ಬೇಸಿಗೆಯಲ್ಲಿ ಬೆಲ್ಲ ಸೇವಿಸಿ

ಯಾವುದೇ ರಾಸಾಯನಿಕ ಬಳಸದೆ ತಯಾರಿಸಿದಂತಹ ಗಾಢ ಬಣ್ಣದ ಬೆಲ್ಲವು ಆರೋಗ್ಯದಾಯಕ. ಸಂಸ್ಕೃತದಲ್ಲಿ ಬೆಲ್ಲವನ್ನು ಗುಡ ಎಂದು ಕರೆಯುತ್ತಾರೆ.
ಹೊಸ ಬೆಲ್ಲ ಹಾಗೂ ಹಳೆಯ ಬೆಲ್ಲದ ಗುಣಗಳಲ್ಲಿ ವ್ಯತ್ಯಾಸವಿದೆ. ಹೊಸ ಬೆಲ್ಲವು ಕಫವನ್ನು ಕುಪಿತಗೊಳಿಸಿ ಅಜೀರ್ಣಕ್ಕೆ ಕಾರಣವಾಗುತ್ತದೆ. ಹಳೆಯ ಬೆಲ್ಲದ ಉಪಯೋಗಗಳು ಅಪಾರ. ಹಳೆಯ ಬೆಲ್ಲ ಎಂದರೆ ಒಂದು ವರ್ಷ ಹಳೆಯದಾಗಿರಬೇಕು. ಹಳೆಯಬೆಲ್ಲವು ಸಿಹಿರಸ, ಜಿಡ್ಡು, ಹಗುರ ಹಾಗೂ ಜೀರ್ಣಕಾರಕ ಗುಣದಿಂದ ಕೂಡಿದೆ. ಕರುಳನ್ನು, ಮೂತ್ರಪಿಂಡವನ್ನು ಹಾಗೂ ಹೊಟ್ಟೆಯನ್ನು ಶುದ್ಧಗೊಳಿಸುತ್ತದೆ. ಬಾಯಿ ರುಚಿಯನ್ನು ಹೆಚ್ಚಿಸುತ್ತದೆ. ಹೃದಯಕ್ಕೆ ಬಹಳ ಉತ್ತಮ. ವಿಶೇಷವಾಗಿ ವಾತ ಹಾಗೂ ಪಿತ್ತದೋಷವನ್ನು ಸಮತೋಲನಗೊಳಿಸುತ್ತದೆ.

ಜ್ವರ, ನೆಗಡಿ, ಕೆಮ್ಮು ಹಾಗೂ ಆಯಾಸವನ್ನು ದೂರ ಮಾಡುತ್ತದೆ. ಅನಿಮಿಯಾ ಹಾಗೂ ಮೂತ್ರಪಿಂಡದ ಕಾಯಿಲೆಗಳನ್ನು ದೂರಮಾಡುತ್ತದೆ.
ಸಕ್ಕರೆಗಿಂತ ಬೆಲ್ಲ ಅತ್ಯುತ್ತಮ ಹಾಗೂ ಆರೋಗ್ಯದಾಯಕ. ಸ್ವೀಟ್, ಜ್ಯೂಸ್, ಟೀ, ಕಾಫಿಗೆ ಸಕ್ಕರೆಯ ಬದಲಿಗೆ ಬೆಲ್ಲವನ್ನು ಉಪಯೋಗಿಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.

ಕೆಲವು ಆಯುರ್ವೇದ ಔಷಧದ ತಯಾರಿಕೆಯಲ್ಲಿ ಬೆಲ್ಲವನ್ನು ಬಳಸುತ್ತಾರೆ. ಉದಾಹರಣೆಗೆ ಆಸವ, ಅರಿಷ್ಟ, ಸಿರಪ್, ಕಷಾಯ, ಗುಳಿಗೆಯ ತಯಾರಿಕೆಯಲ್ಲಿ ಬೆಲ್ಲವನ್ನು ಉಪಯೋಗಿಸುತ್ತಾರೆ.

