ನೂತನ ಮುಖ್ಯಮಂತ್ರಿಯಾಗಿ ನಯಾಬ್ ಸಿಂಗ್ ಸೈನಿ
ಚಂಡೀಗಢ : ಹರಿಯಾಣ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಮನೋಹರ್ ಲಾಲ್ ಖಟ್ಟರ್ ರಾಜೀನಾಮೆ ಸಲ್ಲಿಸಿದ್ದು, ನೂತನ ಮುಖ್ಯಮಂತ್ರಿಯಾಗಿ ನಯಾಬ್ ಸಿಂಗ್ ಸೈನಿ ಅಧಿಕಾರ ಸ್ವೀಕರಿಸಲಿದ್ದಾರೆ.
ಹರ್ಯಾಣದಲ್ಲಿ ಬಿಜೆಪಿ ಮತ್ತು ಜನನಾಯಕ್ ಜನತಾ ಪಕ್ಷ (JJP)ಗಳ ನಡುವೆ ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆಯ ಮಾತುಕತೆಯಲ್ಲಿ ಉಂಟಾದ ಭಿನ್ನಾಭಿಪ್ರಾಯಗಳ ನಡುವೆ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರನ್ನು ಭೇಟಿ ಮಾಡಿ ಮನೋಹರ್ ಲಾಲ್ ಖಟ್ಟರ್ ರಾಜೀನಾಮೆ ಸಲ್ಲಿಸಿದ್ದಾರೆ.
ಇದೀಗ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ನೂತನ ಸಿಎಂ ಅನ್ನು ಆಯ್ಕೆ ಮಾಡಲಾಗಿದ್ದು, ಪಕ್ಷದ ಶಾಸಕರ ಅಭಿಪ್ರಾಯ ಪಡೆದು ನೂತನ ಮುಖ್ಯಮಂತ್ರಿಯನ್ನಾಗಿ ನಾಯಬ್ ಸಿಂಗ್ ಸೈನಿ ಅವರನ್ನು ಬಿಜೆಪಿ ಹೈಕಮಾಂಡ್ ಘೋಷಿಸಿದೆ. ಮೂಲಗಳ ಪ್ರಕಾರ ಇಂದು ಸಂಜೆ 5 ಗಂಟೆಗೆ ನೂತನ ಸಿಎಂ ಪ್ರಮಾಣ ವಚನ ನಡೆಯಲಿದೆ.

ನೈಬ್ ಸಿಂಗ್ ಸೈನಿ ಅವರು 2009 ರಲ್ಲಿ ಬಿಜೆಪಿ ಕಿಸಾನ್ ಮೋರ್ಚಾ ಹರಿಯಾಣದ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಅಲಂಕರಿಸಿದ್ದರು. ಇದಾದ ನಂತರ 2012ರಲ್ಲಿ ಅಂಬಲದಿಂದ ಬಿಜೆಪಿ ಜಿಲ್ಲಾಧ್ಯಕ್ಷರಾದರು. ನಂತರ 2014ರಲ್ಲಿ ಅವರು ನಾರಾಯಣ ಘರ್ ಅಸೆಂಬ್ಲಿಯಿಂದ ಶಾಸಕರಾದರು. ನಂತರ 2016ರಲ್ಲಿ ಅವರು ಹರಿಯಾಣ ಸರ್ಕಾರದಲ್ಲಿ ರಾಜ್ಯ ಸಚಿವರಾಗಿದ್ದರು. ಅವರು 2019 ರಲ್ಲಿ ಕುರುಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದರು. ಇದಾದ ಬಳಿಕ ಕೇಂದ್ರ ನಾಯಕತ್ವ ಅವರನ್ನು ಹರಿಯಾಣ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿತ್ತು.









































