ಮುಂದುವರಿದ ಬಿಜೆಪಿ ಟಿಕೆಟ್‌ ಬೇಗುದಿ

ಹೊಸದಿಲ್ಲಿ: ಲೋಕಸಭಾ ಚುನಾವಣೆಗೆ ಕರ್ನಾಟಕದಿಂದ ಅಭ್ಯರ್ಥಿಗಳ ಆಯ್ಕೆ ಬಿಜೆಪಿ ಪಾಲಿಗೆ ಕಗ್ಗಂಟಾಗಿಯೇ ಉಳಿದಿದೆ. ಈ ಸಲ ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಂಡಿರುವುದರಿಂದ ಕನಿಷ್ಠ 3 ಸ್ಥಾನಗಳನ್ನು ಬಿಟ್ಟುಕೊಡಬೇಕಾಗುತ್ತದೆ. ಉಳಿದ 25 ಸ್ಥಾನಗಳಲ್ಲಿ ಬಹುತೇಕ ಕಡೆ ಒಂದಕ್ಕಿಂತ ಹೆಚ್ಚು ಆಕಾಂಕ್ಷಿಗಳಿರುವುದರಿಂದ ಆಯ್ಕೆ ಜಟಿಲವಾಗುತ್ತಿದೆ. ಅದರಲ್ಲೂ ದಕ್ಷಿಣ ಕನ್ನಡ, ಕೊಡಗು-ಮೈಸೂರು ಮತ್ತು ಉತ್ತರ ಕನ್ನಡ ಕ್ಷೇತ್ರಗಳು ಬಿಜೆಪಿ ವರಿಷ್ಠರ ತಲೆನೋವಿಗೆ ಕಾರಣವಾಗಿದೆ.
ನಿನ್ನೆಯೂ ದಿಲ್ಲಿಯಲ್ಲಿ ಬಿಜೆಪಿಯ ಉನ್ನತ ಸಭೆ ನಡೆದಿದ್ದು, ಅದರಲ್ಲಿ ಕರ್ನಾಟಕದ ಸುಮಾರು 18 ಸೇರಿ 100ಕ್ಕೂ ಅಧಿಕ ಅಭ್ಯರ್ಥಿಗಳ ಎರಡನೇ ಪಟ್ಟಿ ಅಂತಿಮವಾಗಿದ್ದು, ಇಂದು ಹೆಸರು ಘೋಷಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ದಕ್ಷಿಣ ಕನ್ನಡದಲ್ಲಿ ನಳಿನ್‌ ಕುಮಾರ್‌ ಕಟೀಲು, ಕೊಡಗು-ಮೈಸೂರಲ್ಲಿ ಪ್ರತಾಪ್‌ ಸಿಂಹ ಮತ್ತು ಉತ್ತರ ಕನ್ನಡದಲ್ಲಿ ಅನಂತಕುಮಾರ್‌ ಅವರಿಗೆ ಟಿಕೆಟ್‌ ಸಿಗುವುದಿಲ್ಲ ಎಂಬ ವದಂತಿ ದಿನದಿಂದ ದಿನಕ್ಕೆ ದಟ್ಟವಾಗುತ್ತಿದೆ. ನಿನ್ನೆ ಮಧ್ಯರಾತ್ರಿ ಹೊತ್ತು ಪ್ರತಾಪ್‌ ಸಿಂಹ ಫೇಸ್‌ಬುಕ್‌ ಲೈವ್‌ ಬಂದು ವಿದಾಯ ಭಾಷಣ ಮಾಡಿರುವುದು ಅವರಿಗೆ ಟಿಕೆಟ್‌ ಕೈತಪ್ಪುವ ಸಾಧ್ಯತೆಯನ್ನು ಬಹುತೇಕ ಖಚಿತಗೊಳಿಸಿದೆ.

