ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಚೈತ್ರಾಳನ್ನು ವಿದೇಶಕ್ಕೆ ಕಳುಹಿಸಿದ ಗೆಳೆಯ
ಮಂಗಳೂರು : ಕೋಟೆಕಾರ್ ಸಮೀಪ ಮಾಡೂರಿನ ಪಿಜಿಯಿಂದ ಕಳೆದ ಫೆ. 17ರಂದು ನಿಗೂಢವಾಗಿ ನಾಪತ್ತೆಯಾಗಿದ್ದ ಪಿಎಚ್ಡಿ ಸಂಶೋಧನಾ ವಿದ್ಯಾರ್ಥಿನಿ ಚೈತ್ರಾ ಹೆಬ್ಬಾರ್ ಕತಾರ್ ದೇಶಕ್ಕೆ ಹೋಗಿರುವುದು ಖಚಿತವಾಗಿದೆ.
ಪ್ರಕರಣ ಸಂಬಂಧ ಆಕೆಯ ಗೆಳೆಯ ಪುತ್ತೂರಿನ ಶಾರೂಖ್ನನ್ನು ಉಳ್ಳಾಲ ಪೊಲೀಸರು ಮಧ್ಯಪ್ರದೇಶದಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ವೇಳೆ ಇಬ್ಬರ ನಡುವೆ ಇದ್ದ ಪ್ರೀತಿ ವಿಚಾರ ಆತ ತಿಳಿಸಿದ್ದಾನೆ. ಇದರ ಬೆನ್ನಲ್ಲೇ, ಚೈತ್ರಾ ಹೆಬ್ಬಾರ್ ಕತಾರ್ ದೇಶಕ್ಕೆ ತೆರಳಿರುವುದು ತಿಳಿದು ಬಂದಿದೆ. ಕತಾರ್ ದೇಶದಿಂದ ಉಳ್ಳಾಲ ಪೊಲೀಸರಿಗೆ ಇಮೇಲ್ ಮೂಲಕ ಸಂದೇಶ ರವಾನಿಸಿದ ಚೈತ್ರಾ, ನನಗೆ ಪ್ರೀತಿಸುವ ಹಕ್ಕಿಲ್ಲವೇ ಎಂದು ಪ್ರಶ್ನಿಸಿದ್ದಾಳೆ.
ವಿಸಿಟಿಂಗ್ ವೀಸಾದ ಮೂಲಕ ಚೈತ್ರಾ ಹೆಬ್ಬಾರ್ ಕತಾರ್ ದೇಶಕ್ಕೆ ತೆರಳಿದ್ದಾಳೆ ಎನ್ನಲಾಗಿದೆ. ಕತಾರ್ನಿಂದಲೇ ಉಳ್ಳಾಲ ಪೊಲೀಸರಿಗೆ ಇಮೇಲ್ ಸಂದೇಶ ರವಾನಿಸಿದ ಚೈತ್ರಾ, ನಾನು ಪ್ರಬುದ್ದಳಾಗಿದ್ದೇನೆ, ನನಗೆ ಪ್ರೀತಿಸುವ ಹಕ್ಕಿಲ್ಕವೇ, ನನ್ನ ಇಚ್ಛೆಯಂತೆ ನಾನು ಬಂದಿದ್ದೇನೆ, ನನಗೆ ಬದುಕೋ ಹಕ್ಕಿಲ್ಲವೇ ? ಎಂದು ಪ್ರಶ್ನಿಸಿದ್ದಾಳೆ. ಚೈತ್ರಾ ಈ ಕುರಿತು ಸೋಮವಾರ ವಿದೇಶದಲ್ಲಿರುವ ಭಾರತದ ದೂತವಾಸದ ಮೂಲಕ ಮಂಗಳೂರು ಕಮಿಷನರ್ಗೆ ಮಾಹಿತಿ ನೀಡುವ ಸಾಧ್ಯತೆ ಇದೆ.
ಪುತ್ತೂರಿನ ಶಾರೂಖ್ನನ್ನು ಮಧ್ಯಪ್ರದೇಶದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದರು. ವಿಚಾರಣೆ ವೇಳೆ ಚೈತ್ರಾ ಜೊತೆ ಪ್ರೇಮ ಇರುವುದಾಗಿ ಆತ ಬಾಯಿಬಿಟ್ಟಿದ್ದಾನೆ. 2017ರಿಂದಲೇ ಶಾರೂಖ್ ಜೊತೆ ಚೈತ್ರಾಗೆ ನಂಟು ಇತ್ತು ಎನ್ನಲಾಗಿದೆ.
