ಜಿಪಿಎಸ್ ಸುಳಿವು, ಮೊಬೈಲ್ ರಿಂಗ್
ಕಾರವಾರ : ಅಂಕೋಲ ಸಮೀಪ ಶಿರೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಂಗಳವಾರ ಸಂಭವಿಸಿದ ಭೀಕರ ಭೂ ಕುಸಿತದಲ್ಲಿ ಒಂದಿಡೀ ಟ್ರಕ್ ಮಣ್ಣಿನ ರಾಶಿಯಡಿಯಲ್ಲಿ ಇರುವ ಶಂಕೆ ವ್ಯಕ್ತವಾಗಿದೆ. ಕೇರಳದಿಂದ ಬಂದಿದ್ದ ಅರ್ಜುನ್ ಎಂಬವರು ಚಲಾಯಿಸುತ್ತಿದ್ದ ಟ್ರಕ್ ಮತ್ತು ಸಂತೋಷ್ ಭೂಕುಸಿತ ಸಂಭವಿಸಿದ ಬಳಿಕ ನಾಪತ್ತೆಯಾಗಿದ್ದಾರೆ. ಟ್ರಕ್ ಮಾಲೀಕ ಮುನಾಫ್ ಶುಕ್ರವಾರ ಅಪಘಾತ ಸ್ಥಳಕ್ಕೆ ಭೇಟಿ ನೀಡಿದ್ದು, ವಾಹನದಿಂದ ಕೊನೆಯ ಜಿಪಿಎಸ್ ಸ್ಥಳದ ಪ್ರಕಾರ ಅವರ ಒಂದು ಟ್ರಕ್ ಅವಶೇಷಗಳಡಿಯಲ್ಲಿದೆ ಎಂದು ಹೇಳಿದ್ದಾರೆ. ಭೂಕುಸಿತದಲ್ಲಿ ಸಿಲುಕಿರುವ ಟ್ರಕ್ ಚಾಲಕ ಅರ್ಜುನ್ ಅವರ ಕುಟುಂಬ ಸದಸ್ಯರು ಶುಕ್ರವಾರ ಬೆಳಿಗ್ಗೆಯೂ ಅವರ ಮೊಬೈಲ್ ಫೋನ್ ರಿಂಗ್ ಆಗುತ್ತಿದೆ ಎಂದು ಹೇಳಿದ್ದಾರೆ. ಪೊಲೀಸರು ಮೆಟಲ್ ಡಿಟೆಕ್ಟರ್ ಸಹಾಯದಿಂದ ಸ್ಥಳವನ್ನು ಗುರುತಿಸಿದರೂ ಅವರ ಸುಳಿವು ಸಿಕ್ಕಿರಲಿಲ್ಲ.
ರಕ್ಷಣಾ ಕಾರ್ಯಾಚರಣೆ ಶನಿವಾರಕ್ಕೆ 6ನೇ ದಿನಕ್ಕೆ ಕಾಲಿಟ್ಟಿದ್ದು, ಈ ವರೆಗೂ 6 ಜನರ ಶವ ಪತ್ತೆಯಾಗಿದೆ. ನಾಲ್ವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಇನ್ನೂ ರಸ್ತೆಗೆ ಬಿದಿದರುವ ಅವಶೇಷಗಳನ್ನು ಪೂರ್ತಿಯಾಗಿ ತೆರವುಗೊಳಿಸಲು ಸಾಧ್ಯವಾಗಿಲ್ಲ. ಶೇ. 70ರಷ್ಟು ಅವಶೇಷ ತೆರವು ಮಾಡಿದ್ದರೂ ಅರ್ಜುನ್ ಚಲಾಯಿಸುತ್ತಿದ್ದ ಟ್ರಕ್‌ನ ಸುಳಿವು ಸಿಗದಿರುವುದು ಆತಂಕ ಮೂಡಿಸಿದೆ.
ಕಾರವಾರದ ನೌಕಾಪಡೆ ಸೀ-ಬರ್ಡ್‌ನ ಆಳಸಮುದ್ರ ಡೈವರ್‌ಗಳು ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್) ಗಂಗವಳಿ ನದಿಯ ಕೆಸರು ನೀರನ್ನು ಸ್ಕ್ಯಾನ್ ಮಾಡಿದ ನಂತರ ಶುಕ್ರವಾರ ರಕ್ಷಣಾ ಕಾರ್ಯಾಚರಣೆ ವೇಗ ಪಡೆದಿದೆ. ಭಾರೀ ಮಳೆ ಪ್ರವಾಹ ರಕ್ಷಣಾ ಕಾರ್ಯಾಚರಣೆಯನ್ನುಜಟಿಲಗೊಳಿಸಿದೆ.
ಇನ್ನೂಇಲ್ಲಿ ಭೂಕುಸಿತ ಸಂಭವಿತ್ತಿರುವುದರಿಂದ ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ಅನುಮತಿಸಲು ಅಧಿಕಾರಿಗಳು ಇನ್ನೂ ನಿರ್ಧರಿಸಿಲ್ಲ. ಧಾರಾಕಾರ ಮಳೆಯ ನಡುವೆಯೂ ಮಣ್ಣು ತೆರವು ಭರದಿಂದ ಸಾಗಿದ್ದು, ಐಆರ್‌ಬಿ ಸಿಬ್ಬಂದಿ ತೆರವು ಮಾಡುತ್ತಿದ್ದಾರೆ.
ಎನ್‌ಡಿಆರ್‌ಎಫ್, ಪೊಲೀಸ್ ತಂಡಗಳು ಶೋಧ ಕಾರ್ಯ ಮುನ್ನಡೆಸಿವೆ. ಮಳೆಯಿಂದಾಗಿ ಗುಡ್ಡದಿಂದ ಝರಿಯಂತೆ ನೀರು ಹರಿದುಬರುತ್ತಿದ್ದು, ಮತ್ತೆ ಗುಡ್ಡ ಕುಸಿತ ಭೀತಿ ತಲೆದೋರಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕಾರ್ಯಾಚರಣೆ ಪ್ರದೇಶದಲ್ಲಿ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿದೆ.
ಜಿಲ್ಲಾಡಳಿತದ ಮಾಹಿತಿಯಂತೆ ಇಲ್ಲಿ 10 ಮಂದಿ ಕಣ್ಮರೆಯಾಗಿದ್ದಾರೆ. ಇವರಲ್ಲಿ 6 ಮಂದಿಯ ಶವಗಳು ಸಿಕ್ಕಿವೆ ಹಾಗೂ ಇನ್ನೂ ನಾಲ್ವರಿಗಾಗಿ ಶೋಧ ನಡೆಯುತ್ತಿದೆ. ಶಿರೂರು ಗ್ರಾಮದ ಜಗನ್ನಾಥ್ ನಾಯ್ಕ್ ಮತ್ತು ಸನ್ನಿಗೌಡ ಮತ್ತು ಕೇರಳದ ಟ್ರಕ್ ಚಾಲಕ ಅರ್ಜುನ್ ಎಂಬ ಮೂವರು ಇನ್ನೂ ನಾಪತ್ತೆಯಾಗಿದ್ದಾರೆ. ಅವರ ಪತ್ತೆಗಾಗಿ ಶನಿವಾರ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಜಿಲ್ಲಾಡಳಿತ ಹೇಳಿದೆ.




























