ಕಾರ್ಕಳ : ಬಿಜೆಪಿ ಕ್ಷೇತ್ರಾಧ್ಯಕ್ಷರ ಆಯ್ಕೆ ಪಟ್ಟಿ ಫೆ. 18ರಂದು ಬಿಡುಗಡೆಯಾಗಿದ್ದು, ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷರಾಗಿ ನಿಟ್ಟೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ನವೀನ್ ನಾಯಕ್ ನಿಟ್ಟೆ ಆಯ್ಕೆಯಾಗಿದ್ದಾರೆ. ದೀಪಕ್ ಕುಮಾರ್ ಶೆಟ್ಟಿ ಅವರು ಬೈಂದೂರು ಮಂಡಲ ಅಧ್ಯಕ್ಷರಾಗಿ, ಸುರೇಶ್ ಶೆಟ್ಟಿ ಬೀಜಾಡಿ ಕುಂದಾಪುರ, ರಾಜೀವ್ ಕುಲಾಲ್ ಉಡುಪಿ ಗ್ರಾಮಾಂತರ, ದಿನೇಶ್ ಅಮೀನ್ ಉಡುಪಿ ನಗರ, ಜಿತೇಂದ್ರ ಶೆಟ್ಟಿ ಕಾಪು ಅವರನ್ನು ಆಯ್ಕೆ ಮಾಡಲಾಗಿದ್ದು ಈ ಕುರಿತು ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಅವರು ಫೆ. 18ರಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕಳೆದ 20 ವರ್ಷಗಳಿಂದ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ನಿಟ್ಟೆ ಸ್ಥಾನೀಯ ಸಮಿತಿ ಅಧ್ಯಕ್ಷರಾಗಿ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಬಳಿಕ ಅಧ್ಯಕ್ಷರಾಗಿ, ಕ್ಷೇತ್ರ ಸಮಿತಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಪಕ್ಷ ಸಂಘಟನೆಗೆ ಅಪಾರವಾಗಿ ಶ್ರಮಿಸಿದ್ದರು. ಈ ಹಿಂದಿನ ಅವಧಿಯಲ್ಲಿ ಬಿಜೆಪಿ ಕ್ಷೇತ್ರ ಪ್ರಧಾನ ಕಾರ್ಯದರ್ಶಿಯಾಗಿದ್ದ ನವೀನ್ ನಾಯಕ್ ಅವರನ್ನು ಇದೀಗ ಪಕ್ಷ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ.
ಮಾದರಿ ಪಂಚಾಯತ್ ಕಟ್ಟಡ
2010ರಲ್ಲಿ ನಿಟ್ಟೆ ಗ್ರಾಮ ಪಂಚಾಯತ್ ಸದಸ್ಯರಾಗಿ ಮೊದಲ ಅವಧಿಯಲ್ಲೇ ಅಧ್ಯಕ್ಷರಾಗುವ ಅವಕಾಶ ನವೀನ್ ನಾಯಕ್ ಅವರಿಗೆ ಒಲಿದು ಬಂದಿತ್ತು. ನವೀನ್ ಅವರ ಅಧ್ಯಕ್ಷಾವಧಿಯಲ್ಲಿ ಅಂದರೆ 2012ರಲ್ಲಿ 1.10 ಕೋಟಿ ರೂ. ವೆಚ್ಚದಲ್ಲಿ ನಿಟ್ಟೆ ಪಂಚಾಯತ್‌ಗೆ ನೂತನ ಕಟ್ಟಡ ನಿರ್ಮಾಣವಾಗಿತ್ತು. ಪಂಚಾಯತ್ ಕಟ್ಟಡ, ಆಡಳಿತ ಶೈಲಿ ಮೂಲಕ ನಿಟ್ಟೆ ಪಂಚಾಯತ್ ರಾಜ್ಯದಲ್ಲೇ ಮಾದರಿ ಪಂಚಾಯತ್ ಆಗಿ ಗುರುತಿಸಿಕೊಂಡಿತ್ತು.

ಸಣ್ಣ ವಯಸ್ಸಿನಿಂದಲೇ ಆರ್.ಎಸ್.ಎಸ್. ಕಾರ್ಯಕರ್ತನಾಗಿದ್ದ ನವೀನ್ ನಾಯಕ್ ಅವರು 2010ರಲ್ಲಿ ರೋಟರಾಕ್ಟ್ ಅಧ್ಯಕ್ಷರಾಗಿ ಹತ್ತಾರು ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದರು. ಉದ್ಯಮಿಯಾಗಿರುವ ಇವರು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಕ್ಕೂ ಅನೇಕ ಕೊಡುಗೆಗಳನ್ನು ನೀಡಿರುತ್ತಾರೆ.

























