ಅಭಿವೃದ್ಧಿ ಹೆಸರಿನಲ್ಲಿ ಮರಗಳನ್ನು ಕಡಿದಿರುವುದರಿಂದ ಜನರಿಗೆ ನೆರಳಿಲ್ಲ
ಕಾರ್ಕಳ ತಾಲೂಕಿನ ಸಾಣೂರು ಗ್ರಾಮದಿಂದ ಹಿಡಿದು ಮಂಗಳೂರಿನ ಬಿಕರ್ನಕಟ್ಟೆಯವರೆಗೆ ಒಟ್ಟು ಇಪ್ಪತ್ತು ಗ್ರಾಮಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಚತುಷ್ಪಥ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಿಂತ ಮೊದಲು ರಸ್ತೆಯ ಎರಡೂ ಬದಿಗಳಲ್ಲಿ ಬಹಳಷ್ಟು ದೊಡ್ಡ ಗಾತ್ರದ ಮರಗಳು ರಸ್ತೆಯಲ್ಲಿ ಪ್ರಯಾಣಿಸುವವರಿಗೆ ಮತ್ತು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುವವರಿಗೆ ನೆರಳು ಮತ್ತು ನೆರವು ಒದಗಿಸುತ್ತಿದ್ದವು.
ಹೆದ್ದಾರಿ ಅಗಲ ಮಾಡುವಾಗ ಬದಿಯಲ್ಲಿರುವ ಮರಗಳನ್ನು ಕಡಿಯುವುದು ಅನಿವಾರ್ಯ. ಈಗಾಗಲೇ ಈ ಹೆದ್ದಾರಿ ಬದಿಯ ಮರಗಳನ್ನು ಕಡಿದುರುಳಿಸಿ ಅಗಿದೆ. ಇನ್ನಿರುವ ಪ್ರಶ್ನೆ ಮುಂದೆ ಗಿಡಗಳನ್ನು ನೆಡುವುದು ಯಾವಾಗ ಎನ್ನುವುದು.
ರಾಷ್ಟ್ರೀಯ ಹೆದ್ದಾರಿ ರಸ್ತೆ ಬದಿಯಲ್ಲಿ ಮರಗಳು ಇಲ್ಲದಿರುವುದರಿಂದ ಜನರಿಗೆ ಬಹಳಷ್ಟು ಕಷ್ಟವಾಗುತ್ತಿದೆ. ದಿಲೀಪ್ ಬಿಲ್ಡ್ ಕಾಲ್ ಕಂಪನಿಯ ಕನ್ಸ್ಟ್ರಕ್ಷನ್ ಮ್ಯಾನೇಜರ್ ಬಾಲಾಜಿಯವರಿಗೆ ರಸ್ತೆ ಬದಿ ಗಿಡಗಳನ್ನು ಯಾವಾಗ ನೆಡುತ್ತೀರಿ ಎಂದು ಕೇಳಿದಾಗ, ಸಾಣೂರು ಗ್ರಾಮ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಕೆಲಸ ಕಾರ್ಯಗಳು ಇನ್ನೂ ಸಂಪೂರ್ಣವಾಗಿ ಮುಗಿದಿಲ್ಲ. ಸಾಣೂರು ಸೇತುವೆ ಮತ್ತು ಸುಮಾರು 800 ಮೀಟರ್ನಷ್ಟು ಮುಖ್ಯರಸ್ತೆಯ ಕಾಮಗಾರಿ ಹಾಗೂ ಕೆಲವೆಡೆ ಸರ್ವಿಸ್ ರಸ್ತೆ ಕಾಮಗಾರಿ ಬಾಕಿ ಇದೆ. ಆ ಬಳಿಕ ಮೊದಲಿಗೆ ಸರ್ವಿಸ್ ರಸ್ತೆ ಬದಿಯಲ್ಲಿ ಬೀದಿ ದೀಪಗಳ ವ್ಯವಸ್ಥೆಯನ್ನು ಮಾಡುತ್ತೇವೆ. ಆ ಬಳಿಕ ಗಿಡ ನೆಡುವ ಕಾರ್ಯಕ್ರಮ ಎಂದು ತಿಳಿಸಿರುತ್ತಾರೆ. ಎಂದರೆ ಇದು ಇನ್ನೂ 2-3 ವರ್ಷ ತೆಗೆದುಕೊಳ್ಳುವ ಪ್ರಕ್ರಿಯೆ ಎಂದಾಯಿತು.