ಮಂಗಳೂರಿನಿಂದ ಬೆಂಗಳೂರಿಗೆ ತಲುಪಿದ್ದ ಚೈತ್ರಾಳನ್ನು ಶಾರೂಕ್ ಗೋವಾಕ್ಕೆ ಕರೆದುಕೊಂಡು ಹೋಗಿದ್ದು ಬಳಿಕ ಮಧ್ಯಪ್ರದೇಶದಲ್ಲಿ ಕಣ್ಣೂರು ಮೂಲದ ಶಾರೂಕ್ನ ಸ್ನೇಹಿತನೊಬ್ಬ ಚೈತ್ರಾ ಮತ್ತು ಶಾರೂಕ್ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದ. ಮದ್ಯಪ್ರದೇಶದಲ್ಲಿದ್ದುಕೊಂಡೇ ಶಾರೂಕ್ನ ಹತ್ತಿರದ ಸಂಬಂಧಿಯಾಗಿದ್ದ ಕತಾರ್ನಲ್ಲಿ ನೆಲೆಸಿರುವ ಯುವಕ ಚೈತ್ರಾಳಿಗೆ ವಿಸಿಟಿಂಗ್ ವೀಸಾ ಮತ್ತು ವಿಮಾನದ ಟಿಕೆಟ್ ಮಾಡಿದ್ದು, ಅಲ್ಲಿಂದ ದಿಲ್ಲಿ ಮೂಲಕ ಕತಾರ್ಗೆ ಚೈತ್ರಾಳನ್ನು ಕಳುಹಿಸಿ ಶಾರೂಕ್ ವಾಪಸ್ ಮಧ್ಯಪ್ರದೇಶದಲ್ಲಿರುವ ಸ್ನೇಹಿತನ ಮನೆಗೆ ಬಂದಿದ್ದ. ಚೈತ್ರಾ ಪ್ರಸ್ತುತ ಕತಾರ್ಗೆ ತಲಪಿರುವುದು ಬಹುತೇಕ ಖಚಿತವಾಗಿದ್ದು, ಅಲ್ಲಿಂದ ಪೊಲೀಸರಿಗೆ ನಾನು ಸ್ವಇಚ್ಛೆಯಿಂದ ತೆರಳಿದ್ದೇನೆ ಎಂದು ಮಾಹಿತಿ ನೀಡಿದ್ದಾಳೆ. ಶನಿವಾರ ಮತ್ತು ರವಿವಾರ ರಜೆಯಾಗಿರುವುದರಿಂದ ಸೋಮವಾರ ಭಾರತದ ರಾಯಭಾರ ಕಚೇರಿಗೆ ತೆರಳಿ ಅಲ್ಲಿಂದ ಮಂಗಳೂರು ಪೊಲೀಸ್ ಕಮಿಷನರ್ಗೆ ತಾನು ಸ್ವ ಇಚ್ಛೆಯಿಂದ ತೆರಳಿರುವ ವಿಚಾರವನ್ನು ಲಿಖಿತವಾಗಿ ನೀಡುವ ಸಾಧ್ಯತೆ ಇದೆ.

ಬೆಂಗಳೂರಿನಿಂದ ಗೋವಾ-ಮುಂಬೈ ಮಾರ್ಗವಾಗಿ ಹಿಮಾಚಲ ಪ್ರದೇಶಕ್ಕೆ ತೆರಳಿದ್ದ ಚೈತ್ರಾ, ಅಲ್ಲಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ಕತಾರ್ ದೇಶಕ್ಕೆ ಪ್ರಯಾಣ ಮಾಡಿದ್ದಾಳೆ. ಆ ದೇಶಕ್ಕೆ ಹೋಗಲು ಶಾರೂಖ್ ಎಲ್ಲ ವ್ಯವಸ್ಥೆ ಮಾಡಿದ್ದನು ಎಂದು ತಿಳಿದು ಬಂದಿದೆ. ಈ ಹಿಂದೆ ಕತಾರ್ನಲ್ಲೇ ಕೆಲಸ ಮಾಡಿಕೊಂಡಿದ್ದ ಶಾರೂಖ್, ಪ್ರಕರಣವೊಂದರಲ್ಲಿ ಜೈಲು ಸೇರಿ ಬಿಡುಗಡೆಯಾಗಿ ಪುತ್ತೂರಿಗೆ ವಾಪಸ್ ಆಗಿದ್ದನು.