ಬೆಲ್ಲವನ್ನು ಹೀಗೆ ಉಪಯೋಗಿಸಿ
-ವಾತಾವರಣದಲ್ಲಿ ಉಷ್ಣಾಂಶ ಅಧಿಕವಿದ್ದಾಗ, ಬೇಸಿಗೆಯಲ್ಲಿ ಅಥವಾ ಮಧ್ಯಾಹ್ನದ ಸಮಯದಲ್ಲಿ ಬೆಲ್ಲ ಹಾಗೂ ನೀರನ್ನು ಸೇವಿಸಿದರೆ, ಅದು ನಮ್ಮ ದೇಹವನ್ನು ತಂಪುಗೊಳಿಸುವುದಲ್ಲದೆ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.
-ವಾತ ಹಾಗೂ ಕಫ ರೋಗಗಳಲ್ಲಿ ಬೆಲ್ಲವನ್ನು ಶುಂಠಿಯ ಜೊತೆ ಸೇವಿಸುವುದರಿಂದ ಲಾಭವು ಅಧಿಕ. ಕೆಮ್ಮು, ನೆಗಡಿ, ಜ್ವರದಿಂದ ಬಳಲಿದಾಗ ಬೆಲ್ಲದಿಂದ ತಯಾರಿಸಿದ ಪಾನಕ ಅಥವಾ ಕಷಾಯವನ್ನು ಸೇವಿಸುವುದು ಲಾಭದಾಯಕ.
-ಬೆಲ್ಲವನ್ನು ಸೇವಿಸುವುದರಿಂದ ರೋಗ ನಿರೋಧಕಶಕ್ತಿ ಹೆಚ್ಚುತ್ತದೆ .
-ಹಾಲಿನಲ್ಲಿ ಬೆಲ್ಲ ಬೆರೆಸಿ ಸೇವಿಸಿದಾಗ ದುರ್ಬಲತೆಯೂ ದೂರವಾಗುತ್ತದೆ ಹಾಗು ಮೂಳೆಗಳು ಹಾಗೂ ಸಂದುಗಳು ಸದೃಢಗೊಳ್ಳುತ್ತದೆ.
-ಬೆಲ್ಲವು ಕರುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸಿ ಮಲಬದ್ಧತೆಯನ್ನು ದೂರ ಮಾಡುತ್ತದೆ .
-ಆಹಾರ ಸೇವಿಸಿದ ಬಳಿಕ ಒಂದು ತುಂಡು ಬೆಲ್ಲ, ಒಂದು ಚಿಟಿಕೆ ಕರಿಮೆಣಸಿನಪುಡಿ, ಮೂರು ಚಿಟಿಕೆ ಒಣ ಶುಂಠಿ ಪುಡಿ, ಒಂದು ಚಮಚ ಜೇನು ತುಪ್ಪವನ್ನು ಬೆರೆಸಿ, ದಿನಕ್ಕೆ ಮೂರು ಹೊತ್ತು ಸೇವಿಸಿದರೆ ನೆಗಡಿ ದೂರವಾಗುವುದು.
-ಒಂದು ಬೆಲ್ಲದ ತುಂಡು, ಮೂರು ಚಿಟಿಕೆ ಒಣ ಶುಂಠಿ ಪುಡಿಯನ್ನು ಬಿಸಿನೀರಿನ ಜೊತೆ ಸೇವಿಸಿದಾಗ ಬಿಕ್ಕಳಿಕೆ ಹಾಗು ಸಂದು ನೋವು ಕಡಿಮೆಯಾಗುತ್ತದೆ.
-ಎರಡು ಚಮಚ ಬೆಲ್ಲ, ಒಂದು ಚಮಚ ಹಸುವಿನ ತುಪ್ಪ ಬೆರೆಸಿ ದಿನಕ್ಕೆ ಎರಡು ಹೊತ್ತು ಖಾಲಿ ಹೊಟ್ಟೆಯಲ್ಲಿ ಸೇವಿಸಿದಾಗ ಮೈಗ್ರೇನ್ ತಲೆನೋವು ದೂರವಾಗುತ್ತದೆ.
-ಊಟವಾದ ಬಳಿಕ ಒಂದು ಬೆಲ್ಲದ ತುಂಡನ್ನು ಸೇವಿಸುವುದರಿಂದ ವಾಯುವು (flatulence) ಕಡಿಮೆಗೊಳ್ಳುತ್ತದೆ.
-ಸಕ್ಕರೆ ಕಾಯಿಲೆ ಇದ್ದವರಿಗೆ ಸಕ್ಕರೆಯ ಬದಲಾಗಿ ಬೆಲ್ಲ ಉಪಯೋಗಿಸುವುದು ಹಿತಕರ. ಆದರೆ ಅಲ್ಪ ಪ್ರಮಾಣದಲ್ಲಿ ಸೇವಿಸಿರಿ.
-ಬೆಲ್ಲವು ಹೃದಯಕ್ಕೆ ಹಾಗೂ ಯಕೃತ್ತಿಗೆ ಒಳ್ಳೆಯದು. ರಕ್ತವನ್ನು ಶುದ್ಧೀಕರಿಸುತ್ತದೆ.
-ಚಳಿಗಾಲದಲ್ಲಿ ಬೆಲ್ಲವನ್ನು ಉಪಯೋಗಿಸಿದರೆ ದೇಹಕ್ಕೆ ಬೇಕಾಗುವ ಉಷ್ಣಾಂಶವು ದೊರೆಯುತ್ತದೆ. ಬೆಲ್ಲದಿಂದ ತಯಾರಿಸಿದ ಆಹಾರವನ್ನು ಸೇವಿಸಿ. ಬೆಲ್ಲದ ಜೊತೆ ನೆಲಕಡಲೆ ಸೇವಿಸುವುದು ಅಥವಾ ಬೆಲ್ಲ ಮತ್ತು ಎಳ್ಳು ಸೇವಿಸುವುದು ಆರೋಗ್ಯಕರ.
-ಅಲ್ಸರೇಟಿವ್ ಕೊಲೈಟಿಸ್, ಉರಿಯೂತ ,ಅಧಿಕ ಬೊಜ್ಜು ಇರುವವರು ಬೆಲ್ಲವನ್ನು ಕಡಿಮೆ ಸೇವಿಸಿರಿ.

ದಿನಾಲು 15 gm ಬೆಲ್ಲವನ್ನು ಸೇವಿಸಿ ಆರೋಗ್ಯದಿಂದಿರಿ.





























































































error: Content is protected !!
Scroll to Top