ಕಳೆದ ವರ್ಷ ಫುಲ್ಕೇರಿ ಬೈಪಾಸ್ ಸರ್ಕಲ್ಗಿಂತ ಸ್ವಲ್ಪ ಮುಂದೆ ಮೂಡುಬಿದಿರೆ ರಸ್ತೆಯ ಬಲಭಾಗದಲ್ಲಿ ಸಾಣೂರು ಶ್ರೀನಿವಾಸನಗರಕ್ಕೆ ಹೋಗುವ ದಾರಿಯುದ್ದಕ್ಕೂ ತೀರಾ ಹತ್ತಿರ ಹತ್ತಿರ ಗಿಡಗಳನ್ನು ಅರಣ್ಯ ಇಲಾಖೆಯವರು ನೆಟ್ಟಿದ್ದರು. ಈ ಬಗ್ಗೆ ಮೂಡುಬಿದಿರೆ ರೇಂಜ್ ಫಾರೆಸ್ಟ್ ಆಫೀಸರ್ ದಿನೇಶ್ ಅವರನ್ನು ವಿಚಾರಿಸಿದಾಗ, ಸಾಣೂರು ಭಾಗದಲ್ಲಿ ಪ್ರಾಯೋಗಿಕವಾಗಿ ಕಾರ್ಕಳ ಅರಣ್ಯ ಇಲಾಖೆಯವರು ದೂಪದ ಗಿಡಗಳನ್ನು ನೆಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಈಗಾಗಲೇ ರಸ್ತೆ ಬದಿಯಿಂದ ತೆಗೆದಿರುವ ಪ್ರತಿ ಒಂದು ಮರಕ್ಕೆ ಹತ್ತರಂತೆ ಸಸಿ ನೆಡಲು ಅರಣ್ಯ ಇಲಾಖೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಹಣ ಕಟ್ಟಿದ್ದಾರೆ. ಆದರೆ ವಾಸ್ತವದಲ್ಲಿ ಒಂದಕ್ಕೆ ಹತ್ತರಂತೆ ಎಲ್ಲ ಮರಗಳನ್ನು ರಸ್ತೆ ಬದಿಯಲ್ಲಿ ನೆಡಲು ಸಾಧ್ಯವಿಲ್ಲ.
ಅವಕಾಶವಿರುವೆಡೆ ರಸ್ತೆ ಬದಿಯಲ್ಲಿ ಗಿಡ ನೆಟ್ಟು ಆದ ನಂತರ ಉಳಿದ ಗಿಡಗಳನ್ನು ಆಸುಪಾಸಿನ ಲಭ್ಯವಿರುವ ಸರಕಾರಿ ಜಾಗದಲ್ಲಿ ನೆಡುವುದು ಉತ್ತಮ.
ಗಿಡ ನೆಡುವಾಗ ಆಸಕ್ತ ಸ್ವಯಂಸೇವಾ ಸಂಸ್ಥೆಗಳು, ನಾಗರಿಕರು ಹಾಗೂ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯವರ ಸಹಭಾಗಿತ್ವ ಪಡೆದುಕೊಳ್ಳಬಹುದು.

ಟ್ರೀ ಪಟ್ಟಾ ಯೋಜನೆ
ಈಗಾಗಲೇ ರಾಜ್ಯದ ಬಯಲುಸೀಮೆ ಪ್ರದೇಶಗಳಲ್ಲಿ ಕಳೆದ ಎರಡು ದಶಕಗಳಿಂದ ಟ್ರೀ ಪಟ್ಟಾ ಎಂಬ ಯೋಜನೆ ಜಾರಿಯಲ್ಲಿದೆ. ಮೂಡುಬಿದಿರೆ ಭಾಗದಲ್ಲಿ ಡಾ. ಮೋಹನ್ ಆಳ್ವ ಮೂಡುಬಿದಿರೆ ರೋಟರಿ ಕ್ಲಬ್ ಸಹಯೋಗದೊಂದಿಗೆ ಅಲಂಗಾರಿನಿಂದ ಕೊಡ್ಯಡ್ಕಕ್ಕೆ ಹೋಗುವ ರಸ್ತೆಯ ಎರಡು ಬದಿಗಳಲ್ಲಿ ಈ ಯೋಜನೆಯ ಪ್ರಕಾರ ಗಿಡಗಳನ್ನು ಮರಗಳಾಗಿ ಬೆಳೆಸಿರುತ್ತಾರೆ.
ಏನಿದು ಟ್ರೀ ಪಟ್ಟಾ ಯೋಜನೆ?