ಚೈತ್ರಾ ಫೆ. 17ರಂದು ಮಾಡೂರಿನ ಬಾಡಿಗೆ ಮನೆಯಿಂದ ಸ್ಕೂಟರ್ನಲ್ಲಿ ಹೊರಟು ಸುರತ್ಕಲ್ನಲ್ಲಿ ಸ್ಕೂಟರ್ ತ್ಯಜಿಸಿ ನಾಪತ್ತೆಯಾಗಿದ್ದಳು. ಆರಂಭದಲ್ಲಿ ಸಾಮಾನ್ಯ ನಾಪತ್ತೆ ಪ್ರಕರಣ ಎಂದು ಪರಿಗಣಿಸಿದ್ದ ಪೊಲೀಸರು ಶೋಧ ಕಾರ್ಯ ನಡೆಸಿದ್ದರು. ಆದರೆ ಚೈತ್ರಾ ನಾಪತ್ತೆಯ ಹಿಂದೆ ಡ್ರಗ್ ಪೆಡ್ಲರ್ ಅನ್ಯಕೋಮಿನ ಯುವಕನ ಕೈವಾಡವಿದೆ ಎಂದು ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸುವ ಬೆದರಿಕೆ ಹಾಕಿದಾಗ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದರು.
ಆಕೆಯ ಮೊಬೈಲ್ ಲೊಕೇಶನ್ ಆಧಾರದಲ್ಲಿ ಬೆಂಗಳೂರು ಕಡೆ ತೆರಳಿರುವ ಮಾಹಿತಿಯನ್ನು ಕಲೆ ಹಾಕಿತ್ತು. ಈ ನಡುವೆ ಆಕೆ ಮೆಜೆಸ್ಟಿಕ್ನಿಂದ ಬಸ್ ಇಳಿದು ಹೋಗಿರುವ ಮಾಹಿತಿ ಸಿಸಿಟಿವಿಯಲ್ಲಿ ಪತ್ತೆ ಹಚ್ಚಿದ್ದ ಪೊಲೀಸರು ಬೆಂಗಳೂರು ವ್ಯಾಪ್ತಿಯಲ್ಲಿ ಶೋಧ ಕಾರ್ಯವನ್ನು ಚುರುಕುಗೊಳಿಸಿದ್ದರು. ಉಳ್ಳಾಲ ಪೊಲೀಸರ ಒಂದು ತಂಡ ತನಿಖೆಯ ಮುಂದುವರಿದ ಭಾಗವಾಗಿ, ಗೋವಾ, ಮದ್ಯಪ್ರದೇಶದ ಮೂಲಕ ವಿದೇಶಕ್ಕೆ ತೆರಳಿರುವ ಮಾಹಿತಿ ಕಲೆ ಹಾಕಿ ಮಧ್ಯಪ್ರದೇಶದಲ್ಲಿ ಸ್ನೇಹಿತನೊಂದಿಗಿದ್ದ ಶಾರೂಕ್ನನ್ನು ವಶಕ್ಕೆ ತೆಗೆದುಕೊಂಡಿದ್ದರು.
