ರಕ್ಷಿತ್‌ ಶಿವರಾಂ ಕಾರ್ಕಳ ಕಾಂಗ್ರೆಸ್‌ ಉಸ್ತುವಾರಿಯಾಗಿ ನೇಮಕ

ಕಾರ್ಕಳ: ಕಾರ್ಕಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಉಸ್ತುವಾರಿಯಾಗಿ ಯುವ ನಾಯಕ ರಕ್ಷಿತ್‌ ಶಿವರಾಂ ನೇಮಕಗೊಂಡಿದ್ದಾರೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿರುವ ರಕ್ಷಿತ್‌ ಶಿವರಾಂ ಅದರ ಜೊತೆಗೆ ಕಾರ್ಕಳದ ಉಸ್ತುವಾರಿ ಹೊಣೆಯನ್ನು ನಿಭಾಯಿಸಲಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಿನ್ನೆ ವಿವಿಧ ವಿಧಾನಸಭಾ ಕ್ಷೇತ್ರಗಳಿಗೆ ಉಸ್ತುವಾರಿಗಳನ್ನು ನೇಮಿಸಿ ಆದೇಶ ಹೊರಡಿಸಿದ್ದು, ಕಾರ್ಕಳಕ್ಕೆ ರಕ್ಷಿತ್‌ ಶಿವರಾಂ ನೇಮಕಗೊಂಡಿದ್ದಾರೆ. ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷ ಸಂಘಟನೆಯ ಚಟುವಟಿಕೆಗಳು, ಕೆಪಿಸಿಸಿಯ ವಿವಿಧ ಕಾರ್ಯಕ್ರಮಗಳ ಅನುಷ್ಠಾನ, ಚುನಾವಣೆಗಳ ನಿಭಾವಣೆ, ಸದಸ್ಯತ್ವ ನೋಂದಣಿ, ಪಕ್ಷ ಬಲವರ್ಧನೆ ಮುಂತಾದ ಹೊಣೆಗಾರಿಕೆಗಳು ಉಸ್ತುವಾರಿಗಳಿಗಿದೆ.
ಮಾಜಿ ಪೊಲೀಸ್‌ ಅಧಿಕಾರಿ, ಮೂಲತಃ ಬೆಳ್ತಂಗಡಿಯವರಾದ ಬಿ.ಕೆ.ಶಿವರಾಂ ಅವರ ಪುತ್ರನಾಗಿರುವ ರಕ್ಷಿತ್‌ ಹುಟ್ಟಿ ಬೆಳೆದದ್ದೆಲ್ಲ ಬೆಂಗಳೂರಿನಲ್ಲಿ. ಅವರ ಚಿಕ್ಕಪ್ಪ ಬಿ.ಕೆ.ಹರಿಪ್ರಸಾದ್‌ ಕಾಂಗ್ರೆಸ್‌ನ ವಿಧಾನ ಪರಿಷತ್‌ ಸದಸ್ಯ. ಯುವ ಕಾಂಗ್ರೆಸ್‌ನಲ್ಲಿ ಸಕ್ರಿಯರಾಗಿದ್ದ ರಕ್ಷಿತ್‌ಗೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಳ್ತಂಗಡಿಯಿಂದ ಟಿಕೆಟ್‌ ನೀಡಿತ್ತು. ಅವರ ಸ್ಪರ್ಧೆಯಿಂದಾಗಿ ಬೆಳ್ತಂಗಡಿ ರಾಜ್ಯದಲ್ಲಿ ಸಾಕಷ್ಟು ಕುತೂಹಲವನ್ನೂ ಕೆರಳಿಸಿತ್ತು. ಆದರೆ ಬಿಜೆಪಿಯ ಹರೀಶ್‌ ಪೂಂಜ ಎದುರು ರಕ್ಷಿತ್‌ 18,000ಕ್ಕೂ ಅಧಿಕ ಮತಗಳಿಂದ ಪರಾಭವ ಅನುಭವಿಸಿದ್ದಾರೆ. ಆದರೆ ಅನಂತರವೂ ಕ್ಷೇತ್ರದ ಸಂಪರ್ಕ ಕಡಿದುಕೊಳ್ಳದೆ ನಿರಂತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಕಾರ್ಕಳವನ್ನು ಹೇಗಾದರೂ ಮಾಡಿ ಕೈವಶ ಮಾಡಿಕೊಳ್ಳುವ ಉಮೇದಿನಲ್ಲಿರುವ ಕಾಂಗ್ರೆಸ್‌ ಇದಕ್ಕಾಗಿ ಯುವ ನಾಯಕನಿಗೆ ಉಸ್ತುವಾರಿ ವಹಿಸಿದೆ ಎನ್ನಲಾಗುತ್ತಿದೆ. ಕಾಂಗ್ರೆಸ್‌ನಲ್ಲಿ ಫಯರ್‌ ಬ್ರ್ಯಾಂಡ್‌ ಯುವ ನಾಯಕನಾಗಿ ಗುರುತಿಸಿಕೊಂಡಿರುವ ರಕ್ಷಿತ್‌ ಉತ್ತಮ ಮಾತುಗಾರ. ಸದ್ಯಕ್ಕೆ ಈ ವರ್ಷ ನಡೆಯಬಹುದಾದ ಜಿಲ್ಲಾ ಪಂಚಾಯತ್‌ ಮತ್ತು ತಾಲೂಕು ಪಂಚಾಯತ್‌ ಚುನಾವಣೆ ರಕ್ಷಿತ್‌ ಶಿವರಾಂ ಅವರ ಸಂಘಟನಾ ಸಾಮರ್ಥ್ಯವನ್ನು ಒರೆಗೆ ಹಚ್ಚಬಹುದು.



















































































error: Content is protected !!
Scroll to Top