ಶಿಕ್ಷಕನ ಕಿರುಕುಳದಿಂದ ಆತ್ಮಹತ್ಯೆ ಎಂದು ಆರೋಪ
ಧರ್ಮಸ್ಥಳ: ಧರ್ಮಸ್ಥಳದ ಶಾಲೆಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು, ಆತ್ಮಹತ್ಯೆಗೆ ಈ ಶಾಲೆಯ ಶಿಕ್ಷಕ ಕಾರಣ ಎಂದು ಆರೋಪಿಸಲಾಗಿದೆ. ಶಿಕ್ಷಕ ಮಾನಹಾನಿಕಾರಕ ಮೆಸೇಜ್ ಕಳಿಸಿದ್ದಕ್ಕೆ ಮನನೊಂದ ವಿದ್ಯಾರ್ಥಿನಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆಯ ಪೋಷಕರು ಆರೋಪಿಸಿದ್ದಾರೆ.
ಧರ್ಮಸ್ಥಳದ ಪಿಜತ್ತಡ್ಕದ ಕಿಶೋರ್-ಸೌಮ್ಯಾ ದಂಪತಿ ಪುತ್ರಿ ತ್ರಿಶಾ(16) ಮೃತ ವಿದ್ಯಾರ್ಥಿನಿ. ಧರ್ಮಸ್ಥಳದ ಖಾಸಗಿ ಶಾಲೆಯಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಫೆಬ್ರವರಿ 5ರಂದು ಶಾಲೆಯ ಡ್ರಾಯಿಂಗ್ ಶಿಕ್ಷಕ ಮಾನಹಾನಿಕಾರಕ ಮೆಸೇಜ್ ಮಾಡಿದ್ದನ್ನು ನೋಡಿ ಮನನೊಂದ ವಿದ್ಯಾರ್ಥಿನಿ ಫೆ.7ರಂದು ಶಾಲೆಗೆ ಬರುವಾಗ ಬಿಸ್ಕೆಟ್ ಪ್ಯಾಕೆಟ್ ಜೊತೆ ಇಲಿ ಪಾಷಾಣವನ್ನು ಅಂಗಡಿಯಿಂದ ತಂದು ಶಾಲೆಯಲ್ಲಿ ಬಿಸ್ಕೆಟ್ ಜತೆಗೆ ಇಲಿ ಪಾಶಣ ಮಿಶ್ರಣ ಮಾಡಿ ಸೇವಿಸಿದ್ದಾಳೆ.
ತಕ್ಷಣ ಶಿಕ್ಷಕರು ಗಂಭೀರ ಸ್ಥಿತಿಯಲ್ಲಿದ್ದ ವಿದ್ಯಾರ್ಥಿನಿಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಿಲಿಸಿದ್ದಾರೆ. ಬಳಿಕ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಎರಡು ದಿನಗಳ ಹಿಂದೆ ಸ್ಥಳಾಂತರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ.
ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾಭ್ಯಾಸ ಮಾಡುತ್ತಿದ್ದ ಈಕೆಯ ಮೇಲೆ ಡ್ರಾಯಿಂಗ್ ಶಿಕ್ಷಕ ಇಲ್ಲಸಲ್ಲದ ಆರೋಪ ಮಾಡಿ ಇನ್ನೊಂದು ವಿದ್ಯಾರ್ಥಿನಿಗೆ ಮಾಡಿದ ಮೆಸೇಜ್‌ನಿಂದ ಅವಮಾನಗೊಂಡು ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎನ್ನಲಾಗಿದೆ. ಆರೋಪಿ ಶಿಕ್ಷಕನ ವಿರುದ್ಧ ಕಠಿಣ ಕ್ರಮ ಜರುಗಿಸಿ ಮೃತ ವಿದ್ಯಾರ್ಥಿನಿಗೆ ನ್ಯಾಯ ಒದಗಿಸುವಂತೆ ಪೋಷಕರು, ಸಾರ್ವಜನಿಕರು ಆಗ್ರಹಿಸಿದ್ದಾರೆ. ಘಟನೆ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಆರೋಪಿ ರೂಪೇಶ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.


































