ಶಾಲೆ ಎದುರು ಪ್ರತಿಭಟನೆ : ವೇದವ್ಯಾಸ ಕಾಮತ್‌, ಭರತ್‌ ಶೆಟ್ಟಿ ವಿರುದ್ಧ ದೂರು

ಮಂಗಳೂರು: ಮಂಗಳೂರಿನ ಜೆರೋಸಾ ಶಾಲೆಯಲ್ಲಿ ಶ್ರೀರಾಮ ಮತ್ತು ಹಿಂದೂ ಧರ್ಮವನ್ನು ಅವಹೇಳನ ಮಾಡಿದ ಶಿಕ್ಷಕಿಯನ್ನು ಅಮಾನತುಗೊಳಿಸಲು ಪ್ರತಿಭಟನೆ ಮಾಡಿದ್ದ ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಮತ್ತು ಮಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಭರತ್ ಶೆಟ್ಟಿ ವಿರುದ್ಧ ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಅನಿಲ್ ಜೆರಾಲ್ಡ್ ಲೋಬೊ ಎಂಬುವವರ ದೂರಿನ ಮೇರೆಗೆ ವಿಶ್ವ ಹಿಂದು ಪರಿಷತ್‌ ಮುಖಂಡ ಶರಣ್ ಪಂಪ್​ವೆಲ್, ಪಾಲಿಕೆ ಸದಸ್ಯ ಸಂದೀಪ್ ಗರೋಡಿ, ಭರತ್ ಕುಮಾರ್ ಸೇರಿದಂತೆ ಹಲವರ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಐಪಿಸಿ ಸೆಕ್ಷನ್ 143, 153A, 295A, 505(2), 506, 149ರಡಿ ಕೇಸ್ ದಾಖಲಾಗಿದೆ. ಈ ಪ್ರಕರಣದಲ್ಲಿ ವೇದವ್ಯಾಸ ಕಾಮತ್ ಮತ್ತು ಶಾಸಕ ಭರತ್ ಶೆಟ್ಟಿಯವರನ್ನು ಪ್ರಥಮ ಮತ್ತು ದ್ವಿತೀಯ ಆರೋಪಿಗಳೆಂದು ಹೆಸರಿಸಲಾಗಿದೆ. ಆರೋಪಿಗಳು ಶಾಲೆಯ ಮುಂದೆ ಪ್ರತಿಭಟನೆ ನಡೆಸುವಂತೆ ಕರೆ ನೀಡಿದ್ದಾರೆ ಮತ್ತು ಜೊತೆಗೆ ಶಾಲೆ ಮುಂದೆ ಅಕ್ರಮವಾಗಿ ಗುಂಪುಗೂಡಿ ಜೈ ಶ್ರೀರಾಮ್ ಘೋಷಣೆ ಕೂಗಿದ್ದಾರೆ ಎಂದು ಆರೋಪಿಸಲಾಗಿದೆ.

ಶಾಲೆ ಆಡಳಿತ ಮಂಡಳಿ ನಿಯಮ ಉಲ್ಲಂಘಿಸುವಂತೆ ವಿದ್ಯಾರ್ಥಿಗಳನ್ನು ಪ್ರಚೋದನೆ ಮಾಡಿದ್ದಾರೆ. ಕ್ರೈಸ್ತ ಧರ್ಮದ ವಿರುದ್ಧ ಮಾತನಾಡಿದ್ದಾರೆ. ಹಿಂದೂ, ಕ್ರೈಸ್ತರ ನಡುವೆ ಗಲಭೆ ಸೃಷ್ಟಿಸಲು ಪ್ರಚೋದಿಸಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿದ್ದು. ದಕ್ಷಿಣ ಕನ್ನಡ ಜಿಲ್ಲೆ ಶಾಂತಿ, ನೆಮ್ಮದಿಗೆ ಭಂಗ ತರಲು ಪ್ರಯತ್ನಿಸಿದ್ದರು ಎಂದು ಪಾಂಡೇಶ್ವರ ಠಾಣೆ ಪೊಲೀಸರು ದಾಖಲಿಸಿರುವ ಎಫ್​ಐಆರ್​ನಲ್ಲಿ ಉಲ್ಲೇಖಿಸಿದ್ದಾರೆ.

ಇದೇ ವೇಳೆ ಮಂಗಳೂರಿನ ಜೆರೋಸಾ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕಿಯಿಂದ ಧರ್ಮದ ಅವಹೇಳನ ಆರೋಪ ವಿಚಾರದಲ್ಲಿ ಶಾಸಕ ವೇದವ್ಯಾಸ ಕಾಮತ್ ವಿರುದ್ಧ ಮಾಜಿ ಎಂಎಲ್‌ಸಿ ಐವನ್ ಡಿಸೋಜಾ ಕಿಡಿಕಾರಿಕಾರಿದ್ದಾರೆ. ಶಾಸಕರು ಶಾಲೆಯ ಒಳಗೆ ಹೋಗಿ ವಿಚಾರಿಸಬಹುದಿತ್ತು. ಅದು ಬಿಟ್ಟು ಗೇಟು ಮುಂದೆ ನಿಂತು ಬೊಬ್ಬೆ ಹೊಡೆದ್ರೆ ಅವರ ಜವಬ್ದಾರಿ ಏನು? ಬೀದಿಯಲ್ಲಿ ನಿಂತು ಬಂದವರ ಬಳಿ ಬೊಬ್ಬೆ ಹಾಕಿಸಿ, ಗಲಾಟೆ ಮಾಡಿ ವಿದ್ಯಾದೇಗುಲಕ್ಕೆ ಅವಮಾನ ಮಾಡಿದ್ದಾರೆ. ಇದನ್ನು ಸರಕಾರ ಬಹಳ ಗಂಭೀರವಾಗಿ ಪರಿಗಣಿಸಿದೆ ಎಂದರು. ಚುನಾಹಿತ ಪ್ರತಿನಿಧಿಯ ಗೌರವವನ್ನು ವೇದವ್ಯಾಸ್ ಕಾಮತ್ ಹಾಳು ಮಾಡಿದ್ದಾರೆ. ಈ ಬಗ್ಗೆ ಸ್ಪೀಕರ್, ಮುಖ್ಯಮಂತ್ರಿಗಳಿಗೆ ದೂರು ನೀಡುತ್ತೇನೆ ಎಂದರು. ಎಲ್ಲಾ ದಾಖಲೆಗಳನ್ನು ಇಟ್ಟು ದೂರು ನೀಡುತಿದ್ದು ಹಕ್ಕುಬಾಧ್ಯತಾ ಸಮಿತಿ ಈ ಬಗ್ಗೆ ತನಿಖೆ ಮಾಡಲಿ. ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿ. ಶಾಸಕರ ವಿರುದ್ದ ಕ್ರಮ ಕೈಗೊಳಲಿ ಎಂದವರು ಒತ್ತಾಯಿಸಿದ್ದಾರೆ.























































error: Content is protected !!
Scroll to Top