ನಳಿನ್‌ ಕುಮಾರ್‌ ಕಟೀಲ್‌ಗೆ ಟಿಕೆಟ್‌ ನೀಡಬಾರದು ಎಂದು ವರ್ಷಕ್ಕೂ ಮೊದಲೇ ಅಭಿಯಾನ ಶುರುವಾಗಿತ್ತು. ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪಕ್ಷದ ಅಧ್ಯಕ್ಷರಾಗಿ ನಳಿನ್‌ ತೆಗೆದುಕೊಂಡಿರುವ ನಿರ್ಧಾರಗಳು ಈ ಅಭಿಯಾನವನ್ನು ಇನ್ನಷ್ಟು ಬಲಗೊಳಿಸಿವೆ. ಆದರೆ ಅಭಿವೃದ್ಧಿ ವಿಚಾರದಲ್ಲಿ ನಳಿನ್‌ ಅವರನ್ನು ದೂರುವ ಹಾಗಿಲ್ಲ. ಸಾಕಷ್ಟು ಅನುದಾನವನ್ನು ಅವರು ಸಂಸದರಾಗಿ ತಂದಿದ್ದಾರೆ ಮತ್ತು ಅವರ ಪಕ್ಷ ನಿಷ್ಠೆಯೂ ಪ್ರಶ್ನಾತೀತ. ಈ ಕಾರಣಕ್ಕೆ ಅವರಿಗೆ ಟಿಕೆಟ್‌ ಕೊಡಬೇಕೆಂಬ ಆಗ್ರಹವೂ ಇದೆ.

ಉತ್ತರ ಕನ್ನಡದಲ್ಲಿ ಅನಂತಕುಮಾರ್‌ ವಿವಾದಗಳಿಂದಲೇ ಹೆಚ್ಚು ಪ್ರಸಿದ್ಧರಾದವರು. ಆಯ್ಕೆಯಾಗಿ ಹೋದ ಬಳಿಕ ಜನರಿಗೆ ಸಿಗುವುದಿಲ್ಲ ಎಂಬ ಆರೋಪ ಅವರ ಮೇಲಿದೆ. ಅಲ್ಲದೆ ಆಗಾಗ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಪಕ್ಷವನ್ನು ಮುಜುಗರಕ್ಕೀಡು ಮಾಡುತ್ತಾರೆ. ಹೀಗಾಗಿ ಈ ಸಲ ಅಲ್ಲಿ ಅಭ್ಯರ್ಥಿ ಬದಲಾಗಬೇಕೆಂಬ ಕೂಗು ಇದೆ. ಆದರೆ ಪ್ರಖರ ಹಿಂದುತ್ವವಾದಿಯಾಗಿರುವ ಅನಂತಕುಮಾರ್‌ಗೆ ದೊಡ್ಡ ಅಭಿಮಾನಿ ವರ್ಗವೂ ಇದೆ. ರಾಜ್ಯಾದ್ಯಂತ ಅವರನ್ನು ಮೆಚ್ಚುವ ಹಿಂದುತ್ವವಾದಿ ಕಾರ್ಯಕರ್ತರಿದ್ದಾರೆ. ಸಿದ್ದರಾಮಯ್ಯನಂಥವರಿಗೆ ಎದಿರೇಟು ನೀಡಲು ಅನಂತಕುಮಾರ್‌, ಪ್ರತಾಪ್‌ ಸಿಂಹ ಅವರಂಥ ನಾಯಕರ ಅಗತ್ಯವಿದೆ ಎಂಬ ಭಾವನೆ ಬಿಜೆಪಿಯ ಕಾರ್ಯಕರ್ತರ ಪಡೆಯಲ್ಲಿ ಇರುವುದರಿಂದ ಅವರಿಗೆ ಟಿಕೆಟ್‌ ತಪ್ಪಿಸುವುದು ಸುಲಭವಲ್ಲ.
ಪ್ರತಾಪ್‌ ಸಿಂಹ ಯುವ ನಾಯಕರಾಗಿ ಮಿಂಚು ಹರಿಸಿದವರು. ಭ್ರಷ್ಟಾಚಾರವಿಲ್ಲದೆ ಹತ್ತು ವರ್ಷ ಕ್ಷೇತ್ರವನ್ನು ಅಭಿವೃದ್ಧಿ ಮಾಡಿ ತೋರಿಸಿದ್ದಾರೆ. ನೇರ ನಡೆನುಡಿ, ಜನರೊಟ್ಟಿಗೆ ಬೆರೆಯುವ ಗುಣದಿಂದಾಗಿ ಅವರು ಜನರಿಗೆ ಆಪ್ತರಾಗಿದ್ದಾರೆ. ಇಡೀ ರಾಜ್ಯದಲ್ಲಿ ಅವರಿಗೆ ಅಭಿಮಾನಿ ಬಳಗವಿದೆ. ಇಂಥ ನಾಯಕನಿಗೆ ಟಿಕೆಟ್‌ ತಪ್ಪಿಸುವುದು ಬಿಜೆಪಿ ಪಾಲಿಗೆ ದುಬಾರಿಯಾಗಿಯೂ ಪರಿಣಮಿಸಬಹುದು. ಈ ಎಲ್ಲ ಚಿಂತೆ ಬಿಜೆಪಿ ವರಿಷ್ಠರನ್ನು ಕಾಡುತ್ತಿದೆ.
ಇಂದು 15 ರಿಂದ 17 ಅಭ್ಯರ್ಥಿಗಳ ಘೋಷಣೆ ಆಗುವ ನಿರೀಕ್ಷೆ ಇದೆ. ಬೆಂಗಳೂರು ಗ್ರಾಮಾಂತರಕ್ಕೆ ಡಾ.ಮಂಜುನಾಥ್ ಬಹುತೇಕ ಖಚಿತ ಎನ್ನಲಾಗಿದೆ. ವಿರೋಧದ ನಡುವೆಯೂ ಶೋಭಾ ಕರಂದ್ಲಾಜೆಗೂ ಟಿಕೆಟ್ ಫಿಕ್ಸ್ ಅಂತ ಹೇಳಲಾಗಿದೆ. ಬೆಂಗಳೂರು ಉತ್ತರ, ಉಡುಪಿ-ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ದಾವಣಗೆರೆ, ಬೀದರ್, ರಾಯಚೂರು, ಉತ್ತರ ಕನ್ನಡ, ಕೋಲಾರ, ಚಿತ್ರದುರ್ಗ, ದಕ್ಷಿಣ ಕನ್ನಡ, ಚಾಮರಾಜನಗರ ಕ್ಷೇತ್ರಗಳಿಗೆ ಅಭ್ಯರ್ಥಿ ಆಯ್ಕೆ ಇನ್ನೂ ಇತ್ಯರ್ಥವಾಗಿಲ್ಲ.

