿಲೀಪನು ಬಾಲಕೃಷ್ಣರ ಮನೆಗೆ ಬಂದಿದ್ದು, ಪ್ರತಿಮಾಳೊಂದಿಗೆ ಸೇರಿ ಬೆಡ್‌ಶೀಟ್‌ನ್ನು ಬಾಲಕೃಷ್ಣರ ಮುಖಕ್ಕೆ ಒತ್ತಿ ಹಿಡಿದು ಕೊಲೆ ಮಾಡಿದ್ದಾರೆ.

ಇನ್ಸ್ಟ್ರಾಗ್ರಾಮ್‌‌ನಲ್ಲಿ ಪರಿಚಯ
ಪ್ರತಿಮಾಳಿಗೆ ರೀಲ್ಸ್‌ ಮಾಡುವ ಹವ್ಯಾಸವಿದ್ದು ಆಕೆಗೆ ಇನ್ಸ್ಟ್ರಾಗ್ರಾಮ್‌ ಮೂಲಕ ಕಾರ್ಕಳದ ಹೋಟೆಲೊಂದರ ಮಾಲಕರ ಪುತ್ರ ದಿಲೀಪ್ ಹೆಗ್ಡೆಯ ಪರಿಚಯವಾಗಿದೆ. ಮುಂದೆ ಪರಿಚಯ ಅನೈತಿಕ ಸಂಬಂಧಕ್ಕೆ ತಿರುಗಿದೆ. ಈ ವಿಚಾರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು ಬಳಿಕ ಪೊಲೀಸರು ಇಬ್ಬರನ್ನು ಕರೆದು ಮುಚ್ಚಳಿಕೆ ಬರೆಯಿಸಿ ಎನ್‌ಸಿಆರ್ ದಾಖಲಿಸಿದ್ದರು ಎನ್ನಲಾಗುತ್ತಿದೆ. ಆದರೆ, ಅಲ್ಲಿಗೆ ಸುಮ್ಮನಾಗದ ಪ್ರತಿಮಾ ದಿಲೀಪ್‌ನೊಂದಿಗೆ ಸೇರಿ ಗಂಡವನ್ನು ಕೊಲೆಗೈದು ಅನಾರೋಗ್ಯದಿಂದ ಮೃತಪಟ್ಟರು ಎಂದು ಕಥೆ ಕಟ್ಟಿದ್ದಳು. ಘಟನೆಯನ್ನು ಮುಚ್ಚಿ ಹಾಕುವ ವ್ಯವಸ್ಥಿತ ಯೋಜನೆ ಹೂಡಿದ್ದಳು. ಏಕಾಏಕಿಯಾಗಿ ಕಾಣಿಸಿಕೊಂಡ ಅನಾರೋಗ್ಯದಿಂದ ಬಾಲಕೃಷ್ಣ ಅವರು ಮೃತಪಟಿದ್ದರಿಂದ ಅನುಮಾನಗೊಂಡ ಕುಟುಂಬದವರು ಪೊಲೀಸ್‌ ಮೆಟ್ಟಿಲೇರಿದ ಕಾರಣ ಸತ್ಯ ಬಹಿರಂಗವಾಗಿದೆ.

ಬಾಲಕೃಷ್ಣ ಅವರು ಕಾರ್ಕಳದ ನಿಟ್ಟೆ ಕಾಲೇಜಿನ ಕ್ಯಾಂಟೀನ್‌ನಲ್ಲಿ ಕೆಲಸ ಮಾಡಿಕೊಂಡಿದ್ದರು. ಪ್ರತಿಮಾ ಅಜೆಕಾರಿನಲ್ಲಿ ಬ್ಯೂಟಿ ಪಾರ್ಲರ್‌ ಹೊಂದಿದ್ದಳು. ಬಾಲಕೃಷ್ಣ ಮತ್ತು ಪ್ರತಿಮಾ ದಂಪತಿಗೆ ಒಂದು ಗಂಡು ಮತ್ತು ಒಂದು ಹೆಣ್ಣು ಸೇರಿದಂತೆ ಇಬ್ಬರು ಮಕ್ಕಳಿದ್ದು ಆ ಮಕ್ಕಳಿಗೆ ತಂದೆ ಇಲ್ಲದೇ ಅನಾಥರಾಗಿದ್ದಾರೆ.









error: Content is protected !!
Scroll to Top