ಯಾರಾದರೂ ಆಸಕ್ತರು ಟ್ರೀ ಪಟ್ಟಾ ಯೋಜನೆ ಅಡಿಯಲ್ಲಿ ಗಿಡಗಳನ್ನು ನೆಟ್ಟು ಸಾಕಿ ಬೆಳೆಸಿ ರಕ್ಷಣೆ ಮಾಡಲು ಇಚ್ಚಿಸಿದರೆ ಅರಣ್ಯ ಇಲಾಖೆ ಉಚಿತವಾಗಿ ಅವರ ಪಟ್ಟಾ ಜಾಗದ ಮುಂಭಾಗದಲ್ಲಿ ಗಿಡಗಳನ್ನು ನೆಟ್ಟು ಮರಗಳನ್ನಾಗಿ ಬೆಳೆಸಲು ಸಂಪೂರ್ಣ ಜವಾಬ್ದಾರಿಯನ್ನು ವಹಿಸುತ್ತದೆ. ಮುಂದೆ ಆ ಗಿಡಗಳ ಬೆಳವಣಿಗೆ, ರಕ್ಷಣೆ, ಬೆಳೆದ ಮರಗಳನ್ನು ಅರಣ್ಯ ಇಲಾಖೆಯ ಅನುಮತಿಯೊಂದಿಗೆ ಕಡಿದು ಅದರ ಲಾಭವನ್ನು ಕೂಡ ಜಾಗದವರು ಪಡೆಯಬಹುದು ಅಥವಾ ಸರಕಾರಕ್ಕೆ ಬಿಟ್ಟು ಕೊಡಬಹುದು.
ಕೋಡ್ಯಡ್ಕ “ಟ್ರಿಪಟ್ಟಾ ಯೋಜನೆ” ಅಡಿಯಲ್ಲಿ ಈಗಾಗಲೇ 20 ವರ್ಷಗಳಲ್ಲಿ ಮರಗಳು ಬೃಹತ್ ಗಾತ್ರದಲ್ಲಿ ಬೆಳೆದಿವೆ. ಕೆಲವು ಮರಗಳನ್ನು ಕಡಿಯಲು ಅರಣ್ಯ ಇಲಾಖೆಗೆ ಟ್ರೀ ಪಟ್ಟಾ ಯೋಜನೆಯವರು ಬಿಟ್ಟುಕೊಟ್ಟಿದ್ದಾರೆ.
ಸಾಣೂರಿನಿಂದ ಮೂಡುಬಿದಿರೆಯ ಅಲಂಗಾರುವರೆಗೆ ಸುಮಾರು 15 ಕಿ.ಮೀ ಉದ್ದಕ್ಕೆ ಹೆದ್ದಾರಿಯ ಎರಡೂ ಬದಿಗಳಲ್ಲಿ ಗಿಡ ನೆಡುವ ಕಾರ್ಯಕ್ರಮದ ಯೋಜನೆ ಇನ್ನೂ ರೂಪಿಸಿಲ್ಲ. ಬರುವ ವರ್ಷ ಸಿದ್ಧಪಡಿಸುತ್ತೇವೆ ಎನ್ನುವುದು ಅರಣ್ಯ ಇಲಾಖೆಯವರ ಭರವಸೆ.
ಹೆದ್ದಾರಿ ಕಾಮಗಾರಿ ಸಂಪೂರ್ಣ ಮುಗಿಯದೆ ಈಗಲೇ ರಸ್ತೆ ಬದಿಗಳಲ್ಲಿ ಗಿಡ ಬೆಳೆಸಿದರೆ ವಿದ್ಯುತ್ ಲೈನ್ ಎಳೆಯುವಾಗ ಅವುಗಳನ್ನು ಕಡಿಯಬೇಕಾಗುತ್ತದೆ.
ಬರುವ ವರ್ಷದಿಂದ ಸುಮಾರು ರಾಷ್ಟ್ರೀಯ ಹೆದ್ದಾರಿಯ 45 ಕಿ.ಮೀ. ಉದ್ದಕ್ಕೆ ಎರಡೂ ಬದಿಗಳಲ್ಲಿ ಜನರ ಸಹಭಾಗಿತ್ವದೊಂದಿಗೆ ಮಾದರಿಯಾಗಿ ಸಸಿಗಳನ್ನು ನೆಟ್ಟು ಬೆಳೆಸಿ ರಕ್ಷಣೆ ಮಾಡಿದರೆ ಮಾದರಿಯಾದ ಪ್ರಕೃತಿ ಸಂರಕ್ಷಣೆ ಕಾರ್ಯ ಮಾಡಬಹುದು. ಅಭಿವೃದ್ಧಿಯ ಜೊತೆಗೆ ಪ್ರಕೃತಿ ಸಂರಕ್ಷಣೆ ಅತಿ ಅಗತ್ಯ.
ದಿನೇಶ್ ಮೂಡುಬಿದಿರೆ
ಫಾರೆಸ್ಟ್ ರೇಂಜರ್
ಸಾಣೂರು ನರಸಿಂಹ ಕಾಮತ್




























































