ಉಡುಪಿ: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಅಪರಾಧಿಗೆ ನ್ಯಾಯಾಲಯ ಪೋಕ್ಸೊ ಕಾಯೆದೆಯಡಿ 20 ವರ್ಷದ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಬೈಂದೂರಿನ ಧೀರಜ್ (23) ಎಂಬಾತ ಶಿಕ್ಷೆಗೆ ಗುರಿಯಾಗಿರುವ ಅಪರಾಧಿ.
ಕುಂದಾಪುರದ 16ರ ಹರೆಯದ ಶಾಲಾ ಬಾಲಕಿಯನ್ನು ವಾಟ್ಸಾಪ್‌ನಲ್ಲಿ ಪರಿಚಯಿಸಿಕೊಂಡಿದ್ದ ಈತ ಪ್ರೀತಿಸುವ ನಾಟಕವಾಡಿ 2022ರ ಜೂ. 15ರಂದು ಉಡುಪಿಯ ಹೋಟೆಲ್‌ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದ. ಪೊಲೀಸರು ಮಾಹಿತಿ ಆಧಾರಿಸಿ ಹೋಟೆಲ್‌ಗೆ ದಾಳಿ ಮಾಡಿದಾಗ ಈತ ಬಾಲಕಿ ಜೊತೆ ಸಿಕ್ಕಿಬಿದ್ದಿದ್ದ. ವೈದ್ಯಕೀಯ ಪರೀಕ್ಷೆಯಲ್ಲಿ ಅತ್ಯಾಚಾರ ಎಸಗಿರುವುದು ದೃಢಪಟ್ಟಿತ್ತು. ಬಾಲಕಿಯ ಪಾಲಕರು ನೀಡಿದ ದೂರಿನ ಪ್ರಕಾರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಉಡುಪಿ ಹೆಚ್ಚುವರಿ ಜಿಲ್ಲಾ ಪೋಕ್ಸೊ ನ್ಯಾಯಾಲಯದ ನ್ಯಾಯಾಧೀಶ ಶ್ರೀನಿವಾಸ ಸುವರ್ಣ ಅವರು ಅಪರಾಧಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆಯ ಜೊತೆಗೆ 20 ಸಾವಿರ ರೂ. ದಂಡ ವಿಧಿಸಿದ್ದಾರೆ. ಸರಕಾರ ಸಂತ್ರಸ್ತ ಬಾಲಕಿಗೆ 1.50 ಲ. ರೂ. ಪರಿಹಾರ ನೀಡಬೇಕೆಂದು ತೀರ್ಪಿನಲ್ಲಿ ಹೇಳಿದ್ದಾರೆ.
ಅತ್ಯಾಚಾರ ಅಪರಾಧಿಗೆ 20 ವರ್ಷ ಜೈಲು









































