ಬೆಲೆ ಏರಿಕೆಯಿಂದಾಗಿ ಕುಡಿಯುವುದನ್ನು ಕಡಿಮೆ ಮಾಡಿದ ಮದ್ಯಪ್ರಿಯರು
ಬೆಂಗಳೂರು : ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸರಕಾರ ಬಿಯರ್ ದರ ಸಿಕ್ಕಾಪಟ್ಟೆ ಏರಿಸಿದರೆ ಇತ್ತ ಮದ್ಯಪ್ರಿಯರು ಬಿಯರ್ ಕುಡಿಯುವುದನ್ನೇ ಕಡಿಮೆ ಮಾಡುತ್ತಿದ್ದಾರೆ. ಕಳೆದ 15 ದಿನಗಳ ಬಿಯರ್ ಮಾರಾಟದ ಅಂಕಿಅಂಶ ರಾಜ್ಯದಲ್ಲಿ ಬಿಯರ್ ಮಾರಾಟ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿರುವುದನ್ನು ತಿಳಿಸುತ್ತಿದೆ.
ಕಳೆದ 15 ದಿನದಲ್ಲಿ ಬಿಯರ್ ಮಾರಾಟದ ಲೆಕ್ಕಚಾರ ತಲೆಕೆಳಗಾಗಿದೆ. ಕಳೆದ ವರ್ಷ ಫೆಬ್ರವರಿ 1ರಿಂದ 14 ರವರೆಗೆ 14.35 ಲಕ್ಷ ಕೇಸ್ ಬಿಯರ್ ಸೇಲ್ ಆಗಿತ್ತು. ಆದರೆ ಈ ವರ್ಷ 13.34 ಲಕ್ಷ ಕೇಸ್ ಬಿಯರ್ ಮಾರಾಟವಾಗಿದೆ. ದರ ಏರಿಕೆಯಿಂದ 1 ಲಕ್ಷ ಕೇಸ್ ಮಾರಾಟ ಕುಸಿತವಾಗಿದೆ.
ಜನವರಿಯಲ್ಲಿ 14 ದಿನಕ್ಕೆ 17 ಲಕ್ಷ ಕೇಸ್ ಬಿಯರ್ ಮಾರಾಟವಾಗಿತ್ತು. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಜನವರಿಯಲ್ಲಿ 15 ಪರ್ಸೆಂಟ್ ಏರಿಕೆಯಾಗಿತ್ತು. ಈ ತಿಂಗಳು ಕೂಡ ಭರ್ಜರಿ ಮಾರಾಟದ ನಿರೀಕ್ಷೆಯಲ್ಲಿದ್ದ ಸರ್ಕಾರಕ್ಕೆ ಮದ್ಯಪ್ರಿಯರು ಶಾಕ್ ನೀಡಿದ್ದಾರೆ. ಆದರೆ ಕಳೆದ 14 ದಿನದಲ್ಲಿ ಮಾರಾಟ ಕಮ್ಮಿಯಾದ್ರೂ ಆದಾಯದಲ್ಲಿ ಮಾತ್ರ ಏರಿಕೆ ಆಗಿದೆ. ಕಳೆದ ವರ್ಷ 14 ದಿನದಲ್ಲಿ 1200 ಕೋಟಿ ಆದಾಯ ಬಂದ್ರೆ. ಈ ವರ್ಷ 1400 ಕೋಟಿ ಆದಾಯ ಸಂಗ್ರಹವಾಗಿ, 200 ಕೋಟಿ ಅಧಿಕವಾಗಿದೆ. ದರ ಏರಿಕೆಯಿಂದ ಮಾತ್ರ ಹೆಚ್ಚುವರಿ ಆದಾಯ ಸಂಗ್ರಹವಾಗಿದೆ ಮಾರಾಟದಿಂದಲ್ಲ ಎಂದು ಬೆಂಗಳೂರು ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ಕರುಣಾಕರ ಹೆಗಡೆ ತಿಳಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಬಿಯರ್ ಮೇಲೆ ಶೇ. 20ರಷ್ಟು ಹೆಚ್ಚುವರಿ ಸುಂಕ ವಿಧಿಸಿತ್ತು. ನಂತರ ಬಿಯರ್ ಉತ್ಪಾದನಾ ಕಂಪನಿಗಳು ಉತ್ಪಾದನಾ ವೆಚ್ಚ ಸರಿದೂಗಿಸಿಕೊಳ್ಳಲು ಬಾಟಲ್ ಮೇಲೆ ಕನಿಷ್ಠ 10 ರೂ.ವರೆಗೆ ಏರಿಕೆ ಮಾಡಿದ್ವು. ಮೂರನೇ ಬಾರಿ ಅಂದರೆ ಫೆಬ್ರವರಿ 1ರಂದು ಬಿಯರ್ ಮೇಲಿನ ಅಬಕಾರಿ ಸುಂಕವನ್ನು ಶೇ.10 ರಷ್ಟು ಏರಿಕೆ ಮಾಡಿತ್ತು. ಇದರಿಂದ ಆರೇಳು ತಿಂಗಳ ಅವಧಿಯಲ್ಲಿ ಬಿಯರ್ ಬೆಲೆ ಸುಮಾರು ವಿವಿಧ ಬಾಟಲ್ ಮೇಲೆ 30 ರಿಂದ 40 ರೂಪಾಯಿ ಹೆಚ್ಚಳವಾಗಿದೆ. ಇದೀಗ ಬಜೆಟ್‌ನಲ್ಲಿ ಮತ್ತೆ ಮದ್ಯ ಬೆಲೆ ಹೆಚ್ಚಳದ ಪ್ರಸ್ತಾವ ಮಂಡಿಸಲಾಗಿದ್ದು, ಇದು ಮುಂಬರುವ ಏಪ್ರಿಲ್‌ನಿಂದ ಜಾರಿಗೆ ಬರಲಿದೆ. ಆಗ ಬಿಯರ್ ಬೆಲೆ ಮತ್ತೆ ಹೆಚ್ಚಾಗಲಿದೆ. ಈ ವರ್ಷ ರಾಜ್ಯ ಸರಕಾರ ಅಬಕಾರಿ ಇಲಾಖೆಗೆ ₹36 ಸಾವಿರ ಕೋಟಿ ಆದಾಯ ಸಂಗ್ರಹದ ಟಾರ್ಗೆಟ್ ನೀಡಿದೆ. ಈಗಾಗಲೇ 10 ತಿಂಗಳಿಗೆ 28,000 ಕೋಟಿ ಆದಾಯ ಸಂಗ್ರಹವಾಗಿದೆ. ಇನ್ನೂ ಎರಡು ತಿಂಗಳಿನಲ್ಲಿ 8 ಸಾವಿರಕ್ಕೂ ಅಧಿಕ ಆದಾಯ ಸಂಗ್ರಹವಾಗಬೇಕು.



