ಸಂಭಾವ್ಯ ಅಭ್ಯರ್ಥಿಗಳು

ಬೆಂಗಳೂರು ಗ್ರಾಮಾಂತರ- ಡಾ.ಮಂಜುನಾಥ್
ಮೈಸೂರು- ಯದುವೀರ್ ಒಡೆಯರ್
ಬೆಂಗಳೂರು ದಕ್ಷಿಣ -ತೇಜಸ್ವಿ ಸೂರ್ಯ
ಬೆಂಗಳೂರು ಕೇಂದ್ರ- ಪಿ.ಸಿ.ಮೋಹನ್
ಬಳ್ಳಾರಿ- ಶ್ರೀರಾಮುಲು
ಹಾವೇರಿ- ಬಸವರಾಜ ಬೊಮ್ಮಾಯಿ
ಕಲಬುರಗಿ- ಉಮೇಶ್ ಜಾಧವ್
ಬಾಗಲಕೋಟೆ- ಪಿ.ಸಿ. ಗದ್ದಿಗೌಡರ್
ವಿಜಯಪುರ- ರಮೇಶ್ ಜಿಗಜಿಣಗಿ
ಚಿಕ್ಕೋಡಿ- ಅಣ್ಣಾಸಾಹೇಬ್ ಜೊಲ್ಲೆ
ಶಿವಮೊಗ್ಗ- ಬಿ.ವೈ. ರಾಘವೇಂದ್ರ
ಬೆಳಗಾವಿ- ಜಗದೀಶ್ ಶೆಟ್ಟರ್
ಧಾರವಾಡ- ಪ್ರಲ್ಹಾದ್ ಜೋಶಿ
ಕೊಪ್ಪಳ- ಸಂಗಣ್ಣ ಕರಡಿ





























































































error: Content is protected !!
Scroll to Top