ಶಾರೂಕ್ ಅಪರಾಧ ಪ್ರಕರಣದಲ್ಲಿ ಬಂಧಿತನಾಗಿರುವ ಹಿನ್ನೆಲೆಯಲ್ಲಿ ವಿದೇಶಕ್ಕೆ ತೆರಳಲು ಅವಕಾಶವಿಲ್ಲ. ಈ ನಿಟ್ಟಿನಲ್ಲಿ ದಿಲ್ಲಿಯ ಏರ್ಪೋರ್ಟ್ಗೆ ಬಿಟ್ಟು ಬಂದ ಬಳಿಕ ಮಧ್ಯಪ್ರದೇಶದಲ್ಲಿದ್ದ ಸ್ನೇಹಿತ ಮನೆಗೆ ಮರಳಿದಾಗ ಉಳ್ಳಾಲ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಬಳಿಕ ಆತನನ್ನು ತನಿಖೆಗೆ ಒಳಪಡಿಸಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಾಸ್ಪೋರ್ಟ್ನಲ್ಲಿ ಎಕ್ಸಿಟ್ ಇರುವ ಕಾರಣ ಶಾರೂಖ್ಗೆ ಯುಎಇ ಪ್ರಯಾಣ ನಿರ್ಬಂಧ ಮಾಡಲಾಗಿದೆ. ಹೀಗಾಗಿ ವಿಸಿಟಿಂಗ್ ವೀಸಾ ಮೂಲಕ ಚೈತ್ರಾಳನ್ನ ಕಳುಹಿಸಿದ್ದಾರೆ ಎನ್ನಲಾಗಿದೆ. ಸದ್ಯ ಚೈತ್ರಾ ಕತಾರ್ನ ಭಾರತೀಯ ರಾಯಭಾರಿ ಕಚೇರಿ ಮೂಲಕ ಇಮೇಲ್ ಸಂದೇಶ ರವಾನಿಸಿದ್ದು, ಮೂರು ತಿಂಗಳು ಕಳೆದು ಊರಿಗೆ ಬರೋದಾಗಿ ಹೇಳಿದ್ದಾಳೆ. ಹೀಗಾಗಿ ಶಾರೂಖ್ನನ್ನು ಪೊಲೀಸರು ಬಿಟ್ಟು ಕಳುಹಿಸಿದ್ದಾರೆ. ಇಬ್ಬರೂ ಪ್ರಬುದ್ಧರಾಗಿರುವ ಕಾರಣ ಪೊಲೀಸರು ಅಸಹಾಯಕರಾಗಿದ್ದಾರೆ.
ಯುವತಿ ನಾಪತ್ತೆ ಪ್ರಕರಣ ಹಿಂದೆ ಲವ್ ಜಿಹಾದ್ ಹುನ್ನಾರ ಇದೆ ಎಂದು ಬಜರಂಗದಳ ಆರೋಪಿಸಿತ್ತು. ಚೈತ್ರಾ ಹೆಬ್ಬಾರ್ ನಾಪತ್ತೆ ಕೇಸನ್ನು ಸರ್ಕಾರ ಮತ್ತು ಇಲಾಖೆ ಗಂಭೀರವಾಗಿ ಪರಿಗಣಿಸಬೇಕು. ಸುಸಂಸ್ಕೃತ ಮನೆಯ ಹುಡುಗಿಯನ್ನು ಬ್ಲ್ಯಾಕ್ಮೇಲ್ ಮಾಡಿ ಹಾಗೂ ವಂಚಿಸಿ ಅಪಹರಣ ಮಾಡಲಾಗಿದೆ ಎಂದು ಬಜರಂಗದಳ ಕರ್ನಾಟಕ ಪ್ರಾಂತ ಸಹಸಂಚಾಲಕ ಮುರಳೀಕೃಷ್ಣ ಹಸಂತಡ್ಕ ಆರೋಪಿಸಿದ್ದರು.
ಬಜರಂಗ ದಳದ ಎಚ್ಚರಿಕೆಯಿಂದ ಆತಂಕಗೊಂಡ ಚೈತ್ರಾ, ಶಾರೂಖ್ಗೆ ರೂಮ್ ಕಡೆ ಬಾರದಂತೆ ತಿಳಿಸಿ ಫೆಬ್ರವರಿ 17ರಂದು ನಾಪತ್ತೆಯಾಗಿದ್ದಳು. ಅಂದು ಬೆಳಗ್ಗೆ 9 ಗಂಟೆಗೆ ಸ್ಕೂಟಿಯಲ್ಲಿ ತೆರಳಿದ ಆಕೆ ವಾಪಸ್ ಪಿಜೆಗೆ ಬಂದಿರಲಿಲ್ಲ. ಪಂಪ್ವೆಲ್ ಬಳಿ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಸುರತ್ಕಲ್ನಲ್ಲಿ ಎಟಿಎಂನಿಂದ ಹಣ ಡ್ರಾ ಮಾಡಿದ್ದಳು. ಇದರ ಬೆನ್ನಲ್ಲೇ ಆಕೆಯ ದೊಡ್ಡಪ್ಪ ಠಾಣೆಗೆ ದೂರು ನೀಡಿದ್ದರು. ತನಿಖೆ ವೇಳೆ ಚೈತ್ರಾಳ ಸ್ಕೂಟಿ ಸುರತ್ಕಲ್ ಬಳಿ ಪತ್ತೆಯಾಗಿತ್ತು.









































