ಕಾರ್ಕಳ : ಕ್ರಿಯೇಟಿವ್ ಕಾಲೇಜಿನ ಸಪ್ತಸ್ವರ ಸಭಾಂಗಣದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಸೆ. 5ರಂದು “ಕ್ರಿಯೇಟಿವ್ ಗುರುದೇವೋಭವ” ಕಾರ್ಯಕ್ರಮ ನಡೆಯಿತು. ದೀಪ ಬೆಳಗಿಸಿ, ಡಾ. ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ನಲ್ಲೂರು ಪರಪ್ಪಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಪೂರ್ಣಿಮಾ ರಮೇಶ್ ಶೆಣೈ ಅವರಿಗೆ ಸನ್ಮಾನಿಸಿ ಗುರುವಂದನೆ ಸಲ್ಲಿಸಲಾಯಿತು. ಗುರುವಂದನೆ ಸ್ವೀಕರಿಸಿ ಮಾತನಾಡಿದ ಅವರು, ಪ್ರತಿ ವ್ಯಕ್ತಿಯೂ ತಮ್ಮ ಜೀವನದಲ್ಲಿ ತಂದೆ ತಾಯಿಯ ನಂತರದ ಸ್ಥಾನವನ್ನು ಒಬ್ಬ ಗುರುವಿಗೆ ನೀಡುತ್ತಾರೆ. ಉತ್ತಮ ಶಿಕ್ಷಣ ನೀಡುವುದರ ಜೊತೆಗೆ, ಜೀವನ ಮೌಲ್ಯಗಳನ್ನು ಧಾರೆಯೆರೆಯುವ ಮೂಲಕ ವಿದ್ಯಾರ್ಥಿಗಳ ಬದುಕನ್ನು ಬೆಳಗುವವರು ಶಿಕ್ಷಕರು ಎಂದರು.
ಬೈಲೂರು ಹೊಸ ಬೆಳಕು ಸಂಸ್ಥೆಯ ವ್ಯವಸ್ಥಾಪಕಿ ತನುಲಾ ತರುಣ್ ರವರು ಮಾತನಾಡಿ, ಗುರುವಿಲ್ಲದೆ ಗುರಿಯನ್ನು ತಲುಪುವುದು ಕಷ್ಟ. ಭರವಸೆಯನ್ನು ಹೆಚ್ಚಿಸುವ, ಕನಸನ್ನು ಸಾಕಾರಗೊಳಿಸುವ, ಕಲಿಕಾ ಆಸಕ್ತಿಯನ್ನು ಹುಟ್ಟು ಹಾಕುವ ಸೂತ್ರದಾರನೇ ಶಿಕ್ಷಕ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ವಿದ್ವಾನ್ ಗಣಪತಿ ಭಟ್ ಮಾತಾನಾಡಿ, ಶಿಕ್ಷಕರು ವಿದ್ಯಾರ್ಥಿಗಳ ಜೀವನವನ್ನು ರೂಪಿಸಲು ತಮ್ಮನ್ನು ತಾವು ಅರ್ಪಿಸಿಕೊಳ್ಳುತ್ತಾರೆ. ವಿದ್ಯಾರ್ಥಿಗಳ ತಪ್ಪುಗಳನ್ನು ತಿದ್ದಿ ತೀಡಿ ಜವಾಬ್ದಾರಿಯ ಬಗ್ಗೆ ಕಲಿಸಿಕೊಡುವುದು ಶಿಕ್ಷಕರ ಕರ್ತವ್ಯ ಎಂದು ಹೇಳಿದರು


ಸನ್ಮಾನ
ಈ ಸಂದರ್ಭ ಆಂಗ್ಲ ಭಾಷಾ ಮುಖ್ಯಸ್ಥ ರಾಜೇಶ್ ಶೆಟ್ಟಿ, ಅರ್ಥಶಾಸ್ತ್ರ ಉಪನ್ಯಾಸಕ ಉಮೇಶ್ ಅವರನ್ನು ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಲಾಯಿತು. 2023ನೇ ಸಾಲಿನ ಶೈಕ್ಷಣಿಕ ವರ್ಷದ ಸಾಧಕ ವಿದ್ಯಾರ್ಥಿಗಳಾದ ಅಭಯ ಎಸ್. ಎಸ್. ಹಾಗೂ ಕಾರ್ತಿಕ್ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿ ಅಭಯ್ ರವರಿಗೆ ಪ್ರಶಸ್ತಿಯ ಜೊತೆಗೆ 25,000 ನಗದನ್ನು ಹಸ್ತಾಂತರಿಸಲಾಯಿತು. ಹೊಸಬೆಳಕು ಸಂಸ್ಥೆಗೆ ಕ್ರಿಯೇಟಿವ್ ಪುಸ್ತಕ ಮನೆ ವತಿಯಿಂದ 5000 ರೂ. ಮೌಲ್ಯದ ಪುಸ್ತಕಗಳನ್ನು ಒದಗಿಸಲಾಯಿತು.
ಸಹ ಸಂಸ್ಥಾಪಕ ಅಶ್ವತ್ ಎಸ್. ಎಲ್. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪನ್ಯಾಸಕರಾದ ಶಿವಕುಮಾರ್, ವೃಂದಾ ದಾತೆ, ಗಿರೀಶ್ ಭಟ್, ಶ್ರೀನಿಧಿ ಎಸ್. ನಾಯಕ್ ಸನ್ಮಾನ ಪತ್ರ ವಾಚಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥಾಪಕರು, ಬೋಧಕ – ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಹಿಂದಿ ಭಾಷಾ ಮುಖ್ಯಸ್ಥ ವಿನಾಯಕ ಜೋಗ್ ಸ್ವಾಗತಿಸಿ, ಕನ್ನಡ ಉಪನ್ಯಾಸಕಿ ಪ್ರಿಯಾಂಕ ತೀರ್ಥರಾಮ ಕಾರ್ಯಕ್ರಮ ನಿರೂಪಿಸಿದರು. ಜೀವಶಾಸ್ತ್ರ ಉಪನ್ಯಾಸಕ ಲೋಹಿತ್ ಎಸ್. ಕೆ. ವಂದಿಸಿದರು.





