ಮೆಣಸಿನಕಾಯಿ ಬೆಲೆ ಕುಸಿತ : ಬ್ಯಾಡಗಿ ಮಾರುಕಟ್ಟೆಯಲ್ಲಿ ರೈತರ ದಾಂಧಲೆ

ಹಾವೇರಿ : ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಒಣ ಮೆಣಸಿನಕಾಯಿ ಬೆಲೆ ದಿಢೀರ್ ಕುಸಿತವಾದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ರೈತರು ಪಟ್ಟಣದ ಎಪಿಎಂಸಿ ಕಚೇರಿಗೆ ನುಗ್ಗಿ ಪೀಠೋಪಕರಣ ಧ್ವಂಸಗೊಳಿಸಿ, ಕಲ್ಲುತೂರಾಟ ನಡೆಸಿ ವಾಹನಕ್ಕೆ ಬೆಂಕಿ ಹಚ್ಚಿದ ಘಟನೆ ಸೋಮವಾರ ಸಂಜೆ ನಡೆದಿದೆ.
ಮೆಣಸಿನಕಾಯಿ ಬೆಲೆ ದಿಢೀರ್ ಇಳಿಕೆಯಾಗಿದ್ದರಿಂದ ರೊಚ್ಚಿಗೆದ್ದ ರೈತರು ಎಪಿಎಂಸಿ ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಪರಿಣಾಮ ಕಚೇರಿಯ ಕಿಟಕಿ ಗಾಜುಗಳು ಪುಡಿಯಾಗಿವೆ. ನಂತರ ಆವರಣದಲ್ಲಿ ನಿಂತಿದ್ದ ಎಪಿಎಂಸಿ ಅಧ್ಯಕ್ಷರ ಕಾರಿನ ಮೇಲೂ ಕಲ್ಲು ತೂರಿದ್ದಾರೆ. ಅಲ್ಲದೆ ಹಲವು ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 12 ವಾಹನಗಳನ್ನು ರೈತರು ಸುಟ್ಟು ಹಾಕಿದ್ದಾರೆ. 1 ಅಗ್ನಿಶಾಮಕ ವಾಹನ ಸಹ ಬೆಂಕಿಗೆ ಆಹುತಿ ಆಗಿದೆ.
ರೈತರು ಮೆಣಸಿನಕಾಯಿಗೂ ಬೆಂಕಿ ಹಚ್ಚಿ ಗಲಾಟೆ ಮಾಡಿದ್ದಾರೆ. ಮಾರ್ಕೆಟ್​ನಲ್ಲಿ ದಟ್ಟಹೊಗೆಯಿಂದ ಸಾರ್ವಜನಿಕರ ಉಸಿರಾಟಕ್ಕೆ ಸಮಸ್ಯೆ ಉಂಟಾಗಿದೆ. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದು ಹೆಚ್ಚಿನ ಭದ್ರತೆ ಒದಗಿಸಲಾಗಿದೆ.
ಮುಂಜಾಗ್ರತಾ ಕ್ರಮವಾಗಿ ಮಾರುಕಟ್ಟೆಯನ್ನು ಪೊಲೀಸರು ಬಂದ್ ಮಾಡಿಸಿದ್ದಾರೆ. ಕಳೆದ ವಾರ ಕ್ವಿಂಟಾಲ್‌ ಮೆಣಸಿನಕಾಯಿ ಬೆಲೆ 20 ಸಾವಿರ ರೂ. ಇತ್ತು. ಈಗ ಕ್ವಿಂಟಾಲ್‌ ಮೆಣಸಿನಕಾಯಿ ಬೆಲೆ 12 ಸಾವಿರ ರೂಪಾಯಿಗೆ ಕುಸಿದ ಹಿನ್ನೆಲೆಯಲ್ಲಿ ಬ್ಯಾಡಗಿ ಎಪಿಎಂಸಿ ಕಚೇರಿಯಲ್ಲಿದ್ದ ಪೀಠೋಪಕರಣ ಧ್ವಂಸ ಮಾಡಿ ರೈತರು ಆಕ್ರೋಶ ಹೊರಹಾಕಿದ್ದಾರೆ.



































































































error: Content is protected !!
Scroll to Top